Site icon Vistara News

KSRTC Employees News : ಸಾರಿಗೆ ನೌಕರರರಿಗೆ ಸರ್ಕಾರಿ ನೌಕರರಾಗುವ ಭಾಗ್ಯವಿಲ್ಲ!

KSRTC Employees News

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ (KSRTC Employees News) ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ (ramalinga reddy) ಸ್ಪಷ್ಟಪಡಿಸಿದ್ದಾರೆ.

ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಸರ್ಕಾರಿ ನೌಕರರಿಗೆ ನೀಡಲಾಗುವ ಎಲ್ಲ ಸವಲತ್ತುಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರು ಒತ್ತಾಯಿಸಿಕೊಂಡೇ ಬಂದಿದ್ದರು. ನೂತನ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದೆಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರಿಗೆ ಈಗ ನಿರಾಸೆಯಾಗಿದೆ.

2020ರಲ್ಲಿ ಸಾರಿಗೆ ನಿಗಮದ ನೌಕರರ ಇದೇ ಬೇಡಿಕೆಯನ್ನು ಮುಂದಿಷ್ಟುಕೊಂಡು ಬೃಹತ್‌ ಪ್ರತಿಭಟನೆ ನಡೆಸಿದ್ದರು. ಸಾರಿಗೆ ನೌಕರರಿಗೆ 6ನೇ ವೇತನ ಆಯೋಗಕ್ಕೆ ಸಮನಾದ ವೇತನ ನೀಡಲು ಸರಕಾರ ಸಿದ್ಧ ಆದರೆ ಅವರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಆಗಿನ ಸಾರಿಗೆ ಸಚಿವ ಲಕ್ಷಣ್‌ ಸವದಿ ಹೇಳಿದ್ದರು. ಈ ಸಂದರ್ಭದಲ್ಲಿ ನೌಕರರ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಆಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ನೌಕರರ ಬೇಡಿಕೆ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು. ಆದರೆ ಈಗಿನ ಸರ್ಕಾರ ಕೂಡ ಈ ಬಗ್ಗೆ ಚಿಂತನೆ ನಡೆಸಿಲ್ಲ.

ಸೋಮವಾರ ವಿಧಾನಸಭೆಯಲ್ಲಿ ಶಾಸಕ ಅಪ್ಪಾಜಿ ಸಿ.ಎಸ್‌. ನಾಡಗೌಡ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರನ್ನು ಸರ್ಕಾರಿ ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಸಾರಿಗೆ ನೌಕರರಿಗೆ ಸರಿಸಮಾನವಾದ ವೇತನ ಹಾಗು ಇತರೆ ಎಲ್ಲ ಸೌಲಭ್ಯಗಳನ್ನು ನೀಡಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಳಲಾದ ಮತ್ತೊಂದು ಪ್ರಶ್ನೆಗೆ ವಿವರವಾಗಿ ಲಿಖಿತ ಉತ್ತರ ನೀಡಿರುವ ಸಚಿವರು, ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ-1950ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ ಆಗಿರುತ್ತದೆ. ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಹಾಗೂ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ಆಂತರಿಕ. ಮೂಲಗಳಿಂದಲೇ ಭರಿಸಬೇಕಿದೆ. ಆದ್ದರಿಂದ, ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಮತ್ತು ವೇತನವನ್ನು ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಶ್ರೇಣಿ ಮತ್ತು ವೇತನಕ್ಕೆ ಹೋಲಿಸಲು ಬರುವುದಿಲ್ಲ ಎಂದಿದ್ದಾರೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಸಚಿವರು ಹೇಳಿದ್ದೇನು?

ಸಾರಿಗೆ ಸಂಸ್ಥೆಗಳ ನೌಕರರು ದಿನಾಂಕ;31/12/2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.15ರಷ್ಟು ಹೆಚ್ಚಿಸಿ ದಿನಾಂಕ: 01.03.2023ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ, ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ, ವೇತನ ಬಡ್ಡಿಗಳನ್ನು ಮತ್ತು ಇತರೆ. ವೇತನ ಭತ್ಯೆಗಳಾದ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ಪ್ರಭಾರ ಕಾರ್ಯ ಭತ್ಯೆ, ಅಧಿಕಾವಧಿ ಭತ್ಯೆ, ವಾಷಿಂಗ್‌ ಭತ್ಯೆ, ಬಾಟಾ, ಇನ್ಸೆಂಟಿವ್‌, ರಾತ್ರಿ ಭತ್ಯೆ, ಸಹ ವೇತನ ರಜೆ ಭತ್ಯೆ, ಪ್ರವಾಸ ಭತ್ಯೆ, ನಗರ ಪರಿಹಾರ ಭತ್ಯೆ, ಕನ್ವಿಯನ್ಸ್‌ ಭತ್ಯೆ, ಶಿಶುಪಾಲನಾ ಭತ್ಯೆ, ಬೆಳ್ಳಿ & ಬಂಗಾರ ಪದಕ ಭತ್ಯೆ, ವಾಹನ ಭತ್ಯೆ, ದಿನ ಪತ್ರಿಕೆ ಭತ್ಯೆ, ಪರಿಚಾರಕ ಭತ್ಯೆ, ಹಾರ್ಡ್‌ಶಿಪ್‌ ಭತ್ಯೆ, ಮುಂತಾದವುಗಳನ್ನು ಪಾವತಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗರೆಡ್ಡಿ ವಿವರಿಸಿದ್ದಾರೆ.

ಇದನ್ನೂ ಓದಿ : 2000 Notes Withdrawn: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ನಲ್ಲಿ 2000 ನೋಟು ಚಲಾವಣೆಯಲ್ಲಿ ಇಲ್ವಾ?

ಅರ್ಹ ಸಿಬ್ಬಂದಿಗಳಿಗೆ ಮುಂಬಡ್ತಿ, ಆಯ್ಕೆ ಶ್ರೇಣಿ, ಉನ್ನತ ಶ್ರೇಣಿ, ಗಳಿಕೆ ರಜೆ ನಗದಿಕರಣ, ವಿಶೇಷ ವೇತನ ಬಡ್ತಿ, ವಿಶೇಷ ರಜೆಗಳು ಹಾಗೂ ಇತರೆ ಸೌಲಭ್ಯಗಳನ್ನು ನಿಯಮಾನುಸಾರ ಕಾಲಕಾಲಕ್ಕೆ ನೀಡಲಾಗುತ್ತಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

Exit mobile version