ಜ್ಯೋತಿಷ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಗ್ರಹಗಳ ಗೋಚಾರವು ಮನುಷ್ಯನ ಜೀವನದ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ. ಸೂರ್ಯ ಗ್ರಹವು ಇಂದು (ಶನಿವಾರ) ರಾತ್ರಿ 10 ಗಂಟೆ 56 ನಿಮಿಷಕ್ಕೆ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದು, ಆಗಸ್ಟ್ 17ರ ಬೆಳಗ್ಗೆ 7 ಗಂಟೆ 22 ನಿಮಿಷದ ವರೆಗೆ ಅಲ್ಲಿಯೇ ಸ್ಥಿತವಾಗಿರಲಿದೆ. ಇದು ದಕ್ಷಿಣಾಯಣದಲ್ಲಿ ಸೂರ್ಯ ಗ್ರಹದ ಮೊದಲ ರಾಶಿ ಪರಿವರ್ತನೆಯಾಗಿದ್ದು, ಇದನ್ನು ʼಕರ್ಕಾಟಕ ಸಂಕ್ರಾಂತಿʼ (Karka Sankranti 2022 ) ಎಂದು ಸಹ ಕರೆಯಲಾಗುತ್ತದೆ.
ಕರ್ಕಾಟಕ ಸಂಕ್ರಾಂತಿಯ ಮಹತ್ವ ಮತ್ತು ವಿಧಿ
ಸಂಕ್ರಾಂತಿಯ ಅರ್ಥವೇ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದಾಗಿದೆ. ಈ ಸಂಕ್ರಾಂತಿಯು ಸೌರ ಮಾಸದ ಆರಂಭವು ಸಹ ಆಗಿದೆ. ಈ ಸೂರ್ಯ ಸಂಕ್ರಮಣಕ್ಕೆ ವಿಶೇಷವಾದ ಮಹತ್ವವಿದ್ದು, ಇದು ವಿಷ್ಣು ಮತ್ತು ಸೂರ್ಯನ ಆರಾಧನೆಗೆ ಪ್ರಶಸ್ತವಾದ ಸಮಯವಾಗಿದೆ.
ಅಲ್ಲದೇ ಸೂರ್ಯನ ದಕ್ಷಿಣಾಯಣ ಯಾತ್ರೆಯು ಸಹ ಈ ದಿನದಿಂದಲೇ ಆರಂಭವಾಗುತ್ತದೆ. ದೇವಾನುದೇವತೆಗಳು ಯೋಗನಿದ್ರೆಯಲ್ಲಿರುವ ಸಮಯ ಇದಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ.
ಶುಭ ಮುಹೂರ್ತ
ಜುಲೈ 16 ಶನಿವಾರ ಮಧ್ಯಾಹ್ನ 12ಗಂಟೆ 46 ನಿಮಿಷಕ್ಕೆ ಆರಂಭವಾಗಿ, ಸಂಜೆ 7 ಗಂಟೆ 28 ನಿಮಿಷದ ವರೆಗೆ ಇರಲಿದೆ. ಸಂಜೆ 5 ಗಂಟೆ 14 ನಿಮಿಷದಿಂದ, 7 ಗಂಟೆ 28 ನಿಮಿಷದ ವರೆಗಿನ ಸಮಯವು ಕರ್ಕಾಟಕ ಸಂಕ್ರಾಂತಿಯ ಮಹಾ ಪುಣ್ಯಕಾಲವಾಗಿದೆ.
ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಶುಭ ಮತ್ತು ಅದಾದ ಬಳಿಕ ಸೂರ್ಯ ಮಂತ್ರವನ್ನು ಜಪಿಸುತ್ತಾ, ಅರ್ಘ್ಯವನ್ನು ನೀಡಬೇಕು. ಈ ದಿನ ವಿಷ್ಣುವಿನ ಆರಾಧನೆ ಮತ್ತು ವಿಷ್ಣು ಸಹಸ್ರನಾಮ ಸ್ತೋತ್ರ ಪಠಣೆಯನ್ನು ಮಾಡುವುದರಿಂದ ಭಾಗ್ಯ ವೃದ್ಧಿಸುತ್ತದೆ. ಈ ದಿನ ಹಿರಿಯರಿಗೆ ತರ್ಪಣ ನೀಡುವ ಪದ್ಧತಿ ಸಹ ಇದೆ.
ಈ ದಿನ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೇ ದಾನ – ಧರ್ಮಗಳನ್ನು ಮಾಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಕರ್ಕ ಸಂಕ್ರಾಂತಿಯಂದು ಮಾಡಿದ ದಾನದ ಫಲ ದುಪ್ಪಟ್ಟಾಗುತ್ತದೆ ಎಂಬ ನಂಬಿಕೆ ಸಹ ಇದೆ.
ದ್ವಾದಶ ರಾಶಿಗಳ ಮೇಲೇನು ಪರಿಣಾಮ?
ಸೂರ್ಯ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸುವುದರ ಪರಿಣಾಮವು ಎಲ್ಲ ರಾಶಿಚಕ್ರಗಳ ಮೇಲಾಗುತ್ತದೆ. ಹಾಗಾದರೆ ಸೂರ್ಯದೇವನ ರಾಶಿ ಪರಿವರ್ತನೆಯು ಯಾವ್ಯಾವ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯೋಣ;…
ಮೇಷ : ಈ ರಾಶಿಯವರಿಗೆ ಸೂರ್ಯ ಗ್ರಹದ ಈ ಸಂಚಾರವು ಮಿಶ್ರ ಪರಿಣಾಮವನ್ನು ಉಂಟುಮಾಡುತ್ತದೆ. ಮೇಷ ರಾಶಿಯ ಚತುರ್ಥ ಭಾವದಲ್ಲಿ ಗೋಚರಿಸುವುದರಿಂದ ಅನಿರೀಕ್ಷಿತ ಫಲ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕುಟುಂಬದಲ್ಲಿ ಕಲಹಗಳು ಆಗುವುದರಿಂದ ಮಾನಸಿಕ ಅಶಾಂತಿಯ ಸ್ಥಿತಿ ಉಂಟಾಗುತ್ತದೆ. ವಾಹನಗಳ ಕ್ರಯ ಮಾಡುವುವ ಯೋಚನೆ ಇದ್ದರೆ ಅದಕ್ಕೂ ಗ್ರಹಗಳು ಅನುಕೂಲಕರವಾಗಿವೆ.
ವೃಷಭ: ಸೂರ್ಯ ಗ್ರಹದ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಉತ್ತಮ ಫಲವನ್ನು ನೀಡಲಿದೆ. ರಾಶಿಯ ತೃತೀಯ ಭಾವದಲ್ಲಿ ಗೋಚರಿಸುವ ಸೂರ್ಯನ ಪ್ರಭಾವದಿಂದ ಸಾಹಸ ಪ್ರವೃತ್ತಿ ಹೆಚ್ಚುವುದಲ್ಲದೆ, ಅಂದುಕೊಂಡ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ವೃದ್ಧಿಯಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.
ಮಿಥುನ: ಮಿಥುನ ರಾಶಿಯ ವ್ಯಕ್ತಿಗಳಿಗೆ ಈ ಗೋಚಾರವು ಮಿಶ್ರ ಪರಿಣಾಮವನ್ನು ಉಂಟು ಮಾಡುತ್ತದೆ. ದ್ವೀತಿಯ ಭಾವದಲ್ಲಿ ಗೋಚರಿಸುವ ಸೂರ್ಯನಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸುಕೊಳ್ಳುವ ಸಂಭವವಿದೆ. ಮುಖ್ಯವಾಗಿ ಕಣ್ಣಿನ ತೊಂದರೆಗಳಿದ್ದರೆ ಜಾಗರೂಕರಾಗಿರುವುದು ಉತ್ತಮ. ಮಿಥುನ ರಾಶಿಯ ವ್ಯಕ್ತಿಗಳು ಹಟ ಮತ್ತು ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ. ಅಷ್ಟೇ ಅಲ್ಲದೇ ವಾದ – ವಿವಾದಗಳಿಂದ ದೂರವಿರುವುದು ಉತ್ತಮ.
ಕಟಕ: ಸೂರ್ಯ ಗ್ರಹವು ಕಟಕ ರಾಶಿಗೆ ಪ್ರವೇಶಿಸಿರುವ ಪರಿಣಾಮ ಈ ರಾಶಿಯವರಿಗೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. ಆದರೂ ಈ ರಾಶಿಯ ವ್ಯಕ್ತಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಅಂದುಕೊಂಡ ಕಾರ್ಯಗಳು ಸರಾಗವಾಗಿ ಸಂಪನ್ನಗೊಳ್ಳುತ್ತವೆ. ಟೆಂಡರ್ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದರೆ ಗ್ರಹಗಳು ಅನುಕೂಲಕರ ಸ್ಥಿತಿಯಲ್ಲಿದ್ದು, ಉತ್ತಮ ಪರಿಣಾಮವನ್ನು ನೀಡುತ್ತವೆ.
ಸಿಂಹ : ಸಿಂಹ ರಾಶಿಯ ಅಧಿಪತಿ ಗ್ರಹವೇ ಸೂರ್ಯ ಗ್ರಹವಾದರೂ ಈ ರಾಶಿಯ ವ್ಯಯ ಭಾವದಲ್ಲಿ ಗೋಚಾರವಾಗುತ್ತಿರುವುದರಿಂದ ಈ ರಾಶಿಯ ವ್ಯಕ್ತಿಗಳಿಗೆ ಮಿಶ್ರ ಪರಿಣಾಮ ಉಂಟಾಗುತ್ತದೆ. ಹೆಚ್ಚಿನ ಓಡಾಟದಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ತಂದೆ ಮತ್ತು ತಾಯಿಯ ಆರೋಗ್ಯದ ಕಾಳಜಿ ವಹಿಸುವುದು ಉತ್ತಮ.
ಕನ್ಯಾ : ಸೂರ್ಯ ಗ್ರಹದ ರಾಶಿ ಪರಿವರ್ತನೆಯು ಕನ್ಯಾ ರಾಶಿಯ ಹನ್ನೊಂದನೇ ಮನೆಯಲ್ಲಿ ಅಂದರೆ ಧನಭಾವದಲ್ಲಿ ಗೋಚಾರವಾಗುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಆದಾಯ ಮೂಲಗಳು ಹೆಚ್ಚಲಿವೆ. ಅಂದುಕೊಂಡ ಕಾರ್ಯಗಳು ಪೂರ್ಣಗೊಳ್ಳುವುದರ ಜೊತೆಗೆ, ತೆಗೆದುಕೊಂಡ ನಿರ್ಧಾರಗಳಿಂದ ಸಫಲತೆ ದೊರಕುತ್ತದೆ.
ತುಲಾ: ತುಲಾ ರಾಶಿಯವರಿಗೂ ಸಹ ಈ ಗ್ರಹ ಗೋಚಾರವು ಅತ್ಯುತ್ತಮ ಪರಿಣಾಮವನ್ನು ನೀಡುತ್ತದೆ. ರಾಜಕಾರಣಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಬಯಸಿದರೆ ಯಶಸ್ಸು ಪ್ರಾಪ್ತವಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಗ್ರಹ ಗೋಚಾರದ ಉತ್ತಮ ಪ್ರಭಾವದ ಜೊತೆಗೆ ಅದೃಷ್ಟವು ಸಾಥ್ ನೀಡುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಒದಗಿ ಬರುತ್ತದೆ.
ವೃಶ್ಚಿಕ: ಸೂರ್ಯ ಸಂಚಾರವು ನವಮ ಭಾವದಲ್ಲಿ ಆಗುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. ಅದೃಷ್ಟವು ಜೊತೆಗಿರುವುದಲ್ಲದೇ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ. ಹೊಸ ಅವಕಾಶಗಳಿಗೆ ಒಪ್ಪಿಗೆ ಸೂಚಿಸಿ, ಸಹಿ ಹಾಕಲು ಇದು ಉತ್ತಮ ಸಮಯವಾಗಿದೆ.
ಧನಸ್ಸು: ಧನು ರಾಶಿಯ ವ್ಯಕ್ತಿಗಳಿಗೆ ಈ ಗೋಚಾರವು ಮಿಶ್ರ ಪರಿಣಾಮವನ್ನು ಉಂಟುಮಾಡುತ್ತದೆ. ರಾಶಿಯ ಅಷ್ಟಮ ಭಾವದಲ್ಲಿ ಗೋಚಾರ ಮಾಡುವ ಸೂರ್ಯ ಗ್ರಹವು ಅನಿರೀಕ್ಷಿತ ಪ್ರಭಾವವನ್ನು ಬೀರುತ್ತದೆ. ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ. ಅಗ್ನಿ, ವಿಷ ಮತ್ತು ಔಷಧಿಗಳ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇರುವುದರಿಂದ, ಜಾಗ್ರತೆ ವಹಿಸುವುದು ಉತ್ತಮ.
ಮಕರ: ಈ ರಾಶಿಯ ಸಪ್ತಮ ಭಾವದಲ್ಲಿ ಗೋಚಾರವಾಗುವ ಸೂರ್ಯನು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ತಂದೊಡ್ಡುವ ಸಂಭವವಿದೆ. ಕೆಲಸ ಮತ್ತು ವ್ಯಾಪಾರದಲ್ಲಿ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ. ಕೋರ್ಟ್, ಕಚೇರಿಗೆ ಸಂಬಂಧಿಸಿದಂತೆ ನಿರ್ಣಯಗಳು ಅನುಕೂಲ ರೀತಿಯಲ್ಲಿ ಬರುತ್ತವೆ.
ಕುಂಭ: ಈ ರಾಶಿಯ ಶತ್ರು ಭಾವದಲ್ಲಿ ಸೂರ್ಯನ ಗೋಚಾರವಾಗುತ್ತಿರುವುದರಿಂದ ಈ ರಾಶಿಯವರಿಗೆ ಉತ್ತಮ ಫಲಗಳು ಪ್ರಾಪ್ತವಾಗುತ್ತವೆ. ಕೆಲವು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರುವುದು ಸಹ ಅಗತ್ಯವಾಗಿರುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಏಳಿಗೆಯನ್ನು ಕಾಣಬಹುದಾಗಿದೆ. ಉದ್ಯೋಗಿಗಳು ಹೆಚ್ಚಿನ ಶ್ರಮವಹಿಸುವ ಅಗತ್ಯವಿರುತ್ತದೆ.
ಮೀನ: ಸೂರ್ಯ ಗ್ರಹದ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಮಿಶ್ರ ಪರಿಣಾಮವನ್ನೇ ನೀಡುತ್ತದೆ. ರಾಶಿಯ ಪಂಚಮ ಭಾವದಲ್ಲಿ ಗೋಚಾರವಾಗುವ ಸೂರ್ಯ ಗ್ರಹದಿಂದ ಆಧ್ಯಾತ್ಮಿಕ ಆಸಕ್ತಿ ಹೆಚ್ಚುವುದಲ್ಲದೇ, ಸಮಾಜದಲ್ಲಿ ಗೌರವಾದರಗಳು ವೃದ್ಧಿಯಾಗುತ್ತವೆ. ಆದಾಯದ ಮೂಲ ಹೆಚ್ಚುತ್ತದೆ. ಹಲವು ದಿನಗಳಿಂದ ಬರಬೇಕಿದ್ದ ಹಣ, ವಾಪಸ್ ಕೈ ಸೇರಲಿದೆ. ಕೆಲಸ ಕಾರ್ಯಗಳಿಗೆ ಕುಟುಂಬದ ಸದಸ್ಯರ ಸಹಯೋಗ ದೊರಕಲಿದೆ. ನವ ದಂಪತಿಗಳಿಗೆ ಸಂತಾನ ಯೋಗವಿದೆ.
ಇದನ್ನೂ ಓದಿ|ಭಾವಾಶ್ರಿತ ಗ್ರಹಫಲ | ಸೂರ್ಯನು ದಶಮ ಭಾವದಲ್ಲಿದ್ದರೆ ಬಲಿಷ್ಠ