Site icon Vistara News

NPS News : ಸರ್ಕಾರಿ ನೌಕರರಿಗೆ ಕನಿಷ್ಠ ಪಿಂಚಣಿ ಜಾರಿ ವರದಿ; ವಿತ್ತ ಸಚಿವಾಲಯ ಸ್ಪಷ್ಟನೆ ಏನು?

National Pension Scheme

#image_title

ನವ ದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಬದಲಾವಣೆ ತಂದು ಸರ್ಕಾರಿ ನೌಕರರಿಗೆ ಕನಿಷ್ಠ ಪಿಂಚಣಿ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದನ್ನು ಕೇಂದ್ರ ವಿತ್ತ ಸಚಿವಾಲಯವು (NPS News) ತಳ್ಳಿ ಹಾಕಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಬದಲಾವಣೆಗಳನ್ನು ತಂದು ಸರ್ಕಾರಿ ನೌಕರರ ಅಂತಿಮ ತಿಂಗಳ ವೇತನದ ಶೇ.40 ರಿಂದ 45 ರಷ್ಟು ಮೊತ್ತವನ್ನು ಕನಿಷ್ಠ ಪಿಂಚಣಿಯಾಗಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಬುಧವಾರ ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಗುರುವಾರ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವಾಲಯ ಇನ್ನೂ ಈ ಸಂಬಂಧ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಹಣಕಾಸು ಸಚಿವಾಲಯವು ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆಯ ಮರು ಪರಿಶೀಲನೆಗೆ ನಾಲ್ವರು ಸದಸ್ಯರ ಸಮಿತಿ (NPS Committee) ರಚಿಸಿದೆ. ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಇದರ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಾಡಬೇಕಾದ ಬದಲಾವಣೆಗಳು, ಸರ್ಕಾರಿ ನೌಕರರಿಗೆ ಸಿಗುವ ಪಿಂಚಣಿ ಸೌಲಭ್ಯಗಳ ಸುಧಾರಣೆ ಸೇರಿ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಮಾಹಿತಿ ಸಂಗ್ರಹಿಸುತ್ತಿದೆ. ಇನ್ನೂ ಯಾವುದೇ ತೀರ್ಮಾನಕ್ಕೆ ಬಂದು ಶಿಫಾರಸು ಮಾಡಿಲ್ಲ. ಹೀಗಾಗಿ ಈ ಸಂಬಂಧ ತೀರ್ಮಾನಕ್ಕೆ ಬರಲಾಗಿದೆ ಎಂಬುದು ಸತ್ಯವಾದ ಮಾಹಿತಿಯಲ್ಲ ಎಂದು ಇಲಾಖೆಯು ಟ್ವಿಟ್ಟರ್‌ನಲ್ಲಿ ಹೇಳಿದೆ.

ಹಣಕಾಸು ಸಚಿವಾಲಯ ಹೇಳಿದ್ದಿಷ್ಟು…

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನೇ (OPS) ಜಾರಿಗೊಳಿಸಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಸರ್ಕಾರ ನೌಕರರು ಹೋರಾಟ ನಡೆಸುತ್ತಿರುವ ಈ ಹೊತ್ತಿನಲ್ಲಿಯೇ ಈ ಬೆಳವಣಿಗೆ ನಡೆದಿದೆ. ಎನ್‌ಪಿಎಸ್‌ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಯೋಜನೆ ಕುರಿತು ಮರು ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಅಂತೆಯೇ ಸಮಿತಿ ರಚನೆಗೊಂಡಿದ್ದು, ಇನ್ನೂ ವರದಿ ನೀಡಿಲ್ಲ.

ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ರದ್ದುಪಡಿಸಿ ಮತ್ತೆ ಹಳೆಯ ಪಿಂಚಣಿ ಯೋಜನೆಯನ್ನೇ (OPS) ಜಾರಿಗೆ ತರುವ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ. ಆದರೆ ಹೊಸ ಪಿಂಚಣಿ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಅದರಲ್ಲಿನ ಪ್ರಮುಖ ದೋಷಗಳನ್ನು ಸರಿಪಡಿಸಲು ಕೇಂದ್ರ ಉದ್ದೇಶಿಸಿದ್ದು, ಹೀಗಾಗಿಯೇ ಸರ್ಕಾರಿ ನೌಕರರ ಅಂತಿಮ ತಿಂಗಳ ವೇತನದ ಶೇ.40 ರಿಂದ 45 ರಷ್ಟು ಮೊತ್ತವನ್ನು ಕನಿಷ್ಠ ಪಿಂಚಣಿಯಾಗಿ ನೀಡಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಆಧರಿಸಿಯೇ ಈ ವರದಿ ಮಾಡಲಾಗಿದ್ದು, ಈ ವರದಿಯ ಪ್ರಕಾರ ಈಗಾಗಲೇ ಕೇಂದ್ರ ಸರ್ಕಾರಿ ನೌಕರರು ಈಗಾಗಲೇ ವೇತನದ ಶೇ.30 ರಷ್ಟು ಮೊತ್ತವನ್ನು ಕನಿಷ್ಠ ಪಿಂಚಣಿಯಾಗಿ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಸ್ವಲ್ಪ ಹೆಚ್ಚು ಮಾಡಲು ಅಂದರೆ ಶೇ.2 ರಿಂದ 7ರಷ್ಟು ಹೆಚ್ಚು ಮಾಡಲು ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡುವ ಸಾಧ್ಯತೆಗಳಿವೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಎನ್‌ಪಿಎಸ್‌ಗೆ ರಾಜ್ಯ ಸರ್ಕಾರಿ ನೌಕರರು ವಿರೋಧ ವ್ಯಕ್ತಪಡಿಸಿರುವುದರಿಂದ ಈಗಾಗಲೇ ರಾಜಸ್ಥಾನ, ಜಾರ್ಖಂಡ್‌, ಚತ್ತೀಸ್‌ಗಢ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ ರಾಜ್ಯ ಸರ್ಕಾರಗಳು ಎನ್‌ಪಿಎಸ್‌ ರದ್ದು ಪಡಿಸಿ, ಓಪಿಎಸ್‌ ಜಾರಿಗೆ ತರುವುದಾಗಿ ಘೋಷಿಸಿವೆ. ಕರ್ನಾಟಕದಲ್ಲಿಯೂ ಈ ಬಗ್ಗೆ ಸರ್ಕಾರಿ ನೌಕರರು ಹೋರಾಟ ನಡೆಸಿದ್ದು, ಓಪಿಎಸ್‌ ಜಾರಿಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಕುರಿತು ಮುಂದಿನ ಬಜೆಟ್‌ನಲ್ಲಿ ಅವರು ನಿಲುವು ಪ್ರಕಟಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ : NPS News: ಈ ಬಾರಿ ಬಜೆಟ್‌ನಲ್ಲಿ NPS ರದ್ದು?: ಪದಾಧಿಕಾರಿಗಳನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

Exit mobile version