Site icon Vistara News

Govt Employees News : ಸರ್ಕಾರಿ ನೌಕರರು ತಿಂಗಳು ಮುಗಿಯುವ ಮೊದಲೇ ವೇತನ ಪಡೆಯಬಹುದು! ರಾಜಸ್ಥಾನದಲ್ಲಿಈ ಸೌಲಭ್ಯ

money Earned Salary Advance Drawal Scheme

ಜೈಪುರ: ರಾಜಸ್ಥಾನ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ (Govt Employees News) ನೀಡಿದೆ. ಅಲ್ಲಿಯ ಸರ್ಕಾರಿ ನೌಕರರು ಹಣದ ಅಗತ್ಯವಿದ್ದರೆ ವೇತನ ನೀಡುವುದಕ್ಕಿಂತ ಮೊದಲೇ ಮುಂಗಡವಾಗಿ ಹಣವನ್ನು ಪಡೆಯಬಹುದು. ಇದಕ್ಕಾಗಿ ಅಲ್ಲಿಯ ಸರ್ಕಾರ ʻಅರ್ನ್‌ಡ್‌ ಸ್ಯಾಲರಿ ಅಡ್ವಾನ್ಸ್‌ ಡ್ರಾ ಸ್ಕೀಮ್‌ʼ (Earned Salary Advance Drawal Scheme) ಎಂಬ ಯೋಜನೆ ರೂಪಿಸಿದೆ. ಈ ಯೋಜನೆಯನ್ನು ಮೇ 31ರಂದು ರಾಜಸ್ಥಾನದ ಆರ್ಥಿಕ ಇಲಾಖೆಯು ಘೋಷಿಸಿದೆ.

ಸರ್ಕಾರಿ ನೌಕರರಿಗೆ ಈ ರೀತಿ ಮುಂಗಡವಾಗಿ ವೇತನ ಪಡೆಯಲು ಅವಕಾಶ ಮಾಡಿಕೊಟ್ಟ ದೇಶದಲ್ಲಿಯೇ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ. ಜೂನ್‌ 1ರಿಂದ ಈ ಯೋಜನೆ ಜಾರಿಗೆ ಬಂದಿದೆ. ಇಂಟ್ರಿಗೆಟೆಡ್‌ ಫೈನಾನ್ಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (IFMS-3.0) ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಸರ್ಕಾರಿ ನೌಕರರು ತಿಂಗಳಿನಲ್ಲಿ ಎಷ್ಟು ಬಾರಿ ಬೇಕಾದರೂ ಮುಂಗಡವಾಗಿ ಹಣವನ್ನು ಪಡೆಯಬಹುದು. ಆದರೆ ಅವರು ಪಡೆಯುವ ಮಾಸಿಕ ವೇತನದ ಶೇ.50 ಕ್ಕಿಂತ ಹೆಚ್ಚು ಹಣವನ್ನು ಮುಂಗಡವಾಗಿ ನೀಡಲಾಗುವುದಿಲ್ಲ. ಒಂದು ವೇಳೆ ನೌಕರರು ತಿಂಗಳ 21 ನೇ ತಾರೀಖಿನೊಳಗೆ ಮುಂಗಡ ಹಣ ಪಡೆದುಕೊಂಡಿದ್ದರೆ, ಅದೇ ತಿಂಗಳ ವೇನತದಲ್ಲಿಯೇ ಈ ಹಣವನ್ನು ಹೊಂದಿಸಿ, ವೇತನ ನೀಡಲಾಗುತ್ತದೆ.

ಆನ್‌ಲೈನ್‌ನಲ್ಲಿಯೇ ಮುಂಗಡ ಪಡೆಯುವ ವ್ಯವಸ್ಥೆ

ಸರ್ಕಾರಿ ನೌಕರರು ಆನ್‌ಲೈನ್‌ನಲ್ಲಿಯೇ IFMS 3.0 ಸಾಫ್ಟ್‌ವೇರ್‌ನಲ್ಲಿ ಲಾಗಿನ್‌ ಆಗಿ ಅಥವಾ IFMS ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ ಪಡೆದುಕೊಳ್ಳಬಹುದಾಗಿರುತ್ತದೆ. ಇದು ಓಟಿಪಿ ಆಧಾರಿತ ಸೇವೆಯಾಗಿರುತ್ತದೆ.

ಈ ರೀತಿ ಸರ್ಕಾರಿ ನೌಕರರು ಮುಂಗಡವಾಗಿ ಹಣ ಪಡೆದರೆ ಇದಕ್ಕೆ ಯಾವುದೇ ಬಡ್ಡಿಯನ್ನಾಗಲೀ, ಹೆಚ್ಚುವರಿ ಶುಲ್ಕವನ್ನಾಗಲೀ ವಿಧಿಸಲಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿದೆ. ಕೇವಲ ಹಣಕಾಸು ವರ್ಗಾವಣೆ ಶುಲ್ಕವನ್ನು ಮಾತ್ರ ಪಡೆದುಕೊಳ್ಳಲಾಗುತ್ತದೆ. ಇದರಿಂದಾಗಿ ಸರ್ಕಾರಿ ನೌಕರರು ತುರ್ತಾಗಿ ಹಣ ಬೇಕಾದಾಗ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವುದು ತಪ್ಪಲಿದೆ ಎಂದು ಸರ್ಕಾರ ಹೇಳಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಈ ಯೋಜನೆಯನ್ನು ಜಾರಿಗೆ ತಂದಿರುವುದಕ್ಕೆ ರಾಜಸ್ಥಾನದ ಸರ್ಕಾರಿ ನೌಕರರು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸರ್ಕಾರಿ ನೌಕರರ ಒತ್ತಡಕ್ಕೆ ಮಣಿದಿದ್ದ ರಾಜಸ್ಥಾನ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ (ಓಪಿಎಸ್‌) ಜಾರಿಗೆ ತಂದಿತ್ತು.

ಇದನ್ನೂ ಓದಿ: NPS News : ಗ್ಯಾರಂಟಿಗಳಂತೆ ಓಪಿಎಸ್‌ ಜಾರಿ ಕೂಡ ಸದ್ಯಕ್ಕಿಲ್ಲ; ಸರ್ಕಾರ ಯೋಚಿಸುತ್ತಿರುವುದಾದರೂ ಏನು?

Exit mobile version