Site icon Vistara News

NPS News : ಕೇಂದ್ರದಿಂದ ಕೆಲವು ನೌಕರರಿಗೆ ಓಪಿಎಸ್‌ಗೆ ಶಿಫ್ಟ್‌ ಆಗಲು ಅವಕಾಶ; ರಾಜ್ಯದಲ್ಲಿಯೂ ಜಾರಿಗೆ ಒತ್ತಾಯ

karnataka teachers association demands for ops in karnataka

nps news

ನವ ದೆಹಲಿ: ಹೊಸ ಪಿಂಚಣಿ ಯೋಜನೆಗೆ (NPS News) ಸರ್ಕಾರಿ ನೌಕರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರದ ಕೆಲ ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಹಳೆ ಪಿಂಚಣಿ ಯೋಜನೆಗೆ (ಓಪಿಎಸ್‌) ವರ್ಗಾಯಿಸಿಕೊಳ್ಳಲು ಒಂದು ಬಾರಿಗೆ ಮಾತ್ರ ಅವಕಾಶ ನೀಡಿದೆ.

2003ರ ಡಿಸೆಂಬರ್‌22ಕ್ಕೂ ಮೊದಲು ಪ್ರಕಟಿಸಲಾದ, ಅಧಿಸೂಚನೆ ಹೊರಡಿಸಲಾದ ನೇಮಕ ಪ್ರಕ್ರಿಯೆ ಮೂಲಕ ಕೇಂದ್ರ ಸರ್ಕಾರಿ ನೌಕರರಾಗಿ ನೇಮಕಗೊಂಡಡವರು ಮಾತ್ರ ಈಗ ಹಳೆ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಅರ್ಹ ಕೇಂದ್ರ ಸರ್ಕಾರಿ ನೌಕರರು ಆಗಸ್ವ್‌ 31ರ ಒಳಗೆ ಈ ಸಂಬಂಧ ನಿರ್ಧಾರ ತೆಗೆದುಕೊಂಡು ಅಗತ್ಯವೆನಿಸಿದರೆ ಓಪಿಎಸ್‌ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಅವಕಾಶವನ್ನು ಮತ್ತೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

2002ರ ಡಿಸೆಂಬರ್‌ 22ರಲ್ಲಿ ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿತ್ತು. 2004ರ ಜನವರಿ 1ರಿಂದ ಅದು ಜಾರಿಗೆ ಬಂದಿತ್ತು. ಎನ್‌ಪಿಎಸ್‌ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕಿಂತ ಮೊದಲು ಕೇಂದ್ರ ಸರ್ಕಾರಿ ನೌಕರಿಗೆ ಸೇರಲು ಆಸಕ್ತಿ ತೋರಿಸಿ, ನಂತರ ನೌಕರಿಗೆ ಸೇರಿದವರಿಗೆ ಹಳೆ ಪಿಂಚಣಿ ಯೋಜನೆಯನ್ನೂ ಆಯ್ಕೆ ಮಾಡಿಕೊಳ್ಳಲು ಈಗ ಅವಕಾಶ ದೊರೆತಂತಾಗಿದೆ.

ನೇಮಕಾತಿ ಪ್ರಕಟಣೆಯಲ್ಲಿ /ಅಧಿಸೂಚನೆಯಲ್ಲಿ ಹಳೆ ಪಿಂಚಣಿ ಯೋಜನೆಯ ಪ್ರಸ್ತಾಪವನ್ನು ಮಾಡಲಾಗಿತ್ತು. ಹೀಗಾಗಿ ನಾವು ಅರ್ಜಿ ಸಲ್ಲಿಸಿದ್ದೆವು. ನೌಕರಿಗೆ ಸೇರ್ಪಡೆಯಾದ ಮೇಲೆ ನಮಗೆ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಅನ್ವಯಿಸುವುದು ಸರಿಯಲ್ಲ ಎಂದು ಈ ಸರ್ಕಾರಿ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಕೆಲ ನೌಕರರು ಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಲಯ ಕೂಡ ಇವರಿಗೆ ಹಳೆ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಿಬ್ಬಂದಿ ಇಲಾಖೆಯು ಶುಕ್ರವಾರ ಈ ಸಂಬಂಧ ಆದೇಶ ಹೊರಡಿಸಿದೆ.

ರಾಜ್ಯದಲ್ಲಿಯೂ ಜಾರಿಗೆ ಒತ್ತಾಯ
ಕೇಂದ್ರ ಸರ್ಕಾರವು ಅರ್ಹ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದಂತೆಯೇ ರಾಜ್ಯದಲ್ಲಿಯೂ ಸರ್ಕಾರ ಇದೇ ರೀತಿಯಾಗಿ ಅರ್ಹ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ ಒತ್ತಾಯಿಸಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01-04-2006 ಕ್ಕಿಂತ ಮೊದಲು ಸರ್ಕಾರವು ಅಧಿಸೂಚನೆ ಹೊರಡಿಸಿದ ನೇಮಕಾತಿ ಪ್ರಕಟಣೆ/ಅಧಿಸೂಚನೆಯ ಮೂಲಕ ನೇಮಕಗೊಂಡಿರುವ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ/ ನಿಗಮ ಮಂಡಳಿಗಳಲ್ಲಿ ನೇಮಕಗೊಂಡವರಿಗೆ ಹಳೆ ಪಿಂಚಣಿ ಯೋಜನೆಯ್ನು ಜಾರಿಗೊಳಿಸಿ, ಕೂಡಲೇ ಆದೇಶ ಹೊರಡಿಸಬೇಕೆಂದು ಕೋರಿದ್ದಾರೆ.
ಹೊಸ ಪಿಂಚಣಿಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂಬ ತಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯ ಅಧಿಸೂಚನೆ ಪ್ರಕಟಗೊಂಡ ದಿನಕ್ಕಿಂತ ಅಂದರೆ 22-01-2003 ಕ್ಕಿಂತ ಮೊದಲು ಹೊರಡಿಸಲಾಗಿದ್ದ ನೇಮಕಾತಿ ಪ್ರಕಟಣೆ/ಅಧಿಸೂಚನೆಯಂತೆ ಕೇಂದ್ರ ಸರ್ಕಾರಿ ನೌಕರರಾಗಿ ದಿನಾಂಕ 01-01-2004 ರಂದು ಮತ್ತು ನಂತರ ನೇಮಕಗೊಂಡವರಿಗೆ ಹಳೆ ಪಿಂಚಣಿ ಯೋಜನೆಗೆ ವರ್ಗಾಯಿಸಿಕೊಳ್ಳಲು ಒಂದು ಬಾರಿಗೆ ಅವಕಾಶ ನೀಡಲಾಗಿದೆʼʼ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಇಲ್ಲಿದೆ ನೋಡಿ

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಒಂದು ವೇಳೆ ನೌಕರರು ಹಳೆ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ, ಅವರಿಗೆ ಹೊಸ ʼರಾಷ್ಟ್ರೀಯ ಪಿಂಚಣಿ ಯೋಜನೆʼಯನ್ನೇ ಮುಂದುವರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಿಸಿದೆ. ಇದು ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ಎನ್‌ಪಿಎಸ್‌ ಅನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ನೀಡಬೇಕಾಗಿದೆ ಎಂದು ಸಿಬ್ಬಂದಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ :Govt Employees Strike : ಎನ್‌ಪಿಎಸ್‌ ರದ್ದು ಪರಿಶೀಲನೆಗೆ ವಿಶೇಷ ಸಮಿತಿ ರಚನೆ; ಸರ್ಕಾರಿ ಆದೇಶದಲ್ಲಿ ಹೇಳಿರುವುದೇನು?

Exit mobile version