ಉತ್ಪಾತರೂಪೀ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ |
ಸೂರ್ಯಪ್ರಿಯಕರೋ ವಿದ್ವಾನ್ಪೀಡಾಂ ಹರತು ಮೇ ಬುಧಃ ||
ಇಂದು ಬುಧ ಜಯಂತಿ (Budha Jayanti 2023). ಜ್ಯೇಷ್ಠಮಾಸ ಕೃಷ್ಣ ಪಕ್ಷದ ಏಕಾದಶಿಯನ್ನು ಬುಧ ಜಯಂತಿ ಎಂದು ಆರಚರಿಸಲಾಗುತ್ತದೆ. ಬುದ್ಧಿಗೆ ಅಧಿಪತಿ ಬುಧ. ವಿದ್ಯಾಭಿವೃದ್ಧಿಗೆ ಬುಧ ಗ್ರಹದ ಪೂಜೆ ಪ್ರಶಸ್ತವಾದುದು. ಹೀಗಾಗಿ ಬುಧ ಗ್ರಹದ ಜಯಂತಿ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದುದು.
ಬುಧನನ್ನು ಸೌಮ್ಯ ಎಂದು ಕರೆಯುತ್ತಾರೆ. ಸೌಮ್ಯ ಎಂದರೆ ಸೋಮನ (ಚಂದ್ರನ) ಮಗ ಎಂದು. ಹಸಿರು ಬಟ್ಟೆಯನ್ನುಟ್ಟ ಚತುರ್ಭುಜನು ಈ ಬುಧ. ಬಲಗಡೆಯ ಒಂದು ಕೈ ವರಮುದ್ರೆಯನ್ನೂ ಧರಿಸಿರುವ ಬುಧ ಉಳಿದ ಮೂರು ಕೈಗಳಲ್ಲಿ ಕ್ರಮವಾಗಿ ಖಡ್ಗ, ಖೇಟಕ ಮತ್ತು ಗದೆ ಹಿಡಿದಿದ್ದಾನೆ. ಬುಧನ ವಾಹನ ಸಿಂಹ. ಕೆಂಪಾದ ವಿಶಾಲ ಕಣ್ಣುಗಳು, ಒಳ್ಳೆಯ ಮಾತುಗಳು, ಗರಿಕೆಯ ದಳದಂತೆ ಹಸಿರು ಮೈಬಣ್ಣ, ರಾಜನ್ ಸ್ವಭಾವ, ಸದಾ ಸಂತೋಷ, ಮಧ್ಯಮರೂಪ, ನಿಪುಣ, ಉಡುಗೆ ನಡಿಗೆಗಳಿಂದ ಎಲ್ಲರನ್ನೂ ಅನುಕರಿಸುವ ಸ್ವಭಾವ ಇವು ಬುಧನ ಲಕ್ಷಣಗಳು.
ಬುಧನ ಹುಟ್ಟಿಗೊಂದು ಪ್ರೇಮಕತೆ!
ದೇವಗುರು ಬೃಹಸ್ಪತಿಯ ಪತ್ನಿ ತಾರಾ ಅಪ್ರತಿಮ ಸುಂದರಿ. ಆಕೆಯನ್ನೊಮ್ಮೆ ಚಂದ್ರ ನೋಡುತ್ತಾನೆ. ಆಕೆಯ ಸೌಂದರ್ಯಕ್ಕೆ ಮಾರು ಹೋಗಿ, ಮನಸೋಲುತ್ತಾನೆ. ಆಗ ತಾರಾ ಕೂಡ ಅವನಿಗೆ ಮನಸ್ಸು ನೀಡುತ್ತಾಳೆ. ಚಂದ್ರ ತಾರಾಳನ್ನು ತನ್ನ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಈ ವಿಷಯ ದೇವಗುರು ಬೃಹಸ್ಪತಿಯ ಗಮನಕ್ಕೆ ಬರುತ್ತಲೇ ಅವರು ಚಂದ್ರಲೋಕಕ್ಕೆ ಹೋಗಿ ತಾರಾಳನ್ನು ಕಳುಹಿಸಿಕೊಡುವಂತೆ ಚಂದ್ರನಲ್ಲಿ ಮನವಿ ಮಾಡುತ್ತಾನೆ.
ಆದರೆ ಚಂದ್ರ ಒಪ್ಪುವುದಿಲ್ಲ. ನಾವಿಬ್ಬರೂ ಒಟ್ಟಿಗೆ ಇರುವುದಾಗಿ ಹೇಳುತ್ತಾನೆ. ಆಗ ಚಂದ್ರ ಮತ್ತು ಬೃಹಸ್ಪತಿಯ ನಡುವೆ ಜೋರಾಗಿ ವಾದ-ವಿವಾದ ನಡೆಯುತ್ತದೆ. ಘೋರ ಯುದ್ಧ ಕೂಡ ಆರಂಭವಾಗುತ್ತದೆ. ಆಗ ಬ್ರಹ್ಮ ಮಧ್ಯಪ್ರವೇಶಿಸುತ್ತಾನೆ. ಆತನ ಆದೇಶದ ಮೇರೆಗೆ ಚಂದ್ರ ತಾರಾಳನ್ನು ಬಿಟ್ಟುಕೊಡುತ್ತಾನೆ. ಗರ್ಭಿಣಿಯಾಗಿದ್ದ ಆಕೆಗೆ ಬೃಹಸ್ಪತಿ ಹೇಳಿದ “ಬೇರೆಯವರಿಂದ ಧರಿಸಿದ ಗರ್ಭವನ್ನು ತ್ಯಜಿಸು, ಇಲ್ಲವಾದರೆ ಸುಟ್ಟುಬಿಡುತ್ತೇನೆ.” ತಾರಾ ಗಾಬರಿಯಿಂದ ಗರ್ಭವನ್ನು ತ್ಯಜಿಸಿದಳು. ಆಗ ಬಂಗಾರದ ಬಣ್ಣದ ಸುಂದರ ಮಗು ಜನಿಸಿತು.
ಒಡನೆಯೇ ಬೃಹಸ್ಪತಿಯ ಮನಸ್ಸು ಬದಲಾಯಿತು. ಇದು ನನ್ನ ಮಗು ಎಂದ ಬೃಹಸ್ಪತಿ. “ಅಲ್ಲ ನನ್ನದುʼʼ ಎಂದ ಚಂದ್ರ. ಇಬ್ಬರ ನಡುವೆ ಮಗು ತಮ್ಮದೆಂದು ಮತ್ತೆ ಗಲಾಟೆ ಆರಂಭವಾಯಿತು. ವಿವಾದ ಮುಗಿಲು ಮುಟ್ಟಿತ್ತು. ಋಷಿಮುನಿಗಳು ತಾರಾಳಲ್ಲಿ ಕೇಳಿದರು. “ಸತ್ಯಹೇಳು, ಈ ಮಗುವಿನ ತಂದೆ ಯಾರು” ಎಂದು. ನಾಚಿಕೆಯಿಂದ ತಲೆತಗ್ಗಿಸಿದ ಆಕೆ ಬಾಯಿ ಬಿಡಲಿಲ್ಲ. ಆಗ ತಾನೇ ಹುಟ್ಟಿದ ಮಗು ಆರ್ಭಟಿಸಿತು. “ಛೀ ದುರಾಚಾರೇ! ತೆರೆಯ ಹಿಂದೆ ಮಾಡಿದ ಆತ್ಮಘಾತುಕತನವನ್ನು ಮರೆಮಾಚುವೆಯೇಕೆ? ನಾಚಿಕೆಯಾಗುವುದಿಲ್ಲವೇ! ಬಿಚ್ಚುಬಾಯಿʼʼ ಎಂದಿತು. ಎಲ್ಲರೂ ಒತ್ತಾಯಿಸಿದಾಗ ತಾರಾ ಈ ಮಗು ಚಂದ್ರನ ಮಗು ಎಂದು ತಿಳಿಸಿದಳು.
ಹುಟ್ಟಿನಿಂದಲೇ ಅಸಾಧಾರಣ ಬೌದ್ಧಿಕತೆಯನ್ನು ತೋರಿದ ಈ ಅಸಾಧಾರಣ ಜ್ಞಾನಿಗೆ “ಬುಧ”ನೆಂದು ಚತುರ್ಮುಖನೇ ಅಂದರೆ ಬ್ರಹ್ಮನೇ ಹೆಸರು ಇಟ್ಟ. ಈ ಮಗುವೇ ಚಂದ್ರವಂಶದ ಪ್ರಥಮ ಕುಡಿ. ಮುಂದೆ ಚಂದ್ರ ತಪಸ್ಸು ಮಾಡಿ, ಗ್ರಹದ ಸ್ಥಾನಮಾನ ಪಡೆಯುತ್ತಾನೆ.
ನವಗ್ರಹಗಳಲ್ಲಿ ಬುಧ ಗ್ರಹವೂ ಒಂದು!
ತಪಸ್ಸಿನ ಮೂಲಕ ಗ್ರಹದ ಸ್ಥಾನಮಾನ ಪಡೆದ ಬುಧ ನವಗ್ರಹಗಳಲ್ಲಿ ಒಂದು ಗ್ರಹವಾಗಿದೆ. ಬುಧವಾರಕ್ಕೆ ಅಧಿಪತಿಯಾದ ಬುಧನು, ಬುದ್ಧಿಶಕ್ತಿ ಹಾಗೂ ಜ್ಞಾನದ ಮೇಲೆ ಪ್ರಭಾವ ಬೀರುತ್ತಾನೆ. ಹೀಗಾಗಿ ಈತನ ಪರಿಣಾಮಗಳು ಮನುಷ್ಯನ ಸಕಾರಾತ್ಮಕ ಬೆಳವಣಿಗೆಗೆ ಸಹಕಾರಿ. ಅಲ್ಲದೆ, ಮರೆಗುಳಿತನ, ಓದಿನಲ್ಲಿ ನಿರಾಸಕ್ತಿ, ವ್ಯಾಪಾರದಲ್ಲಿ ನಷ್ಟ, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ದ್ವಂದ್ವ, ಉಸಿರಾಟದಲ್ಲಿ ತೊಂದರೆ ಹಾಗೂ ನರದೌರ್ಬಲ್ಯಗಳೇ ಮುಂತಾದ ಆರೋಗ್ಯ ಸಮಸ್ಯೆಗಳಿರುವವರು ಬುಧ ಗ್ರಹದ ಪ್ರಭಾವದಿಂದ ಪೀಡಿತರಾಗುವರು.
ನವಗ್ರಹಗಳಲ್ಲಿ ಬುದ್ಧಿ, ಜ್ಞಾನಕ್ಕೆಅಧಿಪತಿಯಾಗಿರುವ ಬುಧನು, ಸೂರ್ಯ ಮತ್ತು ಶುಕ್ರ ಗ್ರಹಗಳೊಂದಿಗೆ ಸ್ನೇಹ ಪರವಾಗಿದ್ದಾನೆ. ಕನ್ಯಾ ಹಾಗೂ ಮಿಥುನ ರಾಶಿಗಳಿಗೆ ಅಧಿಪತಿಯಾಗಿರುವ ಬುಧನಿಗೆ ಹಾಲಿನಿಂದ ತಯಾರಿಸಿದ ಖೋವಾ ಅಥವಾ ಹೆಸರುಕಾಳಿನಿಂದ ತಯಾರಿಸಿದ ಪದಾರ್ಥವನ್ನು ನೈವೇದ್ಯವನ್ನಾಗಿ ಸಮರ್ಪಿಸಲಾಗುತ್ತದೆ.
ಬುಧನಿಂದ ಶುಭ ಫಲ ಪಡೆಯುವುದು ಹೇಗೆ?
ಬುಧನು ಏಕಾದಶಿಯ ದಿನದಂದು ಜನಿಸಿರುವುದರಿಂದ ಪ್ರತಿ ಏಕಾದಶಿಯ ದಿನದಂದು ಉಪವಾಸ ಆಚರಣೆ ಮಾಡಿ, ವಿಷ್ಣು ಸಹಸ್ರನಾಮ ಪಠಿಸಬೇಕು.
ಬುಧಗ್ರಹವು ಉತ್ತರ ದಿಕ್ಕಿನ ಅಧಿಪತಿಯಾಗಿದ್ದಾನೆ. ಉತ್ತರ ದಿಕ್ಕಿನ ಬಾಗಿಲನ್ನು ಹೊಂದಿರುವ ವಾಸ್ತು ದೋಷವಿಲ್ಲದ ಮನೆಯನ್ನು ನಿರ್ಮಿಸಿಕೊಂಡು ಅದರಲ್ಲಿ ವಾಸಿಸಬೇಕು.
ಉತ್ತರ ದಿಕ್ಕು ಜಲವನ್ನು ಪ್ರತಿನಿಧಿಸುವುದರಿಂದ ಈ ದಿಕ್ಕಿನಲ್ಲಿ ನೀರಿನ ಚಿಲುಮೆ, ಮೀನು ಸಂಗ್ರಹಣಾ ತೊಟ್ಟಿ ಇರಿಸಬೇಕು. ನದಿಯ ನೀರು ಹರಿಯುತ್ತಿರುವ ಫೋಟೊವನ್ನು ಉತ್ತರದ ಗೋಡೆಗೆ ಹಾಕುವುದರಿಂದ ಮನೆಯ ಸದಸ್ಯರು ಉತ್ತಮ ಫಲ ಪಡೆಯಬಹುದು.
ಬುಧನ ರತ್ನ ಪಚ್ಚೆ. ಕಿರುಬೆರಳಿಗೆ ಪಚ್ಚೆ ಧರಿಸುವುದರಿಂದ ಬುಧನ ಶುಭಫಲಗಳನ್ನು ಪಡೆಯಬಹುದು.
ಬುಧ ನೀಡುವ ವಿದ್ಯೆಗಳಿವು
ಜಾತಕದಲ್ಲಿ ಬುಧ ಬಲಾಢ್ಯನಾಗಿದ್ದರೆ ಅವರು ಕುಶಾಗ್ರಮತಿ, ಚಾಣಾಕ್ಷತನ, ವಿಷಯ ಸಂಗ್ರಹಣಾ ಶಕ್ತಿ, ಗ್ರಹಿಸುವ ಶಕ್ತಿ, ಪ್ರಚಂಡ ಬುದ್ಧಿವಂತ, ವಾಗ್ಮಿ, ವಿದ್ಯೆಯ ಸಾಮರ್ಥ್ಯ ಹೊಂದಿರುತ್ತಾರೆ. ಮಾತಿಗೆ ಸಂಬಂಧಿಸಿದ ವಿದ್ಯೆ, ವಾಪಾರ, ವಾಣಿಜ್ಯ, ತೆರಿಗೆ ಸಂಬಂಧ, ಸಾಹಿತಿ, ಪತ್ರಿಕೋದ್ಯಮ, ಸಂಪರ್ಕ ಸಾಧನ, ಮಾಹಿತಿ ತಂತ್ರಜ್ಞಾನ, ದೂರದರ್ಶನ, ಆಕಾಶವಾಣಿ, ಪರಿಶೋಧನೆ, ಇಂಗ್ಲಿಷ್ ಭಾಷೆ, ಮೌಖಿಕ ಪರೀಕ್ಷೆ ಕಂಪ್ಯೂಟರ್, ಸಂಖ್ಯಾಶಾಸ್ತ್ರ ಗಣಿತ, ಬೀಜಗಣಿತ, ವಾಚನಾಲಯ, ಬೆರಳಚ್ಚು ಶೀಘ್ರಲಿಪಿ, ವಕೀಲ, ಬ್ಯಾಂಕಿಂಗ್ ಸಂಬಂಧ, ಭಾಷಾಶಾಸ್ತ್ರ, ಎಂ.ಬಿ.ಎ., ಸಿ.ಎ., ತೆರಿಗೆ ಸಂಬಂಧಿಸಿದ ವಿದ್ಯೆ, ಜ್ಯೋತಿಷ್ಯ, ಸಾಫ್ಟ್ ವೇರ್ ಮುಂತಾದವು ಬುಧನಿಗೆ ಸಂಬಂಧಿಸಿದ ವಿದ್ಯೆಗಳಾಗಿವೆ.
ಬುಧನ ದೋಷ ಇದ್ದವರಿಗೆ ಎದೆಗೆ ಸಂಬಂಧಿಸಿದ ರೋಗಗಳನ್ನು ನೀಡುತ್ತಾನೆ. ಮಾನಸಿಕ ಅಸ್ವಸ್ಥತೆ, ಮಾನಸಿಕ ವಿಕಾರ, ಚರ್ಮರೋಗ, ಉನ್ಮಾದ, ಅಪಸ್ಮಾರ, ಮೂರ್ಛೆರೋಗ, ಪಾರ್ಶ್ವವಾಯು, ನಿದ್ರಾ ಭಂಗ, ನರಗಳು ದುರ್ಬಲವಾಗುವುದು, ಕುಷ್ಠರೋಗ, ಅಪಸ್ಮಾರ, ನ್ಯೂಮೋನಿಯಾ, ಅಸ್ತಮಾ, ತೊದಲು, ಮೂಕತ್ವ, ಚಿತ್ತಭ್ರಮಣೆ, ದುಃಸ್ವಪ್ನ, ನಾಲಿಗೆ, ಕಿವಿ, ಬೆನ್ನೆಲುಬು ನೋವು ಮುಂತಾದ ಸಮಸ್ಯೆಗಳಿಗೆ ಕಾರಣನಾಗುತ್ತಾನೆ.
ಇದನ್ನೂ ಓದಿ: ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ
ಬುಧ ಗ್ರಹ ದೋಷವಿದ್ದಾಗ ಈ ಕೆಳಗಿನ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು;
ಪ್ರಿಯಂಗು ಕಲಿಕಾಭಾಸಂ ರೂಪೇಣಾಪ್ರತಿಮಂ ಬುಧಮ್|
ಸೌಮ್ಯಂ ಸೌಮ್ಯಗುಣೋಪೇತಂ ನಮಾಮಿ ಶಶಿನಂದನಮ್ ||
(ಇದರರ್ಥ: ನವಣೆಯ ತೆನೆಯಂತೆ ಹಸಿರುಕಾಂತಿಯುಳ್ಳವ. ರೂಪದಲ್ಲಿ ಸಾಟಿಯಿಲ್ಲ, ಸೋಮನ (ಚಂದ್ರನ) ಮಗ. ಸೌಮ್ಯಸ್ವಭಾವ. ಅಪ್ಪನಾದ ಚಂದ್ರನ ಗುಣಗಳುಳ್ಳವ. ಚಂದ್ರನಿಗೆ ಮಿತ್ರಗ್ರಹವೆನಿಸಿ ಆನಂದಪ್ರದನಾದ ಬುಧನಿಗೆ ನನ್ನ ಪ್ರಣಾಮಗಳು).
ಇದನ್ನೂ ಓದಿ: Importance Of Daan : ಈ ಮೂರು ವಸ್ತುಗಳ ದಾನದಿಂದ ಪುಣ್ಯ ಅಧಿಕ