ಮಾರುಕಟ್ಟೆಯಲ್ಲಿ ಸಾವಿರಾರು ಅಂಗಡಿಗಳು (Vastu For Shop) ಇರುತ್ತವೆ. ಆದರೆ ಎಲ್ಲವೂ ಒಳ್ಳೆಯ ಲಾಭ ಗಳಿಸಿಕೊಳ್ಳುತ್ತವೆ ಎಂದು ಹೇಳಲಾಗದು. ಗುಣಮಟ್ಟ, ಬೆಲೆ, ಜನ ಸಂಪರ್ಕ ಹೀಗೆ ಅನೇಕ ಅಂಶಗಳು ವ್ಯಾಪಾರದ ಮೇಲೆ ಪರಿಣಾಮ ಬೀರುತ್ತವೆ. ಅದರಂತೆಯೇ ಅಂಗಡಿಯ ವಾಸ್ತು ಕೂಡ ಅಂಗಡಿಯ ವ್ಯಾಪಾರ ವಹಿವಾಟಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಅಂಗಡಿಯ ವಾಸ್ತು ಯಾವ ರೀತಿಯಲ್ಲಿರಬೇಕು? ಯಾವ ದಿಕ್ಕಿನಲ್ಲಿ ಏನಿರಬೇಕು ಎನ್ನುವ ಬಗ್ಗೆ ನಿಮಗೆ ಪ್ರಶ್ನೆಗಳಿರಬಹುದು. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.
ಚೌಕಾಕಾರದಲ್ಲಿ ಇರಲಿ
ಅಂಗಡಿಗಳನ್ನು ಯಾವಾಗಲೂ ಚೌಕಾಕಾರದಲ್ಲಿ ಅಥವಾ ಆಯತಾಕಾರದಲ್ಲಿ ಇರಬೇಕು. ಇಲ್ಲವೇ ಮುಂಭಾಗವನ್ನು ಅಗಲವಾಗಿ ಮಾಡಿ ಹಿಂಭಾಗವನ್ನು ಚಿಕ್ಕದಾಗಿ ಮಾಡಬಹುದು. ಅದನ್ನ ಹೊರತಾಗಿ ಬೇಕೆ ಆಕಾರದಲ್ಲಿ ಅಂಗಡಿಗಳನ್ನು ಮಾಡಬಾರದು. ಆ ರೀತಿ ಮಾಡಿದರೆ ಅಂಗಡಿಯಲ್ಲಿ ಆರ್ಥಿಕ ನಷ್ಟದ ಜತೆಯಲ್ಲಿ ಮಾಲೀಕರಿಗೆ ಮಾನಸಿಕ ಒತ್ತಡ ಉಂಟಾಗುತ್ತದೆ. ಅಂಗಡಿಯ ಪ್ರವೇಶದ್ವಾರ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲೇ ಇರಬೇಕು. ಈ ದಿಕ್ಕಿನಲ್ಲಿ ಪ್ರವೇಶ ದ್ವಾರ ಮಾಡುವುದರಿಂದ ಅಂಗಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ ಎನ್ನಲಾಗಿದೆ.
ಕ್ಯಾಶ್ ಕೌಂಟರ್ ಎಲ್ಲಿರಬೇಕು?
ಅಂಗಡಿ ಎಂದ ಮೇಲೆ ಕ್ಯಾಶ್ ಕೌಂಟರ್ ಇದ್ದೇ ಇರುತ್ತದೆ. ಕ್ಯಾಶ್ ಕೌಂಟರ್ ಯಾವ ಸ್ಥಳದಲ್ಲಿ ಇಡಬೇಕೆಂದರೆ ಅದರ ಬಾಗಿಲನ್ನು ನೀವು ಉತ್ತರ ದಿಕ್ಕಿಗೆ ತೆಗೆಯುವಂತಿರಬೇಕು. ಅಂಗಡಿಯಲ್ಲಿ ಲಾಕರ್ ಏನಾದರೂ ಇದ್ದರೆ ಅದನ್ನು ಅಂಡಿಯ ನೈಋತ್ಯ ಭಾಗದಲ್ಲಿ ಇಡಬೇಕು. ಅಂಗಡಿಯ ಮಾಲೀಕರು ಅಥವಾ ಮುಖ್ಯ ವ್ಯವಸ್ಥಾಪಕರು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲೇ ಕುಳಿತುಕೊಳ್ಳಬೇಕು. ಅವರು ಪೂರ್ವ ದಿಕ್ಕಿಗೆ ಮುಖ ಮಾಡಿ ಕೂರುವುದರಿಂದ ಹೆಚ್ಚು ಲಾಭ ಸಿಗುತ್ತದೆ.
ದೇವರ ಫೋಟೊ ಹೀಗಿರಲಿ
ಅಂಗಡಿಯಲ್ಲಿ ದೇವರ ವಿಗ್ರಹ ಅಥವಾ ಫೋಟೊವನ್ನು ಇಡುವುದಾದರೆ ಅದನ್ನು ಈಶಾನ್ಯ ದಿಕ್ಕಿನಲ್ಲಿಯೇ ಇಡಬೇಕು. ಅದರಿಂದ ವ್ಯಾಪಾರ ಚೆನ್ನಾಗಿ ಆಗುತ್ತದೆ. ಅಂಗಡಿಯ ಕಚ್ಚಾ ವಸ್ತುಗಳನ್ನು ಮತ್ತು ಇತರೆ ಭಾರವಾದ ವಸ್ತುಗಳನ್ನು ಯಾವಾಗಲೂ ನೈಋತ್ಯ ಭಾಗದಲ್ಲಿಯೇ ಇಡಬೇಕು. ಇದರಿಂದ ಅದೃಷ್ಟ ಬರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಬಾಗಿಲು ಸದ್ದು ಮಾಡದಿರಲಿ!
ಅಂಗಡಿಯಲ್ಲಿ ಕಂಪ್ಯೂಟರ್, ಟಿವಿ, ರೆಫ್ರಿಜರೇಟರ್ ಮತ್ತು ಮೈಕ್ರೋವೇವ್‌ನಂತರ ಎಲೆಕ್ಟ್ರಾನಿಕ್ ವಸ್ತುವಿದ್ದರೆ ಅದನ್ನು ಅಂಗಡಿಯ ಆಗ್ನೇಯ ಮೂಲೆಯಲ್ಲಿ ಇರಿಸುವುದು ಉತ್ತಮ. ಅಂಗಡಿಯ ಬಾಗಿಲು ಶಬ್ದ ಮಾಡುವಂತೆ ಇರಬಾರದು. ಶಬ್ದ ಮಾಡುವ ಬಾಗಿಲನ್ನು ಅಂಗಡಿಯಲ್ಲಿ ಇಟ್ಟುಕೊಳ್ಳುವುದು ದುರದೃಷ್ಟ ಎಂದು ಹೇಳಲಾಗುತ್ತದೆ.
ಗೋಡೆ ಮೇಲೆ ಏನು ಬರೆದಿರಬೇಕು?
ಬಿಸಿ ಆಹಾರವನ್ನು ಮಾರಾಟ ಮಾಡುವುದಾದರೆ ಅಂಗಡಿಯಲ್ಲಿ ಬಿಸಿಯಾದ ಆಹಾರವನ್ನು ವಾಯವ್ಯ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಂಗಡಿಯಲ್ಲಿ ಸ್ವಸ್ತಿಕ್ ಶುಭ ಚಿಹ್ನೆಯನ್ನು ಇಡಬೇಕು. ಹಾಗೆಯೇ ಅಂಗಡಿಯ ಗೋಡೆಯ ಮೇಲೆ ಶುಭ ಲಾಭ, ರಿದ್ಧಿ-ಸಿದ್ಧಿ ಎಂದು ಬರೆಯಬೇಕು.
ಯಾವ ಬಣ್ಣ ಉತ್ತಮ?
ನಿಮ್ಮ ಅಂಗಡಿ ಬಗ್ಗೆ ಸೈನ್ ಬೋರ್ಡ್ ಅಥವಾ ಬ್ಯಾನರ್ ಹಾಕಿರುತ್ತೀರಿ. ಅದು ಬಣ್ಣಗಳೊಂದಿಗೆ ಹೊಂದಾಣಿಕೆಯಾಗುವುದು ಮುಖ್ಯ. ವಾಯವ್ಯ ಮೂಲೆಯಲ್ಲಿ ಪ್ರವೇಶ ಹೊಂದಿರುವ ಅಂಗಡಿಗೆ ಬಿಳಿ ಅಥವಾ ಬೂದು ಬಣ್ಣದಲ್ಲಿ ಚಿಹ್ನೆ ಹಾಕುವುದು ಉತ್ತಮ. ಉತ್ತರ ದಿಕ್ಕಿನಲ್ಲಿ ಪ್ರವೇಶ ಹೊಂದಿರುವ ಅಂಗಡಿಗೆ ಕಪ್ಪು ಅಥವಾ ಹಸಿರು ಬಣ್ಣದಲ್ಲಿ ಸೈನ್ ಬೋರ್ಡ್ ಮಾಡಿಸಬೇಕು. ಬಟ್ಟೆ ಅಂಗಡಿಗಳಲ್ಲಿ ಗೊಂಬೆಗಳಿಗೆ ಬಟ್ಟೆ ಹಾಕಿ ಇಡಲಾಗಿರುತ್ತದೆ. ಹಾಗೆ ಮಾಡುವಾಗ ಗೊಂಬೆಗಳನ್ನು ವಾಯವ್ಯ ದಿಕ್ಕಿನಲ್ಲಿ ಇರಿಸಿ. ವಾಯುವ್ಯ ದಿಕ್ಕಿನಲ್ಲಿ ಗೊಂಬೆಯಿಡುವುದರಿಂದ ಅದು ಎಲ್ಲರ ಗಮನ ಸೆಳೆಯುತ್ತದೆ.
ಮೆಟ್ಟಿಲು ಯಾವ ದಿಕ್ಕಿನಲ್ಲಿರಬೇಕು?
ನಿಮ್ಮದು ಬಹುಮಹಡಿಯ ಕಟ್ಟಡವಾದರೆ ಅದರಲ್ಲಿ ಮೆಟ್ಟಿಲುಗಳು ಇದ್ದೇ ಇರುತ್ತದೆ. ಮೆಟ್ಟಿಲುಗಳು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿ ಇರಬೇಕು ಹಾಗೆಯೇ ಮೆಟ್ಟಿನಲ್ಲು ಹತ್ತುವಾಗ ಪ್ರದಕ್ಷಿಣಾಕಾರವಾಗಿ ಹತ್ತುವಂತಿರಬೇಕು.
ಅಂಗಡಿಗಳಲ್ಲಿ ಕನ್ನಡಿಗಳು ಇದ್ದೇ ಇರುತ್ತದೆ. ವಾಸ್ತುವಿನ ಪ್ರಕಾರ ಕನ್ನಡಿಯು ನೀರಿನ ಅಂಶವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಅದನ್ನು ಉತ್ತರ, ಈಶಾನ್ಯ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು.
ಶೌಚಾಲಯ ಈ ದಿಕ್ಕಿನಲ್ಲಿರಲಿ
ಅಂಗಡಿಯಲ್ಲಿ ಶೌಚಾಲಯವಿದ್ದರೆ ಅದು ವಾಯವ್ಯ ಅಥವಾ ಪಶ್ಚಿಮ ಮೂಲೆಯಲ್ಲಿರಬೇಕು.
ಅಂಗಡಿಯಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳುವುದಕ್ಕೆ ಹಾಕಲಾದ ಸೋಫಾ ಉತ್ತರ ಅಥವಾ ಪೂರ್ವ ಭಾಗದಲ್ಲಿರಬೇಕು.
ಟ್ರಯಲ್ ರೂಮ್ ಪಶ್ಚಿಮ ದಿಕ್ಕಿನಲ್ಲಿರಲಿ
ಬಟ್ಟೆ ಅಂಗಡಿಯಲ್ಲಿ ಟ್ರಯಲ್ ರೂಮ್ ಅಂಗಡಿಯ ಪಶ್ಚಿಮ ಭಾಗದಲ್ಲಿ ಇರಬೇಕು. ಅಂಗಡಿಯ ಆಗ್ನೇಯ ದಿಕ್ಕಿನಲ್ಲಿ ಬಿದಿರಿನ ಸಸಿಯನ್ನು ಇಡಿ. ಇದು ಅಂಗಡಿಯಲ್ಲಿ ಸಂಪತ್ತು ಹೆಚ್ಚುವಂತೆ ಮಾಡುತ್ತದೆ. ಅಂಗಡಿಯ ಕೌಂಟರ್ ಚೌಕ ಅಥವಾ ಆಯತಾಕಾರದಲ್ಲಿ ಇರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಒಂದು ವೇಳೆ ಕೌಂಟರ್ ವೃತ್ತಾಕಾರದಲ್ಲಿದ್ದರೆ ಸಂಪತ್ತಿನಲ್ಲಿ ನಷ್ಟ ಉಂಟಾಗಬಹುದು. ಕೌಂಟರ್ ಅನ್ನು ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು.
ಇದನ್ನೂ ಓದಿ: Vastu Tips For Students: ವಿದ್ಯಾರ್ಥಿಗಳು ಸ್ಟಡಿ ಮಾಡುವಾಗ ಈ ವಾಸ್ತು ಸೂತ್ರ ಪಾಲಿಸಿದರೆ ಸಕ್ಸೆಸ್!