ಬೆಂಗಳೂರು: ಚುನಾವಣಾ ಆಯೋಗದ ಸೂಚನೆಯಂತೆ ಸ್ಥಗಿತಗೊಂಡಿದ್ದ ರಾಜ್ಯ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆ ಮತ್ತೆ ಆರಂಭವಾಗಬಹುದೆಂಬ ನಿರೀಕ್ಷೆಯಲ್ಲಿ ಈಗ ರಾಜ್ಯದ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೂಡಲೇ ವರ್ಗಾವಣೆ ಪ್ರಕ್ರಿಯೆ ನಡೆಸಬೇಕೆಂದು ಅವರು ನೂತನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆರಂಭಗೊಂಡಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಸ್ಥಗಿತಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿತ್ತಲ್ಲದೇ, ಚುನಾವಣಾ ಪ್ರಕ್ರಿಯೆ ಸಂಪೂರ್ಣ ಮುಗಿದ ನಂತರ ಆರಂಭಿಸುವಂತೆ ಹೇಳಿತ್ತು. ಈಗ ಚುನಾವಣಾ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ನೂತನ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ವರ್ವಾವಣೆ ಪ್ರಕ್ರಿಯೆ ಕೂಡಲೇ ಆರಂಭಿಸಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.
ಈ ನಡುವೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ವರ್ಗಾವಣೆ ನಡೆಯದೆ ಶಿಕ್ಷಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈಗಾಗಲೇ ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿ, ಕೌನ್ಸಿಲಿಂಗ್‌ಗಾಗಿ ಕಾಯುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ಸ್ಥಗಿತಗೊಂಡಿದ್ದ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಲು ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದಾರೆ.
ಈ ಹಿಂದಿನ ಸರ್ಕಾರ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲು ಚುನಾವಣೆಗಿಂತ ಒಂದು ವಾರ ಮೊದಲಷ್ಟೇ (ಮಾರ್ಚ್ 31 ರಂದು) ಅನುಮತಿ ನೀಡಿತ್ತು. ಚುನಾವಣಾ ನೀತಿ ಸಂಹಿಂತೆ ಜಾರಿಯಲ್ಲಿದ್ದುದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಕರ್ನಾಟಕ ಚುನಾವಣಾ ಆಯುಕ್ತರು ಇದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಿದ್ದು, ಅಲ್ಲಿಂದ ಈ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡುವಂತೆ ಸೂಚನೆ ಬಂದಿತ್ತು. ಹೀಗಾಗಿ ವರ್ವಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಗಳಡಿ ವರ್ಗಾವಣೆಗಾಗಿ 88,324 ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ಆರಂಭವಾಗಿದ್ದ ಈ ವರ್ಗಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ನಂತರ ಪ್ರಾರಂಭವಾದರೂ ಚುನಾವಣೆಯ ಕಾರಣದಿಂದ ಸ್ಥಗಿತಗೊಂಡಿತ್ತು. ಹೆಚ್ಚುವರಿ ಶಿಕ್ಷಕರ ನಿಯೋಜನೆ, ಸರ್ಕಾರಿ ಪ್ರಾಥಮಿ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರನ್ನು ಕೌನ್ಸಿಲಿಂಗ್ ಮುಖಾಂತರ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೆ ಈಗಾಗಲೇ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿದೆ.
ನೂತನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಸದ್ಯವೇ ಶಾಲೆಗಳನ್ನು ತೆರೆಯಲಾಗುತ್ತದೆ. ಹೀಗಾಗಿ ಕೂಡಲೇ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಿ, ಪೂರ್ಣಗೊಳಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ತಪ್ಪುತ್ತದೆ ಎಂಬುದು ಶಿಕ್ಷಕರ ವಾದವಾಗಿದೆ. ಆದರೆ ಈಗಷ್ಟೇ ಅಧಿಕಾರಕ್ಕೆ ಬಂದಿರುವ ಸರ್ಕಾರ ಇತ್ತ ಗಮನ ನೀಡುತ್ತದೆಯೇ, ಇಲ್ಲವೇ ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Teacher Transfer : ಶಿಕ್ಷಕರ ವರ್ಗಾವಣೆ ಮುಂದೂಡಿದ ಚುನಾವಣಾ ಆಯೋಗ; ಫಲಿತಾಂಶದ ಬಳಿಕವಷ್ಟೇ ಚಾಲನೆ