ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ನಡೆಸುತ್ತಿರುವ ಪ್ರತಿಭಟನೆಯಲ್ಲಿ (NPS News) ಗುರುವಾರ ಭಾಗವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು, ಈ ಅನ್ಯಾಯ ಸರಿಪಡಿಸಲು ತಾವು ಈ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಒಪಿಎಸ್ ಜಾರಿ ಅನುಷ್ಠಾನಕ್ಕೆ ಬರುವವರೆಗೂ ಹೋರಾಟ ಮಾಡುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ. ಇದರಲ್ಲಿ ಯಾವ ಸಂಶಯವೂ ಬೇಡ ಎಂದು ಹೇಳಿದ ದೇವೇಗೌಡರು, ಇದಕ್ಕಾಗಿ ತಮಗೆ ಹೊಗಳಿಕೆ,ತೆಗಳಿಕೆ ಯಾವುದೂ ಬೇಡ ಎಂದರು.
ಈ ಅನ್ಯಾಯವನ್ನು ಸರಿಪಡಿಸುವುದಕ್ಕೆ ನಾನು ಬದ್ಧ. ನನ್ನ ಆರೋಗ್ಯ ಹಾಳಾಗಿದೆ. ಆದರೂ ಎನ್‌ಪಿಎಸ್ ರದ್ದಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ದೇವೇಗೌಡರು. ರಾಜ್ಯದ ಹಿತಕ್ಕಾಗಿ ಕೃಷ್ಣ ಕೊಳ್ಳದ ನೀರಾವರಿ ಯೋಜನೆಗಳ ಜಾರಿಗಾಗಿ ತಾವು ನಡೆಸಿದ ಹೋರಾಟವನ್ನು ಸ್ಮರಿಸಿ, ಅದೇ ರೀತಿಯ ಪ್ರಮಾಣಿಕ ಹೋರಾಟ ನಿಮ್ಮ ಪರವಾಗಿಯೂ ಇರಲಿದೆ ಎಂದು ತಿಳಿಸಿದರು.
ದೇವೇಗೌಡರೊಂದಿಗೆ ಮಾಜಿ ವಿಧಾನಪರಿಷತ್ ಸದಸ್ಯ ಶ್ರೀಕಂಟೇಗೌಡ ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು “ವೋಟ್ ಫಾರ್ ಒಪಿಎಸ್ʼʼ ಎಂಬ ಘೋಷಣೆ ಮೊಳಗಿಸಿದರು. ಇದಕ್ಕೂ ಮೊದಲು ಮಾತನಾಡಿದ ಎನ್‌ಪಿಎಸ್ ನೌಕರ ಸಂಘದ ಅಧ್ಯಕ್ಷ ಶಾಂತರಾಮ, ಒಪಿಎಸ್ ಜಾರಿಯ ಅಗತ್ಯತೆಯ ಕುರಿತು ವಿವರಿಸಿದರು. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಹೋರಾಟಕ್ಕೆ ಬೆಂಬಲ ನೀಡಿರುವುದು ನಮ್ಮೆಲ್ಲರ ಹೋರಾಟದ ಶಕ್ತಿಯನ್ನು ಹೆಚ್ಚಿಸಿದೆ ಎಂದರು. ಈಗಾಗಲೇ ಪಕ್ಷ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ರದ್ದುಗೊಳಿಸುವುದಾಗಿ ಜೆಡಿಎಸ್ ಪ್ರಕಟಿಸಿದೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯು ಗುರುವಾರ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ರಾಜಕಾರಣಿಗಳು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ | NPS News | ಕಂಡಿಷನ್ ಒಪ್ಪಿ ಕೆಲಸಕ್ಕೆ ಸೇರಿ ಈಗ OPS ಕೇಳುವುದು ಸೌಜನ್ಯವಲ್ಲ: ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ