ಮನೆಯಲ್ಲಿ ಪವಿತ್ರ ಸ್ಥಳವೆಂದರೆ ದೇವರ ಕೋಣೆ. ಅದನ್ನು ಹೊರತುಪಡಿಸಿ ನೋಡಿದರೆ ಅತಿ ಪವಿತ್ರ ಎನ್ನುವ ಸ್ಥಾನ ಪಡೆದುಕೊಳ್ಳುವುದು ಅಡುಗೆ ಮನೆಯೇ. ಪ್ರತಿ ಹೊತ್ತಿನ ಊಟ ಸಿದ್ಧವಾಗುವ ಈ ಅಡುಗೆ ಮನೆಯಲ್ಲಿ ಏರುಪೇರಾದರೆ ನಮ್ಮ ಆರೋಗ್ಯವೂ ಏರುಪೇರಾಗುವುದು ಗ್ಯಾರಂಟಿ. ಅಡುಗೆಮನೆ ಎಷ್ಟು ಸ್ವಚ್ಛವಾಗಿ, ಸುಂದರವಾಗಿ ಹಾಗೆಯೇ ಸುಸಂಸ್ಕೃತವಾಗಿರುತ್ತದೆಯೇ ಮನುಷ್ಯನ ಆರೋಗ್ಯವೂ ಅಷ್ಟೇ ಚೆನ್ನಾಗಿರುತ್ತದೆ. ಅಂದ ಹಾಗೆ ಅಡುಗೆ ಮನೆ ಎಂದಾಕ್ಷಣ ಹೇಗೆಂದರೆ ಹಾಗೆ ಮಾಡುವಂತಿಲ್ಲ. ಅಡುಗೆ ಮನೆ ಮಾಡುವಾಗ ವಾಸ್ತು ನೋಡುವುದು ತುಂಬ ಮುಖ್ಯ. ಯಾವ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು? ಯಾವ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಇರಬೇಕು ಎನ್ನುವುದನ್ನೂ ವಾಸ್ತು ಶಾಸ್ತ್ರದಲ್ಲಿ (Vastu Tips) ವಿವರಿಸಲಾಗಿದೆ. ಅದರ ಕುರಿತಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ.
ದಿಕ್ಕು ಮುಖ್ಯ
ವಾಸ್ತುವಿನ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಅಗ್ನಿಯ ಅಂಶ ಇರಬೇಕು. ಹಾಗಾಗಿ ಆಗ್ನೇಯ ದಿಕ್ಕಿನಲ್ಲೇ ಅಡುಗೆ ಮನೆಯನ್ನು ಮಾಡುವುದು ಉತ್ತಮ. ಯಾವ ಕಾರಣಕ್ಕೂ ಉತ್ತರ, ಈಶಾನ್ಯ ಮತ್ತು ನೈರುತ್ಯ ದಿಕ್ಕುಗಳಲ್ಲಿ ಅಡುಗೆ ಮನೆ ಮಾಡಬಾರದು ಎನ್ನುವುದು ವಾಸ್ತು ಶಾಸ್ತ್ರದಲ್ಲಿರುವ ನಿಯಮ. ಹಾಗೆಯೇ ಅಡುಗೆ ಮನೆಯನ್ನು ಬಚ್ಚಲಮನೆಗೆ ಜತೆಯಾಗಿ ನಿರ್ಮಿಸಬಾರದು. ಹೀಗೆ ಮಾಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಹಾಗೆಯೇ ಅಡುಗೆ ಮನೆಯ ಬಾಗಿಲು ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಈ ಎರಡೂ ದಿಕ್ಕಿನಲ್ಲಿ ಬಾಗಿಲು ಮಾಡಲು ಸಾಧ್ಯವಿಲ್ಲದಿದ್ದರೆ ಆಗ್ನೇಯ ದಿಕ್ಕಿನಲ್ಲೂ ಮಾಡಬಹುದಾಗಿದೆ. ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ ಅನ್ನು ನೈರುತ್ಯ ದಿಕ್ಕಿನಲ್ಲೇ ಇಡಬೇಕು. ಅಡುಗೆ ಮಾಡುವಾಗ ನೀವು ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ಗ್ಯಾಸ್ ಸ್ಟವ್ ಅನ್ನು ಇರಿಸಬೇಕು.
ಕಿಟಕಿ, ಬಾಗಿಲು
ಅಡುಗೆ ಮನೆಯಲ್ಲಿ ಕಿಟಕಿ, ಬಾಗಿಲುಗಳು ಕೂಡ ಮುಖ್ಯ ಪಾತ್ರ ವಹಿಸುತ್ತವೆ. ಅಡುಗೆ ಮನೆಗೆ ಒಂದೇ ಬಾಗಿಲಿಡುವುದು ಉತ್ತಮ. ಒಂದು ವೇಳೆ ಎರಡು ಬಾಗಿಲು ನಿರ್ಮಿಸುವುದಾದರೂ ಅದನ್ನು ಪರಸ್ಪರ ವಿರುದ್ಧವಾಗಿ ನಿರ್ಮಿಸಬಾರದು. ಎರಡು ಬಾಗಿಲುಗಳಿರುವ ಅಡುಗೆ ಮನೆಯಲ್ಲಿ ಉತ್ತರ ಅಥವಾ ಪಶ್ಚಿಮಕ್ಕೆ ಅಭಿಮುಖವಾಗಿರುವ ಬಾಗಿಲನ್ನು ತೆಗೆದಿಡಬೇಕು. ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಬಾಗಿಲನ್ನು ಮುಚ್ಚಿರಬೇಕು. ಅಡುಗೆ ಮನೆಯ ಬಾಗಿಲನ್ನು ಯಾವಾಗಲೂ ಪ್ರದಕ್ಷಿಣಾಕಾರವಾಗಿ(ಬಲದಿಂದ ಎಡಕ್ಕೆ) ತೆಗೆಯಬೇಕು. ಅಪ್ರದಕ್ಷಿಣಾಕಾರವಾಗಿ (ಬಲದಿಂದ ಎಡಕ್ಕೆ) ಬಾಗಿಲು ತೆರೆಯುವುದು ಮನೆಯಲ್ಲಿ ನಿಧಾನ ಪ್ರಗತಿಗೆ ಕಾರಣವಾಗುತ್ತದೆ. ಅಡುಗೆ ಮನೆಯಲ್ಲಿ ಪೂರ್ವ ಅಥವಾ ದಕ್ಷಿಣ ಭಾಗದಲ್ಲಿ ಕಿಟಕಿಗಳನ್ನು ಇರಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಒಂದು ವೇಳೆ ಅಡುಗೆ ಮನೆಯಲ್ಲಿ ಎರಡು ಕಿಟಕಿಗಳಿದ್ದರೆ ಅವೆರೆಡು ಪರಸ್ಪರ ವಿರುದ್ಧ ದಿಕ್ಕಿನಲ್ಲಿರಬೇಕು.
ಸಿಂಕ್ ಬಗ್ಗೆ ಇರಲಿ ಗಮನ
ಅಡುಗೆ ಮನೆಯಲ್ಲಿ ಸ್ಟವ್ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನೀರಿನ ಸಿಂಕ್. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯ ಸಿಂಕ್ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಹಾಗೆಯೇ ಸಿಂಕ್ ಮತ್ತು ಗ್ಯಾಸ್ ಸ್ಟವ್ ಒಟ್ಟಿಗೆ ಅಂದರೆ ಒಂದೇ ದಿಕ್ಕಿನಲ್ಲಿ ಇರಬಾರದು. ಸ್ಟವ್ ಅಗ್ನಿಯ ಧಾತುವಾದರೆ ಸಿಂಕ್ ಜಲದ ಧಾತು. ಇವೆರೆಡು ಪರಸ್ಪರ ವಿರೋಧಿಯಾಗಿರುತ್ತವೆ. ಅದೇ ಕಾರಣಕ್ಕೆ ಸ್ಟವ್ ಮತ್ತು ಸಿಂಕ್ ಅನ್ನು ಒಟ್ಟಿಗೆ ಇಡಬಾರದು ಎನ್ನುವ ನಿಯಮವಿದೆ.
ಏನೇನು ಎಲ್ಲೆಲ್ಲಿರಬೇಕು?
ಅಡುಗೆ ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಿದೆ. ಮನೆಯ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಕುಡಿಯುವ ನೀರನ್ನು ಇಡಬೇಕು. ಒಂದು ವೇಳೆ ಈ ದಿಕ್ಕುಗಳಲ್ಲಿ ಇಡುವುದು ಸಾಧ್ಯವಿಲ್ಲದಿದ್ದರೆ ಪೂರ್ವ ದಿಕ್ಕಿನಲ್ಲೂ ಇಡಬಹುದು. ಹಾಗೆಯೇ ಫ್ರಿಜ್ ಅನ್ನು ಅಡುಗೆ ಮನೆಯ ಈಶಾನ್ಯ ಮೂಲೆಯಲ್ಲಿ ಇರಿಸಲೇಬಾರದು. ಅಡುಗೆ ಮನೆಯಲ್ಲಿ ಬಳಸುವ ಪಾತ್ರೆಗಳನ್ನು ದಕ್ಷಿಣ ಅಥವಾ ಪಶ್ಚಿಮ ಮೂಲೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಳ್ಳಬೇಕು. ಅಡುಗೆ ಮನೆಯಲ್ಲಿ ಬಳಕೆಯಾಗುವ ಎಲ್ಲ ವಿದ್ಯುತ್ ಉಪಕರಣಗಳನ್ನು ಅಡುಗೆ ಮನೆಯ ಆಗ್ನೇಯ ಮೂಲೆಯಲ್ಲಿ ಇರಿಸಬೇಕು. ಒಂದು ವೇಳೆ ಅವುಗಳನ್ನು ಈಶಾನ್ಯ ಮೂಲೆಯಲ್ಲಿ ಇರಿಸಿದರೆ ಅವು ಆದಷ್ಟು ಬೇಗ ಹಾಳಾಗುತ್ತದೆ ಎನ್ನುವುದು ವಾಸ್ತು ಶಾಸ್ತ್ರದಲ್ಲಿದೆ.
ಬಣ್ಣಕ್ಕೂ ಇದೆ ಪ್ರಾಮುಖ್ಯತೆ
ಅಡುಗೆ ಮನೆಯಲ್ಲಿ ಯಾವಾಗಲೂ ತಿಳಿ ಬಣ್ಣದ ಬಣ್ಣವನ್ನೇ ಹಚ್ಚಬೇಕು. ಕೆಂಪು, ತಿಳಿ ಗುಲಾಬಿ, ಕಿತ್ತಳೆ ಮತ್ತು ಹಸಿರು ಬಣ್ಣ ಹಚ್ಚಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಗಾಢ ಬಣ್ಣ ಹಚ್ಚುವುದರಿಂದ ಅಡುಗೆ ಮನೆಗೆ ಬೆಳಕೂ ಕಡಿಮೆಯಾಗಿಬಿಡುತ್ತದೆ. ತಿಳಿ ಬಣ್ಣ ಹಚ್ಚುವುದರಿಂದ ಬೆಳಕು ಪ್ರತಿಫಲಿಸಿ ಅಡುಗೆ ಮನೆಯಲ್ಲಿ ಬೆಳಕು ಹೆಚ್ಚು ಕಾಣುವಂತಾಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಹಾಗೆಯೇ ಅಡುಗೆ ಮನೆಯಲ್ಲಿ ಹಾಕುವ ಸ್ಲ್ಯಾಬ್ ಬಣ್ಣದ ಬಗ್ಗೆಯೂ ಗಮನ ಇರಲಿ. ಆಗ್ನೇಯ ದಿಕ್ಕಿನಲ್ಲಿರುವ ಅಡುಗೆ ಮನೆಗೆ ಕಂದು ಬಣ್ಣದ ಅಥವಾ ಹಸಿರು ಬಣ್ಣದ ಸ್ಲ್ಯಾಬ್ ಹಾಕಬೇಕು. ಅಡುಗೆ ಮನೆಯಲ್ಲಿ ಗ್ರಾನೈಟ್ ಬಳಕೆ ಸೂಕ್ತವಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: Vastu Tips For Children: ಸ್ಟಡಿ ಟೇಬಲ್ ವಾಸ್ತು ಹೀಗಿದ್ದರೆ ಮಕ್ಕಳು ಹೆಚ್ಚು ಅಂಕ ಗಳಿಸಲು ಅನುಕೂಲ