ಸಾವಿರಾರು ವರ್ಷಗಳಿಂದ ಕೋಟಿ ಕೋಟಿ ಜನರಿಗೆ ಸಂಸ್ಕಾರ, ಸಂಸ್ಕೃತಿ, ಸದಾಚಾರ, ಸದ್ವಿಚಾರ, ಸದ್ಗುಣ, ಧರ್ಮದ ಮೌಲ್ಯಗಳನ್ನು ನೀಡುತ್ತಾ ಸುಸಂಸ್ಕೃತ ಸಮಾಜದ ನಿರ್ಮಾಣ ಕಾರ್ಯಕ್ಕೆ ಆದರ್ಶರಾಗಿರುವವರು ಮರ್ಯಾದಾ ಪುರುಷೋತ್ತಮ ಶ್ರೀರಾಮ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದಲ್ಲಿ ಶ್ರೀರಾಮಚಂದ್ರನ ಪ್ರತಿಷ್ಠಾಪನೆ (Ram Mandir) ನಡೆಯುತ್ತಿರುವ ಹೊತ್ತಿನಲ್ಲಿ ಇಡೀ ದೇಶದ ಜನರ ಬದುಕಿನ ಮೇಲೆ ಶ್ರೀರಾಮ (Bhagawan Rama) ಒಂದಲ್ಲಾ ಒಂದು ರೀತಿಯ ಪರಿಣಾಮ ಬೀರುವುದಂತೂ ಖಚಿತ.
ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜನವರಿ 22 ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದೆ. ಮೃಗಶಿರ ನಕ್ಷತ್ರ ಮತ್ತು ಅಮೃತ ಸಿದ್ಧಿಯೋಗ ಮತ್ತು ಸರ್ವತಾ ಸಿದ್ಧಿ ಯೋಗ ಸಮಯವು ಇರುವುದರಿಂದ ಈ ದಿನವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯ್ಕೆಮಾಡಿಕೊಂಡಿದೆ.
ಇದು ಅತ್ಯಂತ ಶುಭ ದಿನ:
ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಭಿಜಿತ್ ಮುಹೂರ್ತವನ್ನು ಅತ್ಯಂತ ಶುಭ ಮುಹೂರ್ತ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಯಾವುದೇ ನಕ್ಷತ್ರ ಬದಲಾವಣೆಯ 24 ನಿಮಿಷಗಳ ಮೊದಲು ಮತ್ತು ನಂತರದ ಅವಧಿಯನ್ನು ಅಭಿಜಿತ್ ಮುಹೂರ್ತ ಎಂದು ಕರೆಯಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 12 ರಿಂದ 12.30ರ ಒಳಗಿನ ಈ 20ರಿಂದ 30 ನಿಮಿಷಗಳ ಕಾಲ ಈ ಮುಹೂರ್ತ ಇರುತ್ತದೆ. ಅಭಿಜಿತ್ ಮುಹೂರ್ತ ಲಗ್ನಕ್ಕೆ ದಶಮದಲ್ಲಿ ಸೂರ್ಯ ಬರುವುದರಿಂದ, ಸೂರ್ಯನು ದಶಮದಲ್ಲಿ ದಿಗ್ಬಲನಾಗಿರುವುದರಿಂದ ಈ ಅಭಿಜಿನ್ಮಹೂರ್ತಕ್ಕೆ ಬಲವಿರುತ್ತದೆ. ಹಾಗಾಗಿ ಈ ಮಹೂರ್ತ ಶ್ರೇಷ್ಠ ಎನ್ನಲಾಗಿದೆ. ಶುಭ ಕಾರ್ಯಕ್ಕೆ ಉತ್ತಮ ಮುಹೂರ್ತವಿಲ್ಲದಿದ್ದರೆ ಮಂಗಳಕರವಾದ ಅಭಿಜಿತ್ ಮುಹೂರ್ತದಲ್ಲಿ ಈ ಕಾರ್ಯ ಮಾಡಬಹುದು.
ಇದನ್ನೂ ಓದಿ : Ram Mandir: ರಾಮಮಂದಿರ ಪ್ರತಿಷ್ಠಾಪನೆ ದಿನವನ್ನು ರಾಮನವಮಿಯಂತೆ ಆಚರಿಸಿ: ರವಿಶಂಕರ್ ಗುರೂಜಿ
ಮೃಗಶಿರಾ ನಕ್ಷತ್ರ:
ಜನವರಿ 22ರ ಸೋಮವಾರ ಮೃಗಶಿರಾ ನಕ್ಷತ್ರವಿದೆ. ಈ ನಕ್ಷತ್ರವನ್ನು ಅತ್ಯಂತ ಪರಿಶುದ್ಧ ನಕ್ಷತ್ರವೆಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಶ್ರೀರಾಮನನ್ನು ʻಶ್ರೀರಾಮಚಂದ್ರʼ ಎಂದೇ ಕರೆಯುವುದರಿಂದ, ಚಂದ್ರನ ನಕ್ಷತ್ರದಂದೆ ಈ ಶುಭ ಕಾರ್ಯ ನಡೆಸಲಾಗುತ್ತಿದೆ.
ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ಶ್ರೀರಾಮನಾಮವನ್ನು ಜಪಿಸಬೇಕೆಂದು ಕರೆ ನೀಡಲಾಗಿದೆ. ಎಲ್ಲರೂ ಶ್ರೀರಾಮನಾಮ ಜಪಿಸುವುದರ ಮೂಲಕ ಹೆಚ್ಚಿನ ಲಾಭ ಪಡೆಯಬಹುದು.
ಯಾವ ರಾಶಿಯವರಿಗೆ ಏನು ಫಲ?:
ಶ್ರೀ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ರಾಮನಾಮ ಜಪಿಸುವುದರಿಂದ ಪ್ರತಿಯೊಬ್ಬರಿಗೂ ಒಳಿತಾಗಲಿದೆ. ಇದು ಧಾರ್ಮಿಕವಾಗಿ ಐತಿಹಾಸಿಕ ಘಟನೆಯಾಗಿರುವುದರಿಂದ ಇದರಿಂದ ದೇಶಕ್ಕೇ ಒಳಿತಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ದ್ವಾದಶಿಯಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೂ ಮಹತ್ವದ ದಿನವಾಗಿದೆ. ಅಂದು ಸಾಮೂಹಿಕವಾಗಿ ರಾಮನಾಮ ಜಪ ನಡೆಯುತ್ತಿದೆ. ಸಾಮೂಹಿಕ ಪ್ರಾರ್ಥನೆಗೆ ದೇವರನ್ನೂ ಧರೆಗಿಳಿಸುವ ಶಕ್ತಿ ಇದೆಯೆಂಬುದು ಈ ಹಿಂದೆಯೇ ಸಾಬೀತಾಗಿದೆ. ರಾಮಾವತಾರವಾಗಿದ್ದು ಕೂಡ ಸಾಮೂಹಿಕ ಪ್ರಾರ್ಥನೆಯ ಫಲವೇ. ಹೀಗಾಗಿ ಶ್ರೀರಾಮನ ಪ್ರತಿಷ್ಠಾಪನೆ ಮತ್ತು ಸಾಮೂಹಿಕ ಪ್ರಾರ್ಥನೆ ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ:
ಮೇಷ: ರಾಮನಾಮ ಜಪದಿಂದ ಮೇಷ ರಾಶಿಯವರಿಗೆ ಉತ್ತಮ ಫಲ ದೊರೆಯಲಿದೆ. ಶನಿಯ ಪ್ರಭಾವದಿಂದಾಗಿ ಶ್ರೀರಾಮನಂತೆ ವ್ಯಕ್ತಿತ್ವ ನನವಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಆರೋಗ್ಯದ ಮೇಲೂ ಕರಿ ನೆರಳು ಬೀಳಲಿದೆ. ಇದರಿಂದ ಏನು ಅಂದುಕೊಂಡಿರುತ್ತೀರೋ ಅದು ಸಾಧಿಸಲು ಸಾಧ್ಯವಾಗದೇ ಹೋಗಬಹುದು. ಈ ರಾಶಿಯ ಅಧಿಪತಿ ಕುಜ, ಮೇ ನಂತರ ಗುರು ಬಲವೂ ಇರುವುದರಿಂದ ಆರ್ಥಿಕವಾಗಿ ಸಬಲರಾಗಬಹುದು.
ವೃಷಭ: ಚಂದ್ರ ನಿಮ್ಮ ಜಾತಕದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಾನೆ ಎನ್ನುವುದನ್ನು ಗಮನಿಸಿದರೆ ನಿಮ್ಮ ರಾಶಿಯ ಸಂಪೂರ್ಣ ಭವಿಷ್ಯವನ್ನು ತಿಳಿಯಬಹುದು. ಏನೇ ಅಗಿದ್ದರೂ ಶ್ರೀರಾಮಚಂದ್ರನ ಸ್ಮರಣೆ, ಜಪ ನಿಮಗೆ ಒಳಿತನ್ನುಂಟು ಮಾಡಲಿದೆ. ಈ ರಾಶಿಯವರಿಗೆ ಉದ್ಯೋಗದ ಸ್ಥಳದಲ್ಲಿ ಅನುಕೂಲ ವಾತಾವರಣ ನಿರ್ಮಾಣವಾಗಲಿದೆ. ಭಡ್ತಿ ಸಿಗುವ ಸಾಧ್ಯತೆಯೂ ಇದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ರಾಮನಾಮ ಜಪವನ್ನು ಪ್ರತಿನಿತ್ಯ ಮಾಡುವುದರಿಂದ ಒಳಿತು ಹೆಚ್ಚು.
ಮಿಥುನ: ಮಿಥುನ ರಾಶಿಯ ಅಧಿಪತಿ ಚಂದ್ರ. ಶ್ರೀರಾಮಚಂದ್ರನ ಜಪ ಇವರಿಗೆ ಒಳಿತನ್ನೇ ಮಾಡಲಿದೆ. ಆದರೆ ಕೇತು ಈ ರಾಶಿಯವರಿಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಯಾವುದೇ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ಆದ್ದರಿಂದ ಯಾವುದೇ ಸಂಗತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಯೋಚಿಸಿ, ಶ್ರೀರಾಮಚಂದ್ರನ ಸ್ಮರಣೆ ಮಾಡಿ. ಈ ರಾಶಿಯವರಿಗೆ ಆರ್ಥಿಕವಾಗಿ ಸಾಕಷ್ಟು ಲಾಭವಾಗುವ ಅವಕಾಶಗಳನ್ನು ಶ್ರೀರಾಮ ಚಂದ್ರ ಒದಗಿಸುತ್ತಾನೆ.
ಕಟಕ: ಇದು ಶ್ರೀರಾಮಚಂದ್ರನ ರಾಶಿ. ಈ ರಾಶಿಯವರಿಗೆ ಅಷ್ಟಮ ಶನಿ ಕಾಟ ನಡೆಯುತ್ತಿದೆ. ಹೀಗಾಗಿ ಶ್ರೀರಾಮರ ಸ್ಮರಣೆಗೆ ಸಾಕಷ್ಟು ಕಾರಣಗಳಿವೆ. ಸಾಧ್ಯವಾದರೆ ಪ್ರತಿನಿತ್ಯ ಶ್ರಿರಾಮಚಂದ್ರನ ದರ್ಶನ ಮಾಡಿದರೆ ಒಳಿತು. ಮೇ ನಂತರ ಈ ರಾಶಿಯವರಿಗೆ ಗುರುಬಲ ಸಿಗಲಿದೆ. ಕೇತು ಸಕಾರಾತ್ಮಕ ಶಕ್ತಿಯಿಂದ ವಿಘ್ನವನ್ನು ನಿವಾರಿಸುತ್ತಾನೆ. ಆರೋಗ್ಯದ ಬಗೆಗೆ ಕಾಳಜಿ ವಹಿಸಬೇಕು. ನೀರಿನ ವಿಚಾರದಲ್ಲಿ ಕೆಲವು ಗಂಡಾಂತರ ಎದುರಾಗಬಹುದು. ಗುರುಬಲ ಬಂದ ನಂತರ ಒಳಿತಾಗಲಿದೆ.
ಸಿಂಹ: ಶ್ರೀರಾಮನಾಮ ಜಪದಿಂದ ಸಿಂಹ ರಾಶಿಯವರು ರಾಜಕಾರಣದಲ್ಲಿ ಉನ್ನತ ಸ್ಥಾನ ಗಳಿಸುವ ಸಾಧ್ಯತೆ ಇದೆ. ಆದರೆ ಯಾವ ಕ್ಷೇತ್ರದಲ್ಲಿಯೂ ಸುಲಭವಾಗಿ ಯಶಸ್ಸು ಲಭಿಸುವುದಿಲ್ಲ. ಇದಕ್ಕಾಗಿ ಶ್ರೀರಾಮನಂತೆ ಬಹಳ ಶ್ರಮ ಪಡಬೇಕಾಗುತ್ತದೆ. ಹಣ ಖರ್ಚಾಗುತ್ತದೆ. ಮಾತಿನ ವಿಚಾರದಲ್ಲಿ ಬಹಳಷ್ಟು ನಿಗಾ ವಹಿಸಬೇಕು. ಸದ್ಯ ಗುರುಬಲ ಇರುವುದರಿಂದ ಒಂದಷ್ಟು ಶುಭಫಲ ದೊರೆಯಲಿದೆ. ಕೆಲಸದ ವಿಚಾರದಲ್ಲಿ ಮುತುವರ್ಜಿ ವಹಿಸಿದರೆ ಆರ್ಥಿಕವಾಗಿ ಸಬಲರಾಗಬಹುದು.
ಕನ್ಯಾ: ಎಲ್ಲ ವಿಚಾರಗಳಲ್ಲಿಯೂ ದ್ವಂದ್ವದಲ್ಲಿಯೇ ಹೆಜ್ಜೆ ಇಡುತ್ತಿರುವ ಈ ರಾಶಿಯವರಿಗೆ ಶ್ರೀರಾಮನಾಮ ಜಪದಿಂದ ದಾರಿ ಸ್ಪಷ್ಟವಾಗಲಿದೆ. ಮಾತು ತೊಂದರೆಗೆ ಕಾರಣವಾಗಲಿರುವುದರಿಂದ ಶ್ರೀರಾಮ ನಾಮ ಸ್ಮರಣೆಯೊಂದಿಗೇ ತಮ್ಮ ಯೋಚನೆಗಳನ್ನು ಹರಿಯ ಬಿಡುವುದು ಒಳಿತು. ಹಾಣಕಾಸಿನ ಅದರಲ್ಲಿಯೂ ಸಾಲದ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು. ಉದ್ಯೋಗ ಮತ್ತು ಉದ್ಯಮದಲ್ಲಿ ಎಚ್ಚರಿಕೆಯ ಹೆಜ್ಜೆಗಳನಿಟ್ಟರೆ ಮುಂದಿನ ದಿನಗಳು ಉತ್ತಮವಾಗಿರುವುದರಲ್ಲಿ ಅನುಮಾನವಿಲ್ಲ.
ತುಲಾ: ಪಂಚಮ ಶನಿ ಕಾಟದಲ್ಲಿರುವ ಈ ರಾಶಿಯವರಿಗೆ ಶ್ರೀರಾಮ ನಾಮ ಸ್ಮರಣೆ ರಕ್ಷೆಯನ್ನು ನೀಡುತ್ತದೆ. ಗುರುಬಲವಿದ್ದರೂ ನಿರೀಕ್ಷಿತ ಸುಖ ಸಿಗದೇ ಇರುವುದರಿಂದ ಶ್ರೀರಾಮ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುವುದು ಅವಶ್ಯ. ವ್ಯಾಪಾರ- ವ್ಯವಹಾರಗಳಲ್ಲಿ ಲಾಭ ಕಡಿಮೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ತುಲಾ ರಾಶಿಯವರು ತಾಳ್ಮೆಯನ್ನು ರೂಢಿಸಿಕೊಳ್ಳಬೇಕು. ಕಷ್ಟಗಳನ್ನು ಎದುರಿಸುವ ಮನೋಭಾವ ಮೂಡಿಸಿಕೊಳ್ಳಬೇಕು. ಶ್ರೀರಾಮನಂತೆ ಸಹನೆ ಹೊಂದಿರಬೇಕು.
ವೃಶ್ಚಿಕ: ಸತತವಾಗಿ ಶ್ರೀರಾಮನಾಮ ಜಪದಿಂದ ವೃಶ್ಚಿಕ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಮೇ ನಂತರ ಗುರುಬಲ ಇವರಿಗೆ ಯಶಸ್ಸು ತಂದುಕೊಡಲಿದೆ. ಕೇತು ಕೂಡ ಒಳಿತನ್ನೇ ಮಾಡಲಿದ್ದಾನೆ. ಸೋಲನ್ನೇ ಅನುಭವಿಸಿದವರಿಗೆ ಒಳಿತು ಕಂಡು ಬರಲಿದೆ. ಅಂದುಕೊಂಡದ್ದನ್ನು ಸುಲಭವಾಗಿ ಸಾಧಿಸಬಹುದು. ಆರ್ಥಿಕವಾಗಿಯೂ ಸದೃಢವಾಗಬಹುದು. ಒಟ್ಟಾರೆ ಶ್ರೀರಾಮ ಧ್ಯಾನ ಶುಭಫಲ ಕೊಡಲಿದೆ. ರಾಜಕಾರಣಿಗಳಿಗೂ ಉತ್ತಮ ಫಲಿತಾಂಶ ಲಭಿಸಲಿದೆ.
ಧನಸ್ಸು: ನಿರಂತರವಾಗಿ ಶ್ರೀರಾಮ ನಾಮ ಜಪದಿಂದ ಈ ರಾಶಿಯವರಿಗೆ ಒಳಿತು ಕಂಡು ಬರಲಿದೆ. ಈಗಾಗಲೇ ಗುರುಬಲ ಹೊಂದಿರುವ ಈ ರಾಶಿಯವರಿಗೆ ಶ್ರೀರಾಮನಾಮ ಸ್ಮರಣೆ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುತ್ತದೆ. ಬುಧನ ಕಾರಣಕ್ಕೆ ಎದುರಾಗಬಹುದಾದ ತೊಂದರೆಗಳಿಗೆ ಶ್ರೀರಾಮನೇ ಮದ್ದು. ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆಯಿಂದ ಇರಬೇಕು. ಉದ್ಯೋಗ ರಂಗದಲ್ಲಿ ಒತ್ತಡ ಎದುರಾಗಬಹುದು. ಒಟ್ಟಿನಲ್ಲಿ ಈ ರಾಶಿಯವರಿಗೆ ಶ್ರೀರಾಮ ಮಿಶ್ರಫಲ ನೀಡಲಿದ್ದಾನೆ.
ಮಕರ: ಈ ರಾಶಿಯವರಿಗೆ ಶ್ರೀರಾಮ ನಾಮ ಸ್ಮರಣೆಯಿಂದ ಶನಿಯ ಪ್ರೀತಿ ಗಳಿಸಲು ಅವಕಾಶ ಒದಗಿ ಬಂದಿದೆ. ಜತೆಗೆ ಚಂದ್ರನ ಕಾಟವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ದಾಂಪತ್ಯ ವಿಚಾರದಲ್ಲಿ ವಿರಸ ಮೂಡುವ ಸಾಧ್ಯತೆಗಳಿದ್ದು, ಇದಕ್ಕೂ ರಾಮನಾಮ ಜಪವೇ ಪರಿಹಾರ. ನೀವು ಕೆಲಸದ ವಿಚಾರದಲ್ಲಿ ಅದೃಷ್ಟಶಾಲಿಗಳಾಗಿರುತ್ತೀರಿ. ನಿಮಗೆ ದೇವಿಯ ರೂಪದಲ್ಲಿ ಅನುಗ್ರಹ ಸಿಗಲಿದೆ. ಕಷ್ಟವನ್ನು ಧೈರ್ಯದಿಂದ ಎದುರಿಸಿದರೆ ಮುಂದೆ ಒಳಿತಾಗಲಿದೆ. ಸಾಧ್ಯವಾದರೆ ಪ್ರತಿನಿತ್ಯ ಶ್ರೀರಾಮ ದೇಗುಲಕ್ಕೆ ಭೇಟಿ ನೀಡಿ.
ಕುಂಭ: ಶನಿ ಕಾಟದಿಂದ ತತ್ತರಿಸಿರುವ ನಿಮಗೆ ಶ್ರೀರಾಮಚಂದ್ರ ದಾರಿ ತೋರಿಸಲಿದ್ದಾನೆ. ನೀವು ಅನುಭವಿಸುವ ತೊಳಲಾಟಕ್ಕೆ ಶ್ರೀರಾಮನಾಮ ಜಪವೇ ಮದ್ದು. ಶ್ರೀರಾಮನ ಒಲುಮೆಯಿಂದಾಗಿ ಬುಧನ ಮೂಲಕ ಸ್ವಲ್ಪ ಮಟ್ಟಿನ ಸಮಾಧಾನ ದೊರೆಯಲಿದೆ. ಅಳೆದು ತೂಗಿ ನಿರ್ಧಾರವನ್ನು ತೆಗೆದುಕೊಳ್ಳಿ. ಯಾವುದೇ ಸಂದರ್ಭದಲ್ಲಿಯೂ ಧೈರ್ಯಗೆಡಬಾರದು. ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಆರ್ಥಿಕ ವಿಚಾರವಾಗಿ ಅವಮಾನ ಎದುರಿಸಬೇಕಾದ ಸಂದರ್ಭ ಬರಬಹುದು, ಎಚ್ಚರದಿಂದಿರಿ.
ಮೀನ: ಶನಿಕಾಟದ ಹೊಸ್ತಿಲಲ್ಲಿರುವ ನಿಮಗೆ ಶ್ರೀರಾಮ ದಯೆ ತೋರಲಿದ್ದಾನೆ. ಪ್ರತಿನಿತ್ಯ ಶ್ರೀರಾಮ ಸ್ಮರಣೆ ಮಾಡಿ. ಸತ್ಯವನ್ನೇ ಹೇಳಿದರು ಕೆಲವರು ನಂಬದೇ ಇರಬಹುದಾದ ಸಂದರ್ಭ. ಇಂತಹ ಪರಿಸ್ಥಿತಿಯಲ್ಲಿ ಶ್ರೀರಾಮನೇ ನಿಮಗೆ ಮಾರ್ಗದರ್ಶಕ. ನಿಮ್ಮ ಬಾಳ ಸಂಗಾತಿಯ ಆರೋಗ್ಯಕ್ಕೆ ವಿಚಿತ್ರ ತೊಂದರೆ ಎದುರಾಗಲಿದೆ. ಹೀಗಾಗಿ ಆರೋಗ್ಯದ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು. ರಾಮೇಶ್ವರನನ್ನು ಪ್ರಾರ್ಥಿಸುವ ಮೂಲಕ ಸಂಕಷ್ಟದಿಂದ ಪಾರಾಗಬಹುದು. ಋಣಾತ್ಮಕವಾಗಿ ಆಲೋಚಿಸುವುದನ್ನು ಬಿಟ್ಟು ಬಿಡಬೇಕು.