Site icon Vistara News

KPTCL Strike : ಶೇ.20 ರಷ್ಟು ವೇತನ ಹೆಚ್ಚಳ ಘೋಷಿಸಿದ ಸರ್ಕಾರ; ಕೆಪಿಟಿಸಿಎಲ್‌ ನೌಕರರ ಮುಷ್ಕರ ಹಿಂದಕ್ಕೆ?

The government has announced a 20 percent increase in wages; KPTCL employees strike back?

#image_title

ಬೆಂಗಳೂರು : ಮುಷ್ಕರಕ್ಕೆ ಮುಂದಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಲ್‌) ಮತ್ತು ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂಗಳ) (KPTCL Strike) ಅಧಿಕಾರಿಗಳು ಮತ್ತು ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಅವರ ಬೇಡಿಕೆಯಂತೆ ಅವರ ವೇತನವನ್ನು ಶೇ.20 ರಷ್ಟು ಹೆಚ್ಚು ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳಲ್ಲಿನ ಅಧಿಕಾರಿಗಳು ಹಾಗೂ ಎಲ್ಲ ನೌಕರರ ಈಗಿರುವ ವೇತನದ ಮೇಲೆ ಏಪ್ರಿಲ್‌ 1 ರಿಂದ ಶೇ. 20 ರಷ್ಟು ಜಾರಿಗೆ ಬರಲಿದೆ. ಈ ಸಂಬಂಧ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದಾರೆ.

ಮಾ. 16 ರಿಂದ ಪ್ರತಿಭಟನೆಗೆ ಮುಂದಾಗಿದ್ದ ಕೆಪಿಟಿಸಿಎಲ್‌ ನೌಕರರ ಸಂಘ ಮತ್ತು ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಚಿವ ಸುನಿಲ್‌ ಕುಮಾರ್‌ ಮಂಗಳವಾರ ಸಭೆ ನಡೆಸಿದ್ದು, ಅವರ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಹೋರಾಟದ ಎಚ್ಚರಿಕೆಗೆ ಸರ್ಕಾರ ಮಣಿದಂತಾಗಿದೆ.

“ವೇತನ ಪರಿಷ್ಕರಣೆಯ ಕುರಿತ ಸಚಿವರ ಟಿಪ್ಪಣಿ ಬಹಿರಂಗವಾಗಿದೆ. ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅದು ಪ್ರಕಟವಾದ ನಂತರ ಮುಷ್ಕರದ ಕುರಿತು ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆʼʼ ಎಂದು ಕೆಪಿಟಿಸಿಎಲ್‌ ನೌಕರರ ಸಂಘದ ಮತ್ತು ಒಕ್ಕೂಟದ ಅಧ್ಯಕ್ಷ ಆರ್‌ ಎಚ್‌. ಲಕ್ಷ್ಮೀಪತಿ ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ.

ಕೆಪಿಟಿಸಿಲ್‌ ನೌಕರರ ಬೇಡಿಕೆಗಳೇನು?
* ಶೇ.40 ರಷ್ಟು ವೇತನ ಪರಿಷ್ಕರಣೆ ಮಾಡಬೇಕು. ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣೆಯನ್ನು ಏಪ್ರಿಲ್‌ 1ರಿಂದ ಜಾರಿಗೆ ತರಬೇಕು.
* ವಿದ್ಯುತ್ ಕಂಪನಿಗಳ ಖಾಸಗೀಕರಣವನ್ನು ಉದ್ದೇಶವಾಗಿ ಇಟ್ಟುಕೊಂಡಿರುವ ಪ್ರಸ್ತಾವಿತ ಮಸೂದೆಯನ್ನು ಸರ್ಕಾರ ತಕ್ಷಣವೇ ಹಿಂದೆಗೆದುಕೊಳ್ಳಬೇಕು.
* ಖಾಲಿ ಇರುವ ಹುದ್ದೆಗಳನ್ನು ಬಹಳ ವರ್ಷಗಳಿಂದ ಭರ್ತಿ ಮಾಡದ್ದರಿಂದ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಾಗಿ ತಕ್ಷಣವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
* ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನೌಕರರಿಗೆ ಅನುಕೂಲವಾಗಿರುವ ಹಳೇ ಪಿಂಚಣಿ ವ್ಯವಸ್ಥೆಯನ್ನೇ ಮರು ಜಾರಿಗೊಳಿಸಬೇಕು
* ನೌಕರರಿಗೆ ಕ್ಯಾಶ್ ಲೆಸ್ ಆರೋಗ್ಯ ವಿಮೆ ಒದಗಿಸಬೇಕು.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಕೆಇಬಿ ಎಂಜಿನಿಯರುಗಳ ಸಂಘ, ಕೆಇಬಿ ಎಸ್‌.ಸಿ/ಎಸ್‌.ಟಿ ನೌಕರರ ಕಲ್ಯಾಣ ಸಂಸ್ಥೆ, ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘ, ಕವಿಪ್ರನಿನಿ ಡಿಪ್ಲಮೊ ಎಂಜಿನಿಯರುಗಳ ಸಂಘ ಸೇರಿದಂತೆ ಕೆಪಿಟಿಸಿಎಲ್‌ನ ನೌಕರರ ಎಲ್ಲ ಸಂಘಟನೆಗಳು ಈ ಹೋರಾಟದಲ್ಲಿ ಭಾಗಿಯಾಗುವುದಾಗಿ ಈಗಾಗಲೇ ಪ್ರಕಟಿಸಿವೆ. ಸರ್ಕಾರದ ಆದೇಶ ಹೊರ ಬಿದ್ದಲ್ಲಿ ಅಧಿಕಾರಿಗಳು ಮತ್ತು ನೌಕರರು ಹೋರಾಟದಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ: KSRTC: ನೌಕರರ ವೇತನ ಪರಿಷ್ಕರಣೆ ಮಾಡುವಂತೆ ನಾಲ್ಕು ಸಾರಿಗೆ ನಿಗಮ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

Exit mobile version