ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರ ವಿರೋಧಿ ನೀತಿಗಳನ್ನು (Anti Employees policy) ಖಂಡಿಸಿ ಫೆಬ್ರವರಿ 7ರಂದು (ಬುಧವಾರ) ಬೃಹತ್ ಪ್ರತಿಭಟನೆ (Employees Protest) ನಡೆಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಟನೆ (Karnataka State Employees Association) ನಿರ್ಧರಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ಎಚ್.ಎಸ್. ಜೈಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಶೋಭಾ ಲೋಕನಾಗಣ್ಣ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ವಿ. ಕಮ್ಮಾರ ಅವರು ತಿಳಿಸಿದ್ದಾರೆ.
ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ನೌಕರರು ಒಂದು ದಿನದ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ನಡೆಸಲಿದ್ದಾರೆ. ಅದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ರಾಜ್ಯ ಸರ್ಕಾರದ ವಿವಿಧ ಇಲಾಖಾ ಹಾಗೂ ವೃಂದ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ.
ಕೇಂದ್ರ ಸರ್ಕಾರದ ವಿರುದ್ಧ ಯಾಕೆ ಆಕ್ರೋಶ?
- ಸರ್ಕಾರದ ನೀತಿಗಳು ದೈನಂದಿನ ಸರಕು ಸೇವೆಗಳ ಬೆಲೆಯೇರಿಕೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳ ಮಾಡಿ ಜನತೆಗೆ ಸಂಕಷ್ಟ ತಂದೊಡ್ಡಿದ್ದು, ಖಾಸಗೀಕರಣ ನೀತಿಗಳ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚಿನ ಲಾಭ ಹರಿದು ಹೋಗಲು ಈ ನೀತಿಗಳು ಸಹಕಾರಿಯಾಗಿವೆ.
- PFRDA ಕಾಯ್ದೆ / NPS ಪದ್ದತಿ ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲು ಒತ್ತಾಯಿಸಿ ದೇಶಾದ್ಯಂತ ಸರ್ಕಾರಿ ನೌಕರರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರವು ಕೇವಲ ಪರಿಶೀಲನಾ ಸಮಿತಿ ರಚಿಸಿ ಮೌನವಾಗಿದೆ.
- ರಾಜ್ಯ ಮಟ್ಟದಲ್ಲಿ ಕೆಲವು ರಾಜ್ಯಗಳು ಎನ್.ಪಿ.ಎಸ್ ಪದ್ದತಿಯನ್ನು ರದ್ದುಪಡಿಸಿದ್ದರೂ ರಾಜಕೀಯ ಪಕ್ಷಗಳು/ ಸರ್ಕಾರಗಳು ಬದಲಾದಾಗ ಮತ್ತೆ ಓPS ಅನ್ನು ಮರುಸ್ಥಾಪಿಸಲು ಕ್ರಮ ವಹಿಸುತ್ತಿರುವ ಸುದ್ದಿಗಳು ರಾಜಸ್ತಾನದಂತಹ ರಾಜ್ಯಗಳಿಂದ ಬರುತ್ತಿವೆ.
ಕರ್ನಾಟಕ ಸರ್ಕಾರದ ಮೇಲೆ ಯಾಕೆ ಸಿಟ್ಟು?
- ಕರ್ನಾಟಕ ರಾಜ್ಯದ ಸರಕಾರಿ ನೌಕರರು ದಕ್ಷಿಣ ರಾಜ್ಯಗಳಲ್ಲಿಯೇ ಅತಿ ಕಡಿಮೆ ಸಂಬಳ ಪಡೆಯುತ್ತಾರೆ. ಪ್ರಸ್ತುತ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಎರಡನೇ ಬಾರಿಗೆ ಆರು ತಿಂಗಳ ಕಾಲ ವಿಸ್ತರಿಸಿರುವುದು ನೌಕರರಲ್ಲಿ ತೀವ್ರ ನಿರಾಶೆ ಮತ್ತು ಆಕ್ರೋಶ ಮೂಡಿಸಿದೆ.
- ರಾಜ್ಯ ಸರ್ಕಾರವು 7ನೇ ವೇತನ ಪರಿಷ್ಕರಣೆ ಜಾರಿಗೊಳಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ.
- 2016ರಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ಗುತ್ತಿಗೆ/ ದಿನಗೂಲಿ/ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಹೊರಗುತ್ತಿಗೆ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ.
- ಘೋಷಣೆ ಮಾತ್ರವೇ ಆಗಿ ಉಳಿದಿರುವ ನಗದು-ರಹಿತ ವಿಮಾ ಯೋಜನೆ,
- ಅನುದಾನಿತ ಸಂಸ್ಥೆಗಳ ನೌಕರರು ಪಿಂಚಣಿ-ವಂಚಿತರಾಗಿರುವುದು, ಅಸಂವಿಧಾನಿಕ ನಡತೆ ನಿಯಮಗಳು, ಪಿಡಿಒ ಅಧಿಕಾರಿಗಳ ಸಮಸ್ಯೆಗಳು, ನೌಕರ-ವಿರೋಧಿ ಅಂಶಗಳನ್ನು ಒಳಗೊಂಡಿರುವ ಆಡಳಿತ ಸುಧಾರಣೆಗಳು, ಇತ್ಯಾದಿ ನೌಕರ ಸಮಸ್ಯೆಗಳು ಆಗರವಾಗಿ ಬೆಳೆಯುತ್ತಿವೆ.
ಧರಣಿಗೆ ಹಲವು ಸಂಘಟನೆಗಳ ಬೆಂಬಲ
ಈ ಧರಣಿ ಕಾರ್ಯಕ್ರಮವು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ(ರಿ.)ದ ನೇತೃತ್ವದಲ್ಲಿ ನಡೆಯುತ್ತಿದ್ದು, ಹಲವು ಸಂಘಟನೆಗಳು ಬೆಂಬಲ ನೀಡಿವೆ.
ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಸಮನ್ವಯ ನೌಕರರ ಸಂಘ
ಕರ್ನಾಟಕ ರಾಜ್ಯ ಸರ್ಕಾರಿ ಪಿ.ಡಿ.ಓ ಕ್ಷೇಮಾಭ್ಯುದಯ ಸಂಘ
ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ
ಕರ್ನಾಟಕ ರಾಜ್ಯ ಅನುದಾನಿತ ಪ್ರೌಢಶಾಲೆಗಳ ಕ್ಷೇಮಾಭ್ಯುದಯ ಸಂಘ
ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ
ಕರ್ನಾಟಕ ಸರ್ಕಾರ ಸಚಿವಾಲಯ ವಾಹನ ಚಾಲಕರ ಸಂಘ
ಅಖಿಲ ಕರ್ನಾಟಕ ರಾಜ್ಯ ಪಿಂಚಣಿದಾರರ ಒಕ್ಕೂಟ
ಕಾನೂನು ಮಾಪನ ಶಾಸ್ತ್ರ ಇಲಾಖೆ ಪ.ಜಾ ಮತ್ತು ಪ.ಪಂ ನೌಕರರ ಸಂಘ
ಶಾಲಾ/ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ
ಕಾನೂನು ಮಾಪನ ಶಾಸ್ತç ಇಲಾಖೆ ಪರೀವೀಕ್ಷಕರ ಸಂಘ
ಕರ್ನಾಟಕ ರಾಜ್ಯ ಸರ್ಕಾರ ಗ್ರಂಥಾಲಯ ಇಲಾಖೆ ನೌಕರರ ಸಂಘ
ಕರ್ನಾಟಕ ರಾಜ್ಯ ಆಯುಷ್ ಶುಶ್ರೂಷಾಧಿಕಾರಿಗಳ ಸಂಘ
ಬಿ.ಬಿ.ಎಂ.ಪಿ ಪ.ಜಾ/ಪ.ಪಂ ಅಧಿಕಾರಿ/ನೌಕರರ ಕೇಂದ್ರ ಒಕ್ಕೂಟ
ಕರ್ನಾಟಕ ರಾಜ್ಯ ಅನುದಾನಿತ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘ
ಕರ್ನಾಟಕ ರಾಜ್ಯ ಅನುದಾನಿತ ಬೋಧಕ/ಬೋಧಕೇತರ ಸಂಘಟನೆಗಳ ಒಕ್ಕೂಟ
ಇದನ್ನೂ ಓದಿ: Labour protest: ಸರ್ಕಾರದ ವಿರುದ್ಧ ಸಿಡಿದೆದ್ದ ಕಾರ್ಮಿಕರು, ಬೃಹತ್ ಪ್ರತಿಭಟನೆ
ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖ ಬೇಡಿಕೆಗಳೇನು?
- ಶೇ. 40ರಷ್ಟು ಹೆಚ್ಚಳದೊಂದಿಗೆ 7ನೇ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೊಳಿಸುವುದು.
- ರಾಜ್ಯದ ಎಲ್ಲಾ ನೌಕರರಿಗೂ PFRDA ಕಾಯ್ದೆ /NPS ಪದ್ದತಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪಿಸುವುದು
- ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು.
- ಗುತ್ತಿಗೆ/ಹೊರಗುತ್ತಿಗೆ ಅರೆಕಾಲಿಕ ನೇಮಕಾತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಇವರ ವೇತನವನ್ನು ಸರ್ಕಾರಿಂದ ನೇರವಾಗಿ ಖಾತೆಗೆ ಜಮಾ ಮಾಡುವುದು. ಇವರುಗಳನ್ನು ಎಲ್ಲಾ ನೇರ ನೇಮಕಾತಿಗಳಲ್ಲಿ ಕಾಯಂಗೊಳಿಸುವುದು. ಇನ್ನು ಮುಂದೆ ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಟ್ಟು ಖಾಯಂ ನೇಮಕಾತಿ ಮಾಡಿಕೊಳ್ಳುವುದು.\
- ಕೋವಿಡ್ ನೆಪದಲ್ಲಿ ತಡೆಹಿಡಿಯಲಾಗಿರುವ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ ಮಾಡುವುದು.
- ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶೀಘ್ರ ಪರಿಷ್ಕರಣೆ ಮಾಡಿ, ಜೇಷ್ಠತಾ ಪಟ್ಟಿ ಸಿದ್ಧಪಡಿಸುವುದು ಹಾಗೂ ನಿಯಮಾನುಸಾರ ಪದೋನ್ನತಿ ನೀಡುವುದು.
- ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆಗಳ ವಿಲೀನ, ನೌಕರರ ಸಂಖ್ಯೆ ಕಡಿತ, ಸಾರ್ವಜನಿಕ ಉದ್ದಿಮೆಗಳ/ಸರ್ಕಾರದ ಯೋಜನೆಗಳ ಖಾಸಗೀಕರಣ, ಹೊರಗುತ್ತಿಗೆ ನೇಮಕಾತಿ ಪ್ರಸ್ತಾವನೆಗಳನ್ನು ಕೈಬಿಡುವುದು.
- ಬಡ್ತಿ ಮೀಸಲಾತಿ ಕಾಯ್ದೆ ಸಂಪೂರ್ಣ ಅನುಷ್ಠಾನಗೊಂಡು ಬ್ಯಾಕ್ ಲಾಗ್‌ಹುದ್ದೆ ಭರ್ತಿ ಮಾಡುವುದು.
- ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು “ತಜ್ಞರ ಸಮಿತಿ” ನೇಮಕ ಮಾಡುವುದು.
- ಎಲ್ಲಾ ನೌಕರರಿಗೂ ಹಾಗೂ ಎಲ್ಲಾ ನಿವೃತ್ತರಿಗೂ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡುವುದು.
- ಮಹಿಳಾ ನೌಕರರ ಮೇಲಿನ ದೌರ್ಜನ್ಯ ತಡೆಗಟ್ಟುವುದು.
- ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 60 ಸಾವಿರ ಬೋಧಕ/ಭೋದಕೇತರ ನಿಶ್ಚಿತ ಪಿಂಚಣಿ ಸೌಲಭ್ಯ ಮರುಸ್ಥಾಪಿಸುವುದು.
- ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮ(೨೦೨೧) ಗಳಲ್ಲಿನ ನೌಕರ-ವಿರೋಧಿ ಅಂಶಗಳನ್ನು ಕೈಬಿಡುವುದು.