Site icon Vistara News

DA Hike News : ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಅನುಮೋದನೆ; ಗುರುವಾರ ಅಧಿಕೃತ ಆದೇಶ

DA Hike News karnataka state govt employees

da hike

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನೂತನ ಸರ್ಕಾರ ಮೊದಲ ಸಿಹಿ ಸುದ್ದಿ ನೀಡಿದೆ. ನೌಕರರು ಕಳೆದ ಒಂದು ತಿಂಗಳಿನಿಂದ ನಿರೀಕ್ಷಿಸುತ್ತಿದ್ದ ತುಟ್ಟಿ ಭತ್ಯೆ (Dearness Allowance) ಹೆಚ್ಚಳಕ್ಕೆ ಸರ್ಕಾರ (Govt Employees News) ಮುಂದಾಗಿದೆ. ಕೇಂದ್ರ ಸರ್ಕಾರದಂತೆ ಶೇ.4 ರಷ್ಟು (DA Hike News) ತುಟ್ಟಿಭತ್ಯೆ ಹೆಚ್ಚಳ ಮಾಡುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಹಿ ಹಾಕಿದ್ದಾರೆ. ಆರ್ಥಿಕ ಇಲಾಖೆಯು ಗುರುವಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಏ. 3 ರಂದು ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯ ಸರ್ಕಾರ ಕೂಡ ಹೆಚ್ಚಳ ಮಾಡುವುದು ವಾಡಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರಿಗೂ ತುಟ್ಟಿಭತ್ಯೆಯನ್ನು (Dearness Allowance) ಹೆಚ್ಚಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿರಲಿಲ್ಲ.

ಈ ಹಿಂದಿನಿಂದಲೂ ಕೇಂದ್ರ ಸರ್ಕಾರದಂತೆಯೇ ರಾಜ್ಯ ಸರ್ಕಾರವೂ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿಕೊಂಡು ಬಂದಿದೆ. ಅದರಂತೆ ಈಗಲೂ ರಾಜ್ಯ ಸರ್ಕಾರಿ ನೌಕರರಿಗೂ ಸಹ ಜನವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ. 4ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಬೇಕೆಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್‌. ಷಡಕ್ಷರಿ ನೂತನ ಸರ್ಕಾರವನ್ನೂ ಕೋರಿದ್ದರು. ಬುಧವಾರ ಈ ಸಂಬಂಧದ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡುವ ಮೂಲಕ ತುಟ್ಟಿಭತ್ಯೆ ಹೆಚ್ಚಳದ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ತುಟ್ಟಿಭತ್ಯ ಹೆಚ್ಚಳದ ಕಡತಕ್ಕೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಪ್ರಕಟಣೆಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಗುರುವಾರವೇ ಶೇ. 4 ಬಾಕಿ ತುಟ್ಟಿಭತ್ಯೆ ಆದೇಶವನ್ನು ದಿನಾಂಕ 01-01-2023 ರಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆಯು ಆದೇಶ ಹೊರಡಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

7ನೇ ವೇತನ ಆಯೋಗದ (7th Pay commission) ಮಧ್ಯಂತರ ಪರಹಾರವಾಗಿ ಶೇ.17 ವೇತನ ಹೆಚ್ಚಳ ಮಾಡಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಹೆಚ್ಚಳವನ್ನು ಏಪ್ರಿಲ್‌ ತಿಂಗಳ ವೇತನದಲ್ಲಿಯೇ ಜಾರಿಗೆ ತರಲಾಗಿದೆ.

ರಾಜ್ಯ ಸರ್ಕಾರವು ಕಳೆದ ಅಕ್ಟೋಬರ್‌ನಲ್ಲಿ ಶೇ. 3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು. ಇದು 2022ರ ಜುಲೈ1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ರೂ 1,282.72 ಕೋಟಿ ರೂ. ಭರಿಸಿತ್ತು. ಅದಕ್ಕೂ ಮೊದಲು ಏಪ್ರಿಲ್‌ನಲ್ಲಿ ಶೇ. 2.75 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಇದು ಜನವರಿ 1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ 1,447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಿತ್ತು.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಕೇಂದ್ರ ಸರ್ಕಾರಿ ನೌಕರರಿಗೆ ಈಗಾಗಲೇ ಜಾರಿ

ಏಳನೇ ವೇತನ ಆಯೋಗದ ಶಿಫಾರಸಿನಂತೆ (7th Pay commission) ತುಟ್ಟಿ ಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿ ಏ. 3 ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಒಟ್ಟಾರೆ ತುಟ್ಟಿಭತ್ಯೆಯು ಶೇ. 38 ರಿಂದ 42ಕ್ಕೆ ಏರಿದಂತಾಗಿದೆ. ಈ ಭತ್ಯೆ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರವು 12,815 ಕೋಟಿ ತೆಗೆದಿರಿಸಿದೆ.

ಈ ಹೆಚ್ಚಳವು ಜನವರಿ 1 ರಿಂದಲೇ ಜಾರಿಗೆ ಬಂದಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್‌ ಅನ್ನು ವರ್ಷಕ್ಕೆ ಎರಡು ಸಲ ಏರಿಸುತ್ತದೆ. ಜನವರಿ ಹಾಗೂ ಜುಲೈನಲ್ಲಿ ಇದು ನಡೆಯುತ್ತದೆ. 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಪಿಂಚಣಿದಾರರು ಈ ಹೆಚ್ಚಳದ ಸೌಲಭ್ಯ ಪಡೆಯಲಿದ್ದಾರೆ.

ಇತ್ತೀಚಿನ ಗ್ರಾಹಕ ದರ ಸೂಚ್ಯಂಕ (consumer price index) ಆಧರಿಸಿ ತುಟ್ಟಿಭತ್ಯೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ. ಡಿಎ ಏರಿಕೆ 2023ರ ಜನವರಿಯಿಂದ ಅನ್ವಯವಾಗಲಿದೆ. ಈ ಹಿಂದೆ 2022ರ ಸೆಪ್ಟೆಂಬರ್‌ 28ರಂದು ತುಟ್ಟಿಭತ್ಯೆಯ ಪರಿಷ್ಕರಣೆ ನಡೆದಿತ್ತು. ಅದು 2022ರ ಜುಲೈ 1 ರಿಂದ ಜಾರಿಯಾಗಿತ್ತು.

ಇದನ್ನೂ ಓದಿ : 7th Pay Commission : ನೌಕರರ ಬೇಡಿಕೆ ಕುರಿತು ಚರ್ಚಿಸಲು ಆಯೋಗದಿಂದ ಮೇ 26ಕ್ಕೆ ಮಹತ್ವದ ಸಭೆ

Exit mobile version