Site icon Vistara News

Magha Purnima 2023 : ಹುಣ್ಣಿಮೆಯ ನಾಳೆ ನಾಲ್ಕು ಶುಭ ಯೋಗಗಳ ಸಂಯೋಗ; ಏನಿದರ ಲಾಭ?

Magha Purnima 2023

Magha Purnima 2023

ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ಮಾಸಕ್ಕೂ ವಿಶೇಷತೆಗಳಿವೆ. ಅಂಥ ವಿಶೇಷತೆಗಳು ಮಾಘ ಮಾಸದಲ್ಲೂ ಇವೆ. ಮಾಘ ಮಾಸದ ಆರಂಭದಿಂದ, ಪಂಚಮಿ, ಸಪ್ತಮಿ ಹಾಗೇ ಏಕಾದಶಿ ಮತ್ತು ಹುಣ್ಣಿಮೆಗಳಲ್ಲಿ (Magha Purnima 2023) ದೇವರ ಕೃಪೆ ಪಡೆಯಲು ಅನೇಕ ಸದವಕಾಶವಿದೆ.

ಮಾಘ ಮಾಸದಲ್ಲಿ ಗಂಗಾ ಸ್ನಾನ ಅಥವಾ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ದೇವತೆಗಳು ಪೃಥ್ವಿ ಲೋಕದಲ್ಲಿ ವಿಹರಿಸುವ ದಿನ ಸಹ ಇದಾಗಿದೆ. ಹಾಗೆಯೇ ಮಾಘ ಮಾಸದ ಪೂರ್ಣಿಮೆ ಅಂದರೆ ಮಾಘ ಮಾಸದ ಕೊನೆಯ ದಿನವಾದ ಹುಣ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ.

ವಿಶೇಷವಾಗಿ ಮಾಘ ಪೂರ್ಣಿಮೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಗಂಭೀರ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ. ಈ ಬಾರಿ ಫೆಬ್ರವರಿ 5ರಂದು ಮಾಘ ಹುಣ್ಣಿಮೆ ತಿಥಿ ಬಂದಿರುವ ಕಾರಣ ಈ ದಿನ ಮಾಘ ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಮತ್ತು ಚಂದ್ರದೇವನನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. 2023ರ ಮಾಘ ಪೂರ್ಣಿಮೆಯಂದು ವಿಶೇಷ ಯೋಗಗಳು ಒಗ್ಗೂಡಲಿದ್ದು, ಹುಣ್ಣಿಮೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಾಗಿ ಲಕ್ಷ್ಮೀಯನ್ನು ಈ ದಿನ ಪೂಜಿಸುವುದರಿಂದ ಆರ್ಥಿಕ ಲಾಭ ಉಂಟಾಗಲಿದೆ.

ಮಾಘ ಪೂರ್ಣಿಮೆಯ ಶುಭ ಯೋಗ

ಪಂಚಾಂಗದ ಪ್ರಕಾರ ಫೆಬ್ರವರಿ 5ರಂದು ಮಾಘ ಮಾಸದ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಮಾಘ ಪೂರ್ಣಿಮೆಯ ದಿನವೇ ನಾಲ್ಕು ವಿಶೇಷ ಯೋಗಗಳು ನಿರ್ಮಾಣವಾಗುತ್ತವೆ. ಅವುಗಳಾದ ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ, ರವಿ ಪುಷ್ಯ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳು ಸಂಯೋಜನೆಗೊಳ್ಳಲಿವೆ.

ಒಂದೇ ದಿನ ಈ ನಾಲ್ಕು ಯೋಗಗಳು ಬಂದಿರುವುದು ಅತ್ಯಂತ ಶುಭವೆಂದು ಹೇಳಲಾಗುತ್ತಿದೆ. ಹಾಗಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುವುದರಿಂದ ಆರ್ಥಿಕ ಪ್ರಗತಿಯನ್ನು ಕಾಣಬಹುದಾಗಿದೆ.
ಮಾಘ ಪೂರ್ಣಿಮೆಯಂದು ಬಂದಿರುವ ನಾಲ್ಕು ಯೋಗಗಳ ಬಗ್ಗೆ ನೋಡೋಣ

ರವಿ ಪುಷ್ಯ ಯೋಗ : 2023 ಫೆಬ್ರವರಿ 5ರ ಬೆಳಗ್ಗೆ 7:10 ರಿಂದ ಮಧ್ಯಾಹ್ನ 12:13 ರ ವರೆಗೆ ಯೋಗವು ಇರಲಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಉತ್ತಮ ಸಮಯವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಕಾರ್ಯಗಳು ಕೈಗೂಡಲು ಈ ದಿನ ಮಹಾಲಕ್ಷ್ಮೀಯನ್ನು ಈ ಸಮಯದಲ್ಲಿ ಆರಾಧಿಸಬೇಕು. ಇದರಿಂದ ಅಂದುಕೊಂಡ ಕಾರ್ಯದಲ್ಲಿ ಸಫಲತೆಯನ್ನು ಕಾಣಬಹುದಾಗಿದೆ.

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ಆಯುಷ್ಮಾನ್ ಯೋಗ: ಫೆಬ್ರವರಿ 4ರ ಮಧ್ಯಾಹ್ನ 01 ಗಂಟೆ 53 ನಿಮಿಷದಿಂದ ಮರುದಿನ ಅಂದರೆ ಫೆಬ್ರವರಿ 5ರ ಮಧ್ಯಾಹ್ನ 2 ಗಂಟೆ 42 ನಿಮಿಷದ ವರೆಗೂ ಇರಲಿದೆ. ಈ ಯೋಗದ ಸಮಯದಲ್ಲಿ ದೇವರ ಆರಾಧನೆ ಮಾಡುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದಾಗಿದೆ. ಜೊತೆಗೆ ಆಯಸ್ಸು ವೃದ್ಧಿಯಾಗಲಿದೆ.

ಸೌಭಾಗ್ಯ ಯೋಗ : ಫೆಬ್ರವರಿ 5ರ ಮಧ್ಯಾಹ್ನ 2 ಗಂಟೆ 42 ನಿಮಿಷದಿಂದ 6 ಫೆಬ್ರವರಿ ಮಧ್ಯಾಹ್ನ 3 ಗಂಟೆ 26 ನಿಮಿಷದ ವರೆಗೂ ಇರಲಿದೆ. ಈ ಯೋಗದ ಹೆಸರಿನಂತೆ ಈ ಸಮಯದಲ್ಲಿ ದೇವರ ಆರಾಧನೆ ಮಾಡಿದವರಿಗೆ ಸೌಭಾಗ್ಯ ಪ್ರಾಪ್ತಿಯಾಗಲಿದೆ.

ಸರ್ವಾರ್ಥ ಸಿದ್ಧಿ ಯೋಗ : ಫೆಬ್ರವರಿ 5ರ ಬೆಳಗ್ಗೆ 7 ಗಂಟೆ 10 ನಿಮಿಷದಿಂದ ಮಧ್ಯಾಹ್ನ 12:13ರ ವರೆಗೂ ಇರಲಿದೆ.

ಮಾಘ ಪೂರ್ಣಿಮೆಯ ರಾತ್ರಿ ಚಂದ್ರದೇವರ ಪೂಜೆ ಮಾಡುವುದರಿಂದ ಜಾತಕದಲ್ಲಿ ಚಂದ್ರ ದೋಷವಿದ್ದರೆ ನಿವಾರಣೆಯಾಗುತ್ತದೆ. ಹಾಗೂ ಚಂದ್ರನ ಕೃಪೆ ಪ್ರಾಪ್ತವಾಗುತ್ತದೆ. ಜೊತೆಗೆ ಲಕ್ಷ್ಮೀ ಪೂಜೆಯಿಂದ ಸುಖ ಸಮೃದ್ಧಿ ಲಭಿಸುತ್ತದೆ.

ಮಾಘ ಮಾಸದಲ್ಲಿ ಕಪ್ಪು ಎಳ್ಳನ್ನು ದಾನವಾಗಿ ನೀಡುವುದು ಅತ್ಯಂತ ಶ್ರೇಷ್ಠವಾಗಿದೆ. ಮಾಘ ಪೂರ್ಣಿಮೆಂದು ಸ್ನಾನ ಮಾಡಿದ ಬಳಿಕ ಅಗತ್ಯ ವಸ್ತುಗಳನ್ನು ದಾನ ಮಾಡುವುದರಿಂದ ಮನೋಕಾಮನೆಗಳು ಕೂಡ ಪೂರ್ಣಗೊಳ್ಳುತ್ತವೆ.

ಇದನ್ನೂ ಓದಿ : Astro Tips : ಯಾವ ದಿಕ್ಕಿಗೆ ತಲೆಹಾಕಿ ಮಲಗಿದರೆ ಒಳ್ಳೆಯದು? ವಾಸ್ತು ಶಾಸ್ತ್ರ ಹೇಳುವುದೇನು?

Exit mobile version