Site icon Vistara News

Astrology Remedies : ನಿಮಗೆ ಸಿಟ್ಟು ಜಾಸ್ತಿಯೇ? ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯದ ಈ ಸಲಹೆಗಳನ್ನು ಪಾಲಿಸಿ

Astrology Remedies

ಸಿಟ್ಟು ಮನುಷ್ಯನ ಸಹಜ ಗುಣ. ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೂ ಕೆಲವೊಮ್ಮೆ ನಿಯಂತ್ರಣ ತಪ್ಪಿ ಕೋಪದಿಂದ ಮಾತನಾಡಿ ಎಲ್ಲರ ಕಣ್ಣಿಗೆ ಕೆಟ್ಟವರಾಗುತ್ತಾರೆ. ಮಾತು ಮಾತಿಗೆ ಸಿಡುಕುವುದು, ಕೋಪಿಸಿಕೊಳ್ಳುವುದಕ್ಕೆ ಗ್ರಹ ದೋಷಗಳು ಸಹ ಕಾರಣ ಎನ್ನುತ್ತದೆ ನಮ್ಮ ಜ್ಯೋತಿಷ್ಯ ಶಾಸ್ತ್ರ. ಮಂಗಳ ಮತ್ತು ರಾಹು ಗ್ರಹದ ದೋಷಗಳಿಂದ ಮನುಷ್ಯನಲ್ಲಿ ಸಿಟ್ಟು ಹೆಚ್ಚಾಗುತ್ತದೆಯಂತೆ. ಹಾಗಾದರೆ ಈ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೂ ಪರಿಹಾರವಿದೆ (Astrology Remedies). ಆದರೆ ಅದನ್ನು ತಿಳಿದು ಪಾಲಿಸುವವರು ಕಡಿಮೆ.

ಗ್ರಹಗಳ ಕೆಟ್ಟ ಪರಿಣಾಮ ಕಡಿಮೆ ಆಗಿ ಕೋಪವನ್ನು ನಿಯಂತ್ರಿಸಿಕೊಳ್ಳಲು ಕೆಲವು ಉಪಾಯಗಳನ್ನು ಈ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಮುಖ್ಯವಾಗಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಬರುತ್ತದೆ. ಆದರೆ ಕೆಲವೊಮ್ಮೆ ಅದನ್ನೆಲ್ಲಾ ಮಾಡಲು ಸಮಯವಿಲ್ಲವೆಂದಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಕೆಲವು ಸಲಹೆಗಳನ್ನು ಪಾಲಿಸುವುದರಿಂದ ಕೋಪ ನಿಯಂತ್ರಣಕ್ಕೆ ಬರುತ್ತದೆ. ಹಾಗಾದರೆ ಶಾಸ್ತ್ರದಲ್ಲಿ ಹೇಳಿರುವ ಉಪಾಯಗಳೇನು ನೋಡೋಣ;

ಚಂದ್ರ ಗ್ರಹಕ್ಕೆ ಬೆಳ್ಳಿ ಉಂಗುರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಬೆಳ್ಳಿಯ ಉಂಗುರ ಅಥವಾ ಪೆಂಡೆಂಟ್ ಅನ್ನು ಧರಿಸುವುದು ಉತ್ತಮ. ಬೆಳ್ಳಿ ಮನಸ್ಸನ್ನು ಶಾಂತವಾಗಿರಿಸುತ್ತದೆ. ʼಚಂದ್ರಮಾ ಮನಸೋ ಜಾತಃʼ ಎಂಬಂತೆ ಚಂದ್ರ ಮನಸ್ಸಿನ ಕಾರಕ ಗ್ರಹ. ಚಂದ್ರ ಗ್ರಹದ ಸ್ಥಿತಿ ಉತ್ತಮವಾಗಿದ್ದರೆ ಮನಸ್ಸು ಶಾಂತವಾಗಿದ್ದು, ಕೋಪವನ್ನು ನಿಯಂತ್ರಿಸಿಕೊಳ್ಳುವ ಶಕ್ತಿ ಸಿಗುತ್ತದೆ. ಹಾಗಾಗಿ ಬೆಳ್ಳಿಯನ್ನು ಧರಿಸುವುದರಿಂದ ಚಂದ್ರ ಗ್ರಹದ ಸ್ಥಿತಿ ಉತ್ತಮವಾಗುತ್ತದೆ. ಜೊತೆಗೆ ಕೋಪವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಶ್ರೀಗಂಧದ ಬಳಸಿ
ಕೋಪವನ್ನು ನಿಯಂತ್ರಣದಲ್ಲಿಟ್ಟಕೊಳ್ಳಲು ಶ್ರೀಗಂಧದ ಬಳಕೆ ಹೆಚ್ಚು ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಶ್ರೀಗಂಧದ ಅಗರಬತ್ತಿ, ಸಾಂಬ್ರಾಣಿ, ಶ್ರೀಗಂಧದ ತಿಲಕ ಇತ್ಯಾದಿ ಬಳಕೆಯಿಂದ ಕೋಪ ನಿಯಂತ್ರಣ ಸಾಧ್ಯ. ರಾಹು ದೋಷಗಳು ಇದ್ದರೆ ಶ್ರೀಗಂಧದ ಬಳಕೆಯಿಂದ ಸ್ವಲ್ಪ ಮಟ್ಟಿಗಿನ ರಾಹು ದೋಷ ನಿವಾರಣೆ ಆಗುವುದರ ಜೊತೆಗೆ ಮನಸ್ಸು ಶಾಂತವಾಗಿದ್ದು, ಸಿಟ್ಟು ಕಡಿಮೆಯಾಗುತ್ತದೆ.

ಭೂದೇವಿಗೆ ನಮಿಸಿ
ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಭೂಮಿ ತಾಯಿಗೆ ವಂದಿಸಬೇಕು.
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||

ಎಂಬ ಮಂತ್ರವನ್ನು ಹೇಳುವುದರ ಮೂಲಕ ಭೂ ಸ್ಪರ್ಶವನ್ನು ಮಾಡಿ ಭೂದೇವಿಗೆ ನಮಿಸಬೇಕು. ಬೆಳಗ್ಗೆ ಎದ್ದ ತಕ್ಷಣ ಹದಿನೈದು ನಿಮಿಷದ ತನಕ ಮೌನವಾಗಿರುವುದು ಉತ್ತಮ. ಶಾಸ್ತ್ರದ ಪ್ರಕಾರ ಪ್ರತಿನಿತ್ಯ ಈ ರೀತಿ ಮಾಡುವುದರಿಂದ ಸಿಟ್ಟು ನಿಯಂತ್ರಣಕ್ಕೆ ಬರುವುದರ ಜೊತೆಗೆ ಮನಸ್ಸು ಶಾಂತವಾಗಿರುತ್ತದೆ.

ಸೂರ್ಯನಿಗೆ ಅರ್ಘ್ಯ ನೀಡಿ
ಪ್ರತಿದಿನ ಬೆಳಗ್ಗೆ ಶೂಚಿರ್ಭೂತರಾಗಿ ಸೂರ್ಯನಿಗೆ ಅರ್ಘ್ಯ ನೀಡಬೇಕು. ಸೂರ್ಯನನ್ನು ಧ್ಯಾನ ಮಾಡಬೇಕು. ಸಿಟ್ಟಿನಿಂದ ಕೆಲಸ ಹಾಳಾಗುತ್ತಿದೆ ಎಂದಾದರೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಧ್ಯಾ ಸಮಯದಲ್ಲಿ ಪೂರ್ವದಿಕ್ಕಿಗೆ ದೀಪವನ್ನು ಹಚ್ಚಿಡಬೇಕು.

ಕೆಂಪು ಬಣ್ಣದ ಬಳಕೆ ಕಡಿಮೆ ಇರಲಿ
ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಹೆಣಗಾಡುತ್ತಿರುವವರು ಕೆಂಪು ಬಣ್ಣವನ್ನು ಕಡಿಮೆ ಉಪಯೋಗಿಸುವುದು ಉತ್ತಮ. ಕೆಂಪು ಉಗ್ರ ಸ್ವಭಾವದ ಪ್ರತೀಕವಾಗಿರುವುದರಿಂದ ಕೋಪವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಮಂಗಳ ಗ್ರಹದ ಬಣ್ಣವಾಗಿರುವ ಕೆಂಪನ್ನು ಕಡಿಮೆ ಬಳಸುವುದು ಉತ್ತಮ. ಜೊತೆಗೆ ಹನುಮಾನ್ ಚಾಲೀಸ ಪಠಿಸುವುದರಿಂದ ಮಂಗಳ ಗ್ರಹ ಶಾಂತವಾಗುತ್ತದೆ. ಸೋಮವಾರ ರಾತ್ರಿ ಸಮಯದಲ್ಲಿ ಚಂದ್ರನಿಗೆ ಅರ್ಘ್ಯ ಕೊಡುವುದರಿಂದ ಸಹ ಸಿಟ್ಟು ಕಡಿಮೆಯಾಗುತ್ತದೆ.

ಇದನ್ನೂ ಓದಿ| Vastu Tips | ಹಣಕಾಸಿನ ತೊಂದರೆಯೇ?; ಇವುಗಳಿಂದ ಪಾರಾಗಲು ಮನೆಯಲ್ಲಿ ಈ ವಾಸ್ತು ನಿಯಮ ಪಾಲಿಸಿ

Exit mobile version