ಬೆಂಗಳೂರು: ಕೇಂದ್ರ ಸರ್ಕಾರದಂತೆ ರಾಜ್ಯದಲ್ಲಿಯೂ, ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿಗೆ ಬರುವುದಕ್ಕಿಂತ ಮೊದಲು ಹೊರಡಿಸಲಾಗಿದ್ದ ನೇಮಕಾತಿ ಪ್ರಕಟಣೆ, ಅಧಿಸೂಚನೆಗಳ ಮೂಲಕ ನೇಮಕಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ತರಬೇಕೆಂದು (NPS News) ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಅವರಿಗೆ ಸಂಘದ ಪರವಾಗಿ ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರವು ಎನ್‌ಪಿಎಸ್ ಜಾರಿಗೆ ತಂದ ದಿನಾಂಕಕ್ಕಿಂತ ಅಂದರೆ 01-04-2006 ಪೂರ್ವದಲ್ಲಿ ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ವಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡು ತಡವಾಗಿ ಅಂದರೆ 01-04-2006ರ ನಂತರ ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ವರದಿಮಾಡಿಕೊಂಡಿರುವ ನೌಕರರನ್ನು ಹಳೇ ಪಿಂಚಣಿ ಯೋಜನೆ ವ್ಯಾಪ್ತಿಯಲ್ಲಿ ಪರಿಗಣಿಸಿ, ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಬೇಕೆಂದು ಕೋರಿದ್ದಾರೆ.
ಹೊಸ ಪಿಂಚಣಿ ಯೋಜನೆ ಜಾರಿಗೊಳಿಸುವ ಪೂರ್ವದಲ್ಲಿ ಹೊರಡಿಸಲಾದ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಪ್ರಕ್ರಿಯೆಗಳು, ನ್ಯಾಯಾಲಯದ ಮೊಕದ್ದಮೆಗಳೂ ಸೇರಿದಂತೆ ಹಲವು ಪ್ರಕರಣಗಳ ಹಿನ್ನೆಲೆಯಲ್ಲಿ ವಿಳಂಬವಾಗಿ ಅಂದರೆ ದಿನಾಂಕ 01-04-2006 ರ ನಂತರ ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ನೌಕರರನ್ನು ನೂತನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿರುವುದು ಸ್ವಾಭಾವಿಕ ನ್ಯಾಯತತ್ವಕ್ಕೆ ವಿರುದ್ಧವಾಗಿದೆ ಎಂದು ಷಡಾಕ್ಷರಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಇತ್ತೀಚೆಗೆ, 2003ರ ಡಿಸೆಂಬರ್22ಕ್ಕೂ ಮೊದಲು ಹೊರಡಿಸಲಾದ ಅಧಿಸೂಚನೆ ಮೂಲಕ ಕೇಂದ್ರ ಸರ್ಕಾರಿ ನೌಕರರಾಗಿ ನೇಮಕಗೊಂಡವರಿಗೆ ಹಳೆ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಒಂದು ಬಾರಿಗೆ ಅವಕಾಶ ನೀಡಿದೆ. ಈ ಅರ್ಹ ಕೇಂದ್ರ ಸರ್ಕಾರಿ ನೌಕರರು ಆಗಸ್ವ್ 31ರ ಒಳಗೆ ಈ ಸಂಬಂಧ ನಿರ್ಧಾರ ತೆಗೆದುಕೊಂಡು ಅಗತ್ಯವೆನಿಸಿದರೆ ಓಪಿಎಸ್‌ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಎಷ್ಟು ನೌಕರರಿಗೆ ಓಪಿಎಸ್ ಭಾಗ್ಯ?
ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ಕೆಲವು ನೌಕರರಿಗೆ ಮಾತ್ರ ಓಪಿಎಸ್ ಜಾರಿಗೆ ತರುವ ಈ ನಿರ್ಧಾರ ತೆಗೆದುಕೊಂಡಲ್ಲಿ ರಾಜ್ಯದ ಸುಮಾರು 10 ರಿಂದ 12 ಸಾವಿರ ನೌಕರರಿಗೆ ಅನುಕೂಲವಾಗಲಿದೆ ಎಂದು ಎನ್‌ಪಿಎಸ್ ನೌಕರರು ಹೇಳುತ್ತಿದ್ದಾರೆ. ಎಷ್ಟು ಮಂದಿ ಓಪಿಎಸ್‌ಗೆ ಅರ್ಹತೆ ಪಡೆಯುತ್ತಾರೆ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರಿ ನೌಕರರ ಸಂಘವು ಈಗ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದೆ ಎಂದು ನೌಕರರ ಸಂಘದ ಮೂಲಗಳು ತಿಳಿಸಿವೆ. ಎಷ್ಟು ಮಂದಿ ಅರ್ಹತೆ ಪಡೆಯುತ್ತಾರೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಕೇಂದ್ರದಲ್ಲಿ 2002ರ ಡಿಸೆಂಬರ್ 22ರಲ್ಲಿ ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಅಧಿಸೂಚನೆ ಹೊರಡಿಸಿತ್ತು. 2004ರ ಜನವರಿ 1 ರಿಂದ ಅದು ಜಾರಿಗೆ ಬಂದಿತ್ತು. ಎನ್‌ಪಿಎಸ್ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕಿಂತ ಮೊದಲು ಹೊರಡಿಸಲಾದ ಅಧಿಸೂಚನೆ ಮೂಲಕ ನೇಮಕಗೊಂಡ ಕೇಂದ್ರ ಸರ್ಕಾರಿ ನೌಕರರಿಗೆ ಈಗ ಹಳೆ ಪಿಂಚಣಿ ಯೋಜನೆಯನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆತಿದೆ.
ಇದೇ ರೀತಿಯಲ್ಲಿ ರಾಜ್ಯದಲ್ಲಿಯೂ ಅವಕಾಶ ನೀಡಬೇಕೆಂದು ಎನ್‌ಪಿಎಸ್ ನೌಕರರು ಒತ್ತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ದಿನಾಂಕ 01-04-2006 ರಂದು ಹೊಸ ಪಿಂಚಣಿ ಯೋಜನೆಯ ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕಿಂತ ಮೊದಲು ಸರ್ಕಾರವು ಅಧಿಸೂಚನೆ ಹೊರಡಿಸಿದ ನೇಮಕಾತಿ ಪ್ರಕಟಣೆ/ಅಧಿಸೂಚನೆಯ ಮೂಲಕ ನೇಮಕಗೊಂಡಿರುವ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ/ ನಿಗಮ ಮಂಡಳಿಗಳಲ್ಲಿ ನೇಮಕಗೊಂಡವರಿಗೆ ಹಳೆ ಪಿಂಚಣಿ ಯೋಜನೆಯ್ನು ಜಾರಿಗೊಳಿಸಿ, ಕೂಡಲೇ ಆದೇಶ ಹೊರಡಿಸಬೇಕೆಂದು ಆಗ್ರಹಿಸಲಾಗುತ್ತಿದೆ.
ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ಈ ಸಂಬಂಧ ಕೂಡಲೇ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿರುವ ಸಿ. ಎಸ್. ಷಡಾಕ್ಷರಿ, ಮಾರ್ಚ್ 8 ರಂದು ಎನ್‌ಪಿಎಸ್ ನೌಕರರ, ಪ್ರಮುಖರ ಸಭೆಯನ್ನು ಸಂಘದ ಸಭಾಂಗಣದಲ್ಲಿ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಚರ್ಚಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ತೀರ್ಮಾನ ತೆಗೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಇದನ್ನು ಪಾಲಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : NPS News : ಕೇಂದ್ರದಿಂದ ಕೆಲವು ನೌಕರರಿಗೆ ಓಪಿಎಸ್‌ಗೆ ಶಿಫ್ಟ್ ಆಗಲು ಅವಕಾಶ; ರಾಜ್ಯದಲ್ಲಿಯೂ ಜಾರಿಗೆ ಒತ್ತಾಯ