ಗ್ರಹಗಳು ಮತ್ತು ನಕ್ಷತ್ರಗಳು ಒಂದು ನಿಶ್ಚಿತ ಸಮಯಕ್ಕೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ (Planet Transit 2023) ಮಾಡುತ್ತವೆ. ಗ್ರಹಗಳ ಈ ರೀತಿಯ ರಾಶಿ ಬದಲಾವಣೆ ಪ್ರಕೃತಿ ಮತ್ತು ಮನುಷ್ಯರ ಮೇಲೆ ನೇರ ಪರಿಣಾಮ ಬೀರುತ್ತವೆ. ಗ್ರಹಗಳ ಸಂಚಾರದಿಂದ ಪ್ರತಿ ವ್ಯಕ್ತಿಯ ಜೀವನದ ಮೇಲೂ ಶುಭಾಶುಭ ಫಲಗಳು ಉಂಟಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಸದ್ಯವೇ ಮೂರು ಗ್ರಹಗಳು ಸ್ಥಿತವಾಗಿರುವ ರಾಶಿಯಿಂದ ಬೇರೆ ರಾಶಿಗೆ ಸಂಚರಿಸಲಿವೆ. ಇದರ ಪರಿಣಾಮ ಎಲ್ಲ ರಾಶಿಗಳ ಮೇಲೂ ಆಗಲಿದೆ. ಹಾಗಾದರೆ ಯಾವ ಗ್ರಹಗಳು ಸಂಚಾರ ನಡೆಸಲಿವೆ? ಯಾವೆಲ್ಲಾ ರಾಶಿಗೆ ಇದರಿಂದ ಪರಿಣಾಮಗಳಾಗಲಿವೆ ನೋಡೋಣ.
ಫೆಬ್ರವರಿಯಲ್ಲಿ ಮೂರು ಮುಖ್ಯ ಗ್ರಹಗಳಾದ ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು ರಾಶಿ ಬದಲಾಯಿಸಲಿವೆ. ಈ ಗ್ರಹಗಳ ಸಂಚಾರದಿಂದ ಕೆಲವು ರಾಶಿಯ ವ್ಯಕ್ತಿಗಳಿಗೆ ಶುಭ ಫಲ ಸಿಗುತ್ತದೆ. ಅದೇ ಕೆಲವು ರಾಶಿಯ ವ್ಯಕ್ತಿಗಳಿಗೆ ಸಂಕಷ್ಟಗಳು ಎದುರಿಸಬೇಕಾಗಿ ಬರಬಹುದು. ರಾಶಿ ಪರಿವರ್ತನೆ ಯಾವಾಗ ಮತ್ತು ಯಾವ ರಾಶಿಯವರಿಗೆ ಲಾಭ ಎಂಬುದನ್ನು ತಿಳಿಯೋಣ.
ಬುಧಾದಿತ್ಯ ಯೋಗ ಯಾರಿಗೆ ಶುಭ?
ಗ್ರಹಗಳ ರಾಜಕುಮಾರನೆಂದೇ ಕರೆಸಿಕೊಳ್ಳುವ ಬುಧ ಗ್ರಹವು ಫೆಬ್ರವರಿ 7ರಂದು ಬೆಳಗ್ಗೆ 7:38 ನಿಮಿಷಕ್ಕೆ ಶನಿಯ ಅಧಿಪತ್ಯವಿರುವ ಮಕರ ರಾಶಿಯನ್ನು ಪ್ರವೇಶಿಸಲಿದೆ. ಮಕರ ರಾಶಿಯಲ್ಲಿ ಸೂರ್ಯ ಗ್ರಹವು ಈ ಮೊದಲೇ ಸ್ಥಿತವಾಗಿದೆ. ಹಾಗಾಗಿ ಇಲ್ಲಿ ಬುಧ ಮತ್ತು ಸೂರ್ಯ ಗ್ರಹವು ಒಂದೇ ರಾಶಿಯಲ್ಲಿ ಸ್ಥಿತವಾಗಿರುವ ಕಾರಣ ಬುಧಾದಿತ್ಯ ಯೋಗ ಉಂಟಾಗುತ್ತದೆ.
ಬುಧಾದಿತ್ಯ ಯೋಗದಿಂದಾಗಿ ಮತ್ತು ಬುಧ ಗ್ರಹವು ಮಕರ ರಾಶಿಯನ್ನು ಪ್ರವೇಶಿಸಿರುವುದರ ಪರಿಣಾಮವಾಗಿ ಮೇಷ, ವೃಷಭ, ಕಟಕ, ಕನ್ಯಾ, ತುಲಾ ಮತ್ತು ಕುಂಭ ರಾಶಿಯ ವ್ಯಕ್ತಿಗಳಿಗೆ ಅತ್ಯಂತ ಶುಭವಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಉಂಟಾಗಲಿದೆ. ಜೊತೆಗೆ ಆದಾಯದ ಮೂಲಗಳು ತೆರೆದುಕೊಳ್ಳಲಿದೆ.
ಸೂರ್ಯ ಶನಿ ಯುತಿ ಅಶುಭ
ಗ್ರಹಗಳ ರಾಜನಾದ ಸೂರ್ಯಗ್ರಹವು ಫೆಬ್ರವರಿ 13ರ ಸೋಮವಾರ ಬೆಳಗ್ಗೆ 9:57ಕ್ಕೆ ಶನಿಯ ಮೂಲ ತ್ರಿಕೋಣ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಕುಂಭ ರಾಶಿಯಲ್ಲಿ ಈ ಮೊದಲೇ ಸೂರ್ಯ ಪುತ್ರ ಶನಿ ಸ್ಥಿತನಾಗಿದ್ದಾನೆ. ಶನಿ ಮತ್ತು ಸೂರ್ಯ ಗ್ರಹವು ಕುಂಭ ರಾಶಿಯಲ್ಲಿ ಯುತಿಯಾಗಿರುವ ಕಾರಣದಿಂದ ಕೆಲವು ರಾಶಿಯ ವ್ಯಕ್ತಿಗಳಿಗೆ ಕಷ್ಟಕರ ಸಮಯ ಎದುರಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಶನಿ ಗ್ರಹದ ನಡುವೆ ಶತ್ರುತ್ವ ಇರುವ ಕಾರಣ ಈ ಗ್ರಹಗಳ ಯುತಿಯು ಅಶುಭ ಫಲವನ್ನೇ ನೀಡುತ್ತದೆ.
ಗುರು ಶುಕ್ರ ಯುತಿ ಶುಭ
ಭೌತಿಕ ಸುಖದ ಕಾರಕನಾಗಿರುವ ಶುಕ್ರ ಗ್ರಹವು ಫೆಬ್ರವರಿ 15ರ ಬುಧವಾರ ರಾತ್ರಿ 8:12 ನಿಮಿಷಕ್ಕೆ ಕುಂಭ ರಾಶಿಯಿಂದ ಲಗ್ನ ರಾಶಿಯಾದ ಮೀನ ರಾಶಿಗೆ ಪ್ರವೇಶಿಸಲಿದೆ. ಮೀನ ರಾಶಿಯಲ್ಲಿ ಈ ಮೊದಲೇ ಗುರು ಗ್ರಹ ಸ್ಥಿತವಾಗಿರುವ ಕಾರಣ ಗುರು ಮತ್ತು ಶುಕ್ರ ಗ್ರಹದ ಯುತಿ ಉಂಟಾಗಲಿದೆ. ಇದರಿಂದ ಮೇಷ, ವೃಷಭ, ಕಟಕ, ಮಿಥುನ, ಸಿಂಹ, ವೃಶ್ಚಿಕ, ಮಕರ, ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಅತ್ಯಂತ ಲಾಭ ಉಂಟಾಗಲಿದೆ.
ಒಟ್ಟಾರೆಯಾಗಿ ಫೆಬ್ರವರಿಯಲ್ಲಿ ನಡೆಯಲಿರುವ ಗ್ರಹಗಳ ಸಂಚಾರದಿಂದ ವೃಷಭ, ಮಿಥುನ, ಸಿಂಹ, ತುಲಾ, ಮಕರ ಮತ್ತು ಕುಂಭ ರಾಶಿಯ ವ್ಯಕ್ತಿಗಳಿಗೆ ಅತ್ಯಂತ ಶುಭ ಫಲ ಪ್ರಾಪ್ತವಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ವ್ಯಾಪರದಲ್ಲಿ ಉತ್ತಮ ಲಾಭ ಮತ್ತು ಉದ್ಯೋಗದಲ್ಲಿ ವೇತನ ಹೆಚ್ಚಾಗುವ ಸಾಧ್ಯತೆ ಇದೆ.
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ಗ್ರಹ ಗೋಚಾರಾ ಪರಿಹಾರ
ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ಉಂಟಾಗುವ ಅಶುಭ ಪ್ರಭಾವದಿಂದ ಪಾರಾಗಲು ಆಂಜನೇಯನನ್ನು ಸ್ಮರಿಸಬೇಕು ಮತ್ತು ಪೂಜಿಸಬೇಕು. ಜೊತೆಗೆ ಹನುಮಾನ್ ಚಾಲೀಸಾ ಪಠಿಸಬೇಕು. ಶಿವ ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದು ಉತ್ತಮ. ಅಷ್ಟೇ ಅಲ್ಲದೇ ಮಹಾಮೃತ್ಯುಂಜಯ ಮಂತ್ರ ಮತ್ತು ದುರ್ಗಾ ಸಪ್ತಶತಿ ಪಾರಾಯಣ ಮಾಡುವುದು ಉತ್ತಮ. ಇದರಿಂದ ಕಷ್ಟಗಳು ನಿವಾರಣೆಯಾಗುತ್ತವೆ.
ಇದನ್ನೂ ಓದಿ : Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?