Site icon Vistara News

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ

graduate teacher promotion

ಬೆಂಗಳೂರು: ಸೇವಾ ನಿರತ ಪದವೀಧರ ಶಿಕ್ಷಕರನ್ನು ಪರೀಕ್ಷೆ ನಡೆಸದೇ 6 ರಿಂದ 8 ನೇ ತರಗತಿ ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸುವ (graduate teacher promotion) ಪ್ರಸ್ತಾಪ ಈಗ ಮರಳಿ ಶಿಕ್ಷಣ ಇಲಾಖೆಯ ಅಂಗಳಕ್ಕೆ ಬಂದು ನಿಂತಿದ್ದು, ಸುಮಾರು 75 ಸಾವಿರಕ್ಕೂ ಹೆಚ್ಚು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಶಿಕ್ಷಣ ಇಲಾಖೆಯ ಮುಂದಿನ ನಡೆಯನ್ನು ಎದುರು ನೋಡುತ್ತಿದ್ದಾರೆ.

ಸೇವಾನಿರತ ಪದವೀಧರ ಶಿಕ್ಷಕರಲ್ಲಿ ಶೇ.40 ರಷ್ಟು ಮಂದಿಯನ್ನು ಪರೀಕ್ಷೆ ನಡೆಸದೇ 6 ರಿಂದ 8 ನೇ ತರಗತಿಗೆ ನಿಯುಕ್ತಿಗೊಳಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡುವ ಪ್ರಸ್ತಾಪಕ್ಕೆ ಈಗಾಗಲೇ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಆರ್ಥಿಕ ಇಲಾಖೆಯೂ ಸಮ್ಮತಿ ಸೂಚಿಸಿವೆ.

ಈ ಪ್ರಸ್ತಾಪದ ಕಡತ ಇದೀಗ ಶಿಕ್ಷಣ ಇಲಾಖೆಗೆ ಮರಳಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯ ಅಂತಿಮ ಅನುಮೋದನೆಗೆ ಸಚಿವ ಸಂಪುಟದ ಮುಂದೆ ಮಂಡಿಸಬೇಕಿದೆ. ಶಿಕ್ಷಣ ಇಲಾಖೆಯು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಕಳೆದ ಇಪ್ಪತ್ತು, ಇಪ್ಪತ್ತೈದು ವರ್ಷಗಳಿಂದ ಶಾಲೆಗಳಲ್ಲಿ ಬೋಧಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರು ಆಗ್ರಹಿಸುತ್ತಿದ್ದಾರೆ.

ಈ ಸಂಬಂಧ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗವು ಗುರುವಾರ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರನ್ನು ಭೇಟಿ ಮನವಿ ಸಲ್ಲಿಸಿದ್ದು, ತಿದ್ದುಪಡಿಯ ಪ್ರಸ್ತಾವನೆಯನ್ನು ಆದಷ್ಟು ಬೇಗ ಸಂಪುಟದಲ್ಲಿ ಮಂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಮತ್ತು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿಸಬೇಕು ಎಂದು ಕೋರಿದೆ.

ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಿಕ್ಷಣ ಸಚಿವರು ಆದಷ್ಟು ಬೇಗ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಶಂಭುಲಿಂಗನ ಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರೀಕ್ಷೆಯಂತೆಯೇ ಈ ಪ್ರಸ್ತಾಪಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹೀಗಾಗಿ ಈಗಾಗಲೇ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡುವ ಪ್ರಸ್ತಾಪದ ಕಡತವನ್ನು ಸಿದ್ಧಪಡಿಸಲಾಗುತ್ತಿದ್ದು, ಸದ್ಯವೇ ಸಚಿವ ಸಂಪುಟದ ಮುಂದೆ ಮಂಡಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು “ವಿಸ್ತಾರ ನ್ಯೂಸ್‌ʼʼಗೆ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇವಾ ನಿರತ ಪದವೀಧರ ಶಿಕ್ಷಕರ ಪರವಾಗಿ ಇದಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿತ್ತು. ಇತ್ತೀಚೆಗೆ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಿದ ಸಂದರ್ಭದಲ್ಲಿಯೂ ಸೇವಾ ನಿರತ ಪದವೀಧರ ಶಿಕ್ಷಕರ ನೇಮಕದ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು.

ಸುಮಾರು 75 ಸಾವಿರಕ್ಕೂ ಹೆಚ್ಚು ಪದವೀಧರ ಶಿಕ್ಷಕರು ಆರರಿಂದ ಎಂಟನೇ ತರಗತಿಯವರೆಗೆ ಬೋಧಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸೇವಾ ಜೇಷ್ಠತೆಯೊಂದಿಗೆ ಇವರನ್ನು ನೇಮಕಕ್ಕೆ ಪರಿಗಣಿಸಿ ಸೂಕ್ತ ಆರ್ಥಿಕ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿಕೊಂಡೇ ಬರಲಾಗಿದೆ. ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸಲು ಶಿಕ್ಷಣ ಸಚಿವರ ಸೂಚನೆ

Exit mobile version