Site icon Vistara News

Saturn Astrology : ಈ ಮೂರು ರಾಶಿಯವರಿಗೆ ಸದಾ ಇರಲಿದೆ ಶನಿ ದೇವರ ಕೃಪೆ!

shani jayanti 2023 importance-and-Significance of shani devaru in kannada

lord shani dev effects on zodiac signs

ಶನಿಯನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ಅನುಸಾರವಾಗಿ ಫಲ ನೀಡುತ್ತಾನೆ (Saturn Astrology). ಒಳ್ಳೆಯ ಕೆಲಸ ಮಾಡಿದರೆ, ಶನಿದೇವರು ಆ ಮನುಷ್ಯನಿಗೆ ಸುಖ ಸಂತೋಷ ದಯಪಾಲಿಸುತ್ತಾನೆ. ಅದೇ ರೀತಿ ಕೆಟ್ಟ ಕೆಲಸ ಮಾಡುವ ವ್ಯಕ್ತಿ ಶನಿದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿಯೇ ಶನಿ ದೇವರೆಂದರೆ ಎಷ್ಟು ಭಕ್ತಿಯೋ ಅಷ್ಟೇ ಭಯವೂ ಇರುತ್ತದೆ.

ಬೇರೆ ಎಲ್ಲ ಗ್ರಹಗಳಿಗೆ ಹೋಲಿಸಿದಾಗ ಶನಿ ಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಹಾಗಾಗಿ ಶನಿಯಿಂದ ಸಿಗುವ ಶುಭ ಅಥವಾ ಅಶುಭ ಫಲಗಳ ಪ್ರಭಾವ ಹೆಚ್ಚು ದಿನಗಳ ವರೆಗೆ ಇರುತ್ತವೆ. ಶನಿಯನ್ನು ‘ಶನೈಚ್ಚರ’ ಎಂದೂ ಕರೆಯಲಾಗುತ್ತದೆ ‘ಚರ’ ಎಂದರೆ ಮಂದ ಗತಿಯಲ್ಲಿ ಸಾಗುವವನು ಎಂದು ಅರ್ಥ.

ವ್ಯಕ್ತಿಯ ಜಾತಕದಲ್ಲಿ ಶನಿ ಗ್ರಹವು ಅಶುಭ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಅಂತವರು ಅನೇಕ ರೀತಿಯ ಕಷ್ಟಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಅದೇ ಶುಭ ಸ್ಥಾನದಲ್ಲಿ ಸ್ಥಿತವಾದರೆ ಅಂಥ ವ್ಯಕ್ತಿಗಳ ಅದೃಷ್ಟವೇ ಬದಲಾಗುತ್ತದೆ. ಅಂಥವರು ಅನೇಕ ಶುಭ ಪ್ರಭಾವಗಳನ್ನು ಕಾಣುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಗಳಲ್ಲಿ ಈ ಮೂರು ರಾಶಿಗಳ ಮೇಲೆ ಶನಿ ದೇವರ ವಿಶೇಷ ಕೃಪೆ ಇರುತ್ತದೆ. ಸಾಡೇಸಾತಿ ಅಥವಾ ಅರ್ಧಾಷ್ಟಮದ ಸಮಯದಲ್ಲೂ ಈ ರಾಶಿಯವರಿಗೆ ಶನಿ ದೇವರು ಹೆಚ್ಚಿನ ಕಷ್ಟ ನೀಡುವುದಿಲ್ಲ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ತುಲಾ ರಾಶಿ

ಶನಿ ದೇವರಿಗೆ ಪ್ರಿಯವಾದ ರಾಶಿಗಳಲ್ಲಿ ತುಲಾ ರಾಶಿಯು ಸಹ ಒಂದು. ಈ ರಾಶಿಯಲ್ಲಿ ಶನಿ ಗ್ರಹವು ಉಚ್ಛ ಸ್ಥಾನದಲ್ಲಿ ಸ್ಥಿತವಾಗಿರುತ್ತದೆ. ಹಾಗಾಗಿ ಈ ರಾಶಿಯವರ ಮೇಲೆ ಶನಿ ದೇವರಿಗೆ ವಿಶೇಷ ಕೃಪೆ ಇರುತ್ತದೆ. ಈ ರಾಶಿಯ ವ್ಯಕ್ತಿಗಳಿಗೆ ಶನಿ ದೇವರು ಕಾರ್ಯಗಳಲ್ಲಿ ಸಫಲತೆಯನ್ನು, ಜೀವನದಲ್ಲಿ ಸಂತೋಷವನ್ನು ನೀಡುತ್ತಾನೆ. ತುಲಾ ರಾಶಿಯ ವ್ಯಕ್ತಿಗಳಿಗೆ ಕಷ್ಟಗಳು ಎದುರಾದರೂ ಅದು ಹೆಚ್ಚು ದಿನಗಳವರೆಗೆ ಇರುವುದಿಲ್ಲ. ಈ ರಾಶಿಯವರ ಅದೃಷ್ಟ ಚೆನ್ನಾಗಿ ರುತ್ತದೆ. ಜೊತೆಗೆ ತುಲಾ ರಾಶಿಯ ವ್ಯಕ್ತಿಗಳು ಹೆಚ್ಚು ಪರಿಶ್ರಮದಿಂದ ಕೆಲಸ ಕಾರ್ಯಗಳನ್ನು ಮಾಡುವವರಾಗಿರುತ್ತಾರೆ. ಹಾಗಾಗಿ ಶನಿ ಕೃಪೆ ಇವರ ಮೇಲೆ ಸದಾ ಇರುತ್ತದೆ.

ಮಕರ ರಾಶಿ

ಮಕರ ರಾಶಿಯ ಅಧಿಪತಿ ಗ್ರಹ ಶನಿ ಗ್ರಹವೇ ಆಗಿದೆ. ಹಾಗಾಗಿ ಶನಿ ದೇವರ ಅಶುಭ ಪ್ರಭಾವ ಅಷ್ಟಾಗಿ ಈ ರಾಶಿಯವರ ಮೇಲೆ ಬೀಳುವುದಿಲ್ಲ. ಅಧಿಪತ್ಯ ಶನಿ ಗ್ರಹದ್ದೇ ಆಗಿರುವ ಕಾರಣ ಶನಿ ಗ್ರಹವು ಈ ರಾಶಿಯ ವ್ಯಕ್ತಿಗಳ ಜಾತಕದಲ್ಲಿ ಶುಭ ಸ್ಥಾನದಲ್ಲಿಯೇ ಸ್ಥಿತನಾಗಿರುತ್ತಾನೆ. ಮಕರ ರಾಶಿಯ ವ್ಯಕ್ತಿಗಳು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಫಲತೆಯನ್ನು ಕಾಣುತ್ತಾರೆ. ಪರಿಶ್ರಮದ ಜೊತೆಗೆ ಇವರಿಗೆ ಅದೃಷ್ಟವು ಕೈ ಹಿಡಿಯುತ್ತದೆ. ಹಾಗಾಗಿ ಅಂದುಕೊಂಡ ಕಾರ್ಯಗಳು ಬಹುಬೇಗ ಸಂಪೂರ್ಣವಾಗುತ್ತವೆ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಕುಂಭ ರಾಶಿ

ಶನಿ ಗ್ರಹವೇ ಕುಂಭ ರಾಶಿಗೂ ಅಧಿಪತಿ ಗ್ರಹವಾಗಿದೆ. ಕುಂಭ ಮತ್ತು ಮಕರ ಈ ಎರಡು ರಾಶಿಗಳ ಅಧಿಪತಿ ದೇವರು ಶನಿ ಗ್ರಹವೇ ಆಗಿದೆ. ಶನಿಯು ತನ್ನ ವಿಶೇಷ ಕೃಪೆಯಿಂದ ಈ ರಾಶಿಯ ವ್ಯಕ್ತಿಗಳ ಜೀವನದಲ್ಲಿ ಅದೃಷ್ಟ ಒಲಿಯುವಂತೆ ಮಾಡುತ್ತಾನೆ. ಕುಂಭ ರಾಶಿಯ ವ್ಯಕ್ತಿಗಳಿಗೆ ಶನಿ ದೇವರ ಕೃಪೆಯ ಜೊತೆಗೆ ಲಕ್ಷ್ಮೀ ದೇವಿಯ ಆಶೀರ್ವಾದವೂ ಸಹ ಲಭಿಸಿರುತ್ತದೆ. ಈ ರಾಶಿಯ ವ್ಯಕ್ತಿಗಳ ವಿಶೇಷವೆಂದರೆ, ಇವರಿಗೆ ಯಾವುದೇ ಕೆಲಸಕ್ಕಾದರೂ ಯಶಸ್ಸು ಸಿಗಲು ಕಡಿಮೆ ಶ್ರಮ ಸಾಕಾಗುತ್ತದೆ. ಶನಿ ದೇವರ ಕೃಪೆ ಇರುವ ಕಾರಣ ಇವರಿಗೆ ಅಕಸ್ಮಾತ್ ಧನಲಾಭ ಸಹ ಆಗುತ್ತದೆ. ಹಾಗಾಗಿ ಈ ರಾಶಿಯವರ ಮೇಲೆ ಶನಿ ದೇವರ ಶುಭ ಪ್ರಭಾವ ಸದಾ ಇರುತ್ತದೆ.

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version