ಬೆಂಗಳೂರು: ಕೇಂದ್ರ ಸರ್ಕಾರದಂತೆ ರಾಜ್ಯದಲ್ಲಿಯೂ, ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿಗೆ ಬರುವುದಕ್ಕಿಂತ ಮೊದಲು ಹೊರಡಿಸಿದ್ದ ಅಧಿಸೂಚನೆ ಮೂಲಕ ನೇಮಕಗೊಂಡ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ತರಬೇಕೆಂದು (NPS News) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸಂಘವು ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರವು ಎನ್‌ಪಿಎಸ್ ಜಾರಿಗೆ ತಂದ ದಿನಾಂಕಕ್ಕಿಂತ ಅಂದರೆ 01-04-2006 ಪೂರ್ವದಲ್ಲಿ ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ವಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡು 01-04-2006ರ ನಂತರ ನೇಮಕಗೊಂಡಿರುವ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಯಲ್ಲಿ ಪರಿಗಣಿಸಿ, ಪಿಂಚಣಿ ಸೌಲಭ್ಯಗಳನ್ನು ಒದಗಿಸಬೇಕೆಂದು ಕೋರಲಾಗಿದೆ.
ಕೇಂದ್ರ ಸರ್ಕಾರವು ಇತ್ತೀಚೆಗೆ, 2003ರ ಡಿಸೆಂಬರ್22ಕ್ಕೂ ಮೊದಲು ಹೊರಡಿಸಲಾದ ಅಧಿಸೂಚನೆ ಮೂಲಕ ಕೇಂದ್ರ ಸರ್ಕಾರಿ ನೌಕರರಾಗಿ ನೇಮಕಗೊಂಡವರಿಗೆ ಹಳೆ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಒಂದು ಬಾರಿಗೆ ಅವಕಾಶ ನೀಡಿದೆ. ಇದೇ ರೀತಿಯಾಗಿ ರಾಜ್ಯದಲ್ಲಿಯೂ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂಬುದು ಸಂಘದ ಒತ್ತಾಯವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ದಿನಾಂಕ 01-04-2006 ರಂದು ಹೊಸ ಪಿಂಚಣಿ ಯೋಜನೆಯ ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕಿಂತ ಮೊದಲು ಸರ್ಕಾರವು ಹೊರಡಿಸಿದ ಅಧಿಸೂಚನೆ ಮೂಲಕ ನೇಮಕಗೊಂಡ ಶಿಕ್ಷಕರು ಓಪಿಎಸ್ ಪಡೆಯಲು ಅರ್ಹರಾಗಿರುತ್ತಾರೆ. ಈಗಾಗಲೇ ರಾಜ್ಯ ಎನ್‌ಪಿಎಸ್ ನೌಕರರ ಸಂಘ, ಸರ್ಕಾರಿ ನೌಕರರ ಸಂಘ ಕೂಡ ಈ ಸಂಬಂಧ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗವು ಇಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಕೂಡ ಸಲ್ಲಿಸಿದೆ.
ಶಿಕ್ಷಕರಿಗೆ ಸಂಧ್ಯಾಕಾಲದ ಬದುಕಿಗೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ ನೂತನ ಪಿಂಚಣಿ ಯೋಜನೆಯಡಿ ಬರುವ ಶಿಕ್ಷಕರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘವು ಪ್ರಯತ್ನ ನಡೆಸುತ್ತಿದೆ. ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕೆಂಬುದು ಸಂಘದ ಒತ್ತಾಯವಾಗಿದ್ದು, ಈಗ ಕೇಂದ್ರ ಸರ್ಕಾರ ಕೆಲವು ನೌಕರರಿಗೆ ಅನುಕೂಲ ಮಾಡಿಕೊಟ್ಟಿರುವಂತೆ ರಾಜ್ಯದಲ್ಲಿಯೂ ಕೆಲವು ಶಿಕ್ಷಕರಿಗೆ ಹಳೆ ಪಿಂಚಣಿಯೋಜನೆಯನ್ನು ಜಾರಿಗೊಳಿಸಿ ತಕ್ಷಣ ಆದೇಶ ಹೊರಡಿಸುವಂತೆ ಸಂಘವು ಆಗ್ರಹಿಸಿದೆ ಎಂದು ಶಂಭುಲಿಂಗನಗೌಡ ಪಾಟೀಲ ಮತ್ತು ಚಂದ್ರಶೇಖರ್ ನುಗ್ಗಲಿ ತಿಳಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ರಾಷ್ಟ್ರಮಟ್ಟದಲ್ಲಿ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ (all india primary teachers federation) ಹೋರಾಟದಿಂದಾಗಿಯೇ ರಾಜಸ್ಥಾನ, ಚತ್ತೀಸ್‌ಗಢ, ಪಂಜಾಬ್, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ಸರ್ಕಾರಗಳು ಎನ್‌ಪಿಎಸ್ ರದ್ದು ಪಡಿಸಿ, ಓಪಿಎಸ್ ಯೋಜನೆಯನ್ನು ಜಾರಿಗೆ ತಂದಿವೆ. ರಾಜ್ಯದಲ್ಲಿಯೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎನ್‌ಪಿಎಸ್ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :NPS News : ಕೇಂದ್ರದಿಂದ ಕೆಲವು ನೌಕರರಿಗೆ ಓಪಿಎಸ್‌ಗೆ ಶಿಫ್ಟ್ ಆಗಲು ಅವಕಾಶ; ರಾಜ್ಯದಲ್ಲಿಯೂ ಜಾರಿಗೆ ಒತ್ತಾಯ