Site icon Vistara News

Old Pension Scheme: ಹಳೇ ಪಿಂಚಣಿಗೆ ಅರ್ಜಿ ಸಲ್ಲಿಸಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ

NPS News

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೇ ಪಿಂಚಣಿ ವ್ಯವಸ್ಥೆಗೆ (Old Pension Scheme) ರಾಜ್ಯ ಸರ್ಕಾರ (Karnataka Government) ಅಸ್ತು ಎಂದು ಈಗಾಗಲೇ ಹೇಳಿದೆ. ಜತೆಗೆ, ಸಮಯದ ಷರತ್ತನ್ನು ಸಹ ವಿಧಿಸಿತ್ತು. ಈ ಮೂಲಕ ಹೊಸ ಪಿಂಚಣಿ ಯೋಜನೆಯ (New Pension Scheme) ವ್ಯಾಪ್ತಿಯನ್ನು 2006ರ ನಂತರದವರಿಗೆ ಮಾತ್ರ ಎಂದು ತಿಳಿಸಿತ್ತು. ಹೀಗಾಗಿ ಇದಕ್ಕಿಂತ ಮೊದಲು ನೇಮಕಗೊಂಡವರು ಹಳೇ ಪಿಂಚಣಿ ಯೋಜನೆಯನ್ನು ಪಡೆಯಬಹುದಾಗಿದೆ. ಈಗ ಹಳೇ ಪಿಂಚಣಿಯನ್ನು ಪಡೆಯಬೇಕೆಂದರೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕು.

ಈ ಸಂಬಂಧ ಆರ್ಥಿಕ ಇಲಾಖೆಯು ನಡವಳಿಗಳನ್ನು ಹೊರಡಿಸಿದ್ದು, ಅದರಲ್ಲಿ ದಿನಾಂಕ: 01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲ ಸರ್ಕಾರಿ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಯನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ) ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ.

ದಿನಾಂಕ: 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದೆ.

ಯಾವೆಲ್ಲ ದಾಖಲೆಗಳು ಬೇಕು?

  1. ಹುದ್ದೆಗಳ ಭರ್ತಿಗಾಗಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆ ದಿನಾಂಕ ಪ್ರತಿ
  2. ಸಂಬಂಧಪಟ್ಟ ಆಯ್ಕೆ ಪಟ್ಟಿ ದಿನಾಂಕದ ಪ್ರತಿ
  3. ನೇಮಕಾತಿ ಆದೇಶ ದಿನಾಂಕ ಪ್ರತಿ
  4. ನೇಮಕಾತಿಯ ನಂತರ ಇಲಾಖೆ ಬದಲಾವಣೆಯಾಗಿದೆಯೇ? ವಿವರಗಳನ್ನು ನೀಡುವುದು
  5. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿ/ಇಲಾಖೆಯ ವಿಳಾಸ
  6. ಕೆಜಿಐಡಿ ಸಂಖ್ಯೆ
  7. NPS ಪ್ರಾನ್ ಸಂಖ್ಯೆ
  8. ಪ್ರಸ್ತುತ ವೇತನ ಚೀಟಿ

ಈ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಆರ್ಥಿಕ ಇಲಾಖೆ ಸೂಚನೆ ನೀಡಿದೆ.

13,000 ನೌಕರರಿಗೆ ಹಳೆ ಪಿಂಚಣಿ ಯೋಜನೆ ಅವಕಾಶ

ಸುಮಾರು 13,000 ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯಿಂದ (New pension scheme – NEP) ಹಳೆಯ ಪಿಂಚಣಿ ಯೋಜನೆಗೆ (Old Pension Scheme – OPS) ಬದಲಾಯಿಸಲು ಈಚೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಏಪ್ರಿಲ್ 2006ರ ಪೂರ್ವದಲ್ಲಿ ಅಧಿಸೂಚನೆ ಹೊರಡಿಸಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಹಳೆಯ ಪಿಂಚಣಿ ಯೋಜನೆಗೆ ಒಳಪಡಲು ಆರು ಷರತ್ತುಗಳನ್ನು ವಿಧಿಸಿದೆ.

ಹಳೆಯ ಪಿಂಚಣಿ ಸೇವೆಗೆ ಒಳಪಡಲು ಸರ್ಕಾರಿ ನೌಕರರು ತಾವೇ ಒಪ್ಪಿಗೆ ಸೂಚಿಸಬೇಕು; ಏಪ್ರಿಲ್ 2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಅವಕಾಶ; ಹಳೆಯ ಪಿಂಚಣಿ ಸೇವೆಗೆ ಒಳಪಟ್ಟರೆ, ಬದಲಾವಣೆಗೆ ಮತ್ತೆ ಅವಕಾಶವಿಲ್ಲ; ಹಳೆಯ ಪೆನ್ಷನ್ ಸ್ಕೀಮ್‌ಗೆ ಒಳಪಡುವ ಬಗ್ಗೆ ಯಾವುದೇ ಸೂಚನೆ ನೀಡದಿದ್ದರೆ ನೂತನ ರಾಷ್ಟ್ರೀಯ ಪೆನ್ಷನ್ ಸ್ಕೀಮ್ ಮುಂದುವರಿಯುತ್ತದೆ.

ಓಲ್ಡ್ ಪೆನ್ಶನ್ ಸ್ಕೀಮ್‌ಗೆ ಒಳಪಡಲು ಅರ್ಜಿ ಸಲ್ಲಿಸಲು ಜೂನ್ 30ರವರೆಗೆ ಅವಕಾಶ ನೀಡಲಾಗಿದೆ. ಈ ಅವಕಾಶ ಎಲ್ಲಾ ಸರ್ಕಾರಿ ನೌಕರರಿಗೂ ಇಲ್ಲ. ಕೇವಲ ಏಪ್ರಿಲ್ 2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Udyogini Scheme: ಮಹಿಳೆಯರೇ ನೀವೂ ಉದ್ಯಮಿಗಳಾಗಿ; ಸಿಗಲಿದೆ 3 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ!

ಕರ್ನಾಟಕದಲ್ಲಿ ಒತ್ತಾಯ ಕೇಳಿಬಂದಿತ್ತು

ಇತ್ತೀಚೆಗೆ ರಾಜ್ಯ ನೌಕರರ ಸಂಘಟನೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಒತ್ತಾಯಿಸಿತ್ತು. ಈಗಾಗಲೇ ಪಂಜಾಬ್‌, ರಾಜಸ್ಥಾನ, ಚತ್ತಿಸ್‌ಘಡ, ಜಾರ್ಖಂಡ್‌, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್‌ಪಿಎಸ್‌ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬುದು ನೌಕರರ ಬೇಡಿಕೆಯಾಗಿತ್ತು.

Exit mobile version