Site icon Vistara News

Govt Employees News : ರಾಜ್ಯ ಸರ್ಕಾರಿ ನೌಕರರಿಗೂ ಜಿಪಿಎಫ್‌ ವಂತಿಗೆ ಮಿತಿ; ಐದು ಲಕ್ಷ ರೂ.ಗಳಿಗೆ ನಿಗದಿ

gpf subscription limit

#image_title

ಬೆಂಗಳೂರು: ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ʻಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿʼ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಗೆ ಚಂದಾದಾರರು ಒಂದು ಆರ್ಥಿಕ ವರ್ಷದಲ್ಲಿ ಪಾವತಿಸಬಹುದಾದ ವಂತಿಗೆಯನ್ನು 5 ಲಕ್ಷ ರೂ.ಗಳಿಗೆ ಮಿತಿಗೊಳಿಸಿ ಕಾರ್ಯಾದೇಶ (Govt Employees News) ಹೊರಡಿಸಿದೆ.

ಕೇಂದ್ರ ಸರ್ಕಾರವು 2022 ರಲ್ಲಿ ಸಾಮಾನ್ಯ ಭವಿಷ್ಯ ನಿಧಿ (ಕೇಂದ್ರ ಸೇವೆ) ನಿಯಮಾವಳಿ -1960 ಗೆ ತಿದ್ದುಪಡಿ ತಂದು ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದಾರರು ಒಂದು ವರ್ಷಕ್ಕೆ ಪಾವತಿಸಬಹುದಾದ ವಂತಿಗೆಯನ್ನು ಐದು ಲಕ್ಷ ರೂ.ಗಳಿಗೆ ಮಿತಿಗೊಳಿಸಿದೆ. ಆದರೆ ರಾಜ್ಯದಲ್ಲಿ ಈ ರೀತಿಯ ಮಿತಿಯನ್ನು ಹೇರಲಾಗಿರಲಿಲ್ಲ.

ಆದರೆ ಕೇಂದ್ರ ಸರ್ಕಾರದಂತೆಯೇ ರಾಜ್ಯದಲ್ಲಿಯೂ ಈ ರೀತಿ ಮಿತಿಯನ್ನು ನಿಗದಿಪಡಿಸುವುದು ಸೂಕ್ತವೆಂದು ಈಗ ತೀರ್ಮಾನಿಸಿರುವ ಸರ್ಕಾರ ರಾಜ್ಯದಲ್ಲಿಯೂ ನಿಯಮಾವಳಿ ರೂಪಿಸಲು ಮುಂದಾಗಿದೆ. ಆದರೆ ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗಿರುವುದರಿಂದ ಜೂನ್‌ 17 ರಂದು ಕಾರ್ಯಕಾರಿ ಆದೇಶವನ್ನು ಹೊರಡಿಸಿ ಮಿತಿಯನ್ನು ನಿಗದಿಪಡಿಸಿದೆ. ಮುಂದೆ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಾವಳಿ-2016 ಕ್ಕೆ ಸೂಕ್ತ ತಿದ್ದುಪಡಿಯನ್ನು ತರಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇತ್ತೀಚೆಷ್ಟೇ ರಾಜ್ಯ ಸರ್ಕಾರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿದವರನ್ನು ನಿಗದಿಪಡಿಸಿತ್ತು. ಕಳೆದ ಜನವರಿ 1 ರಿಂದ ಮಾರ್ಚ್‌ 31 ರವರೆಗಿನ (ಮೂರು ತಿಂಗಳು) ಅವಧಿಗೆ ವಾರ್ಷಿಕ ಶೇ.7.1 ಬಡ್ಡಿದರ (GPF Interest Rate) ನಿಗದಿಪಡಿಸಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರ ಜೂನ್‌ 12 ರಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. 01-04-2006 ಕ್ಕಿಂತ ಮೊದಲು ರಾಜ್ಯದ ಸೇವೆಗೆ ಸೇರಿದ ರಾಜ್ಯ ಸರ್ಕಾರಿ ನೌಕರರು ಈ ಭವಿಷ್ಯ ನಿಧಿಯ ವಂತಿಕೆದಾರರಾಗಿರುತ್ತಾರೆ. ಈಗಾಗಲೇ ಕೇಂದ್ರ ಸರ್ಕಾರವು ತನ್ನ ಸೇವೆಯ ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರವನ್ನು ಶೇ.7.1 ಕ್ಕೆ ನಿಗದಿ ಪಡಿಸಿ ಆದೇಶ ಹೊರಡಿಸಿದೆ. ಏಪ್ರಿಲ್‌ ನಿಂದ ಜೂನ್‌ ಅವಧಿಗೂ ಇದೇ ಬಡ್ಡಿದರ ಅನ್ವಯಿಸಲಿದೆ ಎಂದು ಸಹ ಪ್ರಕಟಿಸಿತ್ತು.

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅಡಿಯಲ್ಲಿ ರಾಜ್ಯ ಸರ್ಕಾರವು ಈ ಭವಿಷ್ಯ ನಿಧಿಯನ್ನು ಸ್ಥಾಪಿಸಿದೆ. ಪ್ರತಿ ನೌಕರರು ಮಾಸಿಕ ವಂತಿಗೆಯನ್ನು ಪಾವತಿಸುವ ಮೂಲಕ ಈ ನಿಧಿಯ ಚಂದಾದಾರಾಗಬಹುದು. ತಾವು ಹೊಂದಿರುವ ಹುದ್ದೆಯ ಗರಿಷ್ಠ ಮೂಲ ವೇತನಕ್ಕೆ ಒಳಪ್ಟಟ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಿನ ವಂತಿಗೆಯನ್ನು ಆಯ್ಕೆಮಾಡಿಕೊಳ್ಳಬಹುದು.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಸಾಮಾನ್ಯ ಭವಿಷ್ಯ ನಿಧಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆಯಾಗಿದ್ದು, ಕೇವಲ ಸರ್ಕಾರಿ ನೌಕರರಿಗೆ (ಗ್ರೂಪ್‌ ಡಿ ಹೊರತುಪಡಿಸಿ) ಇದನ್ನು ಒದಗಿಸಲಾಗುತ್ತದೆ. ಪ್ರತಿ ತಿಂಗಳು ನೌಕರರು ಇಂತಿಷ್ಟು ಎಂದು ತಮ್ಮ ವೇತನದಲ್ಲಿ ಹಣವನ್ನು ಇದಕ್ಕೆ ತೆಗೆದಿರಿಸುತ್ತಾರೆ. ಹೀಗೆ ಸಂಗ್ರಹವಾದ ಮೊತ್ತವನ್ನು ಅಗತ್ಯವಿರುವಾಗ ನೌಕರರು ಮನೆ ಅಥವಾ ನಿವೇಶನ ಕೊಳ್ಳುವ ಸಂದರ್ಭದಲ್ಲಿ, ಮನೆ ಕಟ್ಟುವಾಗ, ಮದುವೆಯಾಗುವ, ಕಾರು ಕೊಳ್ಳುವಾಗ ಅಥವಾ ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗಾಗಿ ಈ ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶ ನೀಡಲಾಗಿರುತ್ತದೆ. ಪಡೆದುಕೊಳ್ಳಬಹುದು, ಇಲ್ಲವೇ, ನಿವೃತ್ತಿ ಸಂದರ್ಭದಲ್ಲಿ ಒಟ್ಟಾಗಿ ಪಡೆದುಕೊಳ್ಳಬಹುದಾಗಿದೆ. ಮಹಾಲೇಖಪಾಲಕರ ಕಚೇರಿಯು ಈ ನಿಧಿಯನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ : Govt Employees News : ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ; ಅವಧಿ ವಿಸ್ತರಣೆ

Exit mobile version