Site icon Vistara News

Vastu Tips : ಮನೆಯ ಈ ದಿಕ್ಕಿನಲ್ಲಿಟ್ಟರೆ ಪೊರಕೆ; ಸಿಗಲಿದೆ ಲಕ್ಷ್ಮೀ ಕೃಪೆ!

broom in house vastu tips

#image_title

ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ವಾಸ್ತು ಶಾಸ್ತ್ರದಲ್ಲಿ ನಿತ್ಯದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಿಸುವ ಅನೇಕ ನೀತಿ ನಿಯಮಗಳ ಮೇಲೆ ಬೆಳಕು (Vastu Tips) ಚೆಲ್ಲಲಾಗಿದೆ. ಮನೆಯಲ್ಲಿ ದಿನವೂ ಬಳಸುವ ವಸ್ತುಗಳ ಬಳಕೆ ಹೇಗೆ ಎಂಬುದನ್ನು ತಿಳಿಸಿರುವುದರ ಜತೆಗೆ ಅದನ್ನು ಸರಿಯಾದ ಸ್ಥಳದಲ್ಲಿ ಇಡುವುದು ಸಹ ಮನೆಯ ಸುಖ–ಸಮೃದ್ಧಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಹೇಳಲಾಗಿದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಬೇಕೆಂದರೆ ವಾಸ್ತು ಪ್ರಕಾರ ಕೆಲ ಸರಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಮನೆಯಲ್ಲಿ ಲಕ್ಷ್ಮೀ ಕೃಪೆ ಸದಾ ನೆಲೆಸಿರಬೇಕೆಂದು ಎಲ್ಲರೂ ಬಯಸುತ್ತಾರೆ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎಂದು ನಮ್ಮ ಹಿರಿಯರು ಹೇಳಿಕೊಂಡೇ ಬಂದಿದ್ದಾರೆ. ಇದೇ ಕಾರಣಕ್ಕಾಗಿಯೇ ಹಬ್ಬಗಳಿಗೂ ಮೊದಲು ಅದರಲ್ಲೂ ವಿಶೇಷವಾಗಿ ದೀಪಾವಳಿ ಹಬ್ಬಕ್ಕೂ ಮುನ್ನ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು. ಹಾಗಾಗಿ ಧನಲಕ್ಷ್ಮೀಯ ಕೃಪೆ ಬೇಕೆಂದರೆ ಶುಚಿತ್ವ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ.

ಸ್ವಚ್ಛತೆಗೆ ಸಹಾಯಕವಾಗುವ ಪೊರಕೆಯನ್ನು ಸಹ ಲಕ್ಷ್ಮೀ ದೇವಿಯ ಸ್ವರೂಪವೆಂದೇ ಹೇಳಲಾಗುತ್ತದೆ. ಹಾಗಾಗಿ ಪೊರಕೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ ಹೇಳುವ ಕೆಲವು ವಿಚಾರಗಳ (Broom Vastu Tips) ಬಗ್ಗೆ ಗಮನಹರಿಸೋಣ.

ಈ ದಿಕ್ಕಿನಲ್ಲಿ ಪೊರಕೆ ಇಡಬಾರದು

ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು. ಹಾಗೆ ಇಡುವುದರಿಂದ ಆರ್ಥಿಕ ಸಂಕಷ್ಟ ಆರಂಭವಾಗುತ್ತದೆ, ಧನ ಹಾನಿಗೆ ಇದು ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಮನೆಯಲ್ಲಿ ವಾಸ್ತು ದೋಷ ಉಂಟಾಗಲು ಇದು ಎಡೆಮಾಡಿಕೊಡುತ್ತದೆ.

ಪೊರಕೆ ಈ ದಿಕ್ಕಿನಲ್ಲಿರಲಿ

ಪೊರಕೆಯನ್ನು ಇಡಲು ದಕ್ಷಿಣ ದಿಕ್ಕು ಸೂಕ್ತವೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಮನೆಯ ದಕ್ಷಿಣ ದಿಕ್ಕಿನಲ್ಲಿ ಪೊರಕೆ ಇಡುವುದರಿಂದ ಮನೆಯಲ್ಲಿ ಸುಖ – ಸಮೃದ್ಧಿ ನೆಲೆಸುವುದಲ್ಲದೇ ಲಕ್ಷ್ಮೀ ದೇವಿಯ ಆಶೀರ್ವಾದ ಸಹ ಸಿಗಲಿದೆ.

ಪೊರಕೆ ಸದಾ ಮರೆಯಲ್ಲೇ ಇರಲಿ

ಮನೆಯಲ್ಲಿ ಪೊರಕೆ ಎಲ್ಲರ ಕಣ್ಣಿಗೆ ಕಾಣುವಂತೆ ಇಡಬಾರದು. ಪೊರಕೆ ಯಾವಾಗಲೂ ಮರೆಯಲ್ಲೇ ಇರಬೇಕು. ಪೊರಕೆ ಕಣ್ಣಿಗೆ ಕಾಣುವಂತೆ ಇಟ್ಟರೆ ಧನ ನಷ್ಟವಾಗುವ ಸಂಭವವಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಪೊರಕೆ ಹೀಗೆ ಇಡಬೇಕು

ಶಾಸ್ತ್ರದ ಪ್ರಕಾರ ಪೊರಕೆಯನ್ನು ನಿಲ್ಲಿಸಿ ಇಡುವುದು ಅಪಶಕುನವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುವುದಲ್ಲದೇ, ಧನ ನಷ್ಟವಾಗುತ್ತದೆ. ಹಾಗಾಗಿ ಪೊರಕೆಯನ್ನು ಮಲಗಿಸಿಯೇ ಇಡಬೇಕೆಂದು ಹೇಳಲಾಗುತ್ತದೆ.

ಜ್ಯೋತಿಷ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ಪೊರಕೆಯನ್ನು ತುಳಿಯಬಾರದು

ಪೊರಕೆಯನ್ನು ತುಳಿಯುವುದರಿಂದ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ವಾಸ್ತು ದೋಷ ಸಹ ಉಂಟಾಗುತ್ತದೆ. ಗೊತ್ತಿಲ್ಲದೆಯೇ ಪೊರಕೆ ಕಾಲಿಗೆ ತಾಗಿದರೆ, ಅದನ್ನು ಮುಟ್ಟಿ ನಮಸ್ಕರಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಅಡುಗೆ ಮನೆಯಲ್ಲಿ ಇಡಬಾರದು

ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡಬಾರದು. ಹೀಗೆ ಇಡುವುದರಿಂದ ಮನೆಯ ಸದಸ್ಯರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಹಾಳಾದ ಪೊರಕೆಯನ್ನು ಬಳಸುವುದು ಸೂಕ್ತವಲ್ಲ ಮತ್ತು ಅದನ್ನು ಮನೆಯಲ್ಲಿ ಸಹ ಇಟ್ಟಕೊಳ್ಳಬಾರದು. ಮನೆಯ ಸದಸ್ಯರು ಕೆಲಸದ ನಿಮಿತ್ತ ಹೊರಗೆ ಹೊರಟ ತಕ್ಷಣ ಮನೆಯನ್ನು ಕಸ ಗುಡಿಸಬಾರದು. ಇದು ಅಪಶಕುನವೆಂದು ಹೇಳಲಾಗುತ್ತದೆ.

ವಾಸ್ತು ಪ್ರಕಾರ ಮರ್ಮ ಸ್ಥಾನ ಏಕೆ ಮುಖ್ಯ?

ಪೊರಕೆ ಖರೀದಿಗೆ ಈ ದಿನ ಶುಭ

ಶನಿವಾರದಂದು ಪೊರಕೆ ಖರೀದಿಸಲು ಶುಭದಿನವೆಂದು ಶಾಸ್ತ್ರ ಹೇಳುತ್ತದೆ. ಈ ದಿನ ಖರೀದಿ ಮಾಡಿದರೆ, ಲಕ್ಷ್ಮೀ ದೇವಿಯ ಕೃಪೆ ಲಭಿಸುವುದಲ್ಲದೇ, ಶನಿದೇವರ ಪ್ರಸನ್ನತೆಗೂ ಪಾತ್ರರಾಗಬಹುದಾಗಿದೆ.

ಇದನ್ನೂ ಓದಿ : Vastu Tips : ಮನೆಯಲ್ಲಿ ಈ ಸಂಕೇತಗಳು ಕಂಡರೆ ಬೇಡ ನಿರ್ಲಕ್ಷ್ಯ; ವಾಸ್ತು ದೋಷದಿಂದಲೂ ಹೀಗಾಗಬಹುದು!

Exit mobile version