ದಿನ ಚೆನ್ನಾಗಿರಬೇಕೆಂದರೆ (Morning Vastu Tips) ನಮ್ಮ ದಿನದ ಆರಂಭ ಚೆನ್ನಾಗಿರಬೇಕು. ಬೆಳಗ್ಗೆ ಎದ್ದಾಗ ನಮ್ಮ ಮನಸ್ಸು ಸಂತಸವಾದರೆ ದಿನ ಪೂರ್ತಿ ಸಂತಸದಲ್ಲೇ ಇರುತ್ತೇವೆ. ಆದರೆ ಮುಂಜಾನೆ ಚೆನ್ನಾಗಿರಬೇಕು ಎಂದರೆ ಕೆಲವು ಅಂಶಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ದಿನವನ್ನು ಚೆನ್ನಾಗಿ ಮಾಡಿಕೊಳ್ಳಲು ವಾಸ್ತುವಿನಲ್ಲೂ ಹಲವಾರು ಅಂಶಗಳನ್ನು ಸೂಚಿಸಲಾಗಿದೆ. ಅದರಂತೆ ನಾವು ನಡೆದುಕೊಂಡರೆ ಚಂದದ ದಿನವನ್ನು ನಮ್ಮದಾಗಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಇಲ್ಲಿದೆ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳು.
ದಿಕ್ಕು ಮುಖ್ಯ
ನಾವು ದೈನಂದಿನವಾಗಿ ಮಾಡುವ ಕೆಲವು ಕೆಲಸಗಳು ಕೆಲವು ನಿರ್ದಿಷ್ಟ ದಿಕ್ಕಿನಲ್ಲಿ ಮಾಡುವುದರಿಂದ ಅದರ ಫಲಿತಾಂಶ ಇನ್ನಷ್ಟು ಚೆನ್ನಾಗಿರುತ್ತದೆ. ಉದಾಹರಣೆಗೆ ಹಲವರು ಪ್ರತಿನಿತ್ಯ ಧ್ಯಾನ, ಯೋಗ, ದೇವರ ಪ್ರಾರ್ಥನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆ ರೀತಿ ಮಾಡುವಾಗ ಸೂರ್ಯ ಉದಯಿಸುವ ದಿಕ್ಕಾದ ಪೂರ್ವ ದಿಕ್ಕಿನತ್ತ ಮುಖ ಮಾಡಿ ಮಾಡುವುದು ಒಳ್ಳೆಯದು. ಇದರಿಂದ ಜೀವನದ ಚೈತನ್ಯ ಹೆಚ್ಚಾಗುತ್ತದೆ ಮತ್ತು ಸಕಾರಾತ್ಮಕತೆಯು ಮನಸ್ಸನ್ನು ತುಂಬಿಕೊಳ್ಳುತ್ತದೆ. ನೀವು ಇನ್ನಷ್ಟು ಯೌವನದಲ್ಲಿ ಇದ್ದಂತೆ ಭಾವಿಸಿಕೊಳ್ಳುತ್ತೀರಿ ಮತ್ತು ಎಲ್ಲ ಕೆಲಸಗಳಲ್ಲಿ ಹೆಚ್ಚು ಸಕ್ರಿಯವಾಗುತ್ತೀರಿ.
ಸೂಕ್ತ ಜಾಗ
ಬೆಳಗ್ಗೆ ಎದ್ದು ಮುಖ ತೊಳೆದು ಕೆಲ ಸಮಯ ಕುಳಿತುಕೊಂಡು ಟೀ ಅಥವಾ ಕಾಫಿ ಕುಡಿಯುವುದು ಹಾಗೆಯೇ ದಿನಪತ್ರಿಕೆ ಓದುವ ಅಭ್ಯಾಸ ಅನೇಕರಿಗೆ ಇರುತ್ತದೆ. ಈ ರೀತಿ ಬೆಳಗ್ಗಿನ ಕೆಲಸ ಮಾಡುವುದಕ್ಕೆ ನೀವು ಯಾವ ಜಾಗ ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಅತಿ ಮುಖ್ಯವಾಗುತ್ತದೆ. ಈಶಾನ್ಯ ದಿಕ್ಕು ಅಥವಾ ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಈ ಕೆಲಸಗಳನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ಹಾಗೆಯೇ ಆ ಸ್ಥಳದಲ್ಲಿ ಚೆನ್ನಾಗಿ ಸೂರ್ಯನ ಬೆಳಕು ಮತ್ತು ಗಾಳಿ ಬರುವಂತಿರಬೇಕು. ಅದರಿಂದ ನಿಮ್ಮ ಚೈತನ್ಯ ಇನ್ನಷ್ಟು ಹೆಚ್ಚುತ್ತದೆ. ಈ ರೀತಿಯ ಸ್ಥಳಗಳಲ್ಲಿ ಸಸ್ಯಗಳನ್ನು ಸ್ಫೂರ್ತಿದಾಯಕ ಚಿತ್ರಗಳನ್ನು ಇರಿಸಿ.
ಸ್ವಚ್ಛತೆಯ ಮಹತ್ವ
ವಾಸ್ತು ಶಾಸ್ತ್ರದ ಪ್ರಕಾರ ಧನಾತ್ಮಕ ಶಕ್ತಿ ಬರಬೇಕೆಂದರೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೀವು ಬೆಳಗ್ಗೆ ಎದ್ದ ತಕ್ಷಣ ಕಾಣಿಸುವ ನಿಮ್ಮ ಕೋಣೆ ಶುದ್ಧವಾಗಿರಬೇಕು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಿಮ್ಮ ಬೆಳಗು ಸುಂದರವಾಗುತ್ತದೆ. ಮನೆಯನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಂಡಿಲ್ಲವೆಂದರೆ ನಿಮಗೆ ಗೊಂದಲ ಉಂಟಾಗುತ್ತದೆ. ಹಾಗಾಗಿ ಆದಷ್ಟು ನಿಮ್ಮ ಮನೆಯನ್ನು ಶುದ್ಧವಾಗಿರಿಸಿಕೊಳ್ಳಿ. ಶುದ್ಧ ಪರಿಸರ ದೈಹಿಕ ಆರೋಗ್ಯಕ್ಕೂ ಒಳ್ಳೆಯದು. ಅದರಿಂದ ಮನಸ್ಸು ಶಾಂತವಾಗಿರಲು ಸಹಾಯವಾಗುತ್ತದೆ.
ಪಂಚಭೂತ
ನೀವು ವಾಸಿಸುವ ಸ್ಥಳಗಳಲ್ಲಿ ಕೆಲವು ವಸ್ತುಗಳನ್ನು ಇರಿಸಿಕೊಳ್ಳುವುದು ನಿಮ್ಮ ಜೀವನವನ್ನು ಇನ್ನಷ್ಟು ಚೆಂದವಾಗಿಸಲು ಸಹಕರಿಸುತ್ತವೆ. ಅದರಲ್ಲಿ ಪಂಚಭೂತಗಳಿಗೆ ಸಂಬಂಧಿಸಿದ ವಸ್ತುಗಳು ಇರುವುದು ಒಳ್ಳೆಯದು. ಉದಾಹರಣೆಗೆ ಬೆಳಗ್ಗೆ ಅಗ್ನಿಯ ಅಂಶದ ಪ್ರತಿರೂಪವಾಗಿ ದೀಪ ಬೆಳಗಿಸಬಹುದು, ಭೂಮಿಯ ಅಂಶ ಸೂಚಿಸಲು ಮರ ಅಥವಾ ಕಲ್ಲಿನಿಂದ ರಚಿಸಲಾಗಿರುವ ಯಾವುದಾದರೂ ವಸ್ತುವನ್ನು ಮನೆಯಲ್ಲಿ ಇರಿಸಿಕೊಳ್ಳಬಹುದು. ಹಾಗೆಯೇ ಜಲದ ಅಂಶವಾಗಿ ಚಂದದ ಪಾಟ್‌ನಲ್ಲಿ ನೀರು ತುಂಬಿಸಿಡಬಹುದು. ಈ ಅಂಶಗಳು ಮನೆಯಲ್ಲಿ ಧನಾತ್ಮಕ ಕಂಪನಗಳನ್ನು ಹೆಚ್ಚು ಮಾಡುತ್ತವೆ. ಇದರಿಂದ ನಿಮಗೆ ಸಕಾರಾತ್ಮಕ ಭಾವನೆ ಹೆಚ್ಚಾಗುತ್ತದೆ.
ಆರೈಕೆ
ದಿನ ಚೆನ್ನಾಗಿರಬೇಕೆಂದರೆ ಬೆಳಗಿನ ದಿನಚರಿಯಲ್ಲಿ ಸ್ವಯಂ ಆರೈಕೆಯನ್ನು ಸೇರಿಸಿಕೊಳ್ಳಬೇಕು ಎಂದು ವಾಸ್ತು ಹೇಳುತ್ತದೆ. ಉದಾಹರಣೆಗೆ ಎದ್ದೊಡನೆ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಸೇವಿಸುವುದು, ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು. ಈ ರೀತಿಯ ಅಭ್ಯಾಸ ಮನುಷ್ಯನ ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಮನಸ್ಸು ಶಾಂತವಾಗಿ ಬೇರೆ ಕೆಲಸಗಳಿಗೆ ಸಿದ್ಧವಾಗುತ್ತದೆ.
ಬಣ್ಣಗಳಿಗೂ ಇರಲಿ ಪ್ರಾಮುಖ್ಯತೆ
ಬಣ್ಣಗಳು ಮನಸ್ಸಿನ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದು. ನೀವು ಮಲಗುವ ಕೋಣೆಯ ಬಣ್ಣ ಹಳದಿ ಅಥವಾ ಕಿತ್ತಳೆ ಬಣ್ಣವಾಗಿರಲಿ. ಇದು ಶಕ್ತಿ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. ಹಾಗೆಯೇ ನೀಲಿ ಅಥವಾ ಹಸಿರು ಬಣ್ಣವನ್ನೂ ಆಯ್ಕೆ ಮಾಡಿಕೊಳ್ಳಬಹುದು. ಇದು ಶಾಂತಿ ಮತ್ತು ನೆಮ್ಮದಿಯ ಭಾವವನ್ನು ಉತ್ತೇಜಿಸುತ್ತದೆ. ನಿಮ್ಮ ರೂಮಿನ ಬಣ್ಣಕ್ಕೆ ಅನುಸಾರವಾಗಿ ಪೀಠೋಪಕರಣಗಳನ್ನು ಅಲಂಕಾರಿಕ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳಿ.
ನೈಸರ್ಗಿಕ ಬೆಳಕು ಮುಖ್ಯ
ಬೆಳಗ್ಗೆ ಎದ್ದ ತಕ್ಷಣ ಮನೆಯ ಬಾಗಿಲು, ಕಿಟಕಿಗಳನ್ನು ತೆರೆದು ಕರ್ಟನ್‌ಗಳನ್ನು ತೆರೆದಿಡಿ. ಸೂರ್ಯನ ನೈಸರ್ಗಿಕ ಬೆಳಕು ಆದಷ್ಟು ಮನೆಯೊಳಗೆ ಬರಬೇಕು. ಸೂರ್ಯನ ಬೆಳಕು ದೇಹಕ್ಕೆ ವಿಟಮಿನ್ ಡಿ ನೀಡುವುದಲ್ಲದೆ ಮನಸ್ಸನ್ನು ನಿಯಂತ್ರಿಸಲು ಸಹಕರಿಸುತ್ತದೆ.
ಸಂಗೀತದ ಪ್ರಭಾವ
ಬೆಳಗ್ಗೆ ಎದ್ದಾಗ ಮನೆಯಲ್ಲಿ ಹಿತವಾದ ಸಂಗೀತ ಹಾಕಿ. ಇದು ಮಾನಸಿಕ ಸ್ಥಿತಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಸೌಮ್ಯವಾದ ವಾದ್ಯಗಳ ಸಂಗೀತ, ಪ್ರಕೃತಿ ಶಬ್ದ ಮನಸ್ಸಿಗೆ ಧನಾತ್ಮಕ ಶಕ್ತಿ ತುಂಬುತ್ತದೆ. ಇದರಿಂದ ಮನಸ್ಸಿನ ಒತ್ತಡವೂ ಕಡಿಮೆಯಾಗುತ್ತದೆ. ಬೆಳಗ್ಗೆ ಜೋರಾದ ಶಬ್ದ ಅಥವಾ ಸಂಗೀತವನ್ನು ಕೇಳುವ ಅಭ್ಯಾಸ ಮಾಡಿಕೊಳ್ಳಬೇಡಿ.
ಇದನ್ನೂ ಓದಿ: Vastu Tips: ಅಡುಗೆ ಮನೆಗೆ ಬೇಕೇ ಬೇಕು ವಾಸ್ತು ಪುರುಷನ ಕೃಪೆ; ಯಾವ ದಿಕ್ಕಿನಲ್ಲಿ ಏನಿಡಬೇಕು?