Site icon Vistara News

Police Transfer : Good News; ಪೊಲೀಸರ ಅಂತರ್ಜಿಲ್ಲಾ ವರ್ಗಾವಣೆಗೆ ಸರ್ಕಾರ ಗ್ರೀನ್‌ ಸಿಗ್ನಲ್‌

police Transfer Karnataka

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆ (Police Department)​ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ (Inter District Transfer) ಕೊನೆಗೂ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ (Government Green Signal) ನೀಡಿದೆ. ರಾಜ್ಯದಲ್ಲಿ ಪತಿ-ಪತ್ನಿ ಪೊಲೀಸ್‌ ವರ್ಗಾವಣೆಗೆ (Husband-wife transfer) ಸಂಬಂಧಿಸಿ ಭಾರಿ ಆಗ್ರಹ ಕೇಳಿಬಂದಿತ್ತು. ಅಂತರ್ಜಿಲ್ಲಾ ವರ್ಗಾವಣೆ (Police Transfer) ಕೊಡದೆ ಇದ್ದರೆ ದಯಾ ಮರಣವನ್ನಾದರೂ ಕೊಡಿ ಎಂದೂ ಕೆಲವರು ಮನವಿ ಮಾಡಿದ್ದರು. ಇದೆಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಅವರು ಸೂಚಿಸಿದ್ದಾರೆ.

ಅರ್ಹ ಪತಿ-ಪತ್ನಿ ಪೊಲೀಸ್ ಸಿಬ್ಬಂದಿ ಅಂತರ್ ಜಿಲ್ಲಾ ವರ್ಗಾವಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್​ ಅವರು ಡಿಜಿ ಮತ್ತು ಐಜಿಪಿ ಅಲೋಕ್‌ ಮೋಹನ್‌ಗೆ ಸೂಚಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೆ ಅಂತರ್​ ಜಿಲ್ಲಾ ವರ್ಗಾವಣೆಯಾಗಿಲ್ಲ. ಹೀಗಾಗಿ ಈ ವರ್ಗಾವಣೆ ಅವಕಾಶಕ್ಕೆ ಭಾರಿ ಮಹತ್ವ ಬಂದಿದೆ.

ಕರ್ನಾಟಕ ಪೊಲೀಸ್ ಇಲಾಖೆ ಸಿಬ್ಬಂದಿಗೆ ನಿರ್ಬಂಧಿತವಾಗಿದ್ದ ಈ ಅಂತರ್ ಜಿಲ್ಲಾ ವರ್ಗಾವಣೆಗೆ ಇದೀಗ ಅವಕಾಶ ನೀಡಲಾಗಿದೆ. 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಪೊಲೀಸ್ ಸಿಬ್ಬಂದಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಕೆಲ ಷರತ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು.

ವರ್ಗಾವಣೆಗೆ ಇರಬೇಕಾದ ಅರ್ಹತೆಗಳೇನು?

  1. ಪೊಲೀಸ್ ಇಲಾಖೆಗೆ ನೇಮಕವಾಗಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು.
  2. ಮಾಜಿ ಯೋಧರು ಸಹ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಬಹುದು.
  3. ಯಾವುದೇ ಒಂದು ಜಿಲ್ಲೆಯಲ್ಲಿ, ನೇಮಕಾತಿ ಹೊಂದಿದ ಹಾಗೂ ಅದೇ ಜಿಲ್ಲೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾವುದೇ ಸಿಬ್ಬಂದಿ ಇತರೆ ಜಿಲ್ಲೆಗಳು ಅಥವಾ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಅರ್ಹತೆ ಹೊಂದಿರುತ್ತಾರೆ.

ಇದನ್ನೂ ಓದಿ : G Parameshwar : ಗೃಹ ಮಂತ್ರಿ ಮನೆಗೇ ನುಗ್ಗಿ ಫ್ರಿಜ್‌ನಿಂದ ಹಾಲು ಕದ್ದ ಕಳ್ಳ! Don’t arrest ಅಂದಿದ್ಯಾಕೆ ಸಚಿವರು!

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ವರ್ಗಾವಣೆಗೆ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಕೂಡಲೇ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ದಯಾಮರಣ ಕೋರಿ ಸಿಎಂಗೆ ಪತ್ರ ಬರೆದ ಸಿಬ್ಬಂದಿ

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಅಂತರ್ ಜಿಲ್ಲಾ ವರ್ಗಾವಣೆ ಆಗಿಲ್ಲ. ಇದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್​ ಸಿಬ್ಬಂದಿಯೊಬ್ಬರು ಇತ್ತೀಚೆಗೆ ದಯಾಮರಣ ಕೋರಿ ಸಿಎಂ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಈ ವಿಚಾರ ಚರ್ಚೆಗೆ ಒಳಗಾಗುತ್ತಿದ್ದಂತೆಯೇ ಪೊಲೀಸ್‌ ಇಲಾಖೆ ಮತ್ತು ಸಚಿವ ಪರಮೇಶ್ವರ್‌ ಎಚ್ಚೆತ್ತು ಈ ಆದೇಶ ಹೊರಡಿಸಿದ್ದಾರೆ.

Exit mobile version