ಯಶಸ್ಸು ಮತ್ತು ಕೀರ್ತಿ ಯಾರಿಗೆ (Vastu Tips For Success) ಬೇಡ ಹೇಳಿ. ಸಮಾಜದಲ್ಲಿ ತಾವೂ ಕೂಡ ಪ್ರಖ್ಯಾತರಾಗಬೇಕು ಎನ್ನುವುದು ಅನೇಕರ ಕನಸಾಗಿರುತ್ತದೆ. ಅದಕ್ಕೆಂದು ಅವರು ನಾನಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಕೇವಲ ಪ್ರಯತ್ನಗಳಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಅದೃಷ್ಟ ಮತ್ತು ದೇವರ ಕೃಪೆಯೂ ನಮ್ಮ ಮೇಲಿದ್ದರೆ ಮಾತ್ರ ಯಶಸ್ಸು ಎನ್ನುವುದು ನಮ್ಮ ಹತ್ತಿರಕ್ಕೆ ಸುಳಿಯುತ್ತದೆ. ಯಾವುದೇ ಕೆಲಸದಲ್ಲಿ ನೀವು ಗೆಲುವು ಸಾಧಿಸಿಕೊಳ್ಳಬೇಕೆಂದರೆ ವಾಸ್ತು ಕೂಡ ಅಷ್ಟೆ ಮುಖ್ಯವಾಗುತ್ತದೆ. ಹಾಗಾದರೆ ಯಾವ ರೀತಿಯಲ್ಲಿ ವಾಸ್ತುವನ್ನು ಪರಿಪಾಲಿಸಿದರೆ ಯಶಸ್ಸು ನಿಮ್ಮದಾಗುತ್ತದೆ ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕಚೇರಿ ಸ್ಥಳದ ದಿಕ್ಕು
ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಬೇಕು, ಹಾಗೆಯೇ ನೀವು ಪ್ರಖ್ಯಾತರಾಗಬೇಕು ಎಂದರೆ ನಿಮ್ಮ ಕಚೇರಿಯ ದಿಕ್ಕುಗಳು ತುಂಬಾ ಮುಖ್ಯವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ನೀವು ಕೆಲಸ ಮಾಡುವ ಸ್ಥಳವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ಈ ದಿಕ್ಕುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಂಗಳಕರ ಎಂದು ನಂಬಲಾಗುತ್ತದೆ. ಕಚೇರಿಯಲ್ಲಿ ನಿಮ್ಮ ಡೆಸ್ಕ್ ಅನ್ನು ಬಾಗಿಲಿಗೆ ಎದುರಾಗುವಂತೆ ಇರಿಸಿಕೊಳ್ಳುವುದು ಒಳ್ಳೆಯದು. ಹಾಗೆಯೇ ಕಚೇರಿಯೊಳಗೆ ನೈಸರ್ಗಿಕ ಬೆಳಕು ಹೆಚ್ಚಾಗಿ ಬರುವಂತೆ ಮಾಡಿಕೊಳ್ಳಿ ಮತ್ತು ಸಸ್ಯಗಳನ್ನು ಇಡುವುದರಿಂದ ಕಚೇರಿಯಲ್ಲಿ ಉತ್ಪಾದಕ ಮತ್ತು ಧನಾತ್ಮಕ ವಾತಾವರಣ ರಚನೆಯಾಗುತ್ತದೆ.
ಬಣ್ಣವೂ ಮುಖ್ಯವೇ
ಬಣ್ಣಗಳು ನಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ಬಣ್ಣವನ್ನು ಬಳಸುವುದರಿಂದ ನಿಮ್ಮ ಯಶಸ್ಸು ಮತ್ತು ಖ್ಯಾತಿಯ ಅವಕಾಶವನ್ನು ಹೆಚ್ಚಿಸಬಹುದು. ನೀವು ಕೆಲಸ ಮಾಡುವ ಕಚೇರಿಯಲ್ಲಿ ಕೆಂಪು, ಕಿತ್ತಳೆ ಮತ್ತು ಹಳದಿಯಂತಹ ಬಣ್ಣವನ್ನು ಹಚ್ಚಿ. ಈ ಶಕ್ತಿಗಳು ರೋಮಾಂಚಕತೆ, ಶಕ್ತಿ, ಯಶಸ್ಸು ಮತ್ತು ಸೃಜನಶೀಲತೆಗೆ ಸಂಬಂಧಿಸಿದ ಬಣ್ಣಗಳಾಗಿವೆ. ನಿಮ್ಮ ಕೆಲಸದ ಸ್ಥಳದಲ್ಲಿ ಈ ಬಣ್ಣಗಳನ್ನು ಹಚ್ಚಿಸಿ. ಅದರಿಂದ ನಿಮಗೆ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹಾಗೆಂದ ಮಾತ್ರಕ್ಕೆ ಪೂರ್ತಿ ಕಟ್ಟಡಕ್ಕೇ ಒಂದೇ ಬಣ್ಣವನ್ನು ಹಚ್ಚುವುದಕ್ಕೆ ಹೋಗಬೇಡಿ. ಹಾಗೆ ಮಾಡಿದರೆ ಸಮತೋಲನ ತಪ್ಪುವ ಸಾಧ್ಯತೆ ಇರುತ್ತದೆ.
ಗೊಂದಲ ಮುಕ್ತ ಪರಿಸರ
ಯಶಸ್ಸು ಮನುಷ್ಯನ ಕೈ ಹಿಡಿಯಬೇಕೆಂದರೆ ಆತ ಗೊಂದಲವಿಲ್ಲದ ವಾತಾವರಣದಲ್ಲಿ ಇರುವುದೂ ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಗೊಂದಲಮಯ ಪರಿಸರವು ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತದೆ. ಹಾಗೆಯೇ ಪ್ರಗತಿಯಾಗದಂತೆ ಮಾಡುತ್ತದೆ. ನೀವು ವಾಸಿಸುವ ಸ್ಥಳ ಮತ್ತು ಕೆಲಸ ಮಾಡುವ ಸ್ಥಳಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಹಾಗೆಯೇ ಅಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಜೋಡಣೆ ಮಾಡಿಟ್ಟುಕೊಳ್ಳಿ. ನೀವು ಕೆಲಸ ಮಾಡುವ ಸ್ಥಳ ಸ್ವಚ್ಛವಾಗಿದ್ದರೆ ಶಾಂತತೆಯ ಭಾವ ಸೃಷ್ಟಿಯಾಗುತ್ತದೆ ಹಾಗಾಗಿ ಸ್ಪಷ್ಟತೆ ಸಿಗುತ್ತದೆ. ಆಗ ನೀವು ಹೆಚ್ಚಿನ ಗಮನವನ್ನು ಉತ್ಪಾದಕತೆಯ ಕಡೆಗೆ ನೀಡಬಹುದು.
ಯಶಸ್ಸು ಮತ್ತು ಖ್ಯಾತಿಯ ಸಂಕೇತ
ಯಶಸ್ಸು ಮತ್ತು ಖ್ಯಾತಿಗೆ ಸಂಬಂಧಿಸಿದಂತೆ ಹಲವಾರು ಚಿಹ್ನೆಗಳಿವೆ. ಅಂತಹ ಚಿಹ್ನೆಗಳನ್ನು ನೀವು ನಿಮ್ಮ ಕಚೇರಿಯಲ್ಲಿ ಇಡಬಹುದು. ಅದರಿಂದ ನಿಮ್ಮಲ್ಲಿ ಸಕಾರಾತ್ಮಕ ಭಾವನೆ ಮೂಡುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ವೈಯಕ್ತಿಕ ಗುರಿಯನ್ನು ಸಂಕೇತಿಸುವಂತಹ ವಸ್ತುಗಳನ್ನು ಅಥವಾ ಚಿತ್ರಗಳನ್ನು ಇಡುವುದು ನಿಮ್ಮನ್ನು ಹೆಚ್ಚು ಕೆಲಸ ಮಾಡುವಂತೆ ಮಾಡುತ್ತದೆ. ಅದರಿಂದಾಗಿ ಸಕಾರಾತ್ಮಕತೆ ಹೆಚ್ಚಾಗಿ ನೀವು ನಿಮ್ಮ ಗುರಿಯತ್ತ ಸಾಗುತ್ತೀರಿ. ಅದರ ಜತೆಯಲ್ಲಿ ಸಮೃದ್ಧಿಯನ್ನು ಸೂಚಿಸುವಂತಹ ಕೆಲವು ಚಿತ್ರಗಳನ್ನೂ ಇಟ್ಟುಕೊಳ್ಳಬಹುದು. ಉದಾಹರಣೆಗೆ ಉದಯಿಸುತ್ತಿರುವ ಸೂರ್ಯನ ಫೋಟೋ ಅಥವಾ ಚಿತ್ರ, ನೀರಿನ ಕಾರಂಜಿ ಚಿತ್ರವು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
ಸಮತೋಲನ, ಸಾಮರಸ್ಯ
ನಿಮ್ಮ ವಾಸಸ್ಥಳ ಮತ್ತು ಕಚೇರಿಯಲ್ಲಿ ಸಮತೋಲನ ಮತ್ತು ಸಾಮರಸ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ. ಕಚೇರಿ ಮತ್ತು ಮನೆಯಲ್ಲಿ ಪೀಠೋಪಕರಣಗಳ ಜೋಡಣೆ ಸರಿಯಾದ ಕ್ರಮದಲ್ಲಿರಬೇಕು. ಮನೆ, ಕಚೇರಿಯೊಳಗೆ ನೈಸರ್ಗಿಕವಾಗಿ ಸೂರ್ಯನ ಬೆಳಕು ಬರುವಂತಿರಬೇಕು. ಹಾಗೆಯೇ ಒಳಾಂಗಣ ಸಸ್ಯಗಳನ್ನು ಇಡುವ ಮೂಲಕ ಇನ್ನಷ್ಟು ಧನಾತ್ಮಕ ಶಕ್ತಿಯನ್ನು ಪಡೆಯಬಹುದು. ವೈಯಕ್ತಿಕ ಆಸಕ್ತಿ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವಂತಹ ಕಲಾತ್ಮಕ ವಾತಾವರಣವನ್ನು ರಚಿಸಿಕೊಳ್ಳಬೇಕು. ಈ ಎಲ್ಲ ಪ್ರಯತ್ನಗಳು ನಿಮ್ಮನ್ನು ಯಶಸ್ಸು ಮತ್ತು ಪ್ರಖ್ಯಾತಿಯ ಹಾದಿಯತ್ತ ಕರೆದುಕೊಂಡು ಹೋಗುತ್ತದೆ.
ಈ ಎಲ್ಲದರ ಜತೆ ಮನುಷ್ಯ ತನ್ನ ಗುರಿಯತ್ತ ಸಾಗಲು ಶ್ರದ್ಧೆಯಿಂದ ಕೆಲಸ ಮಾಡುವುದೂ ಮುಖ್ಯವಾಗುತ್ತದೆ. ಇಲ್ಲಿ ವಿವರಿಸಲಾಗಿರುವ ಸಲಹೆಗಳ ಜತೆಯಲ್ಲಿ ಕೆಲಸವನ್ನು ನಿಷ್ಠೆಯಿಂದ ಮಾಡುತ್ತ ನಡೆಯಿರಿ. ಗೊಂದಲಮುಕ್ತವಾದ ಗುರಿಯನ್ನು ಇಟ್ಟುಕೊಳ್ಳಿ. ವಾಸ್ತು ಶಾಸ್ತ್ರವನ್ನು ಕ್ರಮಬದ್ಧವಾಗಿ ಪಾಲಿಸುತ್ತಾ ಸಾಗಿರಿ. ಹಾಗೆ ಮಾಡಿದಾಗ ಯಶಸ್ಸು ನಿಮ್ಮ ಕೈನಲ್ಲಿರುತ್ತದೆ. ಹಾಗೆಯೇ ಸಮಾಜ ನಿಮ್ಮನ್ನು ಪ್ರಖ್ಯಾತ ವ್ಯಕ್ತಿಯಾಗಿಯೂ ನೋಡಲಾರಂಭಿಸುತ್ತದೆ.
ಇದನ್ನೂ ಓದಿ: Vastu For Shop: ಅಂಗಡಿಯ ವಾಸ್ತು ಹೀಗಿದ್ದರೆ ಭರ್ಜರಿ ವ್ಯಾಪಾರ