ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಬರುವ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆ, ಭರವಸೆಯಾಗಿಯೇ ಉಳಿಯಲಿದೆಯೇ?
ಈ ಅನುಮಾನ ಈಗ ರಾಜ್ಯ ಸರ್ಕಾರಿ ನೌಕರರನ್ನು ಕಾಡುತ್ತಿದೆ. ವಿಧಾನಸಭೆಯಲ್ಲಿ ಶಾಸಕ ಐಹೋಳೆ ಡಿ. ಮಹಾಲಿಂಗಪ್ಪ ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿ ಸಂದರ್ಭಾನುಸಾರ ಕ್ರಮ ತೆಗೆದುಕೊಳ್ಳಲಾಗುವುದುʼʼ ಎಂದಷ್ಟೇ ಹೇಳಿದ್ದಾರೆ.
ಯಾವ ಕಾಲ ಮಿತಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಏಳನೇ ವೇತನ ಆಯೋಗವನ್ನು ರಚಿಸಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ನೇರವಾಗಿಯೇ ಕೇಳಲಾಗಿದ್ದ ಪ್ರಶ್ನೆಗೆ ಸಿಎಂ ಈ ಮೇಲಿನಂತೆ ಉತ್ತರಿಸಿದ್ದು, ಈ ಹಿಂದೆ ಪ್ರಕಟಿಸಿದಂತೆ ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚಿಸಲಾಗುತ್ತದೆ ಎಂದು ಸ್ಪಷ್ಟವಾಗಿ ವಿಧಾನಸಭೆಯಲ್ಲಿ ಉತ್ತರ ನೀಡಿಲ್ಲ.
ಇದೇ ತಿಂಗಳ 6 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಮೊದಲ “ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನʼʼ ಸಮಾರಂಭದಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಸ್ಪಷ್ಟವಾಗಿ ಭರವಸೆ ನೀಡಿದ್ದರು.
ಸಮಾನ ವೇತನ ಸಾಧ್ಯವಿಲ್ಲ
ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ ಮತ್ತು ಭತ್ಯೆಗಳ ನಡುವೆ ಗಣನೀಯ ಪ್ರಮಾಣದಲ್ಲಿರುವ ವ್ಯತ್ಯಾಸವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ರಾಜ್ಯ ಸರ್ಕಾರ ವೇತನ ಆಯೋಗವನ್ನು ರಚಿಸಿಕೊಂಡು ಕಾಲದಿಂದ ಕಾಲಕ್ಕೆ ವೇತನ ಪರಿಷ್ಕರಿಸಿಕೊಂಡು ಬರುತ್ತಿದೆ. ಇದು ರಾಜ್ಯ ಸರ್ಕಾರದ ನೀತಿಯಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳು ಮತ್ತು ಕೇಂದ್ರ ವೇತನ ಆಯೋಗ ಮತ್ತು ಇತರ ರಾಜ್ಯಗಳ ವೇತನ ಆಯೋಗಗಳ ಶಿಫಾರಸುಗಳನ್ನು ರಾಜ್ಯ ಸರ್ಕಾರದ ನೌಕರರಿಗೆ ಹೋಲಿಸಿ ಅನ್ವಯಿಸಲು ಬರುವುದಿಲ್ಲ ಎಂದಿದ್ದಾರೆ.
ಪಿಂಚಣಿ ಯೋಜನೆ ವಿಷಯದಲ್ಲಿಯೂ ಉಲ್ಟಾ
ಸರ್ಕಾರಿ ನೌಕರರಿಗೆ 2006ರಿಂದ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ (NPS) ಯೋಜನೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ನೌಕರರ ಒತ್ತಾಯಕ್ಕೆ ಮಣಿದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು (OPS) ಅನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ವಿಧಾನ ಪರಿಷತ್ತಿನಲ್ಲಿ ಕೂಡ ಈ ಹಿಂದೆ ಅಧಿಕೃತವಾಗಿ ಈ ಸಂಬಂಧ ಹೇಳಿಕೆ ನೀಡಿದ್ದರು.
ಈ ಕುರಿತು ರಾಜ್ಯ ಸರ್ಕಾರಿ ನೌಕರರು ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ 2018ರಲ್ಲಿಯೇ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ ಮಾಡಲು ಶಿಫಾರಸು ಮಾಡುವಂತೆ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲಾಗಿತ್ತು. ಆದರೆ ಇನ್ನೂ ಈ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಈ ಸಮಿತಿಗೆ ಸರ್ಕಾರವು ಕಾಲಮಿತಿಯನ್ನೂ ನಿಗದಿಪಡಿಸಿಲ್ಲ. ಈ ವಿಷಯವನ್ನು ಕೂಡ ಸಿಎಂ ಬೊಮ್ಮಾಯಿಯವರೇ ವಿಧಾನಸಭೆಯಲ್ಲಿ ಶಾಸಕ ಐಹೋಳೆ ಡಿ.ಮಹಾಲಿಂಗಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದ್ದಾರೆ.
ಇದನ್ನೂ ಓದಿ | ನೌಕರ ಮಿತ್ರ | ಸರ್ಕಾರಿ ನೌಕರನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದೇ?