ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ನಡೆಸುತ್ತಿರುವ ಪ್ರತಿಭಟನೆಯಲ್ಲಿ (NPS News) ಭಾಗವಹಿಸಿದ್ದ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಡಾ. ಜಿ. ಪರಮೇಶ್ವರ್, “ಕಾಂಗ್ರೆಸ್ ಪಕ್ಷ ನಿಮ್ಮೊಂದಿಗಿರಲಿದೆʼʼ ಎಂದು ಪ್ರಕಟಿಸಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿ ಭರವಸೆ ನೀಡಿದ್ದಾರೆ. ನಾನೂ ಕೂಡ ಪಕ್ಷದ ಹೈಕಮಾಂಡ್‌ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರು ನೀವೂ ಪ್ರತಿಭಟನೆಯಲ್ಲಿ ಭಾಗವಹಿಸಿ, ಪ್ರತಿಭಟನಾಗಾರರಿಗೆ ನಾವಿದ್ದೇವೆ ಎಂದು ಹೇಳಿ ಎಂದು ತಿಳಿಸಿದ್ದಾರೆ. ಹೀಗಾಗಿ ನಮ್ಮ ಭರವಸೆ ಕಾರ್ಯಗತವಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ನಮ್ಮ ಪಕ್ಷ ಅಧಿಕಾರದಲ್ಲಿರುವ ರಾಜಸ್ಥಾನ, ಛತ್ತೀಸ್ ಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ಒಪಿಎಸ್ ಜಾರಿಗೆ ತೀರ್ಮಾನಿಸಿ, ಕ್ರಮ ತೆಗೆದುಕೊಳ್ಳಲಾಗಿದೆ. ಅದೇ ರೀತಿಯಾಗಿ ರಾಜ್ಯದಲ್ಲಿಯೂ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಒಪಿಎಸ್ ಮರುಜಾರಿ ಮಾಡುವುದರ ಬಗ್ಗೆ ಸೇರಿಸುವುದಾಗಿ ಹೇಳಿದರು. ಪ್ರಣಾಳಿಕೆಯಲ್ಲಿ ನಾವು ಪ್ರಕಟಿಸಿದ ಮೇಲೆ ಅದರ ಜಾರಿಗೆ ಬದ್ಧರಾಗಿರಬೇಕಾಗುತ್ತದೆ. ಹೀಗಾಗಿ ನೌಕರರ ಸಂಧ್ಯಾಕಾಲದ ಭದ್ರತೆಯನ್ನು ಖಾತ್ರಿಪಡಿಸುವ ನಿಶ್ಚಿತ ಪಿಂಚಣಿ ಮರು ಸ್ಥಾಪನೆಯಾಗುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು “ವೋಟ್ ಫಾರ್ ಒಪಿಎಸ್ʼʼ ಎಂಬ ಘೋಷಣೆ ಮೊಳಗಿಸಿದರು. ಇದಕ್ಕೂ ಮೊದಲು ಮಾತನಾಡಿದ ಎನ್‌ಪಿಎಸ್ ನೌಕರ ಸಂಘದ ಅಧ್ಯಕ್ಷ ಶಾಂತರಾಮ, ಒಪಿಎಸ್ ಜಾರಿಯು ಕೇವಲ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ವಿಷಯವಲ್ಲ. ಇದು ಪ್ರತಿಯೋರ್ವ ಸರ್ಕಾರಿ ನೌಕರರ, ಗೌರವ ಮತ್ತು ಘನತೆಯ ಪ್ರಶ್ನೆ. ಸರ್ಕಾರ ನೌಕರರ ಸಂಧ್ಯಾಕಾಲದ ಜೀವನಕ್ಕೆ ಭದ್ರತೆ ಒದಗಿಸಿದಲ್ಲಿ, ನೌಕರರು ಅತ್ಯಂತ ಪ್ರಮಾಣಿಕತೆಯಿಂದ ಈ ನಾಡು, ದೇಶ ಕಟ್ಟುವ ಕೆಲಸ ಮಾಡಲಿದ್ದಾರೆ ಎಂದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯು ಸೋಮವಾರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೆಳಗಾವಿಯಲ್ಲಿ ಈಗ ನಡೆಯುತ್ತಿರುವ ಅಧಿವೇಶನದಲ್ಲಿಯೇ, ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ ಒಪಿಎಸ್ ಜಾರಿಯ ಕುರಿತು ಚರ್ಚೆ ನಡೆಯಬೇಕೆಂದು ಪ್ರತಿಭಟನಾಗಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ| NPS News | ಎನ್‌ಪಿಎಸ್ ರದ್ದುಪಡಿಸುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭೇಟಿ