ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ (Government Employees) ಸರ್ಕಾರ ಗುಡ್ ನ್ಯೂಸ್ (Good News) ನೀಡಿದೆ. ನೌಕರರ ತುಟ್ಟಿ ಭತ್ಯೆ (Dearness Allowance) ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ತುಟ್ಟಿಭತ್ಯೆ ಹೆಚ್ಚಳ ಮಾಡುವ ಕಡತಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕಿದ್ದಾರೆ. ಆರ್ಥಿಕ ಇಲಾಖೆಯು ಶೀಘ್ರವೇ ಅಧಿಕೃತ ಆದೇಶ (DA Hike News) ಹೊರಡಿಸಲಿದೆ- ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ, ಇದು ನಿಜವಲ್ಲ, Fake News ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ಈ ವಿಚಾರವನ್ನು ವಿಸ್ತಾರ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದು, ಇದು ಕಳೆದ ಬಾರಿಯ ಆದೇಶವನ್ನೇ ನಕಲು ಮಾಡಿ ಯಾರೋ ಪೋಸ್ಟ್ ಮಾಡಿದ ಸುಳ್ಳು ಸುದ್ದಿ. ರಾಜ್ಯ ಸರ್ಕಾರ ಇನ್ನೂ ಆದೇಶ ಹೊರಡಿಸಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಆಗಸ್ಟ್ 6ರಂದು ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇಕಡಾ ಮೂರರಷ್ಟು ಹೆಚ್ಚಿಸಿತ್ತು. ಇದೀಗ ರಾಜ್ಯ ಸರ್ಕಾರಿ ನೌಕರರಿಗೂ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಲಿದ್ದು, ಇದು ಜುಲೈ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ ಎಂದು ಸುದ್ದಿ ಹರಿದಾಡಿತ್ತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಸಂಘವು ತುಟ್ಟಿಭತ್ಯೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ ಆಧಾರದಲ್ಲಿ ಆಡಳಿತ ವ್ಯವಸ್ಥೆ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಸಿಎಂ ಕೂಡಾ ಅನುಮೋದನೆ ನೀಡಿದ್ದಾರೆ ಎನ್ನಲಾಗಿತ್ತು.
ಕಳೆದ ಮೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನದಲ್ಲಿ ತುಟ್ಟಿಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಅದರು 2023ರ ಜನವರಿಯಿಂದ ಪೂರ್ವಾನ್ವಯವಾಗಿ ಜಾರಿಯಾಗಬೇಕಾದ ತುಟ್ಟಿಭತ್ಯೆಯಾಗಿತ್ತು. ಚುನಾವಣೆ ನೀತಿ ಸಂಹಿತೆ ಕಾರಣಕ್ಕಾಗಿ ಹಿಂದಿನ ಸರ್ಕಾರಕ್ಕೆ ಅದನ್ನು ಜಾರಿ ಮಾಡಲು ಆಗಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೇರುತ್ತಿದ್ದಂತೆಯೇ ತುಟ್ಟಿಭತ್ಯೆ ಹೆಚ್ಚಿಸಿದ್ದರು. ಹೀಗಾಗಿ ಈಗ ಎರಡನೇ ಕಂತಿನ ಹೆಚ್ಚಳವನ್ನು ಪ್ರಕಟಿಸಲಾಗಿದೆ ಎಂದು ಸುದ್ದಿಯಾಗಿತ್ತು.
ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ
ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಮೊದಲನೆಯ ಹೆಚ್ಚಳ ಜನವರಿಯಿಂದ ಜಾರಿಗೆ ಬಂದರೆ, ಇನ್ನೊಂದು ಜುಲೈನಿಂದ. ಕೆಲವೊಮ್ಮೆ ಜನವರಿ ತಿಂಗಳಲ್ಲೇ ತುಟ್ಟಿಭತ್ಯೆ ಏರಿಕೆಯಾಗುವುದಿಲ್ಲ. ಅದು ಯಾವತ್ತೇ ಜಾರಿಗೆ ಬಂದರೂ ಜನವರಿಯಿಂದಲೇ ಪೂರ್ವಾನ್ವಯವಾಗಿ ಭತ್ಯೆ ಹೆಚ್ಚಳದ ಲಾಭ ದೊರೆಯುತ್ತದೆ. ಎರಡನೇ ಹೆಚ್ಚಳ ಜುಲೈನಿಂದ ಜಾರಿಗೆ ಬರುತ್ತದೆ. (ಈಗ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸದಿದ್ದರೂ ಸದ್ಯವೇ ಹೆಚ್ಚಳವಾಗುವುದು ನಿಶ್ಚಿತ).
ಕಳೆದ ಬಾರಿಯ ಸುದ್ದಿ: DA Hike News : ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಅನುಮೋದನೆ; ಗುರುವಾರ ಅಧಿಕೃತ ಆದೇಶ
ಕರ್ನಾಟಕದಲ್ಲಿ 2022ರ ಅಕ್ಟೋಬರ್‌ನಲ್ಲಿ ಆಗಿನ ಬಿಜೆಪಿ ಸರ್ಕಾರ ಶೇ. 3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು. ಇದು 2022ರ ಜುಲೈ1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ರೂ 1,282.72 ಕೋಟಿ ರೂ. ಭರಿಸಿತ್ತು. ಅದಕ್ಕೂ ಮೊದಲು ಏಪ್ರಿಲ್‌ನಲ್ಲಿ ಶೇ. 2.75 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಇದು ಜನವರಿ 1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ 1,447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಿತ್ತು. ಈ ಬಾರಿಯ ಹೆಚ್ಚಳದ ವೆಚ್ಚ ಎಷ್ಟು ಎನ್ನುವ ಲೆಕ್ಕಾಚಾರವನ್ನು ಆರ್ಥಿಕ ಇಲಾಖೆ ತನ್ನ ಅಧಿಕೃತ ಆದೇಶದೊಂದಿಗೆ ಪ್ರಕಟಿಸಲಿದೆ.