Site icon Vistara News

OPS News : ಹಳೆ ಪಿಂಚಣಿ ಯೋಜನೆಗೆ ಅರ್ಹ ಶಿಕ್ಷಕರ ಪಟ್ಟಿ ಸಿದ್ಧಪಡಿಸಲು ಸೂಚನೆ

OPS News government order1

ಬೆಂಗಳೂರು: 2006ರ ಎಪ್ರಿಲ್‌ 1ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್‌ ಪಿಂಚಣಿ (Old Pension Scheme OPS News) ಯೋಜನೆಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ತೀರ್ಮಾನಿಸಿದ ಬೆನ್ನಿಗೇ ಇದೀಗ ಅರ್ಹ ‌ ಶಿಕ್ಷಣ ಇಲಾಖೆ ನೌಕರರ ಪಟ್ಟಿಯನ್ನು (Teachers List) ಸಿದ್ಧಪಡಿಸುವಂತೆ ಜ್ಞಾಪನಾ ಪತ್ರ ಹೊರಡಿಸಲಾಗಿದೆ.

2006ರ ಏಪ್ರಿಲ್‌ 1ರ ಪೂರ್ವದಲ್ಲಿ ಆಯ್ಕೆಗೊಂಡ ಅಥವಾ ನೇಮಕಗೊಂಡ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಶಿಕ್ಷಕರನ್ನು ಹಳೆಯ ಡಿಫೈನ್ಡ್‌ ಪಿಂಚಣಿ (Old defined pension Scheme) ಸೌಲಭ್ಯಕ್ಕೆ ಒಳಪಡಿಸುವ ಸಂಬಂಧ ಕಾಲಮಿತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸರ್ಕಾರದ ಆದೇಶದಲ್ಲಿನ ಅಂಶಗಳನ್ನು ಪರಿಶೀಲಿಸಿಕೊಂಡು ಅರ್ಹ ಶಿಕ್ಷಕರ ಪಟ್ಟಿಯನ್ನು, ಸರ್ಕಾರ ನಮೂದು ಮಾಡಿದ ನಮೂನೆಯಲ್ಲಿನ ಮಾಹಿತಿಗಳನ್ನು ದೃಢೀಕರಿಸಿಕೊಂಡು ಜಿಲ್ಲಾ ವ್ಯಾಪ್ತಿಯ ಶಿಕ್ಷಕರ ಮಾಹಿತಿ ಕ್ರೋಡೀಕರಣ ಮಾಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಈ ಆದೇಶ 2006ರ ಏಪ್ರಿಲ್‌ 1ಕ್ಕಿಂತ ಮೊದಲು ಸೇರಿದವರಿಗೆ ಮಾತ್ರ ಅನ್ವಯ

ಸರ್ಕಾರಿ ಆದೇಶದ ಅನ್ವಯ ದಿನಾಂಕ 2006ರ ಏಪ್ರಿಲ್‌ 1ರಂದು ಹಾಗೂ ನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಯನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ) ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾರ್ಗಸೂಚಿಯನ್ನು ರೂಪಿಸುವುದರೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

ಕೇಂದ್ರ ಸರ್ಕಾರವು ತನ್ನ ನೌಕರರಿಗೆ 2023ರ ಡಿಸೆಂಬರ್‌ 22ರ ಮೊದಲು ನೇಮಕಾತಿ / ನೇಮಕಾತಿಗಾಗಿ ಜಾಹೀರಾತು / ಅಧಿಸೂಚಿಸಲಾದ ಹುದ್ದೆ ಅಥವಾ ರಿಕ್ತ ಸ್ಥಾನದ ಎದುರಾಗಿ ನೇಮಕಾತಿ ಹೊಂದಿ 2004ರ ಜನವರಿ 1ರಂದು ಅಥವಾ ನಂತರ ಕರ್ತವ್ಯಕ್ಕೆ ಸೇರಿದ ನೌಕರರಿಗೆ ಹಿಂದಿನ ಡಿಫೈನ್ಸ್‌ ಪಿಂಚಣಿ ಯೋಜನೆಗೆ ಒಳಪಡಿಸಲು ಒಂದು ಬಾರಿಯ ಆಯ್ಕೆಯ ಅವಕಾಶವನ್ನು ಕಲ್ಪಿಸಿ ಕೇಂದ್ರ ಸರ್ಕಾರ 2023ರ ಮಾರ್ಚ್‌ 3ರಂದು ಮಾರ್ಗಸೂಚಿ ಹೊರಡಿಸಿದೆ. ರಾಜ್ಯ ಸರ್ಕಾರದ ಸೇವೆಯಲ್ಲಿರುವ ಅಖಿಲ ಭಾರತ ಸೇವೆಗೆ ಸೇರಿದ ಅರ್ಹ ಅಧಿಕಾರಿಗಳನ್ನು ಹಿಂದಿನ ಡಿಫೈನ್ಸ್‌ ಪಿಂಚಣಿ ಯೋಜನೆಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ : OPS News: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ಹಳೆ ಪಿಂಚಣಿ ಜಾರಿಗೆ ಗೆಜೆಟ್‌ ಪ್ರಕಟ

ಗಮನಿಸಿ ಅರ್ಜಿ ಸಲ್ಲಿಸದೆ ಇದ್ದರೆ ಹೊಸ ಪಿಂಚಣಿ ಸ್ಕೀಂ ಅನ್ವಯ

ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಅಯ್ಕೆ ಹೊಂದಿ 2006ರ ಏಪ್ರಿಲ್‌ 1ರಂದು ಅಥವಾ ಅದಕ್ಕಿಂತ ಬಳಿಕ ಸೇವೆಗೆ ಸೇರಿರುವ ಕಾರಣದಿಂದ ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಸರ್ಕಾರಿ ನೌಕರರನ್ನು ಷರತ್ತುಗಳಿಗೊಳಪಟ್ಟು ಹಿಂದಿನ ಡಿಫೈನ್ಸ್‌ ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಒಪ್ಪಿಗೆ ನೀಡಿದೆ. ಅದರಂತೆ: ಹಿಂದಿನ ಡಿಫೈನ್ಸ್‌ ಯೋಜನೆಗೆ ಸೇರಲು ಇಚ್ಛಿಸುವವರು ನಿಗಧಿತ ನಮೂನೆಯಲ್ಲಿ 2024ರ ಜೂನ್‌ 30ರೊಳಗೆ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಈ ನಿಗದಿ ದಿನಾಂಕದಂದು ಅರ್ಜಿ ಸಲ್ಲಿಸದಿದ್ದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯಲಿದ್ದಾರೆ.

ಪ್ರಸ್ತಾವನೆ ಸಲ್ಲಿಕೆ

ಹಿಂದಿನ ಡಿಫೈನ್ಸ್‌ ಪಿಂಚಣಿ ಯೋಜನೆಗೊಳಪಡಲು ನಿಗದಿತ ಅರ್ಹತೆ ಹೊಂದಿರುವುದನ್ನು ಸಮಕ್ಷಮ ನೇಮಕಾತಿ ಪ್ರಾದಿಕಾರ ಖಚಿತಪಡಿಸಿಕೊಂಡು 2024ರ ಜುಲೈ 31ರ ಒಳಗಾಗಿ ಇಲಾಖಾ ಮುಖ್ಯಸ್ಥರಿಗೆ ಕ್ರೋಢೀಕೃತ ಪ್ರಸ್ತಾವನೆಯನ್ನು ಸಲ್ಲಿಸಲುವುದು ಕಡ್ಡಾಯ. ಇಲಾಖಾ ಮುಖ್ಯಸ್ಥರು ತಮ್ಮ ಅಧೀನದ ಎಲ್ಲ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅರ್ಹರ ಪಟ್ಟಿಯನ್ನು 2024ರ ಆಗಸ್ಟ್‌ 31ರ ಒಳಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಸಲ್ಲಿಸಬೇಕು.

ಇನ್ನು 2006ರ ಏಪ್ರಿಲ್‌ 1ರ ಮೊದಲು ರಾಜ್ಯ ಸಿವಿಲ್‌ ಸೇವೆಯಲ್ಲಿನ ನೇಮಕಾತಿ ಅಧಿಸೂಚನೆಯ ಅನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರಿ ನೌಕರರು ಹಿಂದಿನ ಡಿಫೈನ್ಸ್‌ ಪಿಂಚಣಿ ಯೋಜನೆ ಸೌಲಭ್ಯ ಪಡೆದುಕೊಳ್ಳಲು 2024ರ ಜೂನ್‌ 30ರೊಳಗೆ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹಿಂದಿನ ಆದೇಶದಲ್ಲಿ ಸೂಚಿಸಲಾಗಿತ್ತು.

Exit mobile version