ಒಳ್ಳೆ ನಿದ್ರೆಗಿಂತ ಉತ್ತಮ ಔಷಧ ಇನ್ನೊಂದಿಲ್ಲ ಎಂಬ ಮಾತಿದೆ. ವ್ಯಕ್ತಿಯ ಮನಸ್ಸು ಮತ್ತು ದೇಹ ಹೊಸ ಚೈತನ್ಯವನ್ನು ಪಡೆಯಬೇಕೆಂದರೆ ಉತ್ತಮ ನಿದ್ರೆ ಅವಶ್ಯಕವಾಗಿರುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಮಲಗಿ ನಿದ್ರೆ ಮಾಡುವಾಗ ಇಂಥದ್ದೇ ದಿಕ್ಕಿಗೆ ತಲೆ ಇಟ್ಟು ನಿದ್ರಿಸಬೇಕೆಂಬ ನಿಯಮವಿದೆ. ಪ್ರತಿ ದಿಕ್ಕಿಕೂ ಅದರದ್ದೇ ಆದ ಫಲಗಳಿವೆ ಎಂದೂ ಹೇಳಲಾಗಿದೆ.
ಹಾಗಾಗಿ ಮಲಗುವಾಗ ದಿಕ್ಕಿನ ಬಗ್ಗೆ ಹೆಚ್ಚಿನ ಗಮನಹರಿಸಿದರೆ ಆರೋಗ್ಯ ಮತ್ತು ನೆಮ್ಮದಿಯ ದೃಷ್ಟಿಯಿಂದ ಉತ್ತಮ. ಅಷ್ಟೇ ಅಲ್ಲದೆ ನಿದ್ದೆಯಿಂದ ಮಾನಸಿಕ ಮತ್ತು ಶಾರೀರಿಕ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ ಮಲಗುವ ರೀತಿ ಮತ್ತು ದಿಕ್ಕಿನ ಬಗ್ಗೆ ತಿಳಿಯೋಣ.
ನಮ್ಮ ಹಿರಿಯರು ಊಟ ಮಾಡಿದ ತಕ್ಷಣ ಮಲಗಬಾರದೆಂದು ಹೇಳುತ್ತಿದ್ದರು.
ಉಂಡು ನೂರಡಿ ಎಣಸಿ | ಕೆಂಡಕ್ಕೆ ಕೈ ಕಾಸಿ |
ಗಂಡು ಮೇಲಾಗಿ ಮಲಗಿದನು ವೈದ್ಯನಾ |
ಮಿಂಡ ಕಾಣಯ್ಯ ಸರ್ವಜ್ಞ ||
ಎಂಬ ಸರ್ವಜ್ಞನ ವಚನದಂತೆ ಊಟ ಮಾಡಿದ ನಂತರ ಮಲಗುವುದಕ್ಕೂ ಒಂದು ರೀತಿ ಇದೆ.
ಶ್ವಾಸಾನ್ ಅಷ್ಟೌ ಸಮುತ್ತಾನಃ ತಾನ್ ದ್ವಿಫ್ ಪಾರ್ಶ್ವೇತು ದಕ್ಷಿಣೆ |
ತಥಃ ತದ್ಯ ಗುಣಾನ್ ವಾಮೇ ಪಶ್ಚಾತ್ ಸ್ವಪ್ಯ ತಥಾ ಸುಖಮ್ ||
ಮಲಗುವ ಸಂದರ್ಭದಲ್ಲಿ ಮೊದಲು ಅಂಗಾತ ಮಲಗಿ ಎಂಟು ಬಾರಿ ಉಸಿರಾಟವನ್ನು ಮಾಡಬೇಕು. ನಂತರ ಬಲ ಮಗ್ಗುಲಾಗಿ ಹದಿನಾರು ಬಾರಿ ಉಸಿರಾಟ ಮಾಡಬೇಕು. ಕೊನೆಗೆ ಎಡ ಮಗ್ಗುಲಾಗಿ ಮಲಗಿ ಮೂವತ್ತೆರಡು ಬಾರಿ ಉಸಿರಾಟ ಮಾಡಿ, ಮಲಗಿದರೆ ಉತ್ತಮ ನಿದ್ರೆ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಾಗಿ ಎಡ ಮಗ್ಗುಲಲ್ಲಿ ಮಗುವುದು ಉತ್ತಮವೆಂದು ಶಾಸ್ತ್ರ ಹೇಳುತ್ತದೆ. ಇದನ್ನೇ ಪಾಲಿಸಿದರೆ ವೈದ್ಯರ ಬಳಿ ಹೋಗುವ ಸಂಭವ ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಹಾಗಾದರೆ ಆರೋಗ್ಯಯುತ ಮತ್ತು ನೆಮ್ಮದಿಯ ನಿದ್ರೆಗೆ ವಾಸ್ತು ಶಾಸ್ತ್ರದ ಪ್ರಕಾರ ಮಲಗಲು ಯಾವ ದಿಕ್ಕು ಶುಭ ಎಂದು ನೋಡೋಣ.
ವಿಷ್ಣು ಪುರಾಣದ ಪ್ರಕಾರ ದಕ್ಷಿಣ ಮತ್ತು ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದು ಶುಭ ಹಾಗು ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ನಿಷಿದ್ಧವೆಂದು ಹೇಳಲಾಗಿದೆ. ಇದರಿಂದ ರೋಗಗಳು ಬಾಧಿಸುತ್ತವೆ.
ಪ್ರಾಕ್ಷರಶ್ಶಯನೇ ವಿದ್ಯಾತ್ ಧನಂ, ಆಯುಷ್ಚ ದಕ್ಷಿಣೆ |
ಪಶ್ಚಿಮೇ ಪ್ರಬಲ ಚಿಂತಾ, ಉತ್ತರೇ ಮೃತ್ಯುರತೋತ್ತರೇ||
ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಸಂಪತ್ತು ಬರುತ್ತದೆ. ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಆಯಸ್ಸು ವೃದ್ಧಿಸುತ್ತದೆ. ಹಾಗೇ ಪಶ್ಚಿಮಕ್ಕೆ ತಲೆ ಹಾಕಿ ಮಲಗಿದರೆ ಚಿಂತೆ, ಮನಸ್ಸು ದುರ್ಬಲವಾಗುತ್ತದೆ, ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಮೃತ್ಯುವಿಗೆ ಹತ್ತಿರವಾಗುತ್ತಾ ಹೋದಂತೆ ಅಂದರೆ ಆಯಸ್ಸು ಹಾನಿಯಾಗುತ್ತದೆ.
ಸಂಪತ್ತಿಗೆ ಪೂರ್ವ ದಿಕ್ಕು
ವಾಸ್ತು ಶಾಸ್ತ್ರದಲ್ಲಿ ಪೂರ್ವದಿಕ್ಕಿಗೆ ವಿಶೇಷ ಮಹತ್ವವಿದೆ. ಸಂಪತ್ತು ಮತ್ತು ಧನಾಗಮನಕ್ಕೆ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದು ಸೂಕ್ತವೆಂದು ಹೇಳಲಾಗುತ್ತದೆ. ಜೊತೆಗೆ ಪೂರ್ವ ದಿಕ್ಕಿಗೆ ತಲೆಹಾಕಿ ಮಲಗುವುದರಿಂದ ದೇವತೆಗಳ ಆಶೀರ್ವಾದ ಸಿಗುತ್ತದೆ. ಹಾಗೇಯೇ ಸೂರ್ಯನು ಉದಯಿಸುವ ದಿಕ್ಕಾಗಿರುವ ಕಾರಣ ಈ ದಿಕ್ಕಿನಲ್ಲಿ ಸಕಾರಾತ್ಮಕತೆ ಹೆಚ್ಚಿರುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ.
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ಆಯುಷ್ಯ ವೃದ್ಧಿಗೆ ದಕ್ಷಿಣ ದಿಕ್ಕು
ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಲಗಲು ಅತ್ಯುತ್ತಮವಾದದ್ದು ದಕ್ಷಿಣ ದಿಕ್ಕು. ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ. ಆಯುಷ್ಯ ವೃದ್ಧಿಸುವುದಲ್ಲದೇ, ಉತ್ತಮ ಆರೋಗ್ಯ ಲಭಿಸುತ್ತದೆ. ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಕ್ಷಿಣ ದಿಕ್ಕಿಗೆ ಮಲಗುವುದು ಉತ್ತಮವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಿದ್ದಾರೆ.
ಪಶ್ಚಿಮ ದಿಕ್ಕು ಒಳ್ಳೆಯದಲ್ಲ
ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗುವು ಒಳ್ಳೆಯದು ಎಂದು ಕೆಲವು ಕಡೆ ಹೇಳಿದರೆ ಮತ್ತೆ ಕೆಲವು ಕಡೆ ಪಶ್ಚಿಮಕ್ಕೆ ತಲೆ ಹಾಕಿ ಮಲಗುವುದರಿಂದ ಚಿಂತೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಮಾನಸಿಕ ಸ್ವಾಸ್ಥ್ಯ ಹದಗೆಡುತ್ತದೆ ಎಂದು ಸಹ ಹೇಳಲಾಗುತ್ತದೆ.
ಉತ್ತರ ದಿಕ್ಕು ಅಶುಭ
ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದು ಅಶುಭವೆಂದು ಹೇಳಲಾಗುತ್ತದೆ. ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದರೆ ಮೃತ್ಯುವಿಗೆ ಹತ್ತಿರವಾಗುತ್ತಾ ಹೋದಂತೆ ಎಂಬ ಮಾತಿದೆ. ಹಾಗಾಗಿ ಮಲಗಲು ಉತ್ತರ ದಿಕ್ಕು ಸಹ ಶುಭವಲ್ಲ. ಈ ದಿಕ್ಕಿನಲ್ಲಿ ಮಲಗುವುದರಿಂದ ಅನಾರೋಗ್ಯ ಹೆಚ್ಚುತ್ತದೆ. ಗಣಪತಿಯ ಮುಂಡ ಸೇರಿದ ಆನೆಯು ಉತ್ತರ ದಿಕ್ಕಿಗೇ ತಲೆ ಹಾಕಿ ಮಲಗಿತ್ತೆಂಬ ಪುರಾಣಕತೆಗಳಿಂದಾಗಿ ಈ ದಿಕ್ಕಿಗೆ ತಲೆ ಹಾಕಿ ಮಲಗುವುದು ಅಶುಭವೆಂದೇ ಹೇಳಲಾಗುತ್ತದೆ.
ಇದನ್ನೂ ಓದಿ : Astro Tips : ಎಂದು ಉಗುರು ಕತ್ತರಿಸಿದರೆ ಶುಭ? ಯಾವಾಗ ಕತ್ತರಿಸಿದರೆ ಧನ ಲಾಭ?