ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿ ಕೋಣೆಯ ವಾಸ್ತುವು ಅತ್ಯಂತ ಮುಖ್ಯವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗ ಬೇಕೆಂದರೆ, ಮನೆಯು ವಾಸ್ತು ಪ್ರಕಾರ ಇದ್ದಾಗ ಮಾತ್ರವೇ ಸಾಧ್ಯವಾಗುತ್ತದೆ. ಮನೆಯ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಲು ವಾಸ್ತು ಶಾಸ್ತ್ರದಲ್ಲಿ (Vastu Tips) ಹೇಳಿರುವ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಅವಶ್ಯಕವಾಗುತ್ತದೆ. ಹಾಗಾಗಿ ಮನೆಯ ಅತೀ ಮುಖ್ಯ ಭಾಗವಾದ ಊಟ ಮಾಡುವ ಸ್ಥಳ ಅಂದರೆ ಡೈನಿಂಗ್ ಹಾಲ್‌ನ ವಾಸ್ತು ಹೇಗಿರಬೇಕೆಂಬುದನ್ನು ತಿಳಿಯೋಣ.
ವಾಸ್ತು ಶಾಸ್ತ್ರದಲ್ಲಿ ಮನೆಯ ಅಡುಗೆ ಕೋಣೆಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಊಟ ಮಾಡುವ ಸ್ಥಳಕ್ಕೂ ನೀಡಲಾಗಿದೆ. ಅಡುಗೆ ಕೋಣೆಯ ಪಕ್ಕದಲ್ಲೇ ಅಥವಾ ಅಡುಗೆ ಕೋಣೆಗೆ ಹೊಂದಿಕೊಂಡಂತೆಯೇ ಡೈನಿಂಗ್ ಹಾಲ್ ಅನ್ನು ನಿರ್ಮಿಸಲಾಗಿರುತ್ತದೆ. ಡೈನಿಂಗ್ ಹಾಲ್‌ನ ವಾಸ್ತುವು ನೇರವಾಗಿ ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಡೈನಿಂಗ್ ಹಾಲ್ ನಿರ್ಮಾಣದ ಸಂದರ್ಭದಲ್ಲಿ ಸರಿಯಾದ ದಿಕ್ಕು ಮತ್ತು ಸೂಕ್ತವಾದ ಡೈನಿಂಗ್ ಟೇಬಲ್ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ.
ಮನೆಯ ಸದಸ್ಯರೆಲ್ಲೂ ಒಟ್ಟಾಗಿ ಕುಳಿತು, ಅನ್ನಪೂರ್ಣೇಶ್ವರಿಗೆ ನಮಿಸಿ ಊಟ ಮಾಡುವ ಸ್ಥಳಕ್ಕೆ ವಿಶೇಷ ಶಕ್ತಿ ಇದ್ದು, ಇದು ಮನೆಗೆ ಸಕಾರಾತ್ಮಕತೆಯನ್ನು ನೀಡುತ್ತದೆ. ಹಾಗಾಗಿ ಮನೆಯ ಸದಸ್ಯರ ಸುಖ, ಆರೋಗ್ಯ ಮತ್ತು ನೆಮ್ಮದಿಗೆ ಡೈನಿಂಗ್ ಹಾಲ್‌ನ ದಿಕ್ಕು ಮುಖ್ಯವಾಗುತ್ತದೆ.
ಸರಿಯಾದ ದಿಕ್ಕು ಯಾವುದು?
ವಾಸ್ತು ಪ್ರಕಾರ ಅಡುಗೆ ಮನೆಯು ಆಗ್ನೇಯ ದಿಕ್ಕಿನಲ್ಲಿರುವುದು ಸೂಕ್ತ. ಅಡುಗೆ ಮನೆಯು ಯಾವುದೇ ಅನಿವಾರ್ಯ ಪರಿಸ್ಥಿತಿಯಲ್ಲೂ ನೈಋತ್ಯ ದಿಕ್ಕಿಗಿರಬಾರದು. ಇದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಡುವುದಲ್ಲದೇ, ಸದಸ್ಯರ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಡೈನಿಂಗ್ ಹಾಲ್ ಸಹ ಅಡುಗೆ ಮನೆಯ ಪಕ್ಕದಲ್ಲಿ ಅಥವಾ ಅದಕ್ಕೆ ಹೊಂದಿಕೊಂಡೇ ಇದ್ದರೆ ಉತ್ತಮ. ಹೀಗಿರುವುದು ಅತ್ಯಂತ ಸೂಕ್ತವೆಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಅಡುಗೆ ಕೋಣೆಯ ದಕ್ಷಿಣಕ್ಕೆ, ಪಶ್ಚಿಮಕ್ಕೆ ಅಥವಾ ಪೂರ್ವ ದಿಕ್ಕಿಗೆ ಡೈನಿಂಗ್ ಹಾಲ್ ಹೊಂದಿಕೊಂಡಿದ್ದರೆ ಒಳ್ಳೆಯದು. ಡೈನಿಂಗ್ ಹಾಲ್ ನಿರ್ಮಾಣಕ್ಕೆ ಪಶ್ಚಿಮ ದಿಕ್ಕು ಅತ್ಯಂತ ಸೂಕ್ತವಾದ ದಿಕ್ಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಬೆಳಕು ಚೆನ್ನಾಗಿರಲಿ!
ಮನೆಗೆ ಶುದ್ಧವಾದ ಗಾಳಿ ಮತ್ತು ಉತ್ತಮ ಬೆಳಕು ಅತ್ಯಂತ ಮುಖ್ಯವಾಗುತ್ತದೆ. ಹಾಗೆಯೇ ಡೈನಿಂಗ್ ಹಾಲ್‌ಗೂ ಉತ್ತಮ ಬೆಳಕಿನ ಅವಶ್ಯಕತೆ ಇರುತ್ತದೆ. ಡೈನಿಂಗ್ ಹಾಲ್ ಕತ್ತಲಾಗಿರಬಾರದು. ಉತ್ತಮ ಬೆಳಕು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಮತ್ತು ಇದರಿಂದ ಮನೆಯ ಸದಸ್ಯರ ಮಾನಸಿಕ ಸ್ಥಿತಿ ಮತ್ತಷ್ಟು ಉತ್ತಮವಾಗುತ್ತದೆ.
ಯಾವ ಬಣ್ಣ ಸೂಕ್ತ?
ಡೈನಿಂಗ್ ಹಾಲ್‌ನ ಬಣ್ಣ ಗಾಢವಾಗಿದ್ದು, ಕಣ್ಣಿಗೆ ತಂಪೆರೆಯುವಂತಿರಬೇಕು. ಹಿಂಸೆ ಮತ್ತು ಕೆಟ್ಟದ್ದನ್ನುವನ್ನು ಬಿಂಬಿಸುವ ಬಣ್ಣಗಳನ್ನು ಬಳಸದಿರುವುದು ಉತ್ತಮ. ಹಣ್ಣು, ತರಕಾರಿ, ತೋಟ ಮತ್ತು ಸಹಜ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಚಿತ್ರಗಳನ್ನು ಬಳಸುವುದು ಉತ್ತಮ. ಕೇಸರಿ, ಹಸಿರು ಮತ್ತು ಕ್ರೀಮ್ ಕಲರ್‌ಗಳನ್ನು ಬಳಸಬಹುದಾಗಿದೆ.
ಚೆಂದದ ಹೂವುಗಳಿಂದ ಡೈನಿಂಗ್ ಟೇಬಲ್ ಅನ್ನು ಅಲಂಕರಿಸುವುದರ ಜೊತೆಗೆ ಕಣ್ಣಿಗೆ ಮುದ ನೀಡುವ ಟೇಬಲ್ ಕ್ಲಾತ್ ಬಳಸುವುದು ಉತ್ತಮ. ಅಷ್ಟೇ ಅಲ್ಲದೇ ಬೇಡದಿರುವ ವಸ್ತುಗಳು ಡೈನಿಂಗ್ ಟೇಬಲ್ ಮೇಲೆ ಇಡಬಾರದು ಮತ್ತು ಅವಶ್ಯಕವಾಗಿರುವ ವಸ್ತುಗಳು ಮಾತ್ರ ಟೇಬಲ್ ಮೇಲೆ ಇರುವಂತೆ ನೋಡಿಕೊಳ್ಳಬೇಕು.
ಡೈನಿಂಗ್ ಟೇಬಲ್ ಆಕಾರ ಹೀಗಿರಲಿ!
ವೃತ್ತಾಕಾರ ಮತ್ತು ಸರಿಯಾದ ಆಕಾರವಿಲ್ಲದ ಟೇಬಲ್‌ಗಳನ್ನು ಬಳಸಬಾರದು. ಡೈನಿಂಗ್ ಟೇಬಲ್‌ಗಾಗಿ ಬಳಸುವ ಟೇಬಲ್‌ನ ಆಕಾರ ಚೌಕ ಅಥವಾ ಆಯತಾಕಾರದ್ದಾಗಿದ್ದರೆ ಉತ್ತಮ. ಈ ರೀತಿಯ ಟೇಬಲ್‌ಗಳು ಸ್ಥಿರತೆಯನ್ನು ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.
ಜ್ಯೋತಿಷ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಕುಳಿತು ಕೊಳ್ಳುವ ಬಗೆ ಹೇಗೆ?
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಹಿರಿಯರು ಅಥವಾ ಯಜಮಾನರು ಪೂರ್ವ ದಿಕ್ಕಿಗೆ ಕುಳಿತುಕೊಳ್ಳಬೇಕು. ಉಳಿದವರು ಪೂರ್ವ, ಉತ್ತರ ಮತ್ತು ಪಶ್ಚಿಮ ದಿಕ್ಕಿಗೆ ಕುಳಿತುಕೊಳ್ಳಬಹುದಾಗಿದೆ. ಊಟ ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಅನ್ನಪೂರ್ಣೇಶ್ವರಿಗೆ ನಮಿಸಿ ಆಹಾರ ಸೇವಿಸಲು ಪ್ರಾರಂಭಿಸಬೇಕು.
ಇದನ್ನೂ ಓದಿ: Prerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು?