Site icon Vistara News

Weekly Horoscope | ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ ಫಲಗಳಿವೆ ನೋಡಿ

horoscope today

ವಾರ ಭವಿಷ್ಯ

ಮೇಷ: ಧನ ಲಾಭಕ್ಕೂ ದಾರಿ ಇದೆ

ಮುಂಗೋಪದಿಂದಲೇ ಹಲವನ್ನು ಕಳೆದುಕೊಳ್ಳುತ್ತೀರಿ. ಮನಸ್ಸಿನ ಮೇಲೆ ನಿಯಂತ್ರಣ ಇರಲಿ. ತಾಳ್ಮೆಯನ್ನು ಕಾಪಾಡಿಕೊಂಡರೆ ಹಲವಾರು ರೀತಿಯ ಪ್ರಾಪ್ತಿಗಳಿಗೆ ಸೂಕ್ತವಾದ ದಾರಿ ನಿರ್ಮಿಸಿಕೊಡಲು ಕಾಲದ ಶಕ್ತಿ ನಿಮಗೆ ಅಪಾರವಾದ ಪ್ರಮಾಣದಲ್ಲಿ ಲಭ್ಯ. ವಿವಾಹಾಪೇಕ್ಷಿತರಿಗೆ ಪಶ್ಚಿಮ ದಿಕ್ಕಿನ ಕಡೆಯ ಸಂಬಂಧ ಒದಗಿ ಬರುವ ಸಾಧ್ಯತೆ. ಹೇರಳ ಸಕ್ಕರೆಯಲ್ಲಿ ಬಿಳಿ ಎಳ್ಳುಗಳನ್ನು ಬೆರೆಸಿ, ಹಕ್ಕಿಗಳು ಬರುವಲ್ಲಿ ಇಟ್ಟಿರಿ. ಖಗ ಬಂಧುರ ಮಾಯೆಯಿಂದ ಧನ ಲಾಭಕ್ಕೂ ದಾರಿ ಇದೆ. ಯಾವುದೇ ಕಾರಣಕ್ಕೂ ಆಫೀಸಿನ ಸಹೋದ್ಯೋಗಿಗಳ ಜತೆಗೆ ಯಾವ ಗುಟ್ಟನ್ನೂ ಹೇಳದಿರಿ, ಎಚ್ಚರ. ಮಹೇಶ್ವರಿಯನ್ನು ಸ್ತುತಿಸಿ.
ಶುಭ ಸಂಖ್ಯೆ: 7 ಶುಭ ದಿಕ್ಕು: ನೈಋತ್ಯ

ವೃಷಭ: ಆಸ್ತಿಯ ವಿಚಾರದಲ್ಲಿ ಲಾಭ

ತಲೆಯ ಮೇಲೆ ಕಲ್ಲು ಬೀಳಲಿ, ಕಲ್ಲಿನ ಮೇಲೆ ತಲೆಯೇ ಬೀಳಲಿ ಅಪಾಯ ನಿಮಗೇ ಎಂಬುದನ್ನು ನೆನಪಿಡಿ. ಕ್ಷುದ್ರರ ಮಾತಿಗೆ ತಲೆ ಕೆಡಿಸಿಕೊಳ್ಳದಿರಿ. ಸಾಧನೆಯ ದಾರಿಯಲ್ಲಿ ನಿಮಗೆ ನೀವೇ ಮಾರ್ಗದರ್ಶಕವಾಗಿ ಇದ್ದೀರಿ. ದೂರದ ಬಂಧುಗಳು ಆತಂಕವನ್ನು ಸೃಷ್ಟಿಸುವ ಗೋಜಲುಗಳಿಂದ ನಿಮ್ಮನ್ನು ಅಧೀರರನ್ನಾಗಿಸಬಹುದಾದರೂ ಆಸ್ತಿಯ ಸಂಬಂಧವಾದ ಕಡತಗಳ ವಿಚಾರದಲ್ಲಿ ಅಗತ್ಯವಾದ ವಿಚಾರವೊಂದನ್ನು ನಿಮ್ಮ ಗಮನಕ್ಕೆ ತರಬಲ್ಲರು. ಅದರಿಂದ ನಿಮಗೆ ಅರಸುವ ಬಳ್ಳಿ ಕಾಲಿಗೇ ಸಿಲುಕಿದ ಅನುಭವವಾಗಲಿದೆ. ಹರಿಯುವ ನೀರಿಗೆ ಬಿಸ್ಕತ್ತಿನ ತುಂಡು ಎಸೆಯಿರಿ. ಮತ್ಸ್ಯರೂಪಿ ವಿಷ್ಣುವನ್ನು ಸ್ತುತಿಸಿದರೆ ಕ್ಷೇಮ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ಮಿಥುನ: ಜಗಳಗಳಿಂದ ದೂರವಿದ್ದರೆ ಒಳಿತು

ಮುಗಿಯಲಾರವಲ್ಲ ಬೇಗುದಿಯ ಕ್ಷಣಗಳು ಎಂಬ ಅವ್ಯಕ್ತ ಭಯದಲ್ಲಿ ದಿನ ದೂಡುತ್ತಿದ್ದೀರಿ. ಅಷ್ಟಮ ಶನಿ ಕಾಟದಿಂದಾಗಿ ಮನೋಮಂಡಲದಲ್ಲಿ ಅನಿಯಂತ್ರಿತ ಯೋಚನೆಗಳು, ಯೋಜನೆಗಳು ಸಾಕಾರತ್ವಕ್ಕೆ ಬೇಕಾದ ಧಾತುಗಳು ಹತ್ತಿರ ಹತ್ತಿರಕ್ಕೆ ಬಂದು ಕೈ ತಪ್ಪಿ ಹೋಗುವ ವಿಷಾಧ ಯೋಗ ನಿಮ್ಮದಾಗಿದೆ. ಜಗಳಕ್ಕೆ ಹೋಗಬೇಡಿ. ಮಾತಿಗೆ ಅರ್ಥವಾಗಲಿ, ನ್ಯಾಯವನ್ನಾದಗಲೀ ಒದಗಿಸುವವರು ಸಿಗದ ದುರ್ಭರ ದಿನಗಳಿವು. ಆದರೂ ಗುರು ಬಲದ ಅದಮ್ಯ ಚೈತನ್ಯದ ನಿಕ್ಷೇಪಗಳು ನಿಮ್ಮ ಇಂದಿನ ದಾರುಣತೆಯಿಂದೊದಗಿದ ಅನುಭವಗಳ ಮೂಲಕವೇ ದಿವ್ಯ ಒಂದನ್ನು ಕಟ್ಟಿಕೊಡುತ್ತವೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ

ಕಟಕ: ಈ ವಾರ ರಾಜಕಾರಣಿಗಳಿಗೆ ಯಶಸ್ಸು

ಪ್ರಶಂಸೆಗೆ ದಾರಿಯಾಗುವ ಯುಕ್ತ ಕೆಲಸಗಳು ನಿಮ್ಮನ್ನು ದೈವದ ಕರುಣೆಯಿಂದಾಗಿ ಜನರ ಮಧ್ಯೆ ನಿಲ್ಲಿಸುತ್ತವೆ. ನೀವು ನಿಸ್ಸಂದೇಹವಾಗಿ ಸಮೂಹವನ್ನು ಪ್ರೇರೇಪಿಸಿ ಉತ್ತಮವಾದ ಗುರಿಯತ್ತ ಸಾಗುವ ನೇತಾರನಾಗಲು ಅವಕಾಶಗಳು ದಟ್ಟವಾಗಿವೆ. ಆದರೂ ವಿರುದ್ಧ ಲಿಂಗಿಗಳೊಂಡನೆ ತುಸು ಎಚ್ಚರದಿಂದ ವರ್ತಿಸಿ. ಹೆಣ್ಣು ಗಂಡಿಗೆ ಮಾಯೆ, ಗಂಡು ಹೆಣ್ಣಿಗೆ ಮಾಯೆ ಎಂಬ ಜಗದ ಬೋಧಕ ಸೂತ್ರ ನಿಮ್ಮ ಮನಸ್ಸಿನೊಳಗಿರಲಿ. ಯಶಸ್ಸು ಬೆನ್ನು ಹತ್ತಿದಾಗ ಮೀರ ಸಾಧಕರು ಹತ್ತಿರದಲ್ಲೇ ಇರುತ್ತಾರೆ. ವಿಶ್ವಾಸದ ಜನರೇ ಕೆಂಡವಾಗುವ ಶಾಖದಿಂದಾದ ಬರೆ ಯಾತನಮಯ. ಶ್ರೀ ಗುರು ದತ್ತಾತ್ರೇಯನನ್ನು ಆರಾಧಿಸಿ ಗೆಲ್ಲಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಸಿಂಹ: ಬುದ್ಧಿ ಶಕ್ತಿಯ ಕಡೆಗೆ ಗಮನವಿರಲಿ

ಅನಿರೀಕ್ಷಿತವಾದ ಬೆಳವಣಿಗೆಯೊಂದು ನಿಮ್ಮ ಜೀವನದ ಪಥವನ್ನು ಬದಲಿಸಲು ಪಣತೊಟ್ಟು ನಿಂತಿದೆ. ಅದೇ ತಾನೆ ಅರಳಿರುವ ಬೆಳಗಿನ ಹೊತ್ತಿನ ಹೂವುಗಳನ್ನು (ಪ್ರಧಾನವಾಗಿ ಬಿಳಿ ಅಥವಾ ಕೆಂಪು ಹೂಗಳಿರಲಿ) ನಿಮ್ಮ ಇಷ್ಟ ದೇವತೆಗೆ ಅರ್ಪಿಸಿ. ಪರಿಹಾರ ಸಿಗದ ವಿಸ್ತೃತ ಸ್ವರೂಪ ಪಡೆದಿದ್ದ ಬಿಕ್ಕಟ್ಟಿನಿಂದ ಹೊರಬರಲು ಸೂರ್ಯದೇವನ ಸಿದ್ಧಿ ಸಿಗಲಿದೆ. ನಿಮ್ಮ ದಿನಚರಿಯ ಪ್ರಕಾರದಲ್ಲಿ ಸಾಗಬೇಕಾದ ನಿರ್ದಿಷ್ಟ ಮಹತ್ವದ ವಿಚಾರಗಳು ಹಿರಿಯ ಮಹಿಳೆಯೊಬ್ಬರ ನಿರ್ದೇಶನದಲ್ಲಿ ನೀವು ನಿರೀಕ್ಷಿಸಿದಕ್ಕಿಂತ ವೇಗವಾಗಿ ಬಯಸಿದ ಗುರಿಯತ್ತ ನಿಮ್ಮನ್ನು ತಂದು ನಿಲ್ಲಿಸಬಹುದು, ತಾಳ್ಮೆ ಇರಲಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ

ಕನ್ಯಾ: ಕ್ರಿಯಾಶೀಲತೆಯಿಂದ ಗೆಲುವು

ಏನು ಯಾತನೆಯೊ ದೇವಾ? ನೀನಿರುವುದು ಸತ್ಯವೇ? ಕರುಣಾಳು ನೀನೆಂಬುದನ್ನು ನಾನರಿತದ್ದು ಸುಳ್ಳಾಯಿತೇ ಎಂದು ಕೇಳಿಕೊಳ್ಳುತ್ತಿರುವ ಈ ದಿನಗಳು ನಿಮ್ಮನ್ನು ಇನ್ನೂ ದಣಿಸಲಿವೆ. ಪರಮ ಪಾವನ ಮೂರ್ತಿ ಶ್ರೀ ರಾಮನ ದೂತನಾದ ಪವನ ಸುತ ಹನುಮಂತನ ಧ್ಯಾನವನ್ನು ಬಿಡಲೇ ಬೇಡಿ. ಪಂಚಮ ಶನಿ ಕಾಟದ ದಾರುಣವಾದ ಕ್ಷತಕ್ಕೆ ಮದ್ದಾಗುವ ಚಿಕಿತ್ಸಕ ರಕ್ಷೆ ಹನುಮಂತನಿಂದಲೇ ಪಡೆಯಬಲ್ಲಿರಿ. ಹೆಚ್ಚಿನ ಬಜೆಟ್ಟಿನ ಯಾವುದೇ ಕೆಲಸಗಳಿಗೂ ಸದ್ಯ ಆಲೋಚಿಸದಿರಿ. ಬಂಡವಾಳಿರದ, ಬುದ್ಧಿಮತ್ತೆಯ, ಪ್ರತಿಭಾವಂತಿಕೆಯೊಂದಿಗಿನ ಕ್ರಿಯಾಶೀಲತೆಗೆ ಮುನ್ನುಗ್ಗುತ್ತಿರಿ. ಗೆಲವು ಲಭ್ಯವಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ

ತುಲಾ: ಧನ ಪ್ರಾಪ್ತಿಯಾಗುವ ಅವಕಾಶವಿದೆ

ಅಳೆದು ಅಳೆದು ಸುಸ್ತಾಗುತ್ತೀರಿ. ಪರಿಪೂರ್ಣವಾದದ್ದು ನಿಮಗೆ ಸಿಗಲಾರದು. ದ್ವಿದ್ವಾದಶ ಅಂಶದಲ್ಲಿದ್ದು ಸೂರ್ಯನ ಜತೆಗೇ ತಿಕ್ಕಾಟ ಹೊಂದಿರುವ ಕೇತು ನಿಮಗೆ ಅನಿರೀಕ್ಷಿತವಾದ ಅಪಯಶಸ್ಸನ್ನು ತರಲು ಸಾಧ್ಯ. ಬೌದ್ಧಿಕ ಸಂಪನ್ನತೆ ನಿಮ್ಮ ಶಕ್ತಿ ಆಗಿದ್ದು ಹೌದಾದರೂ ಲಾಭದ ವಿಚಾರದಲ್ಲಿ, ವರ್ಚಸ್ಸಿನ ವಿಚಾರದಲ್ಲಿ ಅಪಾರ ಪ್ರಮಾಣದ ಎಚ್ಚರದ ನಡೆಯನ್ನು ಹಾಗೂ ಸತ್ಯವನ್ನೇ ಹೇಳುವುದಾದರೂ ಪ್ರಿಯವಾದ ಸತ್ಯವನ್ನು ಹೇಳಲು ನಿಮ್ಮನ್ನು ಪ್ರೇರೇಪಿಸುತ್ತದೆ. ಪ್ರಯೋಜನ ಇರದ ಕಡೆಯ ಬುದ್ಧಿವಂತಿಕೆಯ ಮಾತು ವ್ಯರ್ಥ. ತುಂಬೆ ಹೂವಿಗೆ ತುಸು ಜೇನು ಸವರಿ ಇರುವೆ ಬರುವೆಡೆ ಇರಿಸಿ, ಧನ ಪ್ರಾಪ್ತಿಯಾಗುತ್ತದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ವಾಯವ್ಯ

ವೃಶ್ಚಿಕ: ಪ್ರಮೋಷನ್‌ ಪಡೆಯುವ ಸಾಧ್ಯತೆ

ಎಷ್ಟೇ ಸಜ್ಜಾಗಿ ಬಂದ ವಿರೋಧಿ ಇರಲಿ, ವಿರೋಧಿಗಳ ಗುಂಪೇ ಇರಲಿ. ನೀವು ನಿಮ್ಮ ಬೌದ್ಧಿಕ ಶಕ್ತಿ ಹಾಗೂ ಯುಕ್ತಿಯಿಂದ ಅವನ್ನೆಲ್ಲ ಎದುರಿಸಿ ಮನಸ್ಸಿನ ನಿಮ್ಮ ಎಲ್ಲ ರೀತಿಯ ಗುರಿಯನ್ನು ತಲುಪಿ, ಸಶಕ್ತರಾಗಿರುವ ಸಶಕ್ತರಾಗುವ ಒಳ್ಳೆಯ ದಿನಗಳು ಇವು. ಮಕ್ಕಳಿಂದ ಶುಭ ವಾರ್ತೆ ಕೇಳಲಿದ್ದೀರಿ. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ಗೆ ಕೂಡಾ ಅವಕಾಶ ಒದಗಿ ಬರಲು ನಿಮಗಿಂತಲೂ ಮೇಲಿರುವ ಅಧಿಕಾರಿಗಳು ಅಥವಾ ಆಡಳಿತ ವರ್ಗ ಸೂಕ್ತ ನಿರ್ಣಯ ಕೈಗೊಳ್ಳಲಿದೆ. ಹಳದಿ ಬಣ್ಣದ ನೂಲನ್ನು ಹಸಿರು ಬಣ್ಣದ ನೂಲಿಗೆ ಗಂಟು ಹಾಕಿ, ಯಾರೂ ತುಳಿಯದ ಹೂಗಿಡದ ಕೆಳಗಿಡಿ. ರಾಯರ ಸ್ತುತಿ ಮಾಡಿ ಒಳ್ಳೆಯ ಸುದ್ದಿ ಲಭ್ಯ.
ಶುಭ ಸಂಖ್ಯೆ : 5 ಶುಭ ದಿಕ್ಕು: ಪೂರ್ವ

ಧನಸ್ಸು: ಮನೆ ಕಟ್ಟಲು ಅವಸರ ಬೇಡ

ನಿಮ್ಮದೇ ಆದ ಮನೆಯನ್ನು ಕಟ್ಟಬೇಕು ಎಂಬ ನಿರ್ಧಾರ ತಪ್ಪೇನಲ್ಲ. ಆದರೆ ಅವಸರಿಸುವ ತಪ್ಪು ಮಾಡಬೇಡಿ. ಇನ್ನೇನು ಕೆಲ ದಿನಗಳಲ್ಲಿ ಸಾಡೇಸಾತಿ ಕಾಟದ ತಾಪತ್ರಯದಿಂದ ಹೊರ ಬರುತ್ತೀರಿ. ರಾಶ್ಯಾಧಿಪನಾದ ಗುರುವು ವರ್ತಮಾನವನ್ನು ವಿಸ್ತೃತವಾಗಿ ಗೆಲ್ಲಿಸಿಕೊಡುವ ವಿಷಯದ ಕುರಿತು ಆತುಳವಾದ ಬಲವನ್ನು ಕೊಡುತ್ತಾನೆ. ಆದರೆ ತುಸು ಕಾಯುವ ಅಂಶದತ್ತ ಗಮನ ಹರಿಸಿ. ಹೂವಿನ ವ್ಯಾಪಾರಿಗಳಿಗೆ, ಅದರಲ್ಲೂ ಹೂವಿನ ರಫ್ತುದಾರರಿಗೆ, ಲಾಭವೇ ಸಿಗದೆ ತಾಪತ್ರಯದಲ್ಲಿರುವ ಸಿನಿಮಾ ಹಂಚಿಕೆದಾರರಿಗೆ ಲಾಭದ ದಾರಿಗೆ ಬೆಳಕು ಒದಗುವ ಅವಕಾಶವಿದೆ. ವೆಂಕಟೇಶ್ವರನನ್ನು ಸ್ತುತಿಸಿ.
ಶುಭ ಸಂಖ್ಯೆ: 3 ಶುಭ ದಿಕ್ಕು: ದಕ್ಷಿಣ

ಮಕರ: ಹಗಲಿನಲ್ಲಿ ತಾರೆಗಳ ಹುಡುಕುವ ಹಂಬಲ ಬೇಡ

ಯಶಸ್ಸನ್ನು ಬಯಸಿ, ಬಯಸಿ ಸುಸ್ತಾಗಿದ್ದೀರಿ. ಮೈಗಜಲದಂತೆ ಯಶಸ್ಸು ಕಂಡಂತೆ ಎದುರಿಗೇ ಭಾಸ, ಆದರೆ ಶುಷ್ಕ ಓಡುತ್ತಿದ್ದೀರಿ. ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಆಧಾರಕ್ಕೆ ಹಿಡಿದ ಹಗ್ಗವೂ ಹಾವಾಗುವ ಸಮಯವಾಗಿದೆ ಈಗ. ದಟ್ಟ ಹಗಲಿನಲ್ಲಿ ತಾರೆಗಳನ್ನು ನೋಡುವ ಹಂಬಲ ಹೊಂದದಿರಿ. ಸಾಡೇಸಾತಿಯ ದಿನಗಳು ಇವು. ನಿಧಾನವಾಗದರೂ ಸರಿಯೇ. ಗುರಿ ತುಲುಪುವ ಉದ್ದೇಶ ದೃಢವಾಗಿರಲಿ. ಮಗದೊಬ್ಬರ ಯಶಸ್ಸನ್ನು ನಿಮ್ಮ ವರ್ತಮಾನದೊಂದಿಗೆ ತಾಳೆ ಹಾಕಿ ನೋಡಬೇಡಿ. ಅರ್ಥವಿಲ್ಲದ ವಿಷಯವಾಗಿ ಇದು ದಾರುಣತೆಯಲ್ಲಿ ಚುಚ್ಚುವ ಸೂಜಿ ಆದೀತು. ರಾಮ ರಕ್ಷಾಸ್ತ್ರೋತ್ರ ಪಠಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ನೈಋತ್ಯ

ಕುಂಭ: ಅಹಂ ಎಂಬುದು ಸುಖ ತಾರದು

“ದೀನ ನಾನು, ಸಮಸ್ತ ಲೋಕದೊಡೆಯ ನೀನು, ನೀರಿಗಿಳಿದು ಮುಳುಗದಂತೆ ಓ ದೇವಾ ಕರುಣದಿ ತೇಲಿಸು ನನ್ನನ್ನು…ʼʼ ಎಂದು ಇಷ್ಟ ದೇವತೆಯನ್ನು ಪ್ರಾರ್ಥಿಸಿ. ಇಚ್ಛಾ ಶಕ್ತಿ ಪ್ರದರ್ಶಿಸಿ. ನಿಮಗೂ ಸಾಡೇಸಾತಿಯ ದಿನಗಳಿವು. ಬರಬಾರದ ಕಡೆಯೂ ಸೋಲು ಎದುರಾಗುವ ಬಳಲಿಕೆಯ ದಿನಗಳಿವು. ಕುಟುಂಬದಲ್ಲಿ ವ್ಯಾಜ್ಯ ತಲೆದೋರೀತು, ಎಚ್ಚರ. ಮಾತು, ಮಾತು ಮಥಿಸಿ ಬರಲಿ. ವಿವೇಕದ ನವನೀತ (ಬೆಣ್ಣೆ), ಆದರೆ ಮಾತು ಉರಿ ಹೊತ್ತಿಸುವ ಚರ್ಚಾಸ್ಪದ ತಿಕ್ಕಾಟವಾಗದಿರಲಿ. ಬಾಳ ಸಂಗಾತಿಯ ಜತೆ ಸ್ನೇಹ ಇರಲಿ. ತಿಳಿದಿರದೇ ಇರುವ ವಿಷಯ ತಿಳಿಸಿ ಹೇಳಿ. ಆಹಂ ಎಂಬುದು ಸುಖ ತಾರದು. ಹುಮಾನ್‌ ಚಾಲೀಸ್‌ ಓದಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಉತ್ತರ

ಮೀನ: ವ್ಯವಹಾರದಲ್ಲಿ ಎಚ್ಚರ ಇರಲಿ

ಕೆಲವು ತಪ್ಪುಗಳು ಬ್ಯುಸಿನೆಸ್‌ ವಿಚಾರದಲ್ಲಿ ಸಂಭವಿಸಲು ಸಾಧ್ಯ. ವಿಚಾರ ಮಾಡಿ ನಿರ್ಧಾರ ತಳೆಯಿರಿ. ಸೂಕ್ತವಾದ ಪ್ರೊಗ್ರೆಸ್‌ ರಿಪೋರ್ಟ್‌ ಒಂದನ್ನು ಹೀಗಿದ್ದರೆ ಹೇಗೆ, ಹಾಗಿದ್ದರೆ ಹಾಗೆ ಎಂಬ ಪೂರ್ವ ವಿವೇಚನೆ, ದುರಾ ಲೋಚನೆಗಳು ಆರೋಗ್ಯಯುತವಾದ ಪ್ರಾಜೆಕ್ಟ್‌ ರಿಪೋರ್ಟ್‌ನೊಂದಿಗೆ ಸಜ್ಜಾಗಿರಲಿ. ಇನ್ನೆರಡೇ ತಿಂಗಳಲ್ಲಿ ಧಾವಿಸಿ ಬರುತ್ತಿರುವ ಸಾಡೇಸಾತಿ ಶನಿಕಟಾಟದ ದುಷ್ಟ ಉರುಳುಗಳು ಈಗಲೇ ಸುತ್ತಿಕೋಳುವ ಅಪಾಯ ಸಂಭವಿಸುವ ಸಾಧ್ಯತೆ ಕಾಣಿಸುತ್ತಿದೆ. ಮುಂದೆ ಕೈಕೊಡುವ ಕಿರಿ ಕಿರಿಯ ವಿಚಾರಗಳು ಈಗಲೇ ವರ್ತಮಾನದಲ್ಲಿ ಬಿತ್ತಲ್ಪಡಬಾರದು. ವ್ಯವಹಾರದಲ್ಲಿ ಎಚ್ಚರ ಇರಲಿ. ಭದ್ರಕಾಳಿಯನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version