Site icon Vistara News

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ; ಆದರೆ ಸಿಗದ ಸಮ್ಮತಿ

teacher transfer

teacher

ಬೆಂಗಳೂರು: ಸೇವಾ ನಿರತ ಪದವೀಧರ ಶಿಕ್ಷಕರನ್ನು ಪರೀಕ್ಷೆ ನಡೆಸದೇ 6 ರಿಂದ 8 ನೇ ತರಗತಿ ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸುವ (graduate teacher promotion) ಪ್ರಸ್ತಾಪದ ಕುರಿತು ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆಯಾದರೂ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ.

ಇದರಿಂದಾಗಿ ಕಳೆದ ಇಪ್ಪತ್ತು, ಇಪ್ಪತ್ತೈದು ವರ್ಷಗಳಿಂದ ಶಾಲೆಗಳಲ್ಲಿ ಬೋಧಿಸುತ್ತಿರುವ ಸುಮಾರು 75 ಸಾವಿರಕ್ಕೂ ಹೆಚ್ಚು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಿರಾಸೆಯಾಗಿದೆ.

ʻʻಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡುವ ಪ್ರಸ್ತಾಪದ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಈ ಪ್ರಸ್ತಾಪಕ್ಕೆ ಸಂಪುಟದ ಒಪ್ಪಿಗೆ ಸಿಕ್ಕಿಲ್ಲʼʼ ಎಂದು ಸಚಿವ ಸಂಪುಟದ ಸಭೆಯ ನಂತರ ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಪಿಯು ನಂತರ ಎರಡು ವರ್ಷಗಳ ಶಿಕ್ಷಣ ಡಿಪ್ಲೊಮಾ (ಡಿ.ಇಡಿ) ಪೂರೈಸಿದ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಗಳಿಗೆ ನೇಮಕವಾಗಿದ್ದು, ಒಂದರಿಂದ ಏಳನೇ ತರಗತಿಯವರೆಗೆ ಪಾಠ ಮಾಡುತ್ತಿದ್ದರು. ಅವರಲ್ಲಿ 75 ಸಾವಿರಕ್ಕೂ ಹೆಚ್ಚು ಶಿಕ್ಷಕರು ಸೇವಾ ಅವಧಿಯಲ್ಲಿಯೇ ಪದವಿ ಶಿಕ್ಷಣ ಪೂರೈಸಿದ್ದಾರೆ. ಇಂತಹ ಶಿಕ್ಷಕರಲ್ಲಿ ಶೇ.40 ರಷ್ಟು ಮಂದಿಯನ್ನು ಯಾವುದೇ ಪರೀಕ್ಷೆ ನಡೆಸದೇ ಪದವೀಧರ ಪ್ರಾಥಮಿಕ ಶಿಕ್ಷಕರ ಸ್ಥಾನಕ್ಕೆ ಅಂದರೆ 6 ರಿಂದ 8 ನೇ ತರಗತಿಯ ಶಿಕ್ಷಕರ ಸ್ಥಾನಕ್ಕೆ ಬಡ್ತಿ ನೀಡಬೇಕೆಂಬುದು ಈ ಶಿಕ್ಷಕರ ಒತ್ತಾಯವಾಗಿತ್ತು.

2017ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶೀಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (graduate teacher promotion) ಬಡ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈಗ ನಿಯಮಗಳಿಗೆ ಮತ್ತೊಂದು ತಿದ್ದುಪಡಿ ಮಾಡುವ ಮೂಲಕ ಈ ಅನ್ಯಾಯವನ್ನು ಸರಿಪಡಿಸಬೇಕೆಂಬ ಶಿಕ್ಷಕರ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸೇವಾ ನಿರತ ಪದವೀಧರ ಶಿಕ್ಷಕರ ಪರವಾಗಿ ಈ ಬಡ್ತಿಗಾಗಿ ಹೋರಾಟ ನಡೆಸಿಕೊಂಡು ಬಂದಿತ್ತು. ಸಂಘದ ನಿಯೋಗವು ಇದಕ್ಕಾಗಿ ಹಲವಾರು ಬಾರಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿತ್ತು. ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡುವ ಕುರಿತು ಸರ್ಕಾರ ತಾತ್ವಿಕ ಒಪ್ಪಿಗೆ ನೀಡುವಂತೆ ಮಾಡಿದ್ದ ಸಂಘವು ಇದಕ್ಕೆ ಸಂಬಂಧಿಸಿದ ಕಡತವು ತ್ವರಿತವಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅನುಮತಿ ಪಡೆದುಕೊಳ್ಳುವಂತೆ ನೋಡಿಕೊಂಡಿತ್ತು.

ಈಗ ಈ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ಪಡೆಯುವುದು ಮಾತ್ರ ಬಾಕಿ ಇತ್ತು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಇದು ಪ್ರಸ್ತಾಪಗೊಂಡಿತಾದರೂ ಅಂತಿಮ ಒಪ್ಪಿಗೆ ಸಿಕ್ಕಿಲ್ಲ. ಇದು ನಮಗೆ ಬಹಳ ಬೇಸರ ಮೂಡಿಸಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ: 7th pay commission : ಸರ್ಕಾರಿ ನೌಕರರಿಗೆ ಶನಿವಾರವೂ ರಜೆ; ಸಂಘದ ಬೇಡಿಕೆ ಕುರಿತು ಬಿಸಿಬಿಸಿ ಚರ್ಚೆ

Exit mobile version