Site icon Vistara News

Vastu Tips: ಬೆಳಗೆ ಎದ್ದು ಈ ಐದು ವಸ್ತುಗಳನ್ನು ನೋಡಲೇಬಾರದು! ನೋಡಿದರೆ?

Vastu Tips

ದಿನ ಉತ್ತಮವಾಗಿರಬೇಕೆಂದರೆ ನಮ್ಮ ಬೆಳಗ್ಗೆ ಚೆನ್ನಾಗಿರಬೇಕು. ಮುಂಜಾನೆ ಸಂತೋಷದಿಂದ ತುಂಬಿದ್ದರೆ ದಿನ ಪೂರ್ತಿ ಸಂತೋಷ ಇರುತ್ತದೆ ಎನ್ನುವುದು ಎಲ್ಲರ ನಂಬಿಕೆ. ಅದು ನಿಜ ಕೂಡ ಹೌದು. ವಾಸ್ತುಶಾಸ್ತ್ರದಲ್ಲಿ ಕೂಡ ದಿನಪೂರ್ತಿ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಏಳುವಾಗಿನ ಕೆಲವು ಅಂಶಗಳು ಎಷ್ಟು ಮಹತ್ವದ್ದು ಎಂದು ತಿಳಿ ಹೇಳಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ಕೆಲವು ವಸುಗಳನ್ನು ನೋಡುವುದು ಅಂದಿನ ದಿನವನ್ನು ಹಾಳು ಮಾಡುತ್ತದೆ ಎಂದು (Vastu Tips) ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಅದರಲ್ಲಿನ ಕೆಲವು ಮಾಹಿತಿ ಇಲ್ಲಿದೆ ನೋಡಿ.

ಕನ್ನಡಿ

ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಿಕೊಳ್ಳುವುದು ಅನೇಕರ ಅಭ್ಯಾಸ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಹಾಗೆ ಮಾಡಲೇಬಾರದು. ಆ ರೀತಿ ಮಾಡುವುದು ಮಂಗಳಕರವಲ್ಲ ಎಂದು ಶಾಸ್ತ್ರ ಹೇಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ನೀವು ಆರಾಧಿಸುವ ದೇವರ ಫೋಟೋ ನೋಡಬೇಕು ಮತ್ತು ಪ್ರಾರ್ಥನೆ ಮಾಡಿಕೊಳ್ಳಬೇಕು. ಈ ದಿನ ಪೂರ್ತಿ ನನ್ನೊಂದಿಗಿದ್ದು, ದಿನವನ್ನು ಚೆಂದಗಾಣಿಸು ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ದಿನ ಚೆನ್ನಾಗಿರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ನಿಂತ ಗಡಿಯಾರ

ಬೆಳಿಗ್ಗೆ ಎದ್ದ ತಕ್ಷಣ ಸಮಯ ಎಷ್ಟಾಗಿದೆ ಎಂದು ನೋಡಲು ಗಡಿಯಾರ ನೋಡುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಆದರೆ ಯಾವುದೇ ಕಾರಣಕ್ಕೂ ಎದ್ದಾಕ್ಷಣ ನಿಂತು ಹೋಗಿರುವ ಗಡಿಯಾರವನ್ನು ನೋಡಬಾರದು. ಗಡಿಯಾರವು ಮನುಷ್ಯನ ಜೀವನದ ಅದೃಷ್ಟದೊಂದಿಗೆ ಸಂಬಂಧ ಹೊಂದಿದೆ. ಒಂದು ವೇಳೆ ಎದ್ದ ತಕ್ಷಣ ನೀವು ನಿಂತ ಗಡಿಯಾರದವನ್ನು ನೋಡಿದರೆ ಮನೆಯಲ್ಲಿ ಅಥವಾ ಮನೆಯ ಹೊರಗೆ ವಿವಾದದ ಪರಿಸ್ಥಿತಿ ಉಂಟಾಗಬಹುದು. ಹಾಗಾಗಿ ನಿಂತ ಗಡಿಯಾರವನ್ನು ಅಥವಾ ಒಡೆದ ಗಡಿಯಾರವನ್ನು ಮನೆಯ ಒಳಗೆ ಯಾವುದೇ ಕಾರಣಕ್ಕೂ ಇರಿಸಿಕೊಳ್ಳಬೇಡಿ.

ಕೊಳಕು ಪಾತ್ರೆ

ರಾತ್ರಿ ಊಟ ಮಾಡಿಯಾದ ಮೇಲೆ ಪಾತ್ರೆ ತೊಳೆಯುವುದಕ್ಕೆ ಅಸಡ್ಡೆ ಉಂಟಾಗಿ ಸುಮ್ಮನೆ ಮಲಗಿ ಬಿಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಬೆಳಗ್ಗೆ ಎದ್ದು ತೊಳೆದುಕೊಂಡರೆ ಆಯಿತು ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡು ಬಿಡುತ್ತಾರೆ. ಆದರೆ ಈ ಅಭ್ಯಾಸ ಕೂಡ ಒಳ್ಳೆಯದಲ್ಲ. ತೊಳೆಯದೆ ಉಳಿದ ಪಾತ್ರೆಗಳಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ಕೊಳಕು ಪಾತ್ರೆಗಳನ್ನು ನೋಡಿದರೆ ದೇಹದಲ್ಲಿ ಧನಾತ್ಮಕ ಶಕ್ತಿ ಸಂಚಲನವಾಗುವುದು ಕಡಿಮೆಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾಗಿ ರಾತ್ರಿಯ ಪಾತ್ರೆಯನ್ನು ರಾತ್ರಿಯೇ ತೊಳೆದಿಟ್ಟು ಮಲಗುವ ಅಭ್ಯಾಸ ಮಾಡಿಕೊಳ್ಳಿ.

ನೆರಳು

ಈ ಎಲ್ಲ ವಸ್ತುಗಳಂತೆಯೇ ಬೆಳಗ್ಗೆ ಎದ್ದ ತಕ್ಷಣ ನಮ್ಮ ನೆರಳನ್ನಾಗಲೀ ಅಥವಾ ಬೇರೆಯವರ ನೆರಳನ್ನಾಗಲಿ ನೋಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನೆರಳನ್ನು ನೋಡುವುದು ರಾಹುವಿನ ಚಿಹ್ನೆ ಎನ್ನಲಾಗುತ್ತದೆ. ರಾಹುವನ್ನು ತಾವೇ ತಾವಾಗಿ ಬದುಕಿನಲ್ಲಿ ಬಿಟ್ಟುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ನೆರಳನ್ನು ನೋಡುವುದರಿಂದ ಮನುಷ್ಯರಲ್ಲಿ ಉದ್ವೇಗ ಮತ್ತು ಭಯ ಹೆಚ್ಚಾಗುತ್ತದೆ. ಅದರಿಂದ ದಿನದ ಎಲ್ಲ ಕೆಲಸದಲ್ಲೂ ತೊಂದರೆಯುಂಟಾಗುತ್ತದೆ. ಏಕಾಗ್ರತೆ ಕುಸಿಯುತ್ತದೆ. ಯಾವ ಕೆಲಸವನ್ನೂ ಸರಿಯಾಗಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಬೆಳಗ್ಗೆ ಎದ್ದೊಡನೆ ನೆರಳನ್ನು ನೋಡುವುದಕ್ಕೆ ಹೋಗಬೇಡಿ.

ವ್ಯಾಘ್ರ ಮೃಗ

ಮನೆಗಳಲ್ಲಿ ಪ್ರಾಣಿಗಳ ಫೋಟೋ, ಚಿತ್ರಕಲೆಯನ್ನು ಹಾಕಿಕೊಳ್ಳುವ ಅಭ್ಯಾಸ ಅನೇಕರಿಗಿದೆ. ಆದರೆ ನೆನಪಿನಲ್ಲಿಡಿ ವ್ಯಾಘ್ರ ಮೃಗಗಳ ಫೋಟೋ ಅಥವಾ ಚಿತ್ರಕಲೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಷ್ಟೊಂದು ಒಳ್ಳೆಯದಲ್ಲ. ಹುಲಿ, ಸಿಂಹ, ಚಿರತೆಯಂತಹ ನರಭಕ್ಷಕ ಪ್ರಾಣಿಗಳ ಫೋಟೋವನ್ನು ಬೆಳಗ್ಗೆ ಎದ್ದೊಡನೆ ನೋಡುವುದು ಅಶುಭಕರ ಎಂದು ಹೇಳಲಾಗುತ್ತದೆ. ಅದೇ ರೀತಿ ಹಸುವಿನ ಚಿತ್ರ ನೋಡುವುದನ್ನು ಶುಭಕರ ಎಂದೂ ಹೇಳಲಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ವ್ಯಾಘ್ರ ಮೃಗಗಳ ಫೋಟೋ ನೋಡುವುದರಿಂದ ನಿಮ್ಮ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು ಅಥವಾ ನಿಮ್ಮ ಕೆಲಸದ ಸ್ಥಳದಲ್ಲಿ ವಿವಾದ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಅಂತಹ ಫೋಟೋಗಳನ್ನು ಮನೆಯಲ್ಲಿ ಇರಿಸಿಕೊಳ್ಳಬೇಡಿ.

ಇದನ್ನೂ ಓದಿ: Vastu For Money: ದುಡಿದ ದುಡ್ಡು ನಿಮ್ಮ ಕೈಯಲ್ಲೇ ಉಳಿಯಬೇಕೆ? ಈ ಸರಳ ವಾಸ್ತು ಸೂತ್ರ ಪಾಲಿಸಿ

Exit mobile version