ಬೆಂಗಳೂರು: ಸರ್ಕಾರಿ ನೌಕರರಿಗೆ (Government Employee) ಶುಭ ಸುದ್ದಿಯೊಂದನ್ನು ರಾಜ್ಯ ಸರ್ಕಾರ (Karnataka Government) ನೀಡಿದೆ. 2024ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ನಗದೀಕರಣಗೊಳಿಸಲು ರಾಜ್ಯ ಸರ್ಕಾರವು ಅನುಮತಿ ನೀಡಿದೆ. ಆದರೆ, ಇದು ಕೆಲವು ಷರತ್ತುಗಳನ್ನು ಒಳಗೊಂಡಿದೆ.
2023ನೇ ಸಾಲಿನ ಬ್ಲಾಕ್ ಅವಧಿಗೆ ಸರ್ಕಾರಿ ಅಧಿಕಾರಿ/ನೌಕರರು ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118 (2)(i) ರನ್ವಯ ಅವಕಾಶ ಕಲ್ಪಿಸಲಾಗಿತ್ತು.
15 ದಿನ ಗಳಿಕೆ ರಜೆಯನ್ನು ಅಧ್ಯರ್ಪಿಸಬಹುದು
ಸದರಿ ಬ್ಲಾಕ್ ಅವಧಿಯು ದಿನಾಂಕ 31.12.2023 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು 2024ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನ ಗಳಿಕೆ ರಜೆಯನ್ನು ಅಧ್ಯರ್ಪಿಸಬಹುದಾಗಿದೆ. ರಜೆ ವೇತನಕ್ಕೆ ಸಮಾನವಾಗಿ ನಗದೀಕರಣ ಪಡೆಯುವ ಅವಕಾಶವನ್ನು ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿಸಿದ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗೊಳಪಟ್ಟು ನಿಯತಗೊಳಿಸುವ ಸಂಬಂಧ ಅವಕಾಶವನ್ನು ಕಲ್ಪಿಸಲು ತೀರ್ಮಾನಿಸಿದೆ. ಅದರಂತೆ ಈ ಆದೇಶವನ್ನು ಹೊರಡಿಸಲಾಗಿದೆ.
ಇಚ್ಛಿಸಿದ ಯಾವುದೇ ತಿಂಗಳಲ್ಲೂ ನಗದು ಮಾಡಿಕೊಳ್ಳಬಹುದು
ಈ ಸೌಲಭ್ಯವು 2024ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಜಾರಿಯಲ್ಲಿರಲಿದೆ. ಈ ಸೌಲಭ್ಯವನ್ನು ಎಲ್ಲ ವೃಂದದ ಅರ್ಹ ಸರ್ಕಾರಿ ನೌಕರರು/ಅಧಿಕಾರಿಗಳು ಒಂದು ತಿಂಗಳ ಮುಂಚಿತವಾಗಿ ಮನವಿ ಮಾಡಬೇಕಿದೆ. ಅವರ ಇಚ್ಛೆಯ ಯಾವುದೇ ತಿಂಗಳಿನಲ್ಲಿ ಈ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಅವರು ಪಡೆದುಕೊಳ್ಳಬಹುದಾಗಿದೆ ಎಂದು ಆರ್ಥಿಕ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ
ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2024ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಎಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವಂತೆ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮವಹಿಸತಕ್ಕದ್ದು ಮತ್ತು ಮಹಾಲೇಖಪಾಲರು ಲೆಕ್ಕಾಚಾರದ ಬಗ್ಗೆ ಯಾವುದೇ ವ್ಯತ್ಯಾಸವನ್ನು ತಿಳಿಸಿದಲ್ಲಿ ಅದನ್ನು ಸರಿಪಡಿಸುವ ಮತ್ತು ಅದರನ್ವಯದ ಆರ್ಥಿಕ ಸೌಲಭ್ಯಗಳಿಗೆ ಮಾತ್ರ ಅರ್ಹಗೊಳಿಸುವ ಷರತ್ತಿಗೊಳಪಡಿಸಿ ಮಂಜೂರು ಮಾಡತಕ್ಕದ್ದು.
ಇದನ್ನೂ ಓದಿ: Covid Subvariant JN1: ಕೋವಿಡ್ ಉಲ್ಬಣ; ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ
ಷರತ್ತುಗಳು ಅನ್ವಯ
ಮುಂದುವರಿದು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 118 ರಲ್ಲಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಅನ್ವಯವಾಗುತ್ತವೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.