Site icon Vistara News

KPSC Departmental Examination : ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ ಮತ್ತೆ ಮುಂದೂಡಿಕೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ

kpsc departmental examination ii session examinations postponed again

kpsc

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು (KPSC Departmental Examination) ಮತ್ತೆ ಮುಂದೂಡಿದೆ. ಇದರಿಂದ ಈ ಪರೀಕ್ಷೆಯನ್ನು ಎರಡನೇ ಬಾರಿಗೆ ಮುಂದೂಡಿದಂತಾಗಿದೆ.

ಈ ಮೊದಲು ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿ, ಚುನಾವಣೆ ಮುಗಿದ ನಂತರ ಅಂದರೆ ಮೇ. 19 ರಿಂದ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ಈಗ ಪರೀಕ್ಷೆಯನ್ನು ಮುಂದೂಡಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂನ್‌ 9 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಜುಲೈ 9 ರವರೆಗೆ ನಡೆಯಲಿವೆ.

ʻʻಕಾರಣಾತಂತರಗಳಿಂದ ಪರೀಕ್ಷಾ ದಿನಾಂಕಗಳನ್ನು ಬದಲಾವಣೆ ಮಾಡಲಾಗಿದೆ. ಮುಂದೆ ಆಫ್‌ಲೈನ್‌ ಮಾದರಿಯಲ್ಲಿಯೇ ಪರೀಕ್ಷೆ ನಡೆಸಲಾಗುವುದು. ಪರಿಷ್ಕೃತ ವೇಳಾಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆʼʼ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ;

ಈ ಪರೀಕ್ಷೆಗೆ ಸಂಬಂಧಿಸಿದಂತೆ ಜನವರಿ 6 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಲ್ಲದೆ ಈಗಾಲೇ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಈಗಾಗಲೇ ಅರ್ಜಿ ಸಲ್ಲಿಸಿರುವ ಸರ್ಕಾರಿ ನೌಕರರು (ಗ್ರೂಪ್‌-ಡಿ ನೌಕರರು ಹೊರತುಪಡಿಸಿ), ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ/ ಪ್ರಾಧಿಕಾರಗಳ ಕಾಯಂ ನೌಕರರು ಈ ಪರೀಕ್ಷೆ ಬರೆಯಬೇಕಿದೆ.

ಎಲ್ಲ ವಿಭಾಗೀಯ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಅಧಿಸೂಚನೆಯಲ್ಲಿ ಆನ್‌ಲೈನ್‌ ಮಾದರಿಯ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತಾದರೂ ಈಗ ಕೆಪಿಎಸ್‌ಸಿಯು ಆಫ್‌ಲೈನ್‌ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಈ ಇಲಾಖಾ ಪರೀಕ್ಷೆಯನ್ನು ಒಟ್ಟು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಪ್ರಥಮ ಹಂತದ ಪರೀಕ್ಷೆಯನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಎರಡನೇ ಹಂತದ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.

ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 99 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳ ಪಠ್ಯಕ್ರಮಗಳು ಪರಿಷ್ಕೃತಗೊಂಡಿದ್ದು, ಈ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://kpsc.kar.nic.in/

ಇದನ್ನೂ ಓದಿ : UGC NET 2023 : ಜೂನ್‌ 13 ರಿಂದ ಯುಜಿಸಿ- ನೆಟ್‌ ಎಕ್ಸಾಮ್‌; ಅರ್ಜಿ ಆಹ್ವಾನಿಸಿದ ಎನ್‌ಟಿಎ

Exit mobile version