ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಲ್ಲಿ ಶನಿಯ ಸಂಚಾರಕ್ಕೆ ಎಲ್ಲಿಲ್ಲದ ಮಹತ್ವವಿದೆ. ಶನಿ ಕರ್ಮಫಲದಾತ. ಆತನ ಪ್ರತಿ ಚಲನೆಯೂ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತದೆ. ಆಷಾಢ ಮಾಸ, ಶುಕ್ಲ ಪಕ್ಷ ತ್ರಯೋದಶಿಯ ದಿನವಾದ ಮಂಗಳವಾರ (ಜು.12) ಶನಿಯು ಮತ್ತೆ ಸಂಚಾರ (Shani Sanchara 2022 ) ಹೊರಡಲಿದ್ದಾನೆ.
ಈಗ ಕುಂಭ ರಾಶಿಯಲ್ಲಿರುವ ಶನಿ ಮಂಗಳವಾರ ಮಧ್ಯಾಹ್ನ 2. 54ಕ್ಕೆ ಮಕರ ರಾಶಿ ಪ್ರವೇಶಿಸುವನು. ಇದು ವಕ್ರೀ (ಹಿಮ್ಮುಖ) ಸಂಚಾರವಾಗಿದೆ. ಈ ಸಂವತ್ಸರದಲ್ಲಿ ಶನಿಯದ್ದು ಇದು ಎರಡನೇ ಸಂಚಾರ. ಕಳೆದ ಏಪ್ರಿಲ್ 29 ರಂದು ಶನಿಯು ಕುಂಭರಾಶಿಗೆ ಪ್ರವೇಶಿಸಿದ್ದನು. ಮಂಗಳವಾರ ಶನಿ ಸಂಚಾರದ ಪುಣ್ಯಕಾಲವು ಮಧ್ಯಾಹ್ನ 12 ರಿಂದ ಸಂಜೆ 5.48ರ ವರೆಗಿರಲಿದೆ.
ಈ ಮಕರ ರಾಶಿಯ ಶನಿಯು ಮಕರಕ್ಕೆ ಮೊದಲನೆಯ, ಧನುವಿಗೆ ಎರಡನೆಯ, ವೃಶ್ಚಿಕಕ್ಕೆ ಮೂರನೆಯ, ತುಲಾಗೆ ನಾಲ್ಕನೆಯ, ಕನ್ಯಾಗೆ ಐದನೆಯ, ಸಿಂಹಕ್ಕೆ ಆರನೆಯ, ಕಟಕಕ್ಕೆ ಏಳನೆಯ, ಮಿಥುನಕ್ಕೆ ಎಂಟನೆಯ ವೃಷಭಕ್ಕೆ ಒಂಬತ್ತನೆಯ, ಮೇಷಕ್ಕೆ ಹತ್ತನೆಯ ಹಾಗೂ ಮೀನಕ್ಕೆ ಹನ್ನೊಂದನೆಯ ಹಾಗೂ ಕುಂಭಕ್ಕೆ ಹನ್ನೆರಡನೆಯ ಮನೆಯಾಗಿದೆ.
ಶನಿಯ ಈ ಸಂಚಾರದಿಂದ ಧನು-ಮಕರ- ಕುಂಭ ರಾಶಿಯವರಿಗೆ ಸಾಡೇಸಾತಿ ಇರಲಿದೆ. (ಸಾಡೇಸಾತಿ ಶನಿ ಎಂದರೆ ಶನಿ ನಿಮ್ಮ ರಾಶಿಯ ಹಿಂದಿನ ರಾಶಿ ನಿಮ್ಮ ರಾಶಿ ಹಾಗೂ ನಿಮ್ಮ ಮುಂದಿನ ರಾಶಿಯಲ್ಲಿ ಸಂಚಾರ ಮಾಡುವ ಸಮಯವನ್ನು ಸಾಡೇಸಾತಿ ಶನಿ ಎನ್ನುತ್ತಾರೆ.) 2023ರ ಜನವರಿ 17ರ ವರೆಗೆ ಈ ರಾಶಿಯವರಿಗೆ ಸಾಡೇಸಾತಿ ಇರುತ್ತದೆ. ಕುಂಭ ರಾಶಿಯಲ್ಲಿ ಶನಿ ಇದ್ದಾಗ ಮೀನಾ ರಾಶಿಯವರಿಗೆ ಇದ್ದಿದ್ದ ಸಾಡೇಸಾತಿಯು ತಾತ್ಕಾಲಿಕವಾಗಿ ಅಂದರೆ 2023ರ ಜನವರಿ 17ರ ವರೆಗೆ ಇರುವುದಿಲ್ಲ.
ಶನಿಯ ಈ ವಕ್ರೀ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತಾನೆ ನೋಡೋಣ
ಮೇಷ: ಈ ರಾಶಿಯವರ ಹತ್ತನೆಯ ಮನೆಯಲ್ಲಿ ಶನಿ ಇರುತ್ತಾನೆ. ಈ ರಾಶಿಯವರು ಅಪಾರ ಪರಿಶ್ರಮ ಪಟ್ಟರೆ ಯಶಸ್ಸು ಪಡೆಯಬಹುದು. ವಿದೇಶಿ ಪ್ರಯಾಣದ ಅವಕಾಶಗಳೂ ಇರುತ್ತವೆ. ವಾಹನ ಅಥವಾ ಮನೆಯನ್ನು ಕೊಳ್ಳಲು ಇದು ಅತ್ಯುತ್ತಮ ಸಮಯವಾಗಿದೆ. ಈ ರಾಶಿಯವರಿಗೆ ಇದು ರಾಜಯೋಗ ಕಾಲ. ಶನಿಯ ಈ ಸಂಚಾರದಿಂದ ಹೆಚ್ಚಿನ ಶುಭ ಫಲಗಳನ್ನು ಈ ರಾಶಿಯವರು ಪಡೆಯಲಿದ್ದಾರೆ.
ವೃಷಭ: ಈ ರಾಶಿಯವರ ಒಂಬತ್ತನೆಯ ಮನೆಯಲ್ಲಿ ಶನಿ ಇರುತ್ತಾನೆ. ಭಾಗ್ಯಧಿಪತಿ ಶನಿಯು ಭಾಗ್ಯ ಸ್ಥಾನದಲ್ಲಿರುತ್ತಾನೆ. ಹೀಗಾಗಿ ವೃತ್ತಿಯಲ್ಲಿ ಬಹಳಷ್ಟು ಅನುಕೂಲವಾಗುತ್ತದೆ. ಈ ರಾಶಿಯವರಿಗೆ ಅಧಿಪತಿಗಳಾದ ಶುಕ್ರ ಮತ್ತು ಶನಿ ಇಬ್ಬರೂ ಪರಸ್ಪರ ಮಿತ್ರರಾಗಿರುವುದರಿಂದ ಎಲ್ಲ ಕೆಲಸದಲ್ಲಿಯೂ ಲಾಭವಾಗುವ ಸಾಧ್ಯತೆ ಹೆಚ್ಚು. ಈ ರಾಶಿಯವರು ಉತ್ಕೃಷ್ಟ ಫಲ ಪಡೆಯಲಿದ್ದಾರೆ. ಶನಿಯ ಈ ಸಂಚಾರದಿಂದ ಈ ರಾಶಿಯವರಿಗೆ ಕೆಲ ವಿಷಯಗಳಲ್ಲಿ ಕಷ್ಟವೂ ಬರಬಹುದು.
ಮಿಥುನ: ಈ ರಾಶಿಯವರ ಎಂಟನೆಯ ಮನೆಯಲ್ಲಿ ಶನಿ ಇರುತ್ತಾನೆ. ದುಸ್ತಾನದಲ್ಲಿ ಶನಿ ಇದ್ದಾನೆ ಎಂದರೆ ಎಚ್ಚರದಿಂದಿರಬೇಕು. ಹೀಗಾಗಿ ಈ ರಾಶಿಯವರು ಮೈಮರೆಯಬಾರದು. ಆತಂಕ ಪಡಬೇಡಿ. ಭಯ ಬೇಡ. ಶನಿಯು ಮನಸ್ಸಿಗೆ ನೋವು, ದುಃಖ ಉಂಟು ಮಾಡಬಹುದು. ತಾಳ್ಮೆಯಿಂದ ಎಲ್ಲವನ್ನೂ ಎದುರಿಸುವುದನ್ನು ಕಲಿಯಿರಿ. ಆರೋಗ್ಯದಲ್ಲಿ ಸಹ ವ್ಯತ್ಯಾಸವಾಗಬಹುದು. ಸೋಲಿನ ರುಚಿಯನ್ನು ತೋರಿಸಿ, ನಿಮಗೆ ಒಳ್ಳೆಯ ದಾರಿಯನ್ನು ಶನಿ ತೋರಿಸುತ್ತಾನೆ.
ಕಟಕ: ಈ ರಾಶಿಯವರ ಏಳನೆಯ ಮನೆಯಲ್ಲಿ ಶನಿ ಇರುತ್ತಾನೆ. ಸಂಗಾತಿಯಿಂದ ಸೌಖ್ಯ ಉಂಟಾಗುತ್ತದೆ. ಸಪ್ತಮಭಾವದಲ್ಲಿ ಶನಿ ಇದ್ದಾಗ ತಾಮಸ ಬಯಕೆ ಕೆರಳುತ್ತದೆ. ಈ ಸಮಯದಲ್ಲಿ ಪಾಲುದಾರಿಕೆಯ ವ್ಯವಹಾರದಲ್ಲಿ ನಷ್ಟವನ್ನು ಎದುರಿಸಬೇಕಾಗಬಹುದು. ಅಪಘಾತಗಳನ್ನು ತಡೆಯಲು ಎಚ್ಚರಿಕೆಯಿಂದ ಚಾಲನೆ ಮಾಡಿ. ಹಿಡಿದ ಕೆಲಸದಲ್ಲಿ ಅಡಚಣೆಯಾಗಬಹುದು. ಶನಿಯು ಈ ಸಂಚಾರದಿಂದ ಹೆಚ್ಚಿನ ಚಿಂತೆಯನ್ನೂ ಈ ರಾಶಿಯವರಿಗೆ ನೀಡಬಹುದು.
ಸಿಂಹ: ಈ ರಾಶಿಯವರ ಆರನೆಯ ಮನೆಯಲ್ಲಿ ಶನಿ ಇರುತ್ತಾನೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ಶುಭ ಫಲಗಳನ್ನು ಪಡೆಯುತ್ತೀರಿ. ನಿಮ್ಮವರಿಂದಲೇ ನೀವು ಹೆಚ್ಚು ತೊಂದರೆ ಅನುಭವಿಸಬೇಕಾಗಿ ಬರಬಹುದು. ಕಾನೂನು ವಿವಾದಗಳಲ್ಲಿ ಜಯ ಸಿಗುತ್ತದೆ. ಸರಿಯಾಗಿ ವಾಹನ ಚಲಾಯಿಸಿ. ದುಷ್ಟರನ್ನು ಕಂಡರೆ ದೂರ ಇಡಿ. ಶನಿಯ ಈ ಸಂಚಾರದಿಂದ ಈ ರಾಶಿಯವರು ಹೆಚ್ಚಿನ ಶುಭ ಫಲ ಪಡೆಯಲಿದ್ದಾರೆ.
ಕನ್ಯಾ: ಈ ರಾಶಿಯವರ ಐದನೆಯ ಮನೆಯಲ್ಲಿ ಶನಿ ಇರುತ್ತಾನೆ. ಮಕ್ಕಳಿಂದ ಅತಿಯಾದ ಅಪೇಕ್ಷೆ ಇಟ್ಟುಕೊಳ್ಳಬೇಡಿ. ಆದರೆ ಅವರಿಂದ ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಾಗಬಹುದು. ಸೇವಿಸುವ ಆಹಾರದ ಬಗ್ಗೆ ಎಚ್ಚರಿಕೆ ಇರಲಿ. ಶನಿಯಿಂದ ನಿಮಗೆ ಹೆಚ್ಚಿನ ತೊಂದರೆ ಏನೂ ಇಲ್ಲ. ಆದರೆ ಕಷ್ಟದ ಫಲವನ್ನು ನೀವು ಪಡೆಯಬೇಕಾಗಬಹುದು. ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.
ತುಲಾ: ಈ ರಾಶಿಯವರ ನಾಲ್ಕನೆಯ ಮನೆಯಲ್ಲಿ ಶನಿ ಇರುತ್ತಾನೆ. ಅಂದರೆ ಕೇಂದ್ರ ಸ್ಥಾನದಲ್ಲಿ ಇದ್ದಾನೆ. ಸುಖದ ಸ್ಥಾನ ಇದು. ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡವನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ನೀವು ನಿರೀಕ್ಷಿಸದೇ ಇರುವ ಅನಾರೋಗ್ಯದ ಸಮಸ್ಯೆ ಕಾಡಬಹುದು. ಪ್ರಯಾಣ ಬೆಳೆಸುವಾಗ ಹೆಚ್ಚಿನ ಎಚ್ಚರಿಕೆಯಲ್ಲಿ ಇರಿ. ಒಳ್ಳೆಯ ಫಲಗಳನ್ನು ಶನಿ ನೀಡುತ್ತಾನೆ.
ವೃಶ್ಚಿಕ: ಈ ರಾಶಿಯವರ ಮೂರನೆಯ ಮನೆಯಲ್ಲಿ ಶನಿ ಇರುತ್ತಾನೆ. ಕಠಿಣವಾದ ಕೆಲಸವನ್ನು ಸುಲಭವಾಗಿ ಮಾಡುತ್ತೀರಿ. ಆಳು-ಕಾಳುಗಳ ನೆರವು ನಿಮಗೆ ದೊರೆಯಲಿದೆ. ಸಹೋದರರ ಸಹಾಯ ನಿಮಗೆ ದೊರೆಯುತ್ತದೆ. ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಶನಿಯ ಈ ಸಂಚಾರದಿಂದ ಶುಭಫಲಗಳನ್ನು ಪಡೆಯುತ್ತೀರಿ.
ಧನಸ್ಸು: ಈ ರಾಶಿಯವರ ಎರಡನೆಯ ಮನೆಯಲ್ಲಿ ಶನಿ ಇರುತ್ತಾನೆ. ಸ್ತ್ರೀಯರೊಂದಿಗೆ ಪುರುಷರು ಹಿತ-ಮಿತವಾಗಿ ಮಾತನಾಡಿ. ಶನಿಯು ಹಣಕಾಸಿಗೆ ಸಂಬಂಧಿಸಿದ ಸ್ಥಾನದಲ್ಲಿರುವುದರಿಂದ ಈ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ನೀವು ಯಾರಿಂದಲೂ ಸಾಲ ಪಡೆಯಲು ಹೋಗಬೇಡಿ. ಯಾವುದಕ್ಕೂ ಅಹಂಕಾರ ಪಡಬೇಡಿ.ಈ ಸಮಯದಲ್ಲಿ, ನಿಮ್ಮ ತಾಯಿಯ ಆರೋಗ್ಯದ ಕಾರಣದಿಂದಾಗಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಚಿಂತೆ ಹೆಚ್ಚಾಗಬಹುದು ಎಚ್ಚರ.
ಮಕರ: ಈ ರಾಶಿಯವರ ಸ್ವಸ್ಥಾನದಲ್ಲಿ ಶನಿ ಇರುತ್ತಾನೆ. ಹೀಗಾಗಿ ಶನಿಯ ಯಾವ ತೊಂದರೆಯೂ ಇರುವುದಿಲ್ಲ. ನಿಮ್ಮ ಗೌರವ ಮತ್ತು ಸುಖ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಬಾಹ್ಯ ಮೂಲಗಳಿಂದ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಏಳನೆ ಮನೆಯಲ್ಲಿನ ಶನಿಯ ನೇರ ದೃಷ್ಟಿಯಿಂದಾಗಿ, ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ವೃತ್ತಿಯಲ್ಲಿ ಏಳಿಗೆ ಇರುತ್ತದೆ. ಅಹಂಕಾರ ಪಡಬೇಡಿ. ಬಹಳ ಒಳ್ಳೆಯ ಸಮಯ ನಿಮ್ಮದಾಗಿರುತ್ತದೆ.
ಕುಂಭ: ಈ ರಾಶಿಯವರ ಹನ್ನೆರಡನೆ ಮನೆಯಲ್ಲಿ ಶನಿ ಇರುತ್ತಾನೆ. ಕೆಲಸದ ಶ್ರಮ ಹೆಚ್ಚಾಗಿರುತ್ತದೆ. ಆಪ್ತರು ದುಃಖ ತಂದೊಡ್ಡಬಹುದು. ಕಣ್ಣಿನ ತೊಂದರೆ ಕಾಣಿಸಿಕೊಳ್ಳಬಹುದು. ಅನಗತ್ಯ ಓಡಾಟವನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು. ನಿಮ್ಮ ಹಣವನ್ನು ಅನುಪಯುಕ್ತ ವಿಷಯಗಳಿಗೆ ಖರ್ಚು ಮಾಡದಂತೆ ಎಚ್ಚರಿಕೆ ವಹಿಸಿ. ಸ್ವಲ್ಪ ಚಿಂತೆಯನ್ನೂ ಶನಿ ಕೊಡುತ್ತಾನೆ.
ಮೀನ: ಈ ರಾಶಿಯವರ ಹನ್ನೊಂದನೆಯ ಮನೆಯಲ್ಲಿ ಶನಿ ಇರುತ್ತಾನೆ. ಲಾಭದ ಮನೆಯಲ್ಲಿ ಶನಿ ಇದ್ದಾನೆ. ಎಲ್ಲ ಕೆಲಸದಲ್ಲಿಯೂ ಲಾಭ ಬರುತ್ತದೆ. ಹಾಗೆಯೇ ಖರ್ಚು ಹೆಚ್ಚಾಗಬಹುದು. ಜನ್ಮ ಸ್ಥಾನದಲ್ಲಿರುವ ಗುರು ಎಲ್ಲ ಒಳ್ಳೆಯದನ್ನು ಮಾಡುತ್ತಾನೆ. ಮಕ್ಕಳ ಸಹಕಾರ ಚೆನ್ನಾಗಿರುತ್ತದೆ. ಪ್ರಯಾಣದಲ್ಲಿ ಖುಷಿ ಇರುತ್ತದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಅತಿಯಾದ ನಿರೀಕ್ಷೆ ಬೇಡ. ಕೆಲಸಕ್ಕೆ ತಕ್ಕ ಫಲ ನಿಮಗೆ ಈ ಸಮಯದಲ್ಲಿ ದೊರೆಯುತ್ತದೆ.
ಇದನ್ನೂ ಓದಿ| Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?