ಮೇಷ: ಮಾತಿನಲ್ಲೇ ಮರಳು ಮಾಡಿ!
ಶನೈಶ್ವರ ತೊಟ್ಟಿಲು ತೂಗುವ ಮಾತೆಯೂ ಆಗಿದ್ದಾನೆ. ಮಗುವನ್ನು ಚಿವುಟುವ ವಿಚಾರಕ್ಕೂ ಮನ ಮಾಡುತ್ತಾನೆ. ಸಂಸಾರದ ಬೇಗುದಿಯಲ್ಲಿ ಸೋಲದಂತೆ ಎಲ್ಲರ ವಿಶ್ವಾಸದಲ್ಲಿ ಜಾಣತನದ ಹೆಜ್ಜೆ ಇರಿಸಿ. ಒಮ್ಮೊಮ್ಮೆ ಬಾಳ ಸಂಗಾತಿ ಪ್ರತ್ಯಕ್ಷ ಸಿಡಿಲಿನ ಬೆಂಕಿ ಬಳ್ಳಿಯೇ ಆಗಬಹುದು, ಎಚ್ಚರ ಇರಲಿ. ರಾಜಕಾರಣಿಗಳು ವಿನಯ ಪೂರ್ವಕವಾಗಿ ಜನರ ಜತೆ ಕ್ರಿಯಾಶೀಲತೆಯಿಂದ, ಮುಖ್ಯವಾಗಿ ಮಾತಿನ ಮೂಲಕ ಗಮನ ಸೆಳೆಯುವ ಕೆಲಸದಲ್ಲಿ ಲವಲವಿಕೆ ತೋರಿ. ಗಣೇಶನ ಸ್ತುತಿಯಿಂದ ಒಳಿತಿದೆ.
ಶುಭ ಸಂಖ್ಯೆ: 8 ಶುಭ ದಿಕ್ಕು: ಪೂರ್ವ
ವೃಷಭ: ಮಾತುಗಳನ್ನು ತೂಕವಿರಿಸಿ ಆಡಿ
ಕೆಲಸದ ಸ್ಥಳದಲ್ಲಿ ಪರದಾಟಗಳು ವಿಷ ತುಂಬಿಕೊಂಡ ಸರ್ಪದಂಥವರ ಮೂಲಕ ಇರುತ್ತವೆ. ಆದರೆ ಯಾವ ಮಾತಿನಿಂದಲೂ ನೀವು ಕೆರಳುವುದಾಗಲೀ, ಕೆರಳಿಸುವುದಾಗಲೀ ಮಾಡಲೇಬೇಡಿ. ಅವು ಯಾವುದೇ ರೀತಿಯ ವಿಷ ಪ್ರಯೋಗ ನಡೆಸಲಾಗದಂಥೆ ಅವರ ವಿಷದ ಹಲ್ಲುಗಳನ್ನು ನಿಷ್ಕ್ರೀಯಗೊಳಿಸಬಹುದಾಗಿದೆ. ಕೆಲ ದಿನಗಳ ನಂತರ ಹೊಸದೇ ಉತ್ತಮ ವಿಚಾರಗಳು ನಿಮಗೆ ನಿಮ್ಮ ಕೈವಶವಾಗುವ ವರ್ತಮಾನ ಪವಾಡ ಸದೃಶವಾಗಿ ಸಂಭವಿಸುತ್ತದೆ. ಮಾತುಗಳನ್ನು ತೂಕವಿರಿಸಿ ಆಡಿ. ಶಿವಸ್ತುತಿಯಿಂದ ಕ್ಷೇಮ.
ಶುಭ ಸಂಖ್ಯೆ : 3 ಶುಭ ದಿಕ್ಕು: ನೈಋತ್ಯ
ಮಿಥುನ: ಪ್ರಮೋಷನ್ ಪಡೆಯುವ ಕಾಲ
ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿಡಿ. ಆಹಾರದಿಂದಾಗಿ ದಿಢೀರ್ ಅಸ್ವಸ್ಥತೆಗೆ ಅವಕಾಶ ಜಾಸ್ತಿ. ನಿಮ್ಮ ಅನೇಕ ರೀತಿಯ ಯೋಜನೆಗಳನ್ನು ಗುರಿ ತಲುಪಿಸುವಲ್ಲಿ ಯಶಸ್ವಿಯಾಗುವಿರಿ. ಆದರೆ ಕ್ರೋಧದಿಂದ ಕೂಡಿದ ಜನರು ನಿಮ್ಮ ಬಳಿ ಜಗಳ ತೆಗೆದು ಅಥವಾ ನೀವೇ ಕ್ರೋಧವಶರಾಗಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಹಾಳು ಮಾಡಿಕೊಳ್ಳುವ ಸನ್ನಿವೇಶಗಳು ಜರುಗದಂತೆ ನೋಡಿಕೊಳ್ಳಿ. ಬೌದ್ಧಿಕ ಚಾತುರ್ಯದಿಂದ ಪ್ರಮೋಷನ್‌ಪಡೆಯಲು ಕಾಲ ಸೂಕ್ತವಾಗಿದೆ. ನಿಮ್ಮ ಯಾವುದೇ ರೀತಿಯ ವ್ಯಾಜ್ಯಗಳಿಗೆ ತೆರೆ ಬೀಳಲು ಸಾಧ್ಯ. ಶಾಂಭವಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪೂರ್ವ
ಕಟಕ: ಅತ್ತ ದರಿ ಇತ್ತ ಪುಲಿಯ ಸ್ಥಿತಿ!
ರಾಶಿಯ ಯಜಮಾನ ಚಂದ್ರನ ಜತೆಗೇ ಶನೈಶ್ವರ ಸ್ವಾಮಿಯ ತಿಕ್ಕಾಟ ಪ್ರಸ್ತುತ ವರ್ತಮಾನದ ಸ್ಥಿತಿಯಾಗಿದೆ. ಆ ಕಡೆ ಎಳೆದರೆ ಈ ಕಡೆಯ ಅಸ್ತವ್ಯಸ್ತತೆ, ಈ ಕಡೆ ಎಳೆದರೆ ಆ ಕಡೆಯ ಅಸ್ತವ್ಯಸ್ತತೆ ಎಂಬುದು ಸದ್ಯದ ವರ್ತಮಾನ, ನಿಮ್ಮ ಪಾಲಿಗೆ ಅತ್ತ ದರಿ ಇತ್ತ ಪುಲಿ ಎಂಬ ಗಾದೆಯಂತೆ. ಸಂಪದ್ಭರಿತವಾದ ಗುರುವು ಅನುಗ್ರಹಿಸುವ ಕಾಮಧೇನುವಾಗಬೇಕು. ಹಿರಿಯರನ್ನು ಆಶ್ರಯಿಸಿ ಮಾರ್ಗದರ್ಶನ ಪಡೆಯಿರಿ. ಕೌಟುಂಬಿಕ ಕಲಹ, ದಾಂಪತ್ಯ ಪರಿತಾಪಗಳ ಬಗ್ಗೆ ಎಚ್ಚರ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಉತ್ತರ
ಸಿಂಹ: ಧೈರ್ಯವೇ ನಿಮಗೆ ಸಂಜೀವಿನಿ
ನಿಮ್ಮನ್ನು ಅಜ್ಞಾನ ಆವರಿಸಲಾರದು. ಆದರೆ ದುರಾದೃಷ್ಟ ಸರ್ರನೆ ಎದುರಾಗಿ ಬಂದು ನಿಂತು ಆಗಬೇಕಾದ ಸುಲಭ ಕೆಲಸಗಳನ್ನು ಕೆಡವಿ ಬೀಳಿಸುತ್ತಿದೆ. ಮಕ್ಕಳನ್ನು ಸಮಾಧಾನದಿಂದ ನಿರ್ದೇಶಿಸಿ. ಅವರುಗಳನ್ನು ಕೋಪದಿಂದ ಎದುರಿಸುವ ಕೆಲಸಕ್ಕೆ ಕೈ ಹಾಕದಿರಿ. ಧೈರ್ಯವು ನಿಮಗೆ ಸಂಜೀವಿನಿಯಾಗಿದೆ. ಶಾಂತತೆಯಿಂದ ಕೈಗೊಳ್ಳುವ ಯೋಜನೆಗಳು ಆರ್ಥಿಕ ಪ್ರಾಬಲ್ಯಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಇದೀಗ ಕ್ಲಪ್ತ ಕಾಲ. ಹಿರಿಯ ಮಹಿಳೆಯರಿಂದ ಒಳಿತಿದೆ. ವೆಂಕಟೇಶನನ್ನು ಸ್ತುತಿಸಿ ಗೆಲ್ಲಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ
ಕನ್ಯಾ: ಬಾಳ ಸಂಗಾತಿಯ ಮಾತು ಬಂಗಾರ!
ಆರ್ಥಿಕ ವಿಷಯಗಳಲ್ಲಿ ಬಾಳಸಂಗಾತಿಯ ಸಲಹೆ ಸೂಚನೆ ಪಡೆದು ಗೆಲ್ಲಲು ಅವಕಾಶಗಳು ಜಾಸ್ತಿ. ಮಕ್ಕಳೂ ನಿಮಗೆ ಆಶಾದಾಯಕವಾದ ವರ್ತಮಾನವನ್ನು ನಿರ್ಮಿಸಿಕೊಡಬಲ್ಲರು. ಒಬ್ಬ ಅತಂತ್ರ ಸ್ಥಿತಿಯ ವ್ಯಕ್ತಿ ನಿಮ್ಮನ್ನು ಸೋಲಿಸುವ ಲೆಕ್ಕಾಚಾರ ಹಾಕಿ ಕುಳಿತಿದ್ದಾನೆ. ಸುಬ್ರಹ್ಮಣ್ಯನ ಧ್ಯಾನದಿಂದ ವಿರೋಧಿಯ ಶಕ್ತಿಯನ್ನು ನಿಯಂತ್ರಿಸಿ. ನಿಮ್ಮ ಫಾರಿನ್‌ಟ್ರಿಪ್‌ಗಳು ಅನಿರೀಕ್ಷಿತವಾದ ಲಾಭ ತರಬಲ್ಲವು. ಆದಾಗ್ಯೂ ಸಾಧಕ-ಬಾಧಕಗಳ ಕುರಿತು ಎಲ್ಲಾ ರೀತಿಯ ಪೂರ್ವ ಯೋಚನೆ, ಮಂಥನ ಇರಲಿ. ಗುರು ರಾಯರನ್ನು ಧ್ಯಾನಿಸಿ, ಗೆಲುವಿದೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ದಕ್ಷಿಣ
ತುಲಾ: ತಾಳಿದವನು ಬಾಳಿಯಾನು…
ಅಳೆದು ತೂಗಿ, ಪರಾಮರ್ಶಿಸಿಯೇ ನಿರ್ಣಯ ರೂಪಿಸಿಕೊಳ್ಳಿ. ಲೆಕ್ಕಾಚಾರಗಳು ಬುಡಮೇಲಾಗುವ ಕಾಲಘಟ್ಟವಾಗಿದೆ ಇದು. ಭಾಗ್ಯವನ್ನು ಕುಜನು ಕಬಳಿಸಿ ನಿಮಗೆ ಸದ್ಯ ನಿಟ್ಟುಸಿರೇ ಗತಿ ಆಗಿದೆ. ನಿಮ್ಮ ಶಕ್ತಿ, ಸಾಮರ್ಥ್ಯವನ್ನು ತಿಳಿಯುವ, ತಿಳಿದು ಗೌರವಿಸುವ ಜನರು ಸಿಗುವುದೇ ನಿಮಗೀಗ ದುರ್ಲಭ. ಶನಿ ಮಹಾರಾಜ ಕೆಲವು ಲಾಭವನ್ನು ಈ ಕ್ಲಿಷ್ಟ ಸಮಯದಲ್ಲೂ ಅಲ್ಪಸ್ವಲ್ಪ ಒದಗಿಸಿಕೊಡಲು ಶಕ್ತಿ ಪಡೆದಿದ್ದಾನೆ. ಬುದ್ಧಿ ಬಲವಿದೆ. ಅವಸರವೇ ಹಿನ್ನಡೆ ತರುತ್ತಿದೆ. ಹೀಗಾಗಿ ತಾಳ್ಮೆ ಇರಲಿ. ರಾಮ ರಕ್ಷಾ ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ
ವೃಶ್ಚಿಕ: ಆರೋಗ್ಯದ ಕಡೆಗೆ ಗಮನ ನೀಡಿ
ಚುನಾವಣೆ ಎದುರಿಸುವ ಇರಾದೆ ಹೊತ್ತವರು ಸೂಕ್ತವಾದ ಸ್ಥಳ ನಿಗದಿ ಮಾಡಿಕೊಳ್ಳಿ. ಧೈರ್ಯ ಒದಗಿಸುವ ಶನಿ ಮಹಾರಾಜನ ಅನುಗ್ರಹ ದಟ್ಟವಾಗಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ. ಆಲಕ್ಷ್ಯಕ್ಕೆ ಅವಕಾಶ ಒದಗಿ ಬಾರದಿರಲಿ. ನಿಮ್ಮದೇ ಆದ ಹೊಸ ಉದ್ಯಮ ಒಂದನ್ನು ಶುರು ಮಾಡಲು ಒಳ್ಳೆಯ ಸಮಯವಾದರೂ ಕೆಲವು ಹೆಚ್ಚಿನ ರೀತಿಯ ಸಾಧಕ ಬಾಧಕಗಳನ್ನು ಸೂಕ್ತವಾಗಿ ನಿಯೋಜಿಸಿಕೊಳ್ಳಿ. ಕಾಗೆಗಳಿಗೆ ಪ್ರತಿ ದಿನ ನೆನೆಸಿದ ಕರಿ ಎಳ್ಳುಗಳನ್ನು ತಿನ್ನಲು ಇಡಿ. ದುರ್ಗಾರಾಧನೆಯಿಂದ ಒಳಿತು.
ಶುಭ ಸಂಖ್ಯೆ : 6 ಶುಭ ದಿಕ್ಕು: ವಾಯವ್ಯ
ಧನಸ್ಸು: ಗಣಪತಿಯ ಪೂಜೆಯಿಂದ ಲಾಭ ಹೆಚ್ಚು
ಕುಟಂಬದಲ್ಲಿ ಸಮತೋಲನ ಹೊಂದಿ ಮಾನಸಿಕ ನೆಮ್ಮದಿ ಸಾಧಿಸಲು ಇದು ಸೂಕ್ತ ಸಮಯ. ನಿಮ್ಮದೇ ಆದ ಹಲವು ಸ್ವತಂತ್ರ ಬ್ಯುಸಿನೆಸ್‌ಗಳ ಬಗ್ಗೆ ತಿಳಿದವರ ಬಳಿ ಚೆನ್ನಾಗಿ ಸಮಾಲೋಚಿಸಿ. ತಿಳಿದ ಉತ್ತಮ ಶ್ರಮಿಕ ವರ್ಗದ ಜನರಿಂದ ಸಹಾಯ ಒದಗಿ ಬರಲೂ ಈಗ ಸೂಕ್ತ ಕಾಲಘಟ್ಟ ಎನ್ನಬಹುದು. ಸಿನಿಮಾ ರಂಗದಲ್ಲಿ ಯಶಸ್ಸಿಗೆ ಅವಕಾಶಗಳು ಜಾಸ್ತಿ. ಆದರೂ ನಿಮ್ಮ ಜತೆಗಿನ ಕಿರಿಯ ಸಹಾಯಕರಿಂದ ಅಜಾಗರೂಕತೆ ಸಂಭವಿಸದಂತೆ ನಿಗಾ ವಹಿಸಿ. ಗಣಪತಿಯನ್ನು ಆರಾಧನೆಯಿಂದ ಲಾಭಗಳಿಕೆಗೆ ಹೆಚ್ಚಿನ ದಾರಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ದಕ್ಷಿಣ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಕರ: ಜಾಣ್ಮೆಯಿಂದ ಲಾಭ ಗಳಿಸಿ
ಸಾಡೇಸಾತಿ ಕಾಟದ ದಿನಗಳಿವು. ವೈವಾಹಿಕ ಜೀವನಕ್ಕೆ ಬಿರುಗಾಳಿಯ ಘಾತ ಎದುರಾಗಲು ಸಾಧ್ಯ. ಎಲ್ಲವನ್ನೂ ಮುರಿದು ಹೊರ ಬರುವುದು ಕಷ್ಟವೇನಲ್ಲ. ಆದರೆ ಮುರಿದಿರುವುದನ್ನು ಹಿಂತಿರುಗಿ ಕಟ್ಟಲು ಪರದಾಡಬೇಕಾದೀತು. ಹೀಗಾಗಿ ಬೌದ್ಧಿಕ ತೀಕ್ಷ್ಣತೆಯನ್ನು ಸೂಕ್ತವಾಗಿ ಬಳಸಿಕೊಳ್ಳಿ. ಕೈ ಮೀರಿ ಹೋದಾಗ ಯಾವುದೇ ರೀತಿಯಲ್ಲಿಯೂ ಸರಿಪಡಿಸಲು ಸಾಧ್ಯವಾಗದ ಪರದಾಟದ ಕಾಲ. ನಿಮ್ಮ ಆರ್ಥಿಕ ಸ್ಥತಿಗತಿಯನ್ನು ಅನುಭವ ಹಾಗೂ ಜಾಣ್ಮೆಯಿಂದ ಸಂವರ್ಧಿಸಿಕೊಳ್ಳಿ. ಹಣಕ್ಕೆ ಕತ್ತರಿ ಬಿದ್ದೀತು ಎಚ್ಚರ. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪಶ್ಚಿಮ
ಕುಂಭ: ನಯ ವಂಚಕರ ಬಗ್ಗೆ ಎಚ್ಚರ ಇರಲಿ
ಜನರ ನಡುವೆ ಗುರುತಿಸಿಕೊಂಡು ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಾದ ಸೂಕ್ತ ಕಾಲಘಟ್ಟದಲ್ಲಿಯೇ ಕರ್ಮ ಬಾಧೆಯ ಅಡೆತಡೆಗಳು ಎದುರಾದ ಏಳೂವರೆ ವರ್ಷ ಶನಿ ಕಾಟದ ಸಮಯ ಇದಾಗಿದೆ. ಅಧಿಕಾರ ಯೋಗವನ್ನು ಚಂದ್ರ ತುಂಡರಿಸುತ್ತಿದ್ದಾನೆ. ಎದುರಿಗೆ ನಯವಾಗಿ ವರ್ತಿಸುವ ಜನರು ಹಿಂದಿನಿಂದ ಹೊಂಡ ತೋಡಬಲ್ಲರು. ಜಾಗ್ರತೆ ಇರಲಿ. ರಾಹುವಿನ ಬೆಂಬಲದಿಂದ ಧೈರ್ಯವಾಗಿ ಮನ್ನುಗ್ಗುವ ವಿಚಾರದಲ್ಲಿ ಹೆಜ್ಜೆ ಇರಿಸಿ. ಶ್ರೀ ದೇವಿಯು ಮಂಗಳಕಾರಕಳಾಗಿದ್ದಾಳೆ. ಶ್ರೀ ಹನುಮಾನ್ ಚಾಲೀಸಾ ಪಠಿಸಿದರೆ ಕ್ಷೇಮ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ
ಮೀನ: ಕುಜ ಗ್ರಹನ ಬೆಂಬಲ ನಿಮಗಿದೆ
ಬುದ್ಧಿವಂತರು ನೀವು ಎನ್ನುವುದಕ್ಕೆ ಅನುಮಾನವಿಲ್ಲವಾದರೂ, ಕಾಲದ ಪ್ರಸ್ತುತ ಘಟ್ಟ ಹೆಜ್ಜೆ ಹೆಜ್ಜೆಗೂ ವಿಘ್ನಗಳನ್ನು ಸೃಷ್ಟಿಸಿಕೊಡಲು ಈಗ ಸಮಯ ಪೀಡಾದಾಯಕವಾಗಿದೆ. ನಿಮ್ಮ ಮನೆ ದೇವರನ್ನು ಸ್ತುತಿಸಿ. ಶ್ರೀ ಹನುಮಾನ್ ಚಾಲೀಸಾ ಓದು ಕೂಡ ಒಳಿತನ್ನು ತರುವುದು ಸಾಧ್ಯವಿದೆ. ಕುಜ ಗ್ರಹನ ಶಕ್ತಿಯಿಂದಾಗಿ ಭೂಮಿ, ಸೈಟು, ಆಸ್ತಿ ವಿಷಯದಲ್ಲಿ ಪ್ರಖರವಾದ ಬೆಳಕು ಕಾಣಲು ಸಾಧ್ಯ. ಆದರೆ ತಿಳಿದಷ್ಟು ಶೀಘ್ರವಾಗಿ ಪ್ರಾಪ್ತಿಯು ಸಾಧ್ಯವಾಗದು. ಬೆಣ್ಣೆಯಿಂದ ಕೂದಲು ತೆಗೆದಂತೆ ಜಾಗ್ರತೆಯಿಂದ ನಯಗಾರಿಕೆ ತೋರಿ. ಶ್ರೀಕರನಾದ ನಾರಾಯಣನನ್ನು ಭಜಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ವಾಯವ್ಯ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?