ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ದ್ವಾದಶಿಯಂದು ಅಂದರೆ ಜನವರಿ 22ರ ಸೋಮವಾರದಂದು ಅಭಿಜಿತ್ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ಭಗವಾನ್ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಮೃಗಶಿರ ನಕ್ಷತ್ರ ಮತ್ತು ಅಮೃತ ಸಿದ್ಧಿಯೋಗ ಮತ್ತು ಸರ್ವತಾ ಸಿದ್ಧಿ ಯೋಗ ಸಮಯವು ಇರುವುದರಿಂದ ಈ ದಿನವನ್ನು ಶುಭಕರ ಎಂದು ತೀರ್ಮಾನಿಸಲಾಗಿದೆ.
ಇದು ಶುಭ ಮುಹೂರ್ತ
ಅಭಿಜಿತ್ ಮುಹೂರ್ತವನ್ನು ಅತ್ಯಂತ ಶುಭ ಮುಹೂರ್ತ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಯಾವುದೇ ನಕ್ಷತ್ರ ಬದಲಾವಣೆಯ 24 ನಿಮಿಷಗಳ ಮೊದಲು ಮತ್ತು ನಂತರದ ಅವಧಿಯನ್ನು ಅಭಿಜಿತ್ ಮುಹೂರ್ತ ಎಂದು ಕರೆಯಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 12 ರಿಂದ 12 – 30ರ ಒಳಗಿನ ಈ 20ರಿಂದ 30 ನಿಮಿಷಗಳ ಕಾಲ ಈ ಮುಹೂರ್ತ ಇರುತ್ತದೆ. ಅಭಿಜಿತ್ ಮುಹೂರ್ತ ಲಗ್ನಕ್ಕೆ ದಶಮದಲ್ಲಿ ಸೂರ್ಯ ಬರುವುದರಿಂದ, ಸೂರ್ಯನು ದಶಮದಲ್ಲಿ ದಿಗ್ಬಲನಾಗಿರುವುದರಿಂದ ಈ ಅಭಿಜಿನ್ಮಹೂರ್ತಕ್ಕೆ ಬಲವಿರುತ್ತದೆ. ಹಾಗಾಗಿ ಈ ಮಹೂರ್ತ ಶ್ರೇಷ್ಠ ಎನ್ನಲಾಗಿದೆ. ಶುಭ ಕಾರ್ಯಕ್ಕೆ ಉತ್ತಮ ಮುಹೂರ್ತವಿಲ್ಲದಿದ್ದರೆ ಮಂಗಳಕರವಾದ ಅಭಿಜಿತ್ ಮುಹೂರ್ತದಲ್ಲಿ ಈ ಕಾರ್ಯ ಮಾಡಬಹುದು.
ಶ್ಲೋಕ ಹೀಗಿದೆ:
ʻʻಜ್ಯೋತಿಷ್ಯ ನಿಘಂಟುʼʼವಿನ ಶ್ಲೋಕಗಳು ಇಂತಿವೆ;
ನಕ್ಷತ್ರ ದೋಷಮ್ ತಿಥಿವಾರ ದೋಷಮ್ ಗಂಡಾಂತ ದೋಷಮ್ ಕುಮುಹೂರ್ತ ದೋಷಮ್
ಲಗ್ನಾದಿ ಪಂಚಾಂಗ ವಿರುದ್ಧ ದೋಷಮ್ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್ ||
ಅವಗಣ ಶತ ದೋಷಮ್ ಲಕ್ಷಕೋಟಿ ಪ್ರದೋಷಮ್ ಆಯುತ ವಿಯುತ ದೋಷಮ್ ಶಂಖಪದ್ಮಾದಿದೋಷಮ್
ರವಿ ಶನಿ ಕುಜ ದೋಷಮ್ ಹರತು ಸಕಲ ದೋಷಮ್ ಅಂತ್ಯ ಮಧ್ಯಾಹ್ನ ಲಗ್ನಮ್ ||
ವಿಷ ವ್ಯತೀಪಾತ ಕುಜಾರ್ಥ ದೋಷಮ್ ಏಕಾರ್ಗಳಾವೀನ ಭವ ಸಂಭವಾಶ್ಚ ಖಮದ್ಯದೋಷಮ್
ಮಪಿ ಚಂಡರಶ್ಮಿ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್||
ಅಂದರೆ ಈ ಮುಹೂರ್ತಕ್ಕೆ ಎಲ್ಲ ದೋಷಗಳನ್ನು ತೆಗೆದು ಹಾಕುವ ಸಾಮರ್ಥ್ಯವಿದೆ ಎಂದೇ ಶಾಸ್ತ್ರ ಹೇಳಿದೆ. ಹೀಗಾಗಿಯೇ ಈ ಮುಹೂರ್ತವನ್ನು ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
ವಿಜಯಶಾಲಿ ಎಂದರ್ಥ
‘ಅಭಿಜಿತ್’ ಎಂಬ ಪದದ ಅರ್ಥ ʻವಿಜಯಶಾಲಿʼ ಎಂದು. ಅಭಿಜಿತ್ ಮುಹೂರ್ತದಲ್ಲಿಯೇ ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಂದನೆಂದು ನಂಬಲಾಗಿದೆ. ಹೀಗಾಗಿಯೇ ಈ ಮುಹೂರ್ತವು ಎಲ್ಲಾ ದೋಷಗಳನ್ನು ತೊಡೆದು ಹಾಕುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Ram Mandir : ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರತಿಷ್ಠಾಪನೆ: ಯಾವ ರಾಶಿಯವರಿಗೆ ಏನೆಲ್ಲ ಫಲಗಳಿವೆ ಗೊತ್ತಾ?
ಎಲ್ಲ ರೀತಿಯ ಮಂಗಳ ಕಾರ್ಯಗಳಿಗೂ ಈ ಮುಹೂರ್ತ ಅತ್ಯಂತ ಪ್ರಶಸ್ತವಾಗಿದೆ. ಹೊಸದಾಗಿ ಯಾವುದಾದರೂ ವ್ಯಾಪಾರ- ವ್ಯವಹಾರ ಆರಂಭಿಸುವುದಕ್ಕೆ, ಹೊಸ ಉದ್ಯೋಗ ಅಥವಾ ಕೆಲಸ ಪ್ರಾರಂಭಿಸಲು, ರಿಯಲ್ ಎಸ್ಟೇಟ್ ಅಥವಾ ಇತರ ಹಣಕಾಸು ಹೂಡಿಕೆ… ಹೀಗೆ ಅನೇಕ ಶುಭ ಕಾರ್ಯಗಳಿಗೆ ಈ ಮುಹೂರ್ತ ಶುಭ ಘಳಿಗೆ.
ಮೃಗಶಿರ ಮತ್ತು ಶ್ರೀರಾಮಚಂದ್ರ
ಮೃಗಶಿರ ನಕ್ಷತ್ರದಲ್ಲಿ ರಾಮಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಚಂದ್ರನಿಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ರಘುವಂಶ ತಿಲಕ ಶ್ರೀ ರಾಮ ಚಂದ್ರ ಹುಟ್ಟಿದ್ದು ಸೂರ್ಯವಂಶದಲ್ಲಿ ಆದರೂ ಆತನನ್ನು ʻಶ್ರೀರಾಮಚಂದ್ರʼ ಎಂದೇ ಚಂದ್ರನ ಹೆಸರನ್ನು ಸೇರಿಸಿ ಕರೆಯಲಾಗುತ್ತದೆ. ಇದಕ್ಕೊಂದು ಚಂದದ ಕತೆಯಿದೆ. ಶ್ರೀರಾಮ ಚೈತ್ರಮಾಸದ ಶುಕ್ಲ ಪಕ್ಷದ ನವಮಿಯಂದು ಮಧ್ಯಾಹ್ನದ ವೇಳೆ ಕೌಸಲ್ಯಾದೇವಿಯ ಗರ್ಭದಲ್ಲಿ ಜನ್ಮತಾಳುತ್ತಾನೆ. ಆಗ ಶ್ರೀರಾಮನನ್ನು ನೋಡಲು ಚಂದ್ರನ ಹೊರತು ಎಲ್ಲಾ ದೇವಾನುದೇವತೆಗಳು ಅಯೋಧ್ಯೆಗೆ ಧಾವಿಸುತ್ತಾರೆ. ಮಧ್ಯಾಹ್ನದ ವೇಳೆಯಾಗಿದ್ದರಿಂದ ಶ್ರೀರಾಮನ ದರ್ಶನ ತನಗಾಗಲಿಲ್ಲವಲ್ಲ ಎಂದು ಚಂದ್ರ ಕಣ್ಣೀರಿಡುತ್ತಾನೆ. ಆಗ ಶ್ರೀರಾಮನು ಚಂದ್ರನನ್ನು ಕುರಿತು, ʻʻಚಂದ್ರ ನೀನು ದುಃಖಿಸಬೇಡ. ನನ್ನೊಂದಿಗೆ ನಿನ್ನ ಹೆಸರು ಸದಾ ಇರುವಂತಾಗಲು ನಿನ್ನ ಹೆಸರನ್ನು ನನ್ನ ಮೂಲನಾಮದೊಂದಿಗೆ ಇಟ್ಟುಕೊಳ್ಳುತ್ತೇನೆʼʼ ಎಂದು ಅಭಯವನ್ನು ನೀಡಿದ್ದ. ಅಂದಿನಿಂದ ಶ್ರೀರಾಮನ ಜತೆ ಚಂದ್ರನ ಹೆಸರೂ ಸೇರಿಕೊಂಡು ಶ್ರೀರಾಮ, ʻಶ್ರೀರಾಮಚಂದ್ರʼನಾದ. ಈಗ ಚಂದ್ರನ ನಕ್ಷತ್ರದಂದೇ ರಾಮಚಂದ್ರನ ಪ್ರತಿಷ್ಠಾಪನೆ ನಡೆಯುತ್ತಿದೆ.