ಬೆಂಗಳೂರು: ರಾಜ್ಯ ಸರ್ಕಾರವು ಏಳನೇ ವೇತನ ಆಯೋಗ ಪರಿಷ್ಕರಣೆ (7th Pay Commission) ಅವಧಿಯನ್ನು ವಿಸ್ತರಿಸಿದೆ. ಮುಂಬರುವ ಆರು ತಿಂಗಳವರೆಗೂ ಈ ಅವಧಿಯನ್ನು ವಿಸ್ತರಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು(President of Karnataka state employees association) ವರ್ಗಾವಣೆ ಮಾಡಿದ ಬೆಳವಣಿಗೆಯೂ ನಡೆದಿದೆ(transferred).
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರನ್ನು ರಾಜ್ಯ ಸರ್ಕಾರವು ವರ್ಗಾವಣೆ ಮಾಡಿದೆ. ಅವರನ್ನು ಶಿವಮೊಗ್ಗ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.
2024ರ ಮಾರ್ಚ್ 15ರವರೆಗೆ ಅವಧಿ ವಿಸ್ತರಣೆ
7ನೇ ರಾಜ್ಯ ವೇತನ ಆಯೋಗದ (7th Pay Commission) ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ. ನವೆಂಬರ್ 18ಕ್ಕೆ ಆಯೋಗದ ಅವಧಿ ಮುಗಿಯಲಿತ್ತು. ಇದೀಗ 2024ರ ಮಾರ್ಚ್ 15 ವರೆಗೆ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಕೆ. ಉಮಾ ಅವರು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು 2022 ನ.11ರಂದು 7ನೇ ರಾಜ್ಯ ವೇತನ ಆಯೋಗ ರಚಿಸಲಾಗಿತ್ತು. ಪ್ರಸ್ತುತ ಆಯೋಗದ ಕಾಲಾವಧಿಯು ನ.18ಕ್ಕೆ ಕೊನೆಗೊಳ್ಳುತ್ತಿದೆ. ಆದರೆ, ವೇತನ ಆಯೋಗ ತನ್ನ ಕಾರ್ಯ ಕಲಾಪ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗಲು ಆಯೋಗದ ಕಾಲಾವಧಿಯನ್ನು 2024ರ ಮಾರ್ಚ್ 15ರವರಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
2022ರಲ್ಲಿ ರಚನೆಯಾಗಿದ್ದ ಆಯೋಗ
2022ರ ನವೆಂಬರ್ 19ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ಅವರು 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿ ಆದೇಶಿಸಿದ್ದರು. ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸಲು, ತ್ರಿಸದಸ್ಯ ಆಯೋಗವನ್ನು ಅವರು ರಚಿಸಿದ್ದರು.
ಈ 7ನೇ ರಾಜ್ಯ ವೇತನ ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಪಿ. ಬಿ. ರಾಮಮೂರ್ತಿ, ಶ್ರೀಕಾಂತ್ ಬಿ. ವನಹಳ್ಳಿ, ಕಾರ್ಯದರ್ಶಿಯಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ನೇಮಕವಾಗಿದ್ದರು. ಈ ಹಿಂದಿನ ಆದೇಶದನ್ವಯ ಆಯೋಗವು 2023ರ ಮೇ 19ಕ್ಕೆ ಕ್ಕೆ ವರದಿ ನೀಡಬೇಕಿತ್ತು. ಆದರೆ, ಬಳಿಕ ವಿಧಾನಸಭಾ ಚುನಾವಣೆ ಬಂದಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇ 19ಕ್ಕೆ ವರದಿ ನೀಡಬೇಕಿದ್ದ ಕಾಲಾವಧಿಯನ್ನು ಮತ್ತೆ 6 ತಿಂಗಳ ಅವಧಿಗೆ ವಿಸ್ತರಣೆ ಮಾಡಿ ಆದೇಶಿಸಿತ್ತು. ಅಂತಿಮ ವರದಿ ಸಿದ್ಧವಾಗದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಆಯೋಗದ ಅವಧಿ ವಿಸ್ತರಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Shadakshari CS : ನನ್ನ ಟಾರ್ಗೆಟ್ ಮಾಡಿದ್ರೆ ಚರ್ಚೆಗೆ ಸಿದ್ಧ: ಎನ್ಪಿಎಸ್ ಅಧ್ಯಕ್ಷರ ಆರೋಪಕ್ಕೆ ಷಡಾಕ್ಷರಿ ಸವಾಲು