Site icon Vistara News

Vastu Tips For Students: ವಿದ್ಯಾರ್ಥಿಗಳು ಸ್ಟಡಿ ಮಾಡುವಾಗ ಈ ವಾಸ್ತು ಸೂತ್ರ ಪಾಲಿಸಿದರೆ ಸಕ್ಸೆಸ್‌!

Vastu Tips For Students

ಮನೆ ಕಟ್ಟುವುದರಿಂದ ಹಿಡಿದು ದೇವರ ಪೂಜೆ ಮಾಡುವವರೆಗೆ ಎಲ್ಲದಕ್ಕೂ ವಾಸ್ತು (Vastu Tips For Students) ತುಂಬಾನೇ ಮುಖ್ಯ. ವಾಸ್ತು ಪ್ರಕಾರವಾಗಿ ನಡೆದುಕೊಂಡರೆ ಒಳ್ಳೆಯ ಪರಿಣಾಮವನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳ ಓದಿನ ವಿಚಾರದಲ್ಲೂ ವಾಸ್ತು ಪ್ರಭಾವ ಬೀರುತ್ತದೆ. ಹಾಗಾದರೆ ವಿದ್ಯಾರ್ಥಿಗಳಿಗೆ ವಾಸ್ತು ಪ್ರಭಾವ ಚೆನ್ನಾಗಿರಬೇಕು ಎಂದರೆ ಏನು ಮಾಡಬೇಕು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸ್ಟಡಿ ರೂಮ್‌ ಎಲ್ಲಿರಬೇಕು?

ನೀವು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ಕೊಠಡಿಯು ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಅದರಿಂದ ನಿಮ್ಮ ಗ್ರಹಿಕೆ ಹೆಚ್ಚಾಗುತ್ತದೆ ಮತ್ತು ನಿಮಗೆ ದಣಿವಾಗುವುದು ಕಡಿಮೆಯಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕು ನಿಮಗೆ ಶಕ್ತಿಯುತ ಎನಿಸುತ್ತದೆಯಾದ್ದರಿಂದ ಆ ಭಾಗದಲ್ಲೇ ಇರುವ ಕೊಠಡಿಯಲ್ಲಿ ಅಧ್ಯಯನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಅಧ್ಯಯನ ಕೊಠಡಿಯ ಬಾಗಿಲು

ಹಾಗೆಯೇ ನೀವು ಅಧ್ಯಯನ ಮಾಡುವುದಕ್ಕೆ ಕೂರುವ ಕೋಣೆಯ ಬಾಗಿಲಿನ ದಿಕ್ಕೂ ಮುಖ್ಯವಾಗುತ್ತದೆ. ಆ ಕೋಣೆಯ ಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು.

ಶೌಚಾಲಯದ ಕೆಳಗೆ ಇರಬಾರದು

ನೀವು ಅಧ್ಯಯನ ಮಾಡುವ ಕೊಠಡಿಯು ಮನೆಯ ಶೌಚಾಲಯದ ಕೆಳಗಾಗಲಿ ಅಥವಾ ಮನೆಯ ಬೀಮ್‌ ಅಥವಾ ಮೆಟ್ಟಿಲುಗಳ ಕೆಳಗೆ ಇರಬಾರದು.

ಕನ್ನಡಿಯ ಪ್ರತಿಬಿಂಬ

ನೀವು ಅಧ್ಯಯನ ಮಾಡುತ್ತ ಕುಳಿತಾಗ ಪುಸ್ತಕಗಳ ಮೇಲೆ ಯಾವುದೇ ಕನ್ನಡಿಯ ಪ್ರತಿಬಿಂಬ ಬೀಳುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಕನ್ನಡಿಯ ಪ್ರತಿಬಿಂಬ ಬಿದ್ದರೆ ಅದು ನಿಮ್ಮ ಮೇಲಿನ ಒತ್ತಡವನ್ನು ಹೆಚ್ಚು ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಯಾವ ದಿಕ್ಕಿಗೆ ಮುಖ?

ಓದುವಾಗ ನಿಮ್ಮ ದೇಹ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಎಂದಾದರೆ ನೀವು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಓದುವಾಗ ಸೂರ್ಯನ ಬೆಳಕು ಅತ್ಯಗತ್ಯವಾಗಿರುತ್ತದೆ. ಓದುವ ಸಮಯದಲ್ಲಿ ನಿಮ್ಮ ನೆರಳು ನಿಮ್ಮ ಪುಸ್ತಕದ ಮೇಲೆ ಬೀಳಬಾರದು. ಈ ಎರಡೂ ಅಂಶಗಳನ್ನು ನೀವು ನೋಡಿಕೊಂಡಿದ್ದೀರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಏಕಾಗ್ರತೆ ಇರಬೇಕೆಂದರೆ

ಓದುವಾಗ ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಓದುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಓದಿನ ಮೇಲೆ ಏಕಾಗ್ರತೆ ಹೆಚ್ಚಾಗುತ್ತದೆ ಎನ್ನಲಾಗಿದೆ. ಓದುವುದಕ್ಕೆ ಅಡ್ಡಿಪಡಿಸಬಹುದಾದಂತಹ ಕಂಬಗಳು, ಮೊನಚಾಗಿರುವ ಅಂಚುಗಳನ್ನು ಹೊಂದಿರುವ ಪೀಠೋಪಕರಣಗಳ ಜತೆ ಆಟ ಆಡುವುದಕ್ಕೆ ಹೋಗಬೇಡಿ. ಇದರಿಂದ ಏಕಾಗ್ರತೆ ಹಾಳಾಗುವ ಸಾಧ್ಯತೆಯಿರುತ್ತದೆ.

ಟೇಬಲ್‌ ಹೇಗಿರಬೇಕು?

ನೀವು ಓದುವುದಕ್ಕೆ ಬಳಸುವ ಟೇಬಲ್‌ ಆಕೃತಿ ಚೌಕಾಕಾರ ಅಥವಾ ಆಯತಾಕಾರದಲ್ಲಿ ಇರಬೇಕು. ಅದನ್ನು ಹೊರತು ಬೇರೆ ಆಕಾರಗಳಲ್ಲಿ ಇದ್ದರೆ ನಿಮ್ಮ ಏಕಾಗ್ರತೆ ಓದುವುದನ್ನು ಬಿಟ್ಟು ಟೇಬಲ್‌ನತ್ತ ಹೊರಳುತ್ತದೆ. ಹಾಗೆಯೇ ಟೇಬಲ್‌ನ ಅಂಚು ಚೂಪಾಗಿರದಂತೆ ನೋಡಿಕೊಳ್ಳಿ.

ಟೇಬಲ್‌ ಯಾವ ದಿಕ್ಕಿನಲ್ಲಿರಬೇಕು?

ಅಧ್ಯಯನಕ್ಕೆ ಬಳಸುವ ಟೇಬಲ್‌ ಅನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಿಸಿ. ಇದರಿಂದ ನೀವು ಅದೇ ದಿಕ್ಕುಗಳಲ್ಲಿ ಕುಳಿತು ಓದುವಂತಾಗುತ್ತದೆ. ಮತ್ತು ಅದರಿಂದ ಅಧ್ಯಯನ ಉತ್ತಮವಾಗುತ್ತದೆ.

ಪುಸ್ತಕಗಳು ಅಚ್ಚುಕಟ್ಟಾಗಿರಲಿ

ಓದುವ ಟೇಬಲ್‌ ಸ್ವಚ್ಛವಾಗಿದ್ದು, ಅದರ ಮೇಲೆ ಪುಸ್ತಕಗಳು ಅಚ್ಚುಕಟ್ಟಾಗಿ ಜೋಡಿಸಿಟ್ಟುಕೊಳ್ಳಿ. ಒಂದು ವೇಳೆ ಸ್ವಚ್ಛತೆ ಇಲ್ಲದೆ, ಪುಸ್ತಕಗಳು ಅಸ್ತವ್ಯಸ್ತವಾಗಿದ್ದರೆ ನಿಮ್ಮಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.
ಓದುವ ಟೇಬಲ್‌ ಗೋಡೆಗೆ ವಿರುದ್ಧವಾಗಿರಬಾರದು. ಈ ವಿಚಾರದಲ್ಲಿ ಜಾಗೃತರಾಗಿರಿ.

ಸರಸ್ವತಿ ಯಂತ್ರ ಇರಲಿ

ನೀವು ಮಲಗುವ ಹಾಸಿಗೆ ಹಾಗೇ ಓದುವ ಟೇಬಲ್‌ ಬಳಿ ಸರಸ್ವತಿ ಯಂತ್ರವನ್ನು ಇರಿಸಿಕೊಳ್ಳಿ. ಇದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಪುಸ್ತಕದ ಕಪಾಟನ್ನು ಓದುವುದಕ್ಕೆ ಬಳಸುವ ಟೇಬಲ್‌ನ ಮೇಲೆ ಇರಿಸಬೇಡಿ.

ಪ್ರಕಾಶಮಾನವಾಗಿರಲಿ

ನೀವು ಓದುವ ಕೊಠಡಿಯು ಪ್ರಕಾಶಮಾನವಾಗಿರಬೇಕು. ಸೂರ್ಯನ ಬೆಳಕು ಕೊಠಡಿಗೆ ಚೆನ್ನಾಗಿ ಬರುವಂತಿರಬೇಕು. ಕೊಠಡಿಯಲ್ಲಿ ಮಂದವಾದ ಬೆಳಕಿದ್ದರೆ ನಿಮ್ಮ ಶಿಕ್ಷಣ ಕೂಡ ನಿಧಾನವಾಗುತ್ತದೆ. ಏಕಾಗ್ರತೆ ತಪ್ಪುತ್ತದೆ.

ಸ್ಟಡಿ ಲ್ಯಾಂಪ್‌ ಬಳಸಿ

ವಾಸ್ತು ಪ್ರಕಾರವಾಗಿ ವಿದ್ಯಾರ್ಥಿಗಳು ಓದುವ ಟೇಬಲ್‌ ಮೇಲೆ ಸ್ಟಡಿ ಲ್ಯಾಂಪ್‌ ಬಳಸಬೇಕು. ಇದರಿಂದ ಓದಿನ ಮೇಲಿನ ಏಕಾಗ್ರತೆ ಹೆಚ್ಚಾಗುತ್ತದೆ. ಟೇಬಲ್‌ ಮುಂಭಾಗದಲ್ಲಿ ತೆರೆದ ಸ್ಥಳ ಇರುವುದು ಅವಶ್ಯಕ. ಇದರಿಂದ ನೀವು ಹೊಸ ಆಲೋಚನೆ ಮಾಡಲು ಮತ್ತು ವಿಧಾನವನ್ನು ಅನುಸರಿಸಲು ಪ್ರೇರಣೆ ಸಿಗುತ್ತದೆ.

ಸ್ಫೂರ್ತಿ ತುಂಬುವ ಚಿತ್ರಗಳಿರಲಿ

ನೀವು ಓದುವ ಕೋಣೆಯಲ್ಲಿ ನಿಮಗೆ ಸ್ಫೂರ್ತಿ ನೀಡಲು ಓಡುವ ಕುದುರೆ, ಉದಯಿಸುತ್ತಿರುವ ಸೂರ್ಯ, ಜ್ಞಾನದ ದೇವತೆ ಸರಸ್ವತಿ, ಗಣೇಶನ ಚಿತ್ರಗಳನ್ನು ಇಟ್ಟುಕೊಳ್ಳಬಹುದು. ನೀವು ಓದು ಮತ್ತು ಇತರೆ ಚಟುವಟಿಕೆಗಳಲ್ಲಿ ಗಳಿಸಿಕೊಂಡ ಪ್ರಮಾಣ ಪತ್ರಗಳನ್ನು ಟ್ರೋಫಿಗಳನ್ನು ಓದುವ ಕೋಣೆಯೊಳಗೆ ಪ್ರದರ್ಶಿಸಿಕೊಳ್ಳಿ. ಇದರಿಂದ ನಿಮಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ.

ಯಾವ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು?

ಓದುವಾಗ ತಿಳಿ ಬಣ್ಣಗಳಾದ ಬಿಳಿ, ಹಸಿರುವ, ಹಳದಿ, ಕಿತ್ತಳೆ ಬಣ್ಣದ ಬಟ್ಟೆಯನ್ನೇ ಧರಿಸಿ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಕಪ್ಪು ಬಣ್ಣದ ಬಟ್ಟೆ ಧರಿಸಿ ಓದುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಓದುವ ಟೇಬಲ್‌ ಮೇಲೆ ಯಾವ ಕಾರಣಕ್ಕೂ ಕನ್ನಡಿಯನ್ನು ಇಡಬೇಡಿ. ಓದುವ ಟೇಬಲ್‌ ಮೇಲೆ ಭೂಪಟದ ಗ್ಲೋಬ್‌ ಅನ್ನು ಇಡುವುದು ಒಳ್ಳೆಯದು ಎಂದು ಹೇಳಲಾಗಿದೆ.

ಇದನ್ನೂ ಓದಿ: Vastu Tips: ಬೆಳಗೆ ಎದ್ದು ಈ ಐದು ವಸ್ತುಗಳನ್ನು ನೋಡಲೇಬಾರದು! ನೋಡಿದರೆ?

Exit mobile version