Site icon Vistara News

Mars Transit 2023 : ಜು.1ಕ್ಕೆ ಸಿಂಹ ರಾಶಿಗೆ ಮಂಗಳನ ಸಂಚಾರ; ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

Mangal Gochar 2023

ಕಾಲ ಕಾಲಕ್ಕೆ ಗ್ರಹಗಳು ಒಂದು ಮನೆಯಿಂದ ಮತ್ತೊಂದು ಮನೆಗೆ ಸಂಚಾರ ನಡೆಸುತ್ತಲೇ ಇರುತ್ತವೆ. ಇದರಿಂದಾಗಿಯೇ ಪ್ರತಿಯೊಬ್ಬರ ಗ್ರಹಗತಿ ಬದಲಾಗುತ್ತಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿಯ ಗ್ರಹಗಳ ಸಂಚಾರಕ್ಕೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ. ಈ ಗ್ರಹಗಳ ಸಂಚಾರ (Mars Transit 2023) ಪ್ರತಿಯೊಂದು ರಾಶಿಗಳ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತವೆ ಎಂಬುದನ್ನು ನೋಡಲಾಗುತ್ತದೆ.

ಮಂಗಳ ಗ್ರಹವನ್ನು ಸೌರ ಮಂಡಲದ ಸೇನಾಧಿಪತಿ ಎಂದು ಕರೆಯುತ್ತಾರೆ. ಸಾಹಸ, ಉತ್ಸಾಹ, ಪರಿಶ್ರಮ ಮತ್ತು ಪರಾಕ್ರಮ ಕಾರಕ ಗ್ರಹವಾಗಿರುವ ಮಂಗಳ ಗ್ರಹವು ಇದೇ ಜುಲೈ 01 ರಂದು ಸಿಂಹ ರಾಶಿಗೆ ಪ್ರವೇಶಿಸಲಿದೆ. ಆಗಸ್ಟ್‌ 18ರ ವರೆಗೆ ಈ ರಾಶಿಯಲಿದ್ದು, ಮುಂದೆ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಮಂಗಳನ ಈ ಸಂಚಾರದಿಂದ ಕೆಲವು ರಾಶಿಗಳ ಮೇಲೆ ಶುಭ ಪ್ರಭಾವ ಉಂಟಾಗಲಿದೆ. ಆ ರಾಶಿಗಳು ಯಾವವು ಎಂಬುದನ್ನು ತಿಳಿಯೋಣ. ನಿಮ್ಮ ರಾಶಿಯ ಮೇಲೆ ಈ ಮಂಗಳನ ಸಂಚಾರ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನೂ ನೋಡೋಣ.

ಮೇಷ: ವಿದ್ಯಾರ್ಥಿಗಳಿಗೆ ಉತ್ತಮವಾದ ಕಾಲ

ಮೇಷ ರಾಶಿಯವರಿಗೆ, ಮಂಗಳವು ಲಗ್ನ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಮಂಗಳ ನಿಮ್ಮ ಐದನೇ ಮನೆಯಲ್ಲಿ ಸಂಚಾರ ನಡೆಸುತ್ತಿದ್ದಾನೆ. ಈ ಸಂಚಾರದಿಂದಾಗಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಾರೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಅದರಲ್ಲಿ ಆಯ್ಕೆಯಾಗಬಹುದು. ವ್ಯಾಪಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವವರು ಉತ್ತಮ ಲಾಭ ಪಡೆಯುತ್ತಾರೆ. ನೀವು ವಿದೇಶಕ್ಕೆ ಹೋಗಬೇಕೆಂದು ಯೋಚಿಸುತ್ತಿದ್ದರೆ, ಈಗ ನಿಮಗೆ ಒಳ್ಳೆಯ ಸಮಯ. ಆಮದು ಮತ್ತು ರಫ್ತಿಗೆ ಸಂಬಂಧಿಸಿದ ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತಾರೆ.

ವೃಷಭ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ವೃಷಭ ರಾಶಿಯವರಿಗೆ ಮಂಗಳ ಹನ್ನೆರಡನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದಾನೆ. ನಿಮ್ಮ ನಾಲ್ಕನೇ ಮನೆಯಲ್ಲಿ ಈ ಸಂಚಾರ ನಡೆಯುತ್ತಿದೆ. ಈ ಸಂಚಾರ ನಿಮ್ಮ ಮೇಲೆ ಅನುಕೂಲಕರ ಪರಿಣಾಮ ಬೀರುವುದಿಲ್ಲ. ಈ ಸಂಚಾರದಿಂದಾಗಿ, ನಿಮಗೆ ಸ್ವಲ್ಪ ಮಾನಸಿಕ ಒತ್ತಡ ಉಂಟಾಗಲಿದೆ. ಈ ಸಮಯದಲ್ಲಿ, ಆಸ್ತಿ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ನಡೆಸುವ ವ್ಯವಹಾರದಲ್ಲಿ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಸ್ವಲ್ಪ ಪಿತೂರಿ ಮಾಡಬಹುದು. ವೈವಾಹಿಕ ಜೀವನದಲ್ಲೂ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ. ನೀವು ಈಗ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ಮಿಥುನ: ನಿಮಗಿದು ಅದೃಷ್ಟದ ಸಮಯ

ಮಿಥುನ ರಾಶಿಯವರಿಗೆ ಹನ್ನೊಂದು ಮತ್ತು ಆರನೇ ಮನೆಯ ಅಧಿಪತಿ ಮಂಗಳ. ಜುಲೈ 1 ರಿಂದ, ನಿಮ್ಮ ಮೂರನೇ ಮನೆಯಲ್ಲಿ ಮಂಗಳನ ಸಂಚಾರವಿದೆ. ಇದು ಧೈರ್ಯ ಮತ್ತು ಶಕ್ತಿಯ ಮನೆಯಾಗಿದೆ. ಈ ಮಂಗಳ ಸಂಚಾರವು ಮಿಥುನ ರಾಶಿಯವರಲ್ಲಿ ಧೈರ್ಯ ಮತ್ತು ಶೌರ್ಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ, ರಿಯಲ್ ಎಸ್ಟೇಟ್ ಮತ್ತು ಆಸ್ತಿಗೆ ಸಂಬಂಧಿಸಿದ ವ್ಯವಹಾರ ನಡೆಸುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ಏನೂ ಮಾಡಲಾರರು. ಎಲ್ಲ ಶತ್ರುಗಳನ್ನು ಹಿಮ್ಮೆಟ್ಟಿಸಲು ನಿಮಗೆ ಸಾಧ್ಯವಾಗುತ್ತದೆ. ಅದೃಷ್ಟದ ಈ ಸಮಯದಲ್ಲಿ ನಿಮ್ಮ ಕೈ ಹಿಡಿಯುತ್ತದೆ. ನಿಮ್ಮ ತಂದೆಯ ಸಹಾಯದಿಂದ ಯಾವುದೇ ಅಪೂರ್ಣ ಕೆಲಸವನ್ನು ನೀವು ಪೂರ್ಣಗೊಳಿಸಬಹುದು. ಸರ್ಕಾರಿ ನೌಕರರು ಮೇಲಧಿಕಾರಿಗಳ ಬೆಂಬಲ ಪಡೆಯುತ್ತಾರೆ. ನೀವು ಕೆಲಸದ ಸ್ಥಳದಲ್ಲಿ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ನೀವು ಬಡ್ತಿ ಕೂಡ ಪಡೆಯಬಹುದು.

ಕಟಕ: ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ

ಕಟಕ ರಾಶಿಯವರಿಗೆ ಮಂಗಳ ಹತ್ತನೇ ಮತ್ತು ಐದನೇ ಮನೆಯ ಅಧಿಪತಿಯಾಗಿದ್ದಾನೆ. ನಿಮ್ಮ ಎರಡನೇ ಮನೆಯ ಮೂಲಕ ಅಂದರೆ ಸಂಪತ್ತಿನ ಮನೆಯ ಮೂಲಕ ಈ ಸಂಚಾರ ನಡೆಸುತ್ತಾನೆ. ಈ ಸಂಚಾರದಿಂದ, ನಿಮ್ಮ ಪೂರ್ವಜರ ವ್ಯವಹಾರದಿಂದ ನೀವು ಲಾಭ ಪಡೆಯಬಹುದು. ನಿಮ್ಮ ತಂದೆಯ ಕೆಲಸವನ್ನು ನೀವು ನೋಡಿಕೊಳ್ಳುತ್ತಿದ್ದರೆ, ವ್ಯಾಪಾರ ಬೆಳವಣಿಗೆಯ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತವೆ. ಈ ಸಮಯದಲ್ಲಿ ನೀವು ಯಾವುದೇ ನ್ಯಾಯಾಲಯದ ಪ್ರಕರಣದಲ್ಲಿ ಭಾಗಿಯಾಗಬೇಡಿ ಮತ್ತು ನೀವು ಮಾತನಾಡುವಾಗ, ಭರವಸೆ ನೀಡುವಾಗ ಸಂಯಮದಿಂದಿರಿ. ಕಟು ಮಾತು ಬೇಡ. ನಿಮ್ಮ ಪ್ರೀತಿಯ ಸಂಬಂಧದಲ್ಲಿ ಸ್ವಲ್ಪ ಏರುಪೇರಾಗಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ತಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಗಾಯವಾಗುವ ಸಂಭವವಿದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ನಿಮ್ಮ ತಂದೆಯ ಬೆಂಬಲದೊರೆಯುತ್ತದೆ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.

ಸಿಂಹ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ!

ಸಿಂಹ ರಾಶಿಯವರಿಗೆ, ಮಂಗಳವು ಅದೃಷ್ಟದ ಮನೆ ಮತ್ತು ನಾಲ್ಕನೇ ಮನೆಯ ಅಧಿಪತಿ, ನಿಮ್ಮ ಲಗ್ನದಲ್ಲಿ ಮಾತ್ರ ಸಂಚಾರವಿದೆ. ಈ ಮನೆಯಲ್ಲಿ ಕುಳಿತಿರುವ ಮಂಗಳನು ​ ನಾಲ್ಕನೇ, ಏಳನೇ ಮತ್ತು ಎಂಟನೇ ಮನೆಯ ಮೇಲೆ ದೃಷ್ಟಿ ಬೀರುತ್ತಾನೆ. ಮಂಗಳ ಗ್ರಹದ ಸಂಚಾರದಿಂದಾಗಿ ನಿಮ್ಮ ವ್ಯಕ್ತಿತ್ವದಲ್ಲಿ ವಿಭಿನ್ನ ರೀತಿಯ ಹೊಳಪು ಪಡೆಯುತ್ತದೆ ಮತ್ತು ನೀವು ಪೂರ್ಣ ಲಾಭವನ್ನು ಅನುಭವಿಸುವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ಇದು ಸರಿಯಾದ ಸಮಯ. ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗುತ್ತದೆ. ಮಂಗಳ ಸಂಚಾರದ ಪ್ರಭಾವದಿಂದ, ನೀವು ಆಸ್ತಿಯನ್ನು ಖರೀದಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ವೈವಾಹಿಕ ಜೀವನದಲ್ಲಿ ಮಂಗಳ ಗ್ರಹದ ಈ ಸಂಕ್ರಮಣದಿಂದಾಗಿ, ಸ್ವಲ್ಪ ಉದ್ವೇಗದ ಪರಿಸ್ಥಿತಿ ನಿರ್ಮಾಣವಾಗಬಹುದು. ಆದರೂ ಸಂಬಂಧದಲ್ಲಿ ಬಿರುಕೇನೂ ಮೂಡದು. ಆದರೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವನ್ನು ಮುಂದುವರಿಸಬೇಡಿ. ನಿಮ್ಮ ಸ್ನೇಹಿತರನ್ನು ಹೆಚ್ಚು ನಂಬಬೇಡಿ. ಯಾರಿಗೂ ಸಾಲ ಕೊಡಬೇಡಿ ಅಥವಾ ಯಾರಿಂದಲೂ ಹಣವನ್ನು ತೆಗೆದುಕೊಳ್ಳಬೇಡಿ. ಕೆಲಸವನ್ನು ಬದಲಾಯಿಸಲು ನೀವು ಉದ್ದೇಶಿಸಿದ್ದರೆ ಸಮಯವು ನಿಮಗೆ ಅನುಕೂಲಕರವಾಗಿದೆ.

ಕನ್ಯಾ: ಆರ್ಥಿಕವಾಗಿ ನಷ್ಟವಾಗಬಹುದು, ಎಚ್ಚರಿಕೆ ಇರಲಿ

ಕನ್ಯಾ ರಾಶಿಯವರಿಗೆ ಮಂಗಳ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದ್ದು, ಈಗ ನಿಮ್ಮ ಹನ್ನೆರಡನೇ ಮನೆಯಲ್ಲಿ ಅಂದರೆ ಖರ್ಚಿನ ಮನೆಯಲ್ಲಿ ಸಂಚಾರ ನಡೆಸುತ್ತಾನೆ. ಈ ಮನೆಯಲ್ಲಿ ಕುಳಿತಿರುವ ಮಂಗಳ ನಿಮ್ಮ ಮೂರನೇ, ಆರನೇ ಮತ್ತು ಏಳನೇ ಮನೆಯ ಮೇಲೆ ದೃಷ್ಟಿ ನೆಟ್ಟಿದ್ದಾನೆ. ಇದರಿಂದಾಗಿ ನೀವು ಅನಾವಶ್ಯಕವಾಗಿ ಪ್ರಯಾಣಿಸಬೇಕಾಗಿ ಬರಬಹುದು ಮತ್ತು ಈ ಸಮಯದಲ್ಲಿ ನೀವು ಆರ್ಥಿಕವಾಗಿ ಹಿನ್ನಡೆ ಅನುಭವಿಸಬಹುದು. ಕೆಲಸದಲ್ಲಿ ಸ್ಥಳದಲ್ಲಿ ನಿರೀಕ್ಷಿಸಿದ ಬಡ್ತಿಯನ್ನು ಪಡೆಯಲಾಗುವುದಿಲ್ಲ. ಇದರಿಂದಾಗಿ ನಿಮ್ಮ ಮನಸ್ಸಿಗೆ ಸ್ವಲ್ಪ ಬೇಸರವಾಗಬಹುದು. ನೀವು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯವು ಅನುಕೂಲಕರವಾಗಿಲ್ಲ. ಈಗ ನೀವು ಉತ್ಸಾಹ ತೋರಿದರೆ ಭವಿಷ್ಯದಲ್ಲಿ ಸಮಸ್ಯೆಗಳಾಗಬಹುದು. ಈ ಸಮಯದಲ್ಲಿ ಒಡಹುಟ್ಟಿದವರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.

ತುಲಾ: ಪಾಲುದಾರಿಕೆ ವ್ಯವಹಾರಕ್ಕೆ ಸೂಕ್ತ ಸಮಯ

ತುಲಾ ರಾಶಿಯ ಜನರಿಗೆ, ಮಂಗಳವು ಎರಡನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದಾನೆ. ಈ ಸಂಚಾರವು ಹನ್ನೊಂದನೇ ಮನೆಯಲ್ಲಿ ಅಂದರೆ ಲಾಭಸ್ಥಾನದಲ್ಲಿ ನಡೆಯುತ್ತದೆ. ಈ ಮನೆಯಲ್ಲಿ ಕುಳಿತಿರುವ ಮಂಗಳ ನಿಮ್ಮ ಎರಡನೇ, ಐದನೇ ಮತ್ತು ಆರನೇ ಮನೆಯ ಮೇಲೆ ದೃಷ್ಟಿ ಬೀರುತ್ತಾನೆ. ಮಂಗಳ ಗ್ರಹದ ಈ ಸಂಚಾರದಿಂದಾಗಿ ನಿಮ್ಮ ಯಾವುದೇ ಪಾಲುದಾರಿಕೆ ಒಪ್ಪಂದವು ಈ ಸಮಯದಲ್ಲಿ ಪ್ರಗತಿ ಹೊಂದಬಹುದು. ನೀವು ಪಾಲುದಾರಿಕೆಯಲ್ಲಿ ಕೆಲಸವನ್ನು ಪ್ರಾರಂಭಿಸಲು ಬಯಸಿದ್ದರೆ ಇದು ಸೂಕ್ತ ಸಮಯ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಜನರು ಉತ್ತಮ ಲಾಭ ಪಡೆಯುತ್ತಾರೆ. ನಿಮ್ಮ ಶತ್ರುಗಳು ಈ ಸಮಯದಲ್ಲಿ ಪರಿಣಾಮಕಾರಿಯಾಗಿರುವುದಿಲ್ಲವಾದರೂ, ಯಾವುದೇ ರೀತಿಯ ನ್ಯಾಯಾಲಯದ ವಿವಾದದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದ್ಯೋಗಸ್ಥರು ಈ ಸಮಯದಲ್ಲಿ ಉತ್ತಮ ಏಳಿಗೆಯನ್ನು ಹೊಂದುತ್ತಾರೆ. ಸರ್ಕಾರಿ ಕೆಲಸ ಮಾಡುವವರಿಗೆ ಉನ್ನತ ಅಧಿಕಾರಿಗಳ ಬೆಂಬಲ ದೊರೆಯುತ್ತದೆ.

ವೃಶ್ಚಿಕ: ಪ್ರೇಮ ಜೀವನವನ್ನು ಬಲಪಡಿಸುವ ಸಮಯ

ವೃಶ್ಚಿಕ ರಾಶಿಯವರಿಗೆ ಮಂಗಳನು ​​ಲಗ್ನದ ಅಧಿಪತಿ ಮತ್ತು ಆರನೇ ಮನೆಯ ಅಧಿಪತಿ. ಮಂಗಳನ ಈ ಸಂಕ್ರಮಣವು ವೃಶ್ಚಿಕ ರಾಶಿಯವರ ಕ್ರಿಯೆಯ ಮನೆಯಲ್ಲಿ ನಡೆಯುತ್ತಿದೆ. ಈ ಮನೆಯಲ್ಲಿ ಕುಳಿತಿರುವ ಮಂಗಳನ ದೃಷ್ಟಿ ಲಗ್ನ, ನಾಲ್ಕನೇ ಮತ್ತು ಐದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಂಚಾರವು ವೃಶ್ಚಿಕ ರಾಶಿಯವರಿಗೆ ಯಶಸ್ಸನ್ನು ತಂದುಕೊಡಲಿದೆ. ಈ ಸಮಯದಲ್ಲಿ, ನೀವು ಕೆಲಸದ ಸ್ಥಳದಲ್ಲಿ ಗೌರವ ಪಡೆಯತ್ತೀರಿ. ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವರು. ನಿಮ್ಮ ಗೌರವವೂ ಹೆಚ್ಚಾಗುತ್ತದೆ. ನಿಮ್ಮ ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದಿಂದ ಕಷ್ಟವಾದದ್ದನ್ನೂ ಸಾಧಿಸಿ, ಗುರಿ ಮುಟ್ಟುವಿರಿ. ಈ ಸಂಕ್ರಮಣದಿಂದಾಗಿ ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯುತ್ತವೆ. ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಅಮೂಲ್ಯವಾದ ಉಡುಗೊರೆಯನ್ನು ಸಹ ನೀಡಬಹುದು. ಮಂಗಳನ ಈ ಸಂಚಾರವು ನಿಮ್ಮ ಪ್ರೇಮ ಜೀವನಕ್ಕೂ ಉತ್ತಮವಾಗಿದೆ. ನೀವು ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ.

ಧನಸ್ಸು: ಆಮದು-ರಫ್ತು ವ್ಯಾಪಾರಿಗಳಿಗೆ ಲಾಭ ಹೆಚ್ಚಲಿದೆ

ಧನು ರಾಶಿಯವರಿಗೆ, ಮಂಗಳ ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು, ಈಗ ನಿಮ್ಮ ಅದೃಷ್ಟದ ಮನೆಯಲ್ಲಿ ಸಂಚಾರ ನಡೆಯುತ್ತಿದೆ. ಮಂಗಳನ ಈ ಸಂಚಾರದಿಂದಾಗಿ ಧನು ರಾಶಿಯವರಲ್ಲಿ ಧಾರ್ಮಿಕತೆ ಹೆಚ್ಚುತ್ತದೆ ಮತ್ತು ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಬಹುದು. ಕುಲ ಗುರುಗಳ, ಪೀಠಾಧಿಪತಿಗಳ ಬೆಂಬಲ, ಆಶೀರ್ವಾದ ಪಡೆದುಕೊಳ್ಳುತ್ತೀರಿ. ವಿದೇಶದಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು, ಬಿಸ್ನೆಸ್‌ ಮಾಡುವವರು ಲಾಭವನ್ನು ಪಡೆಯುತ್ತಾರೆ. ಆಮದು ಮತ್ತು ರಫ್ತಿಗೆ ಸಂಬಂಧಿಸಿದ ವ್ಯಾಪಾರಿಗಳು ಈ ಸಮಯದಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ನಿಮ್ಮ ವಿದ್ಯಾಭ್ಯಾಸಕ್ಕಾಗಿ ನೀವು ವಿದೇಶಕ್ಕೆ ಹೋಗಲು ಬಯಸಿದರೆ, ಈ ಸಮಯವು ಅನುಕೂಲಕರವಾಗಿದೆ. ನೀವು ನಿಮ್ಮ ಸಹೋದರರ ಬೆಂಬಲವನ್ನು ಪಡೆಯುತ್ತೀರಿ ಮತ್ತು ಯಾವುದೇ ಪೂರ್ವಜರ ಆಸ್ತಿ ವಿವಾದವಿದ್ದರೆ ಅದನ್ನು ಸಹ ಬಗೆಹರಿಸಿಕೊಳ್ಳುತ್ತೀರಿ. ನಿಮ್ಮ ಕುಟುಂಬ ಸದಸ್ಯರಿಗಾಗಿ ನೀವು ಸಮಯವನ್ನು ನೀಡುತ್ತೀರಿ. ನಿಮಗೆ ವಾಹನ ಅಥವಾ ಕಟ್ಟಡವನ್ನು ಖರೀದಿಸುವ ಯೋಗವಿದೆ. ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ನಡೆಸುತ್ತೀರಿ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಮಕರ: ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ

ಮಕರ ರಾಶಿಯವರಿಗೆ ಮಂಗಳವು ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು, ಈಗ ನಿಮ್ಮ ಎಂಟನೇ ಮನೆಯಲ್ಲಿ ಅಂದರೆ ಹಠಾತ್ ಘಟನೆಗಳು ಸಂಭವಿಸಲು ಕಾರಣವಾಗುವ ಮನೆಯಲ್ಲಿ ಸಂಚಾರ ನಡೆಸುತ್ತಾನೆ. ಇಲ್ಲಿಂದ ನಿಮ್ಮ ಹನ್ನೊಂದನೇ ಮನೆ, ಹಣದ ಮನೆ ಮತ್ತು ಮೂರನೇ ಮನೆಯ ಮೇಲೆ ದೃಷ್ಟಿ ನೆಟ್ಟಿದ್ದಾನೆ. ಈ ಮನೆಯಲ್ಲಿ ಮಂಗಳ ಸಂಚಾರದಿಂದ ನಿಮಗೆ ತೊಂದರೆಯಾಗಬಹುದು. ಈ ಸಮಯದಲ್ಲಿ ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ವ್ಯಪಾರ ಮಾಡುವವರಿಗೆ ಈ ಸಮಯ ಅನುಕೂಲವಾಗಿಲ್ಲ. ಹಣದ ಕೊರತೆಯನ್ನು ಎದುರಿಸಬೇಕಾಗಿಬರಬಹುದು. ನಿಮ್ಮ ಕೌಟುಂಬಿಕ ಜೀವನ ಕೂಡ ಸಮಸ್ಯೆಗಳಿಂದ ಕೂಡಿರುತ್ತದೆ. ಮಾತನಾಡುವಾಗ ಸಂಯಮ ಅಗತ್ಯ. ನಿಮ್ಮ ಕಟುವಾದ ಮಾತುಗಳಿಂದಾಗಿ ಜಗಳವಾಗಬಹುದು. ಈ ಸಮಯದಲ್ಲಿ, ನಿಮ್ಮ ಧೈರ್ಯ ಮತ್ತು ಶೌರ್ಯ ಸ್ವಲ್ಪ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ನೀವು ಹಣಕಾಸಿನ ವ್ಯವಹಾರಗಳಲ್ಲಿಯೂ ಜಾಗರೂಕರಾಗಿರಬೇಕು.

ಕುಂಭ: ನಿಮಗೆ ರಾಜಯೋಗದ ಕಾಲವಿದು!

ಕುಂಭ ರಾಶಿಯವರಿಗೆ ಮಂಗಳ ತೃತೀಯ ಮತ್ತು ಹತ್ತನೇ ಮನೆಯ ಅಧಿಪತಿಯಾಗಿರುವುದರಿಂದ ರಾಜಯೋಗವಿದೆ. ನಿಮ್ಮ ಏಳನೇ ಮನೆಯಲ್ಲಿ ಅಂದರೆ ಪಾಲುದಾರಿಕೆಯ ಭಾವದಲ್ಲಿ ಮಂಗಳನ ಸಂಕ್ರಮಣ ನಡೆಯಲಿದೆ. ಈ ಮನೆಯಲ್ಲಿ ಕುಳಿತಿರುವ ಮಂಗಳ ನಿಮ್ಮ ದಶಮ, ಲಗ್ನ ಮತ್ತು ಸಂಪತ್ತಿನ ಸ್ಥಳವನ್ನು ನೋಡುತ್ತಿದ್ದಾನೆ. ಹೀಗಾಗಿ ವ್ಯಾಪಾರಿ ವರ್ಗದವರಿಗೆ ಈ ಮಂಗಳ ಸಂಚಾರವು ತುಂಬಾ ಒಳಿತನ್ನು ಮಾಡಲಿದೆ. ಈ ಸಮಯದಲ್ಲಿ ನೀವು ಹೊಸ ಬಂಡವಾಳ ಹೂಡಿಕೆ ಮಾಡುತ್ತೀರಿ ಮಾತ್ರವಲ್ಲದೆ ನಿಮ್ಮ ವ್ಯವಹಾರವೂ ವಿಸ್ತರಿಸುತ್ತದೆ. ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಲು ಉದ್ದೇಶಿಸಿದ್ದರೆ ಇದು ಉತ್ತಮ ಸಮಯ. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳನ್ನು ನೀಡಬಹುದು. ಆದಾಗ್ಯೂ, ನೀವು ನಿಮ್ಮ ಬಾಳಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೋರ್ಟ್ ಕೇಸ್ ನಡೆಯುತ್ತಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಬಹುದು. ಸರ್ಕಾರಿ ಊದ್ಯೋಗಿಗಳು ಈ ಸಮಯದಲ್ಲಿ ಬಡ್ತಿ ಪಡೆಯಬಹುದು. ವಿದ್ಯಾರ್ಥಿ ವರ್ಗಕ್ಕೂ ಈ ಸಮಯ ತುಂಬಾ ಒಳ್ಳೆಯದು. ನೀವು ಸಂಶೋಧನೆಯ ವಿಷಯಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ಈ ಸಮಯವು ನಿಮಗೆ ನಿಜವಾಗಿಯೂ ಅನುಕೂಲಕರವಾಗಿದೆ.

ಇದನ್ನೂ ಓದಿ : Mithuna Sankranti 2023 : ಸೂರ್ಯನ ಈ ಸಂಚಾರ‌, ಕೆಲವರ ಬದುಕಲ್ಲಿ ಬಂಗಾರ!

ಮೀನ: ಇದು ಶುಭ ಫಲಗಳನ್ನು ಪಡೆಯುವ ಸಮಯ

ಮೀನ ರಾಶಿಯವರಿಗೆ ಮಂಗಳ ಎರಡನೇ ಮತ್ತು ಅದೃಷ್ಟದ ಮನೆಯ ಅಧಿಪತಿ. ನಿಮ್ಮ ಆರನೇ ಮನೆಯಲ್ಲಿ ಅಂದರೆ ಶತ್ರು ಮನೆಯಲ್ಲಿ ಸಂಚಾರ ನಡೆಸುತ್ತಾನೆ. ಹೀಗಾಗಿ ಈ ಸಂಚಾರವು ತುಂಬಾ ಶುಭ ಫಲಗಳನ್ನು ನೀಡುತ್ತದೆ. ಮಂಗಳ ಗ್ರಹದ ಈ ಸಂಚಾರದಿಂದ, ನಿಮ್ಮ ಕೆಲಸದಲ್ಲಿ ನೀವು ಬಯಸಿದ ಬಡ್ತಿಯನ್ನು ಪಡೆಯಬಹುದು. ನಿಮ್ಮ ಶತ್ರುಗಳು ಸಂಪೂರ್ಣವಾಗಿ ನಾಶವಾಗಲಿದ್ದಾರೆ. ಮಂಗಳ ಗ್ರಹವು ಅದೃಷ್ಟದ ಸ್ಥಾನಕ್ಕೆ ಹೋಗುವುದರಿಂದ, ಈ ಸಮಯದಲ್ಲಿ ನೀವು ಅದೃಷ್ಟವನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಸಹ ಪಡೆಯಬಹುದು. ನೀವು ಕೆಲವು ಕೆಲಸದ ಸಂಬಂಧ ಪ್ರಯಾಣಿಸಬೇಕಾಗಿ ಬರಬಹುದು. ಈ ಪ್ರವಾಸಗಳು ಭವಿಷ್ಯದಲ್ಲಿ ನಿಮಗೆ ಪ್ರಯೋಜನ ನೀಡುತ್ತವೆ. ಲಗ್ನದ ಮೇಲೆ ಮಂಗಳನ ದೃಷ್ಟಿಯೂ ನಡೆಯುತ್ತಿದೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಸಮಾಜದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ನಿಮ್ಮಲ್ಲಿನ ನಾಯಕತ್ವದ ಗುಣ ವೃದ್ಧಿಸಲಿದೆ.

Exit mobile version