ಬೆಂಗಳೂರು: ವಿಚ್ಚೇದಿತ ಸರ್ಕಾರಿ ನೌಕರರು ಉದ್ಯೋಗದಲ್ಲಿ ಇರುವಾಗಲೇ ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಯಾರಿಗೆ ನೌಕರಿ (compassionate employment) ನೀಡಬೇಕೆಂಬ ಕುರಿತು ಇದ್ದ ಗೊಂದಲವನ್ನು ಸರ್ಕಾರ ಬುಧವಾರ ಬಗೆಹರಿಸಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ವಿಚ್ಚೇದಿತ ಸರ್ಕಾರಿ ನೌಕರರು (ಪುರುಷ/ಮಹಿಳೆ) ಸೇವೆಯಲ್ಲಿರುವಾಗಲೇ ಮೃತಪಟ್ಟ ಸಂದರ್ಭಗಳಲ್ಲಿ ಹಾಗೂ ಅವರಿಗೆ ಮಕ್ಕಳಿಲ್ಲದಿದ್ದಲ್ಲಿ, ಅಂತ ಸರ್ಕಾರಿ ಸೌಕರರನ್ನು ಅವಿವಾಹಿತ ಸರ್ಕಾರಿ ನೌಕರನೆಂದು ಪರಿಗಣಿಸಿ, ಮೃತ ನೌಕರರ ಅಲಂಬಿತರಾಗಿರುವ ಹಾಗೂ ಅವರೊಂದಿಗೆ ವಾಸಿಸುತ್ತಿದ್ದ ಅವರ ಸಹೋದರ/ ಸಹೋದರಿಯನ್ನು ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸಬಹುದು ಎಂದು ಸ್ಪಷ್ಟವಾಗಿ ತಿಳಿಸಿದೆ.
ಈ ಬದಲಾವಣೆಯು ದಿನಾಂಕ 09-04-2021 ರಿ೦ದಲೇ ಅನ್ವಯವಾಗುತ್ತವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ವೀರಭದ್ರ ಈ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು-1996 ರನ್ವಯ ಸೇವೆಯಲ್ಲಿರುವಾಗಲೇ ಮೃತಪಡುವ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ವಿವಾಹಿತ ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅನುಕಂಪದ ಆಧಾರದ ನೇಮಕಾತಿ ಪಡೆಯಲು ಅರ್ಹರಾದ ಅವಲಂಬಿತರ ಬಗ್ಗೆ ಈ ನಿಯಮವಾಳಿಯಲ್ಲಿ ತಿಳಿಸಲಾಗಿದೆ.
ಇದರನ್ವಯ, ವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಪತ್ನಿ/ಪತಿ, ಮಗ ಮತ್ತು ಮಗಳು ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಸಹೋದರ/ಸಹೋದರಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಹರಾಗಿರುತ್ತಾರೆ.
ವಿಚ್ಚೇದಿತ ನೌಕರರಿಗೆ ಸಂಬಂಧಿಸಿದಂತೆ ಗೊಂದಲವಿತ್ತು. ವಿಚ್ಚೇದಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ, ಅವರ ಪತ್ನಿ/ಪತಿ ಕಾನೂನು ರೀತಿಯಲ್ಲಿ ಬೇರ್ಪಡುವುದರಿಂದ, ಅವರಿಗೆ ಅನುಕಂಪದ ಆಧಾರದ ನೇಮಕಾತಿ ನೀಡಲು ಅವಕಾಶವಿರುವುದಿಲ್ಲವಾದರೂ, ವಿಚ್ಚೇದಿತ ನೌಕರರ ಮಕ್ಕಳು ಅವರಿಗೆ ಅಲವಂಬಿತ ರಾಗಿದ್ದಲ್ಲಿ ಹಾಗೂ ಅವರೊಂದಿಗೆ ವಾಸಿಸುತ್ತಿದ್ದಲ್ಲಿ, ಅವರನ್ನು ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬಹುದಾಗಿದೆ.
ಆದರೆ, ವಿಚ್ಚೇದಿತ ಸರ್ಕಾರಿ ನೌಕರರು ಮೃತಪಟ್ಟಿದ್ದು, ಅವರಿಗೆ ಮಕ್ಕಳಿಲ್ಲದ ಸಂದರ್ಭಗಳಲ್ಲಿ, ಅವಿವಾಹಿತ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಅನ್ವಯವಾಗುವಂತೆ ಅವರ ಸಹೋದರ/ಸಹೋದರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಬಹುದೇ ಎಂಬ ಬಗ್ಗೆ ಹಲವು ಇಲಾಖೆಗಳು ಸ್ಪಷ್ಟೀಕರಣ ಕೋರಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ : ನೌಕರ ಮಿತ್ರ | ಮದುವೆಗೂ ಮೊದಲು ಅನುಕಂಪ ಆಧಾರದ ನೌಕರಿಗೆ ಅರ್ಜಿ; ಮದುವೆಯಾದ ಮೇಲೂ ಪಡೆಯಬಹುದೇ?