Site icon Vistara News

Shani Gochar 2023 | ಮಕರದಿಂದ ಕುಂಭಕ್ಕೆ ಶನಿ ಸಂಚಾರ; ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು? ಪರಿಹಾರವೇನು?

Shani Gochar 2023

ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು
ಶನಿ ಕರ್ಮಫಲದಾತ (Shani Gochar 2023). ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹ. ಚಂದ್ರನಿಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಎರಡೂವರೆ ದಿನ ಸಾಕಾದರೆ ಶನಿಗೆ ಎರಡೂ ವರೆ ವರ್ಷ ಬೇಕಾಗುತ್ತದೆ. ಹೀಗಾಗಿ ಶನೈಶ್ಚರ ಎಂದು ಕರೆಯುತ್ತಾರೆ. ಇಲ್ಲಿ ʼಶನೈಹಿʼ ಎಂದರೆ ನಿಧಾನವಾಗಿ “ಚರತಿʼ ಎಂದರೆ ಚಲಿಸುವವನು “ಶನೈಹಿ ಚರತಿ ಯಃʼ ಎಂದರೆ “ಶನೈಶ್ಚರʼ ಎಂದು. ಕೆಲವರು ಶನೈಶ್ವರ ಎಂದು ಕರೆಯುತ್ತಾರೆ, ಇದು ತಪ್ಪು.

ತನ್ನ ಸ್ವಂತ ಮನೆಯಲ್ಲಿ ಅಂದರೆ ಮಕರ ರಾಶಿಯಲ್ಲಿದ್ದ ಶನಿಯು ಜನವರಿ 17 ರಂದು ಅಂದರೆ ಇಂದು ಕುಂಭ ರಾಶಿಗೆ ಹೋಗುತ್ತಾನೆ (Shani Gochar 2023). ಧನಿಷ್ಠ ನಕ್ಷತ್ರದಲ್ಲಿ ಈ ಸಂಚಾರ ನಡೆಯುತ್ತಿದೆ. 2025ರ ಏಪ್ರಿಲ್‌ 30 ರವರೆಗೆ ಕುಂಭ ರಾಶಿಯಲ್ಲಿಯೇ ಇನ್ನು ಶನಿ ಇರುತ್ತಾನೆ.

ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಇದ್ದೇ ಇರುತ್ತದೆ. ಜನ್ಮ ಲಗ್ನ, ಜನ್ಮ ರಾಶಿಯನ್ನು ನೋಡಿಕೊಂಡು ಯಾವ ರಾಶಿಯ ಮೇಲೆ ಏನು ಪರಿಣಾಮ ಎಂದು ಹೇಳಬಹುದು. ಈ ಸಂಚಾರದಿಂದ ಶನಿಯು ತನ್ನ ಸ್ವಂತ ಮನೆಯಿಂದ ಮತ್ತೊಂದು ಸ್ವಂತ ಮನೆಗೆ ಹೋಗುತ್ತಿರುವುದರಿಂದ ಒಟ್ಟಾರೆಯಾಗಿ ಜನರು ಹೆಚ್ಚು ಆಲಸ್ಯ ಮಾಡುತ್ತಾರೆ. ಕಷ್ಟ ಪಟ್ಟು ದುಡಿಯುವುದಿಲ್ಲ. ವಿಲಾಸಿಯಾಗುತ್ತಾರೆ, ಮನರಂಜನೆಗೆ ಹೆಚ್ಚಿನ ಸಮಯ ನೀಡುತ್ತಾರೆ. ಯಾರ ಕೈಕೆಳಗೂ ಕೆಲಸ ಮಾಡಲು ಇಷ್ಟಪಡದೇ ಇರುವುದರಿಂದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಜಾಸ್ತಿಯಾಗುತ್ತದೆ.

ಇನ್ನು ಆಡಳಿತಕ್ಕೆ ಸಂಬಂಧಿಸಿದ ಗ್ರಹಗಳಲ್ಲಿ ರವಿಯ ಜತೆಗೆ ಶನಿಯೂ ಇದ್ದಾನೆ. ಹೀಗಾಗಿ ಶನಿಯು ತನ್ನ ಸ್ವಂತ ಮನೆಯಲ್ಲಿರುವುದರಿಂದ ರಾಜಕೀಯದಲ್ಲಿ ಒಲೈಕೆ ರಾಜಕಾರಣ ಮಾಡುವವರಿಗೆ, ಎಲ್ಲ ವರ್ಗದ ಹಿತ ಕಾಪಾಡುವವರಿಗೆ ಹೆಚ್ಚಿನ ಲಾಭವಾಗಲಿದೆ.

ಶನಿಯ ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ಪರಿಣಾಮಗಳಾಗಲಿವೆ, ಪರಿಹಾರವೇನು ನೋಡೋಣ;

ಮೇಷ: ಹನ್ನೊಂದನೇಯ ಮನೆಯಲ್ಲಿ ಶನಿ ಇರುತ್ತಾನೆ. ಇದು ಲಾಭದ ಸ್ಥಾನ. ಈ ರಾಶಿಯವರಿಗೆ ಶನಿ ಸಂಚಾರದಿಂದ ಉದ್ಯೋಗದಲ್ಲಿ ಸಫಲತೆ ದೊರೆಯಲಿದೆ. ಮಕ್ಕಳ ವಿಚಾರದಲ್ಲಿ ಕೂಡ ವಿಶೇಷ ಬದಲಾವಣೆಯಾಗಲಿದೆ. ಆರಂಭಿಸಿರುವ ಕೆಲಸದ ಮೇಲೆ ಈ ಶನಿ ಸಂಚಾರ ಪ್ರಭಾವ ಬೀರಲಿದೆ.
ಪರಿಹಾರ: ನಿತ್ಯ ಶನೈಶ್ಚರ ಅಷ್ಟೋತ್ತರ ಪಠಣ ಮಾಡುವುದರಿಂದ ದೋಷಗಳಿದ್ದಲ್ಲಿ ನಿವಾರಿಸಿಕೊಳ್ಳಬಹುದು.

ವೃಷಭ: ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಬದಲಾವಣೆಗಳಾಗಲಿವೆ. ಉದ್ಯೋಗದಲ್ಲಿ ಬದಲಾವಣೆ ಕಾಣಬಹುದು. ಬಯಸಿದ ಉದ್ಯೋಗ ಸಿಗುವ ಸಾಧ್ಯತೆ. ರಾಜಕೀಯದಲ್ಲಿ ಅಭಿವೃದ್ಧಿಯಾಗುವ ಅವಕಾಶ ಹೆಚ್ಚು.
ಪರಿಹಾರ: ಶನಿವಾರಕ್ಕೊಮ್ಮೆ ಶನೈಶ್ಚರ ಆಲಯದಲ್ಲಿ 28 ಪ್ರದಕ್ಷಿಣೆ ಹಾಕಿ.

ಮಿಥುನ: ಅಷ್ಟಮ ಶನಿಯಿಂದ ಮುಕ್ತಿ ಪಡೆಯುವಿರಿ. ಈ ರಾಶಿಯವರಿಗೆ ಆರೋಗ್ಯ ವೃದ್ಧಿಯಾಗಲಿದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ.
ಪರಿಹಾರ: ಪ್ರತಿ ಶನಿವಾರ ಅನ್ನದಾನ ಮಾಡಿ.

ಕಟಕ: ಆರೋಗ್ಯದ ವಿಚಾರದಲ್ಲಿ ಜಾಗೃತರಾಗಿರಬೇಕು. ಕುಟುಂಬದಲ್ಲಿ ಮನಸ್ತಾಪ ಸಂಭವಿಸಬಹುದು. ಸಾಲ ಆದಷ್ಟು ಕಡಿಮೆ ಮಾಡಿ. ಹೊಸ ವ್ಯವಹಾರಗಳಿಂದ ದೂರ ಇರಿ.
ಪರಿಹಾರ: ಪ್ರತಿ ದಿನ ಶನಿ ಅಷ್ಟೋತ್ತರ ಪಠಣ ಮಾಡಿ. ದಶರಥಕೃತ ಶನಿಸ್ತೋತ್ರ ಪಠಣ ಮಾಡಿ. ಶನಿವಾರ ಕಡ್ಡಾಯವಾಗಿ ಶನಿ ದೇವಾಲಯಕ್ಕೆ ಭೇಟಿ ನೀಡಿ.

ಸಿಂಹ: ಅವಿವಾಹಿತರಿಗೆ ವಿವಾಹದ ಯೋಗವಿದೆ. ವಿವಾಹಿತರಿಗೆ ದಾಂಪತ್ಯದಲ್ಲಿ ಕಲಹ ಸಾಧ್ಯತೆ. ವಿದೇಶ ಪ್ರಯಾಣದ ಅನುಕೂಲವಿದೆ. ಕೆಲಸದಲ್ಲಿ ಆಲಸಿಯಾಗುವ ಸಾಧ್ಯತೆ ಹೆಚ್ಚು. ಕೆಟ್ಟವರ ಸ್ನೇಹವಾಗುವ ಸಾಧ್ಯತೆ ಹೆಚ್ಚು ಎಚ್ಚರಿಕೆಯಿಂದಿರಿ.
ಪರಿಹಾರ: ಶನಿವಾರ ನೀಲಿ ಬಣ್ಣದ ಹೂವುಗಳಿಂದ ಶನೈಶ್ಚರನಿಗೆ ಪೂಜೆ ಮಾಡಿ.

ಕನ್ಯಾ: ಕೆಲಸದಲ್ಲಿ ಅಭಿವೃದ್ಧಿ ಸಾಧ್ಯ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳುತ್ತೀರಿ. ಹೊಸ ಸಾಧನೆಗೆ ಅವಕಾಶಗಳಿವೆ. ಶತ್ರುಗಳೂ ಮಿತ್ರರಾಗುವ ಸಂಭವವಿದೆ.
ಪರಿಹಾರ: ಶನೈಶ್ಚರನಿಗೆ ಬುಧ ಅಥವಾ ಗುರುವಾರ ಫಲ ಪಂಚಾಮೃತ ಅಭಿಷೇಕ ಮಾಡಿ.

ತುಲಾ: ಅಪಾಯ ಇರುವ ಕೆಲಸ ಒಪ್ಪಿಕೊಳ್ಳಬೇಡಿ. ಕೆಲಸ ಬಿಡುವ ವಿಚಾರವನ್ನು ಕೈ ಬಿಡಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಅತಿಯಾದ ನಂಬಿಕೆ ಯಾರ ಮೇಲೂ ಸಲ್ಲದು.
ಪರಿಹಾರ: ಗಾಣದ ಎಳ್ಳೆಣ್ಣೆ, ಕರಿ ಎಳ್ಳು ದಾನ ಮಾಡಿ. ಶನೈಶ್ಚರ ಪೂಜೆ, ಪ್ರದಕ್ಷಿಣೆ ಹಾಕಿ. ಶನಿ ಶಾಂತಿ ಮಾಡಿಸಿ.

ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ಹುಷಾರಾಗಿರಿ. ತಾಯಿ ಆರೋಗ್ಯದ ವಿಚಾರದಲ್ಲಿ ಗಮನವಿರಲಿ. ಉದ್ಯೋಗದ ವಿಚಾರದಲ್ಲಿ ಎಚ್ಚರ. ತಾಳ್ಮೆಯಿಂದ ಇರುವ ಕೆಲಸ ಮಾಡಿ.
ಪರಿಹಾರ: ಪ್ರತಿದಿನ ಶನಿ ಅಷ್ಟೋತ್ತರ ಪಠಣ ಮಾಡಿ. ಶನೈಶ್ಚರ ದೇವಸ್ಥಾನದಲ್ಲಿ ಪೂಜೆ ಮಾಡಿ, ಪ್ರದಕ್ಷಿಣೆ ಹಾಕಿ.

ಧನು: ಏಳು ವರೆ ವರ್ಷದಿಂದ ಕಳೆದುಕೊಂಡಿದ್ದನ್ನು ಪಡೆಯುವ ಭಾಗ್ಯ. ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗುವ ಸಾಧ್ಯತೆ. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ವಿಶೇಷ ಗಮನವಿರಲಿ.
ಪರಿಹಾರ: ಶನೈಶ್ಚರ ದೇವಸ್ಥಾನದಲ್ಲಿ ಕಬ್ಬಿಣ ದಾನ ಮಾಡಿ.

ಮಕರ: ಹಣಕಾಸು, ಕುಟುಂಬ ವಿಚಾರದಲ್ಲಿ ಕಲಹ ಸಾಧ್ಯತೆ ಇದೆ. ಸಾಲ ಮಾಡುವುದು ಬೇಡ. ಜಾಗ, ಚಿನ್ನ ಮಾರಾಟದ ವಿಷಯದಲ್ಲಿ ಹುಷಾರಾಗಿರಿ.
ಪರಿಹಾರ : ಎಂಟು ಶನಿವಾರ ಕರಿ ಎಳ್ಳು ದಾನ ಮಾಡಿ.

ಕುಂಭ: ಆಲಸಿಯಾಗುವ ಸಾಧ್ಯತೆ ಹೆಚ್ಚು. ಪ್ರಾಮುಖ್ಯತೆ ವೃದ್ಧಿಯಾಗಿ ಅಹಂಕಾರ ಬರುವ ಸಾಧ್ಯತೆ. ಆರೋಗ್ಯದ ವಿಚಾರದ ಬಗ್ಗೆ ಗಮನವಿರಲಿ . ಬೇಜವಬ್ದಾರಿತನದಿಂದ ಕೆಲವನ್ನು ಕಳೆದುಕೊಳ್ಳುವ ಸಾಧ್ಯತೆ. ಐಷಾರಾಮಿ ಬದುಕಿನಿಂದ ಖರ್ಚು.
ಪರಿಹಾರ: ಕಬ್ಬಿಣದ ಬಾಣಲಿಯಲ್ಲಿ ಎಳ್ಳೆಣ್ಣೆ ಹಾಕಿ ಮುಖ ನೋಡಿ ದೀಪ ಹಚ್ಚುವುದು, ದಾನ ಮಾಡುವುದು.

ಮೀನ: ಎರಡು ವರ್ಷದಲ್ಲಿ ಕಳೆದುಕೊಳ್ಳುವುದು ಹೆಚ್ಚು. ವಿದೇಶ ಪ್ರಯಾಣದ ಸಾಧ್ಯತೆ. ಹೊಸ ನಿರ್ಧಾರಗಳ ಬಗ್ಗೆ ಎಚ್ಚರವಿರಲಿ. ಮುಂದಿನ ಎರಡು ವರ್ಷಗಳು ಕಠಿಣವಾಗಿರಲಿವೆ. ನ್ಯಾಯ ನಿಷ್ಠೆಯಿಂದ ಬದುಕಿ. ವ್ಯಾಪಾರದಲ್ಲಿ ತುಂಬಾ ನಷ್ಟ ಸಾಧ್ಯತೆ.
ಪರಿಹಾರ: ಪ್ರತಿ ಶನಿವಾರ ಬಡವರಿಗೆ, ವೃದ್ಧರಿಗೆ ಅನ್ನದಾನ ಮಾಡಿ. ನಿರಾಶ್ರಿತರಿಗೆ ಕಂಬಳಿ, ರಗ್ಗು ದಾನ ಮಾಡುವುದು.

ಇದನ್ನೂ ಓದಿ | Shani Gochar 2023 | ನಾಳೆ ಮಕರದಿಂದ ಕುಂಭಕ್ಕೆ ಶನಿ ಸಂಚಾರ; ಪುಣ್ಯ ಕಾಲ ಯಾವಾಗ?

Exit mobile version