ಬೆಂಗಳೂರು: ನನ್ನ ಮತ್ತು ಶಿಕ್ಷಣ ಸಚಿವರಾಗಿರುವ (Education Minister) ಮಧು ಬಂಗಾರಪ್ಪ (Madhu Bangarappa) ಅವರ ನಡುವೆ ಯಾವುದೇ ರೀತಿಯ ಸಂಘರ್ಷಗಳಿಲ್ಲ. ಅವರು ಉಲ್ಲೇಖಿಸಿದ ಪ್ರಕರಣದಲ್ಲಿ ನನಗೆ ಎಲ್ಲ ಹಂತಗಳಲ್ಲೂ ಕ್ಲೀನ್ ಚಿಟ್ ಸಿಕ್ಕಿದೆ. ಹಾಗಿದ್ದರೂ ಅವರು ಈ ವಿಷಯ ಇಟ್ಟುಕೊಂಡು ಯಾಕೆ ಪತ್ರ ಬರೆದರೋ ಅದನ್ನು ಇಟ್ಟುಕೊಂಡು ಸರ್ಕಾರ ನನ್ನನ್ನು ಯಾಕೆ ವರ್ಗಾವಣೆ (Shadakshari Transfer) ಮಾಡಿತೋ, ಯಾವುದೂ ನನಗೆ ಗೊತ್ತಿಲ್ಲ: ಹೀಗೆಂದು ಹೇಳಿದ್ದಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (Karnataka State Employees Association President) ಸಿ.ಎಸ್. ಷಡಾಕ್ಷರಿ (CS Shadakshari) ಅವರು. ನನ್ನ ಮೇಲಿನ ಆಪಾದನೆಗೆ ಸಂಬಂಧಿಸಿ ಎಲ್ಲ ಹಂತಗಳಲ್ಲೂ ನನಗೆ ಕ್ಲೀನ್ ಚಿಟ್ ಸಿಕ್ಕಿದೆ, ಇನ್ನೇನು ಕ್ರಮ ಕೈಗೊಳ್ಳೋದು ಎಂದೂ ಷಡಾಕ್ಷರಿ ಅವರು ಪ್ರಶ್ನಿಸಿದ್ದಾರೆ.
ಷಡಾಕ್ಷರಿ ಅವರನ್ನು ಶಿವಮೊಗ್ಗದ ಲೆಕ್ಕಪರಿಶೋಧಕರ ಕಚೇರಿಯಿಂದ ಕೋಲಾರದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಪರಿಶೋಧನಾ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ಎಲ್ಲ ಆಯಾಮಗಳ ಬಗ್ಗೆ ಅವರು ವಿಸ್ತಾರ ನ್ಯೂಸ್ ಪೊಲಿಟಿಕಲ್ ಹೆಡ್ ಮಾರುತಿ ಪಾವಗಡ ಅವರು ನಡೆಸಿದ ಪವರ್ ಪಾಯಿಂಟ್ ಕಾರ್ಯಕ್ರಮದಲ್ಲಿ (Power point Programe) ಮನಬಿಚ್ಚಿ ಮಾತನಾಡಿದ್ದಾರೆ.
ಮಧು ಬಂಗಾರಪ್ಪ ಅವರು ವಿಧಾನಸಭೆ ಚುನಾವಣೆಗೆ ನಿಂತು ಗೆದ್ದು ಸಚಿವರಾದ ಎಲ್ಲ ಹಂತಗಳಲ್ಲಿ ಅವರಿಗೆ ಗೌರವವನ್ನು ಕೊಟ್ಟಿದ್ದೇನೆ. ಅವರು ಸಚಿವರಾದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದ್ದೇನೆ ಕೂಡಾ. ಅವರು ಮತ್ತು ನನ್ನ ನಡುವೆ ಇದುವರೆಗೂ ಯಾವುದೇ ಸಂಘರ್ಷಾತ್ಮಕ ಮಾತುಕತೆಗಳು ಕೂಡಾ ನಡೆದಿಲ್ಲ. ಅವರು ನನ್ನ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರವೂ ನನಗೆ ಗೊತ್ತಿರಲಿಲ್ಲ. ಅದನ್ನು ನಾನು ನೋಡಿದ್ದೇ ಮೊನ್ನೆ. ಆಗ ನನಗೂ ಆಶ್ಚರ್ಯ ಆಯಿತು. ಇದ್ಯಾಕಪ್ಪಾ ಈ ರೀತಿ ಪತ್ರ ಬರೆದಿದ್ದಾರೆ ಅಂತ ನಾನೇ ಅಂದುಕೊಂಡೆ ಎಂದು ಷಡಾಕ್ಷರಿ ಹೇಳಿದರು.
ಬ್ಲ್ಯಾಕ್ಮೇಲ್ ಮಾಡಿದ್ದರೆ ಯಾರಾದರೂ ದೂರು ಕೊಡಬೇಕಾಗಿತ್ತಲ್ಲ?
ʻʻಮಧು ಬಂಗಾರಪ್ಪ ಅವರು ಬರೆದ ಪತ್ರದಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿದ್ದೇನೆ ಎಂದು ಬರೆಯಲಾಗಿದೆ. ನಿಜವಾಗಿಯೂ ನನಗೆ ಬ್ಲ್ಯಾಕ್ ಮೇಲ್ ವೈಟ್ ಮೇಲ್ ಯಾವುದೂ ಗೊತ್ತಿಲ್ಲ. ನಾವೆಲ್ಲ ಸಿದ್ಧಾಂತಗಳಿಂದ ಬಂದವರು ನಮಗೆ ಇದೆಲ್ಲ ಗೊತ್ತಿಲ್ಲ ಸರ್ʼʼ ಎಂದಿದ್ದಾರೆ ಷಡಾಕ್ಷರಿ.
ʻʻಬ್ಲ್ಯಾಕ್ ಮೇಲ್ ಅಂದ್ರೇನು? ಯಾರಾದ್ರೂ ಅಧಿಕಾರಿಗಳು ನನ್ನ ವಿರುದ್ಧ ದೂರು ನೀಡಬೇಕು. ಷಡಾಕ್ಷರಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ, ಇಂಥ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಯಾವುದಾದರೂ ದೂರುಗಳು ಇರಬೇಕು. ಏನಾದರೂ ಬರಹ ಮೂಲಕ ಕಂಪ್ಲೇಂಟ್ ಕೊಡಬೇಕಲ್ಲ. ಅಂಥದ್ದು ಯಾವುದಾದರೂ ಇದೆಯಾ? ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ವರ್ಷ ನಾಲ್ಕು ತಿಂಗಳಾಯಿತು. ಈ ಅವಧಿಯಲ್ಲಿ ಯಾರಾದರೂ ಅಧಿಕಾರಿಗಳು ನನ್ನ ವಿರುದ್ಧ ದೂರು ನೀಡಿದ್ದಾರಾ? ಬೆದರಿಸಿದ್ದಾರೆ, ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಹೇಳಿದ್ದಾರಾ? ಹೇಳಿದ್ದರೆ ನಾನು ಯಾವ ತನಿಖೆಗಾದರೂ ಸಿದ್ಧನಿದ್ದೇನೆʼʼ ಎಂದು ಸವಾಲು ಹಾಕಿದ್ದರೆ ಸಿ.ಎಸ್. ಷಡಾಕ್ಷರಿ.
ʻʻನಿಜವೆಂದರೆ, ನಮ್ಮದು ಡಿ ದರ್ಜೆ ನೌಕರರಿಂದ ಹಿಡಿದು ಕೆಎಎಸ್ ಅಧಿಕಾರಿಯವರೆಗಿನ ಎಲ್ಲ ಸಿಬ್ಬಂದಿಗಳನ್ನು ಒಳಗೊಂಡಿರುವ ಸಂಘಟನೆ. ನಾನು ಇವರೆಲ್ಲರನ್ನೂ ಒಂದೇ ರೀತಿಯಾ ನೋಡುತ್ತೇನೆ. ಇವರನ್ನು ರಕ್ಷಿಸಬೇಕಾದ ನಾನೇ ಬ್ಲ್ಯಾಕ್ ಮೇಲ್ ಮಾಡುತ್ತೇನೆ ಎಂದರೆ ಅವರು ನನ್ನನ್ನು ಏನು ತಿಳಿದುಕೊಳ್ಳುತ್ತಾರೆ?ʼʼ ಎಂದು ಪ್ರಶ್ನಿಸಿದ್ದಾರೆ.
ಎಲ್ಲ ಹಂತಗಳಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಇನ್ನೇನು ಕ್ರಮ ಕೈಗೊಳ್ಳೋದು?
ಮಧು ಬಂಗಾರಪ್ಪ ಬರೆದ ಪತ್ರದಲ್ಲಿ ರಾಜ್ಯ ಪರಿಷತ್ ಸದಸ್ಯ ಗಂಗಾಧರಪ್ಪ ಸೇರಿದಂತೆ ಹಲವಾರು ಸಂಘಟನೆಗಳಿಂದ ಷಡಾಕ್ಷರಿ ಅವರ ವಿರುದ್ಧ ದೂರುಗಳು ಬಂದಿವೆ. ಇವುಗಳನ್ನು ಪರಿಗಣಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಏನಿದು ದೂರಿನ ವಿಷಯ ಎಂದು ಸಂದರ್ಶನ ನಡೆಸಿದ ಮಾರುತಿ ಪಾವಗಡ ಅವರು ಕೇಳಿದಾಗ ಷಡಾಕ್ಷರಿ ಅವರು ಸುದೀರ್ಘ ವಿವರಣೆ ನೀಡಿದರು.
ಇದನ್ನೂ ಓದಿ: Shadakshari Transfer : ಷಡಾಕ್ಷರಿ ವರ್ಗಾವಣೆ ಹಿಂದೆ ಮಧು ಬಂಗಾರಪ್ಪ; ಏನಿದು ಮಣ್ಣು ಸಾಗಾಟ ಆರೋಪ
ʻʻಗಂಗಾಧರಪ್ಪ ಅವರು ರಾಜ್ಯ ಪರಿಷತ್ ಸದಸ್ಯರಾಗಿದ್ದವರು. ಅವರು ಈ ಹಿಂದೆ ದೂರು ನೀಡಿದ್ದು ಹೌದು. ಆದರೆ, ಇದರ ಬಗ್ಗೆ ತನಿಖೆ ನಡೆದು ವರದಿಯನ್ನು ನೀಡಲಾಗಿದೆ. ಜುಲೈ ತಿಂಗಳಲ್ಲಿ ಮತ್ತು ಆಗಸ್ಟ್ ತಿಂಗಳಲ್ಲಿ ತನಿಖೆ ನಡೆಸಿ ಇದರಲ್ಲಿ ಷಡಾಕ್ಷರಿ ಅವರ ಪಾತ್ರ ಏನೂ ಇಲ್ಲ ಎಂದು ವರದಿ ನೀಡಲಾಗಿದೆ. ಸಹಕಾರಿ ಇಲಾಖೆಯ ಜಿಲ್ಲಾ ರಿಜಿಸ್ಟ್ರಾರ್, ಪಂಚಾಯಿತಿ ರಾಜ್ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ತನಿಖೆ ಮಾಡಿ ನನ್ನ ಪಾತ್ರವನ್ನು ನಿರಾಕರಿಸಿದ್ದಾರೆ. ಇದಾದ ಬಳಿಕ ಗಂಗಾಧರಪ್ಪ ಅವರು ಹಣಕಾಸು ಇಲಾಖೆಗೆ ದೂರು ಕೊಡುತ್ತಾರೆ. ಹಣಕಾಸು ಇಲಾಖೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತದೆ. ಜಿಲ್ಲಾಧಿಕಾರಿಗಳು ಸಹಕಾರ ಮತ್ತು ಪಂಚಾಯಿತಿರಾಜ್ ಇಲಾಖೆಯ ವರದಿಗಳನ್ನು ಆಧರಿಸಿ ಹಣಕಾಸು ಇಲಾಖೆಗೆ ವರದಿ ಸಲ್ಲಿಸುತ್ತಾರೆ. ಅಂತಿಮವಾಗಿ ರಾಜ್ಯ ಸರ್ಕಾರ ಷಡಾಕ್ಷರಿ ಅವರ ಮೇಲೆ ಯಾವುದೇ ಆರೋಪಗಳು ಇಲ್ಲ ಎಂದು ಸ್ಪಷ್ಟಪಡಿಸಿ ಕಡತವನ್ನು ಮುಕ್ತಾಯಗೊಳಿಸುತ್ತದೆʼʼ ಎಂದು ಷಡಾಕ್ಷರಿ ವಿವರಿಸಿದರು.