ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಬೃಹತ್ ಧರಣಿ ಪ್ರತಿಭಟನೆಯನ್ನು (NPS News) ಸೋಮವಾರ ಅಂತ್ಯಗೊಳಿಸಾಗಿದೆ.
ಕಳೆದ 14 ದಿನಗಳಿಂದ ಈ ಪ್ರತಿಭಟನೆ ನಡೆಸಲಾಗುತ್ತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನದಂತೆ ಸೋಮವಾರ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಎನ್‌ಪಿಎಸ್ ರದ್ದಿನ ಕುರಿತು ಮುಖ್ಯಮಂತ್ರಿಗಳೇ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಮತ್ತು ಈ ವಿಷಯವನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸುವ ಕುರಿತು ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ಧರಣಿಯನ್ನು ಸ್ಥಗಿತಗೊಳಿಸಿ ಎಂದು ಕೋರಿದ ಹಿನ್ನೆಲೆಯಲ್ಲಿ ಎನ್‌ಪಿಎಸ್ ನೌಕರರ ಸಂಘದ ಕೋರ್ ಕಮಿಟಿಯು ಧರಣಿಯನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿದೆ.
“ಧರಣಿ ಸಂತ್ಯಗ್ರಹವನ್ನು ಅಂತ್ಯಗೊಳಿಸಿದ್ದೇವೆ. ಆದರೆ ಈ ಹೋರಾಟವನ್ನು ನಿಲ್ಲಿಸಿಲ್ಲ. ಹೋರಾಟದ ವೇದಿಕೆಯನ್ನು ಕೇಂದ್ರ ಸ್ಥಾನದಿಂದ224 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತಾಲೂಕು ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅಲ್ಲಿ “ವೋಟ್ ಫಾರ್ ಒಪಿಎಸ್ʼʼ ಅಭಿಯಾನವನ್ನು “ನಿಶ್ಚಿತ ಪಿಂಚಣಿ ನಮ್ಮ ಹಕ್ಕುʼʼ ಎಂಬ ಘೋಷ ವಾಕ್ಯದೊಂದಿಗೆ ನಡೆಸಲಾಗುತ್ತದೆʼʼ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮು ತಿಳಿಸಿದ್ದಾರೆ.
ಈ ಧರಣಿಯಿಂದಾಗಿ ಹೊಸ ಪಿಂಚಣಿ ಯೋಜನೆಯಿಂದಾಗುವ ಅನ್ಯಾಯವನ್ನು ಇಡೀ ರಾಜ್ಯಕ್ಕೆ ಮನವರಿಕೆ ಮಾಡಿಕೊಡಲು ಸಾಧ್ಯವಾಯಿತು. ಅಲ್ಲದೆ, ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಗಳೇ ಹಳೆಯ ಪಿಂಚಣಿ ಯೋಜನೆಯ ಮರು ಜಾರಿಯಿಂದಾಗುವ ಸಾಧಕ-ಭಾದಕಗಳ ಕುರಿತು ಚರ್ಚಿಸಲು ಸಿದ್ಧ ಎಂದು ಹೇಳುವಂತಾಯಿತು. ಸರ್ಕಾರದ ನಿಲುವು ಏನೇ ಆಗಿದ್ದರೂ ಆಡಳಿತ ಪಕ್ಷದ ಅನೇಕ ನೇತಾರರು ಈ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿ, ಒಪಿಎಸ್ ಜಾರಿಗೆ ಒತ್ತಾಯಿಸುವಂತಾಯಿತು ಎಂದು ಶಾಂತರಾಮ ತಿಳಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಧರಣಿ ನಡೆಯುತ್ತಿದ್ದ ವೇದಿಕೆಗೆ ಆಗಮಿಸಿ, ಬೆಂಬಲ ಸೂಚಿಸಿದ್ದಾರೆ. ಮುಂದೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಸೇರಿಸುವುದಾಗಿ ಭರವಸೆ ನೀಡಿದ್ದಾರೆ.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಮೂರು ತಿಂಗಳ ಅವಧಿಯಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದಾಗಿ ಭರವಸೆ ಕೂಡ ನೀಡಿದ್ದಾರೆ. ಇದೆಲ್ಲವೂ ಈ ಧರಣಿ ಸತ್ಯಾಗ್ರಹದ ಗೆಲುವಾಗಿದೆ ಎಂದು ಶಾಂತರಾಮ ವಿವರಿಸಿದ್ದಾರೆ.
ಹದಿನಾಲ್ಕು ದಿನಗಳ ಕಾಲ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ ವಿವಿಧ ಸಂಘಟನೆಗಳ, ನಿಗಮ ಮಂಡಳಿ/ಅರೆ ಸರ್ಕಾರಿ/ ಅನುದಾನಿತ ಸಂಸ್ಥೆಗಳ ನಾಯಕರು ಮತ್ತು ಅಸಂಖ್ಯಾತ ಎಲ್ಲ ಸರ್ಕಾರಿ ನಿಗಮ ಮಂಡಳಿ/ಅರೆ ಸರ್ಕಾರಿ/ಅನುದಾನಿತ ಸಂಸ್ಥೆಗಳ ನೌಕರರಿಗೆ ಶಾಂತರಾಮ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | NPS News | ಎನ್‌ಪಿಎಸ್ ರದ್ದು; ಹಿಮಾಚಲ ಪ್ರದೇಶದಂತೆ ರಾಜ್ಯದಲ್ಲಿಯೂ ಚುನಾವಣಾ ವಿಷಯವಾಗಲಿದೆಯೇ?