ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು
ಇದು 2023ನೇ ಇಸವಿಯ ವರ್ಷ ಭವಿಷ್ಯ (Yearly Horoscope 2023). ಅಂದರೆ ಜನವರಿ 1, 2023ರಿಂದ ಡಿಸೆಂಬರ್ 31, 2023ರ ತನಕದ ಹನ್ನೆರಡು ತಿಂಗಳು ಅನ್ವಯ ಆಗುವಂಥ ಒಂದು ವರ್ಷದ ಅವಧಿಯ ಶುಭಾಶುಭ ಫಲಗಳ ಮಾಹಿತಿ. ಶುಭಕೃತ್ ಹಾಗೂ ಶೋಭಕೃತ್ ಸಂವತ್ಸರದ ಫಲಗಳು ಕ್ರಮವಾಗಿ ಮೂರು ತಿಂಗಳು ಹಾಗೂ ಒಂಬತ್ತು ತಿಂಗಳು ಅನ್ವಯ ಆಗುವಂಥ ಗೋಚಾರ ಫಲ ಇಲ್ಲಿದೆ.
ಈ ಬಗ್ಗೆ ತಿಳಿದುಕೊಳ್ಳುವ ಮೊದಲಿಗೆ ಗ್ರಹಗಳ ಗೋಚಾರದ (ಗ್ರಹ ಸಂಚಾರ) ಕುರಿತು ಸ್ವಲ್ಪ ಮಾಹಿತಿ ತಿಳಿದುಕೊಳ್ಳೊಣ. ನಿಮಗೆ ಗೊತ್ತಿರಲಿ, ಇದು ಯುಗಾದಿ ಭವಿಷ್ಯ ಅಲ್ಲ. ಹೊಸ ವರ್ಷ (ಕ್ಯಾಲೆಂಡರ್ ಪದ್ಧತಿಯಲ್ಲಿ) 2023ರ ಜನವರಿಯಿಂದ ಡಿಸೆಂಬರ್ ಎಂಬ ಲೆಕ್ಕಕ್ಕೆ ತೆಗೆದುಕೊಂಡು ನೀಡಲಾಗುತ್ತಿದೆ.
ಜ್ಯೋತಿಷ ರೀತಿಯಾಗಿ ಎರಡೂವರೆ ವರ್ಷಕ್ಕೆ ಒಮ್ಮೆ (ಸಾಮಾನ್ಯ ಪರಿಕ್ರಮದಲ್ಲಿ, ಅಂದರೆ ವಕ್ರೀ ಹಾಗೂ ಮುಂದಿನ ಮನೆಗಳಿಗೆ ವೇಗವಾಗಿ ಚಲಿಸುವ ಅವಧಿ ಹೊರತು ಪಡಿಸಿ) ಶನಿ ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತದೆ. ಅಂದರೆ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತದೆ. ಇನ್ನು ಗುರು ಗ್ರಹ ಸಾಧಾರಣವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತದೆ. ಛಾಯಾ ಗ್ರಹಗಳು ಎನಿಸಿಕೊಂಡ ರಾಹು- ಕೇತುಗಳ ಸಂಚಾರ ಅವಧಿ ಹದಿನೆಂಟು ತಿಂಗಳು. ಇವುಗಳನ್ನು ಸಮಸಪ್ತಕ ಎನ್ನಲಾಗುತ್ತದೆ, ಅಪ್ರದಕ್ಷಿಣೆಯಾಗಿ ಏಳು ಸ್ಥಾನಗಳ ಅಂತರದಲ್ಲಿ ಒಂದು ರಾಶಿಯಲ್ಲಿ ಒಂದೂವರೆ ವರ್ಷದಂತೆ ಸಂಚರಿಸುತ್ತವೆ. ಈ ಪ್ರಮುಖ ಗ್ರಹ ಸಂಚಾರದ ವಿವರ ಜನವರಿ ಹಾಗೂ ಡಿಸೆಂಬರ್ ಮಧ್ಯೆ ಹೀಗಿದೆ:
ಶನಿ: ಜನವರಿ 1, 2023ರಿಂದ ಜನವರಿ 17, 2023ರ ತನಕ ಮಕರ, ಜನವರಿ 17, 2023ರಿಂದ ಡಿಸೆಂಬರ್ 31, 2023ರ ತನಕ ಕುಂಭ ರಾಶಿಯಲ್ಲಿ ಸಂಚಾರ.
ಗುರು: ಜನವರಿ 1, 2023ರಿಂದ ಏಪ್ರಿಲ್ 22, 2023ರ ತನಕ ಮೀನ, ಏಪ್ರಿಲ್ 22, 2023ರಿಂದ ಡಿಸೆಂಬರ್ 31, 2023ರ ತನಕ ಮೇಷ ರಾಶಿಯಲ್ಲಿ ಸಂಚಾರ.
ರಾಹು- ಕೇತು: ಜನವರಿ 1, 2023ರಿಂದ ಅಕ್ಟೋಬರ್ 30, 2023ರ ತನಕ ಮೇಷ, ಅಕ್ಟೋಬರ್ 30, 2023ರಿಂದ ಡಿಸೆಂಬರ್ 31, 2023ರ ತನಕ ಮೀನ ರಾಶಿಯಲ್ಲಿ ಸಂಚಾರ.
ಇಲ್ಲಿರುವುದು ಗೋಚಾರ ಫಲ ಮಾತ್ರ. ಅಂದರೆ ಹನ್ನೆರಡು ರಾಶಿಗಳಿಗೆ ಗ್ರಹ ಸಂಚಾರದ ಆಧಾರದಲ್ಲಿ ಪ್ರಭಾವ ಹೇಗಿರುತ್ತದೆ ಎಂಬುದರ ವಿವರಣೆ ಮಾತ್ರ. ನಿಮ್ಮ ಜನ್ಮ ಜಾತಕದಲ್ಲಿನ ಗ್ರಹ ಸ್ಥಿತಿ, ದಶಾ ಸಂಧಿ ಕಾಲ, ದಶಾ- ಭುಕ್ತಿಗಳ ಬದಲಾವಣೆ ಈ ಎಲ್ಲವೂ ಮುಖ್ಯ ಆಗುತ್ತದೆ. ಆದ್ದರಿಂದ ಇಲ್ಲಿ ನೀಡುವ ಫಲಗಳು ಸಂಪೂರ್ಣವಾಗಿ ಆಗಬೇಕು ಅಂತೇನೂ ಇಲ್ಲ. ಆದರೆ ಪ್ರಭಾವ ಖಂಡಿತಾ ಇರುತ್ತದೆ.
ಮೇಷ : ಕುಜ ಗ್ರಹ ಅಧಿಪತಿಯಾದ ನಿಮಗೆ ಹುಟ್ಟಿದ ಸಮಯದಲ್ಲಿ ಶನಿ ಗ್ರಹವು ಸ್ಥಿತಿ ಉತ್ತಮವಾಗಿ ಇದ್ದಲ್ಲಿ ಹಾಗೂ ಉತ್ತಮ ದಶಾ- ಭುಕ್ತಿ ಕಾಲ ಇದಾಗಿದ್ದಲ್ಲಿ ಉತ್ತಮವಾದ ವರ್ಷಗಳಲ್ಲಿ ಇದೂ ಒಂದು ಎನಿಸಿಕೊಳ್ಳಲಿದೆ. ಜನವರಿಯಲ್ಲಿ ಹನ್ನೊಂದನೇ ಮನೆಯ ಶನಿ ಸಂಚಾರದ ವೇಳೆ ಲಾಭ ಕಾಣುತ್ತೀರಿ. ಆಸ್ತಿ ಲಾಭ, ವಾಹನ ಲಾಭ, ಸಾಮಾಜಿಕವಾಗಿ ಪ್ರಭಾವಿಗಳ ಜತೆಗೆ ಸಂಪರ್ಕ ಹಾಗೂ ಆ ಮೂಲಕವಾಗಿ ಸಾಮಾಜಿಕವಾಗಿ, ವೈಯಕ್ತಿಕವಾಗಿ ಲಾಭ, ವರ್ತಕರು- ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲ ಇತ್ಯಾದಿ ಉತ್ತಮ ಫಲಗಳಿವೆ. ಇನ್ನು ಹನ್ನೆರಡು ಹಾಗೂ ಜನ್ಮ ರಾಶಿಯಲ್ಲಿ ಗುರು ಸಂಚಾರ ಇರುವಾಗ ಆರೋಗ್ಯ ಕಡೆಗೆ ಹಾಗೂ ನಿಮ್ಮ ವೆಚ್ಚದ ಬಗ್ಗೆ ಲಕ್ಷ್ಯ ನೀಡಿ. ಡಯಾಬಿಟೀಸ್, ಬಿಪಿ ಸಮಸ್ಯೆ ಇರುವವರು ಆಹಾರ- ಪಥ್ಯದ ಕಡೆಗೆ ನಿಗಾ ನೀಡಿ. ಸೂಕ್ತ ಆಹಾರ- ಅಗತ್ಯ ಪ್ರಮಾಣದ ನೀರು ಸೇವನೆ ಮಾಡಿ.
ನೀವಾಗಿಯೇ ಬಲಿಷ್ಠರ ಜತೆಗೆ ವೈರತ್ವ ಮಾಡಿಕೊಳ್ಳಬೇಡಿ. ಇನ್ನು ವರ್ಷದ ಹತ್ತು ತಿಂಗಳು ನಿಮ್ಮ ಜನ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಸಂಚರಿಸುವಾಗ ದುರ್ಜನರ ಸಹವಾಸ, ಅಹಂಭಾವ ಇರುತ್ತದೆ. ಇದರಿಂದ ನಿಮ್ಮ ಆತ್ಮೀಯರೇ ದೂರ ಆಗುವ, ಸಂಸಾರದಲ್ಲಿ -ಪಾಲುದಾರಿಕೆ ವ್ಯವಹಾರದಲ್ಲಿ ಜಗಳ ಆಗಲಿದೆ. ಮಾತಿನಲ್ಲಿ ಎಚ್ಚರ ಇರಲಿ. ವರ್ಷದ ಕೊನೆ ಎರಡು ತಿಂಗಳು ಆದಾಯ- ವ್ಯಯ ಅಲ್ಲಿಂದ ಅಲ್ಲಿಗೆ ಎಂಬಂತೆ ಇರುತ್ತದೆ.
ವೃಷಭ: ಶುಕ್ರ ಗ್ರಹ ನಿಮ್ಮ ರಾಶಿಗೆ ಅಧಿಪತಿ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುವಾಗ ವೃತ್ತಿಪರರು- ಉದ್ಯೋಗಿಗಳಾದವರಿಗೆ ಅಷ್ಟೇನೂ ಸಮಾಧಾನದ ಸಮಯ ಅಲ್ಲ. ನಿಮ್ಮ ಪಾಲಿಗೆ ಬರಬೇಕಾದ ಮೆಚ್ಚುಗೆ, ಪ್ರಮೋಷನ್, ಸಂಬಳದಲ್ಲಿನ ಹೆಚ್ಚಳವು ಇನ್ನ್ಯಾರದೋ ಪಾಲಾಗುತ್ತದೆ. ನೀವು ಸದುದ್ದೇಶದಿಂದಲೇ ಹೇಳಿದ ವಿಚಾರವನ್ನು ಮತ್ತೊಂದು ಬಗೆಯಲ್ಲಿ ಗ್ರಹಿಸಿ, ಅಥವಾ ಕಥೆ ಕಟ್ಟಿ ಹೇಳಿ ನಿಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸ ಆಗುತ್ತದೆ. ಎಷ್ಟೇ ಒತ್ತಡ ಅಂತಿದ್ದರೂ ನಿಮ್ಮ ಪಾಲಿನ ಕೆಲಸವನ್ನು ಅಥವಾ ಉದ್ಯೋಗ ಸ್ಥಳದಲ್ಲಿನ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಡಿ. ಕಷ್ಟವೋ ಸುಖವೋ ನೀವೇ ಮಾಡಿ. ಆಗದಿದ್ದಲ್ಲಿ ನಿಮ್ಮ ಮೇಲಧಿಕಾರಿಗೇ ಮನವಿ ಮಾಡಿ, ನಿಮ್ಮಿಂದ ಇದು ಸಾಧ್ಯವಿಲ್ಲ ಎಂಬುದನ್ನು ತಿಳಿಸಿ. ಆದರೆ ನೀವಾಗಿಯೇ ತೀರ್ಮಾನ ಮಾಡಬೇಡಿ. ಆಲಸ್ಯವೋ ತಿರಸ್ಕಾರವೋ ನಿಮಗೆ ಉರುಳಾಗಬಹುದು.
ಏಪ್ರಿಲ್ ತಿಂಗಳ ತನಕ ಹನ್ನೊಂದರಲ್ಲಿ ಗುರು ಸಂಚಾರ ವೇಳೆ ನಾನಾ ಲಾಭ ಆಗುತ್ತದೆ. ತೀರ್ಥಕ್ಷೇತ್ರ ದರ್ಶನ, ಗುರುಗಳ ಆರಾಧನೆಗೆ ಅವಕಾಶ, ಮನೆಯಲ್ಲಿ ನೆಮ್ಮದಿ, ಸಜ್ಜನರ ಒಡನಾಟ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಹೀಗೆ ಶುಭ ಫಲಗಳಿವೆ. ಅದೇ ಹನ್ನೆರಡನೇ ಮನೆಯಲ್ಲಿ ಗುರು ಸಂಚಾರದ ವೇಳೆ ಖರ್ಚಿನ ಪ್ರಮಾಣ ಹೆಚ್ಚು. ಹನ್ನೆರಡರಲ್ಲಿ ಸಂಚರಿಸುವ ರಾಹು ಹಾಗೂ ಆರನೇ ಮನೆಯಲ್ಲಿ ಇರುವ ಕೇತು ಆದಾಯ- ವ್ಯಯದ ಬಗ್ಗೆ ಅಂದಾಜು ಸಿಗದಂಥ ಸ್ಥಿತಿಗೆ ದೂಡುತ್ತವೆ. ವರ್ಷದ ಕೊನೆ ಹೊತ್ತಿಗೆ ಭೂಮಿ ಖರೀದಿ ಯೋಗ ಇದೆ. ಹಿತಶತ್ರುಗಳು ಹಾಗೂ ದುರ್ವ್ಯಸನಗಳ ಬಗ್ಗೆ ಜಾಗ್ರತೆ ಮುಖ್ಯ.
ಮಿಥುನ : ಬುಧ ಗ್ರಹ ನಿಮ್ಮ ರಾಶಿಗೆ ಅಧಿಪತಿ. ಕಳೆದ ಎರಡೂ ಚಿಲ್ಲರೆ ವರ್ಷದಿಂದ ಎಂಟನೇ ಮನೆಯ ಶನಿಯಿಂದಾಗಿ ನಾನಾ ರೀತಿ ಪಡಿಪಾಟಲು ಕಂಡಿರುವ ನಿಮಗೆ ಈ ಹಿಂದಿನಂತಹ ಕಷ್ಟಗಳು ಸದ್ಯಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಅವಮಾನ ಎದುರಿಸುವ ಸನ್ನಿವೇಶಗಳು ಕಡಿಮೆ ಆಗುತ್ತವೆ. ನೀವು ತೆಗೆದುಕೊಳ್ಳಬೇಕಾದ ಎಚ್ಚರವೆಲ್ಲ ತಂದೆ ಅಥವಾ ತಂದೆಗೆ ಸಮಾನರಾದವರು, ದೊಡ್ಡಪ್ಪ- ಚಿಕ್ಕಪ್ಪ, ಮಾವ ಇವರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಗುರು ಹತ್ತು- ಹನ್ನೊಂದನೇ ಮನೆಯಲ್ಲಿ ಸಂಚರಿಸುವುದರಿಂದ ವೃತ್ತಿ ಬದುಕು ಉತ್ತಮಗೊಳ್ಳುತ್ತದೆ, ಜತೆಗೆ ಈ ಹಿಂದಿನ ಹೂಡಿಕೆಗಳು ಅತ್ಯುತ್ತಮ ಲಾಭ ನೀಡುತ್ತವೆ. ಅಂದುಕೊಳ್ಳದ ರೀತಿಯಲ್ಲಿ ಬಡ್ತಿ, ವೇತನ ಹೆಚ್ಚಳ ಕಾಣುತ್ತದೆ. ಮೇಲಧಿಕಾರಿಗಳು, ಉತ್ತಮ ಸ್ಥಾನ- ಮಾನದಲ್ಲಿ ಇರುವವರು ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಹೆಚ್ಚಿನ ಜವಾಬ್ದಾರಿ ಹಾಗೂ ಸ್ಥಾನ ನೀಡಲಿದ್ದಾರೆ.
ಈ ವರ್ಷ ರಾಹು ಹನ್ನೊಂದನೇ ಮನೆ ಹಾಗೂ ಕೇತು ಐದನೇ ಮನೆಯಲ್ಲಿ ಬಹುತೇಕ ಸಂಚರಿಸಲಿದೆ. ಜಾಗ ಖರೀದಿ, ಸಟ್ಟಾ ವ್ಯವಹಾರದಲ್ಲಿ ಲಾಭ, ವಿದೇಶ ವ್ಯವಹಾರಗಳಿಂದ ಲಾಭ ಮೊದಲಾದವು ಇವೆ. ಆದರೆ ಮಕ್ಕಳ ಬಗ್ಗೆ ಎಚ್ಚರಿಕೆ ಅಗತ್ಯ. ಅವರ ಆರೋಗ್ಯ, ಯಾರ ಜತೆಗೆ ಸ್ನೇಹ- ಸಲುಗೆಯಿಂದ ಇದ್ದಾರೆ ಗಮನಿಸಿ. ವರ್ಷದ ಕೊನೆ ಎರಡು ತಿಂಗಳು ದಿಢೀರ್ ಎಂದು ಬರುವ ಹಣಕ್ಕೆ ಆಸೆ ಪಡದಿರಿ. ಉದ್ಯೋಗ ಸ್ಥಳದಲ್ಲಿ ಜಾಗ್ರತೆಯಿಂದ ಇರಿ.
ಕಟಕ: ನಿಮ್ಮ ರಾಶಿಯ ಅಧಿಪತಿ ಚಂದ್ರ. ಈ ವರ್ಷದ ಶುರುವಿನಲ್ಲಿ ಕುಂಭ ರಾಶಿಗೆ ಶನಿಯ ಪ್ರವೇಶ ಆಗುವುದರೊಂದಿಗೆ ಎಂಟನೇ ಮನೆಗೆ ಶನೈಶ್ಚರ ಬಂದಂತಾಗುತ್ತದೆ. ಶನಿ ಶಾಂತಿ ಮಾಡಿಸಿಕೊಳ್ಳುವುದು ಅಗತ್ಯ. ಆಂಜನೇಯ, ಈಶ್ವರನ ಆರಾಧನೆಯನ್ನು ಮಾಡಿ. ಇನ್ನು ಕೆಲ ಸಮಯ ನಿಮ್ಮ ಪಾಲಿಗೆ ತುಂಬ ಕ್ಲಿಷ್ಟಕರವಾಗಿರುತ್ತದೆ. ಸ್ವಭಾವತಃ ಭಾವನಾ ಜೀವಿಗಳಾದ ನಿಮಗೆ ನಾನಾ ಕಡೆಗಳಲ್ಲಿ ಅವಮಾನಗಳು ಎದುರಾಗುತ್ತವೆ. ಅಪಘಾತ ಆಗುವ ಸಾಧ್ಯತೆಗಳಿವೆ. ಏನೇ ವೈದ್ಯೋಪಚಾರ ಮಾಡಿದರೂ ಕಾಯಿಲೆ ಏನು ಅಂತಲೇ ಗೊತ್ತಾಗದಂಥ ಸ್ಥಿತಿ ಸೃಷ್ಟಿ ಆಗಲಿದೆ ಅಥವಾ ಕಾಯಿಲೆ ಗುಣ ಆಗದಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಜನ್ಮ ಜಾತಕದಲ್ಲಿ ಶನಿ ಗ್ರಹದ ಸ್ಥಿತಿ ಹೇಗಿದೆ ಹಾಗೂ ಸದ್ಯಕ್ಕೆ ನಿಮಗೆ ನಡೆಯುತ್ತಿರುವ ದಶಾ- ಭುಕ್ತಿ ಯಾವುದು ಎಂಬ ಬಗ್ಗೆ ಜ್ಯೋತಿಷಿಗಳಲ್ಲಿ ತೋರಿಸಿಕೊಳ್ಳುವುದು ಸೂಕ್ತ.
ಇನ್ನು ಗುರು ಗ್ರಹ ನಿಮ್ಮ ರಾಶಿಯಿಂದ ಒಂಬತ್ತು ಹಾಗೂ ಹತ್ತನೇ ಮನೆಯಲ್ಲಿ ಸಂಚರಿಸಲಿದ್ದು, ನಿಮ್ಮ ತಂದೆ ಮನೆ ಕಡೆಯಿಂದ ಬರಬೇಕಾದ ಆಸ್ತಿ ಬರುತ್ತದೆ. ಅಥವಾ ಕೊರ್ಟ್ ಕಟೆಕಟೆಯಲ್ಲಿ ಇರುವ ವ್ಯಾಜ್ಯಗಳು ರಾಜೀ- ಸಂಧಾನದ ಮೂಲದ ಬಗೆಹರಿಯುವ ಅವಕಾಶ ಇದೆ. ಇನ್ನು ಯಾವುದನ್ನೆಲ್ಲ ನೀವು ಅದೃಷ್ಟ ಇರಬೇಕು ಅಂದುಕೊಳ್ಳುತ್ತೀರೋ ಅವು ನಿಮ್ಮ ಪರವಾಗಿ ಆಗಲಿವೆ. ಇನ್ನು ರಾಹು ಹತ್ತನೇ ಮನೆಯಲ್ಲಿ, ಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ನಿಮ್ಮ ಬೆನ್ನ ಹಿಂದೆ ನಡೆಯುವಂತಹ ಹಲವು ಸಂಗತಿಗಳು ಗಮನಕ್ಕೆ ಬಾರದಿರಬಹುದು. ಅವು ನಿಮಗೆ ಅನುಕೂಲವಾಗಿರಲ್ಲ. ತಾಯಿಯ ಆರೋಗ್ಯ ಕಡೆಗೆ ಗಮನ ನೀಡಿ, ಬೆಲೆಬಾಳುವ ವಸ್ತುಗಳ ದುರಸ್ತಿಗಾಗಿ ಹೆಚ್ಚಿನ ವೆಚ್ಚ ಆಗಬಹುದು. ವರ್ಷದ ಕೊನೆ ಎರಡು ತಿಂಗಳು ಸಹೋದರ- ಸಹೋದರಿಯರಿಂದ ಅನುಕೂಲ, ತಂದೆಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ಸಿಂಹ: ನಿಮ್ಮ ರಾಶ್ಯಾಧಿಪತಿ ರವಿ. ಈ ವರ್ಷದ ಶುರುವಾದ ಜನವರಿಯ ತನಕ ಆರನೇ ಮನೆಯಲ್ಲಿ ಸಂಚರಿಸುವ ಶನಿ ಕೊನೆ ಹಂತದಲ್ಲಿ ಮೊದಲ ತಿಂಗಳು ಕೆಲವು ಅನುಕೂಲ ಮಾಡಬಹುದು. ಕೆಲಸ ಬದಲಾವಣೆ ಮಾಡಿಕೊಳ್ಳುವ ಹಾಗಿದ್ದಲ್ಲಿ ಮೊದಲ ಇಪ್ಪತ್ತು ದಿನದೊಳಗೆ ಮುಗಿಸಿಕೊಂಡು ಬಿಡಿ. ಇದರ ಜತೆಗೆ ಹಣಕಾಸು ವಿಚಾರಗಳು ಒಂದಿಷ್ಟು ಅನುಕೂಲ ಆಗಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಳಿ ಯಾವುದೇ ಹಣಕಾಸಿನ ವ್ಯವಹಾರ ನಡೆಸದೇ ಇರುವುದು ಕ್ಷೇಮ. ಯಾವುದೇ ಕೆಲಸ ಕುತ್ತಿಗೆಗೆ ಬರುವ ತನಕ ಕಾಯಬೇಡಿ. ಮುಖ್ಯವಾಗಿ ಸೋಮಾರಿತನವನ್ನು ಬಿಡಬೇಕು ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಇಎಂಐಗಳನ್ನು ಕಟ್ಟಬೇಕಾದ ಸರಿಯಾದ ದಿನಾಂಕಕ್ಕೆ ಕಟ್ಟಿಬಿಡಿ. ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿ, ಸಮಸ್ಯೆಗಳನ್ನು ಎದುರಿಸುವಂಥ ಯೋಗ ನಿಮಗೆ ಇದೆ. ಆದ್ದರಿಂದ ಈ ಕಡೆಗೆ ಗಮನ ವಹಿಸಿ, ಪಾವತಿ ಸರಿಯಾದ ಸಮಯಕ್ಕೆ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳಲ್ಲಿ ಏನೋ ಸರಿಹೋಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಇನ್ನು ಸಂಗಾತಿಯ ಜತೆ ಎಲ್ಲ ವಿಚಾರ ಹಂಚಿಕೊಂಡು, ಪಾರದರ್ಶಕವಾಗಿ ಇರುವುದು ಉತ್ತಮ. ಬೃಹಸ್ಪತಿ ನಿಮಗೆ ಎಂಟನೇ ಮನೆಯಲ್ಲಿ, ಅಂದರೆ ಏಪ್ರಿಲ್ ತನಕ ಅದೇ ಮನೆಯಲ್ಲಿ ಇರುವುದರಿಂದ ಕಾನೂನು ವಿಚಾರಗಳಲ್ಲಿ ಸಮಸ್ಯೆಗೆ ಸಿಲುಕುವಂಥ ಸಾಧ್ಯತೆ ಇರುತ್ತದೆ. ಬಾಯಿ ಚಪಲ ಕಡಿಮೆ ಮಾಡಿಕೊಳ್ಳಿ. ಮಸಾಲೆಯುಕ್ತವಾದದ್ದು, ಎಣ್ಣೆಯಿಂದ ಕರಿದ ಪದಾರ್ಥಗಳ ಸೇವನೆಯಿಂದ ದೂರ ಇರಿ. ಗುರು- ಹಿರಿಯರಿಗೆ ಗೌರವ ನೀಡಿ. ಒಂಬತ್ತನೇ ಮನೆಯಲ್ಲಿ ಸಂಚರಿಸುವ ರಾಹು ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವೈಮನಸ್ಯ, ಭಿನ್ನಾಭಿಪ್ರಾಯ ಆಗಬಹುದು. ಅಷ್ಟೇ ಅಲ್ಲ, ಅವರ ಆರೋಗ್ಯದ ಸಲುವಾಗಿ ಹೆಚ್ಚಿನ ಖರ್ಚಾಗಲಿದೆ. ಮೂರನೇ ಮನೆಯಲ್ಲಿ ಸಂಚರಿಸುವ ಕೇತು ಸಹೋದರ- ಸಹೋದರಿಯರ ಮೂಲಕ ಲಾಭ ತರುತ್ತದೆ. ವರ್ಷದ ಕೊನೆ ಎರಡು ತಿಂಗಳು ಹಗಲುಗನಸು ಕಾಣಬೇಡಿ, ಜತೆಗೆ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು.
ಕನ್ಯಾ: ನಿಮ್ಮ ರಾಶ್ಯಾಧಿಪತಿ ಬುಧ. ಜನವರಿಯಲ್ಲಿ ಆರನೇ ಮನೆಯಲ್ಲಿ ಶನಿ ಸಂಚಾರ ಆರಂಭಿಸುವುದರೊಂದಿಗೆ ಆದಾಯ ಮೂಲಗಳು, ಆದಾಯ ಪ್ರಮಾಣ ಜಾಸ್ತಿ ಆಗುತ್ತವೆ. ನಿಮ್ಮ ಆರ್ಥಿಕ ಸವಾಲುಗಳನ್ನು ನಿರ್ವಹಿಸಲು ಬಲ ದೊರೆಯುತ್ತದೆ. ನಿಮ್ಮ ಆದ್ಯತೆಗಳು, ಜೀವನಶೈಲಿ ಬದಲಾಗುತ್ತವೆ. ದೊಡ್ಡ ದೊಡ್ಡ ಸಾಲಗಳು ಇದ್ದಲ್ಲಿ ತೀರಿಸಿಕೊಳ್ಳು ತ್ತೀರಿ. ಎಂದಿಗಿಂತ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಇಷ್ಟು ಸಮಯ ಜಾರಿಗೆ ತರಬೇಕು ಅಂದುಕೊಂಡಿದ್ದ ಹೊಸ ಹೊಸ ಯೋಜನೆಗಳನ್ನು ಈಗ ಅನುಷ್ಠಾನಕ್ಕೆ ತರುತ್ತೀರಿ. ಇನ್ನು ಏಳನೇ ಮನೆಯಲ್ಲಿ ಗುರು ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳು ಉತ್ತಮಗೊಳ್ಳುತ್ತವೆ. ಸಾಂಸಾರಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ. ದೂರ ಪ್ರದೇಶ ಹಾಗೂ ವಿದೇಶಗಳಿಂದ ಶುಭ ಸುದ್ದಿ ಕೇಳಿಬರುತ್ತದೆ. ಆ ಸಮಯದಲ್ಲಿ, ಅಂದರೆ ಜನವರಿಯಿಂದ ಏಪ್ರಿಲ್‌ನ ತನಕ ಒಟ್ಟಾರೆ ಶುಭ ಫಲಗಳನ್ನು ಕಾಣುತ್ತೀರಿ. ಆದರೆ ಆ ನಂತರದಲ್ಲಿ, ಅಂದರೆ ಏಪ್ರಿಲ್‌ನಿಂದ ಗುರು ಎಂಟನೇ ಮನೆಯಲ್ಲಿ ಸಂಚರಿಸುವಾಗ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಮತ್ತಿತರ ಶುಲ್ಕಗಳ ಕಡೆಗೆ ಲಕ್ಷ್ಯ ನೀಡಿ.
ಇನ್ನು ಇದ್ದಕ್ಕಿದ್ದಂತೆ ದೇಹದ ತೂಕ ಜಾಸ್ತಿ ಆಗಬಹುದು. ಆದ್ದರಿಂದ ನಾಲಗೆ ಚಪಲ ಇರುವರು ಎಚ್ಚರಿಕೆಯಿಂದ ಇರಬೇಕು. ಕಾನೂನು ವ್ಯಾಜ್ಯಗಳು ಎದುರಾಗಬಹುದು, ಮತ್ತೊಬ್ಬರ ಪರವಾಗಿ ಜಾಮೀನು ನಿಂತು, ಆ ನಂತರ ಹಣಕಾಸು ಸಂಸ್ಥೆಗಳಿಂದ ನೋಟಿಸ್ ಪಡೆಯುವುದು ಇತ್ಯಾದಿ ಸಾಧ್ಯತೆಗಳಿವೆ. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಎಂಟನೇ ಮನೆಯ ರಾಹು ಹಾಗೂ ಎರಡನೇ ಮನೆಯ ಕೇತು ಈ ವರ್ಷದ ಅಕ್ಟೋಬರ್ ತನಕ ಒಳ್ಳೆ ಫಲಗಳನ್ನು ನೀಡುವುದಿಲ್ಲ. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಕಾಣಿಸಬಹುದು. ಗುಪ್ತಾಂಗ ಕಾಯಿಲೆ ಸಹ ಕಾಣಿಸಿಕೊಳ್ಳಬಹುದು. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ. ವರ್ಷದ ಕೊನೆಯ ಎರಡು ತಿಂಗಳು ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ವಾಲದಂತೆ ನೋಡಿಕೊಳ್ಳಿ.
ತುಲಾ: ನಿಮ್ಮ ರಾಶ್ಯಾಧಿಪತಿ ಶುಕ್ರ. ಈ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ನಿಮ್ಮ ರಾಶಿಯಿಂದ ನಾಲ್ಕು ಮತ್ತು ಐದನೇ ಮನೆಯಲ್ಲಿ ಶನಿ ಸಂಚರಿಸುತ್ತದೆ. ಜನವರಿಯ ಒಂದು ತಿಂಗಳು ಮಕರದಲ್ಲಿ ಶನಿ ಸಂಚರಿಸುವ ತನಕ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಇನ್ನು ಮಾತನಾಡುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಒರಟಾದ ಮಾತುಗಳನ್ನು ಆಡಬೇಡಿ- ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಹಾಗಿಲ್ಲದಿದ್ದಲ್ಲಿ ವಿನಾಕಾರಣ ವೈರತ್ವ ಬೆಳೆಯುವಂತೆ ಆಗುತ್ತದೆ. ಹೊಸದಾಗಿಯೇ ಕೊಂಡು ತಂದರೂ ಮೇಲಿಂದ ಮೇಲೆ ವಾಹನಗಳು ರಿಪೇರಿಗೆ ಬರುತ್ತವೆ. ಇನ್ನು ನಿಮ್ಮ ವಾಹನಗಳನ್ನು ಬೇರೆಯವರಿಗೆ ನೀಡದಿರಿ. ಅಥವಾ ನೀವೇ ಚಲಾಯಿಸುವಾಗ ಕೂಡ ಹೆಚ್ಚಿನ ನಿಗಾ ಮಾಡಿ. ಶನಿಯು ಜನವರಿ ಹದಿನೇಳನೇ ತಾರೀಕಿನ ನಂತರ ಐದನೇ ಮನೆಯಲ್ಲಿ ಸಂಚರಿಸುವಾಗ ನೀವೆಷ್ಟು ಧರ್ಮಿಷ್ಠರು, ಸತ್ಯವಂತರಾರುತ್ತೀರೋ ಅಷ್ಟು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ಹಳೆಯ ಕಾಯಿಲೆಗಳು ಉಲ್ಬಣ ಆಗಬಹುದು. ಯಾವುದೇ ಕಾರಣಕ್ಕೆ ಮನೆ ಮದ್ದು, ಸ್ವಯಂ ವೈದ್ಯ ಮಾಡಕೂಡದು. ಸುಲಭಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದ ಆರೋಗ್ಯ ಸಮಸ್ಯೆಗಳು ಕೆಲವು ಕಾಡಬಹುದು. ಯಾವ ವೈದ್ಯರು, ಯಾವ ಔಷಧಗಳು ಕೆಲಸಕ್ಕೆ ಬರುತ್ತಿಲ್ಲ ಎನಿಸಬಹುದು. ಆದರೆ ಇದರಿಂದ ಧೈರ್ಯಗೆಡಬೇಡಿ. ದೇವರ ಮೇಲೆ ನಂಬಿಕೆ ಹೋಗದಿರಲಿ. ತಪ್ಪುತಪ್ಪಾದ ವಿಚಾರಗಳ ಕಡೆಗೆ ಆಕರ್ಷಿತರಾಗದಂತೆ ಎಚ್ಚರಿಕೆ ಅಗತ್ಯ.
ಜನ್ಮ ರಾಶಿಯಲ್ಲೇ ಕೇತು ಹಾಗೂ ಸಪ್ತಮದಲ್ಲಿ ರಾಹು ಈ ವರ್ಷದ ಹತ್ತು ತಿಂಗಳು ಇರುತ್ತದೆ. ಆ ವೇಳೆಯಲ್ಲಿ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಪ ಕರ್ಮಾಸಕ್ತಿ ಹೆಚ್ಚು ಮಾಡುತ್ತವೆ. ಸಂಗಾತಿ ಬಗ್ಗೆ ಇಲ್ಲ ಸಲ್ಲದ ಅನುಮಾನ, ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಸೆಳೆತ ಇತ್ಯಾದಿ ದುರಾಲೋಚನೆಗಳು ಬರುತ್ತವೆ. ಗಣಪತಿ- ಸುಬ್ರಹ್ಮಣ್ಯ ಆರಾಧನೆ ಮಾಡಿ. ವರ್ಷದ ಕೊನೆ ಎರಡು ತಿಂಗಳಲ್ಲಿ ಭೂಮಿ ಖರೀದಿಗೆ ಪ್ರಯತ್ನಿಸಬಹುದು. ಅದರಲ್ಲಿ ಮೋಸ ಆಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿ. ಯಾವುದಕ್ಕೂ ಜ್ಯೋತಿಷಿಗಳಲ್ಲಿ ಒಮ್ಮೆ ಜಾತಕವನ್ನು ತೋರಿಸಿ, ದಶಾ-ಭುಕ್ತಿ ಪರಿಶೀಲನೆ ಮಾಡಿಸಿಕೊಳ್ಳಿ.
ವೃಶ್ಚಿಕ : ನಿಮಗೆ ರಾಶ್ಯಾಧಿಪತಿ ಕುಜ. ಇನ್ನು ಜನವರಿ ತಿಂಗಳ ಮೊದಲ ಹದಿನೇಳು ದಿವಸ ಮಾತ್ರ ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಹಾಗೂ ಆ ನಂತರದಲ್ಲಿ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆ. ಆದ್ದರಿಂದ ಜನವರಿಯಲ್ಲಿ ಮಾತ್ರ ಹಣಕಾಸಿನ ಹರಿವು ಚೆನ್ನಾಗಿ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಅದು ಸ್ವಲ್ಪ ಮಟ್ಟಿಗಾದರೂ ಇಳಿಕೆ ಕಾಣುತ್ತಾ ಬರುತ್ತಿರುವುದು ಗಮನಕ್ಕೆ ಬರಲಿದೆ. ಲೆಕ್ಕಾಚಾರ ಇಲ್ಲದಂತೆ ಯಾವುದೇ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ಕೈ ಹಾಕುವುದಿದ್ದಲ್ಲಿ, ಸಾಲ ಮಾಡುವುದಿದ್ದಲ್ಲಿ ಮುಂದಕ್ಕೆ ಹಾಕುವುದು ಉತ್ತಮ. ಈಗಾಗಲೇ ಮುಂದುವರಿದಿದ್ದೀನಿ ಅಂತಾದರೆ, ಬಜೆಟ್ ವಿಚಾರದಲ್ಲಿ ಒಂದಕ್ಕೆ ಸಾವಿರ ಬಾರಿ ಆಲೋಚನೆ ಮಾಡಿ. ಏಕೆಂದರೆ ಜನವರಿ ನಂತರದಲ್ಲಿ ಪರಿಸ್ಥಿತಿ ಇಲ್ಲಿಯವರೆಗೆ ಇದ್ದಂತೆ ಇರುವುದಿಲ್ಲ. ವಯಸ್ಸಾದ, ಅನಾರೋಗ್ಯದಿಂದ ಇರುವ ತಾಯಿ ಇದ್ದಲ್ಲಿ ಕಾಲಕಾಲಕ್ಕೆ ಸೂಕ್ತ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿ. ನಿಮ್ಮಿಂದ ಈಡೇರಿಸುವುದಕ್ಕೆ ಅಥವಾ ಪೂರೈಸುವುದಕ್ಕೆ ಸಾಧ್ಯ ಆಗುವಂಥದ್ದರ ಬಗ್ಗೆ ಮಾತ್ರ ಮಾತು ನೀಡಿ, ಇಲ್ಲದಿದ್ದರೆ ಮಾತು ತಪ್ಪುವಂತಾಗುತ್ತದೆ. ಜತೆಗೆ ವರ್ಚಸ್ಸಿಗೆ ಪೆಟ್ಟು ಬೀಳುತ್ತದೆ. ಮುಂದಿನ ವರ್ಷದ ಏಪ್ರಿಲ್ ತನಕ ಪಂಚಮದಲ್ಲಿ ಗುರು ಸಂಚಾರ ಇರುತ್ತದೆ. ಈ ವೇಳೆ ಸಂತಾನ ಅಪೇಕ್ಷಿತರನ್ನು ಹೊರತುಪಡಿಸಿದಂತೆ ಉಳಿದವರಿಗೆ ಒಳ್ಳೆ ಸಮಯ. ಉತ್ತಮ ಫಲಗಳು ಸಿಗುತ್ತವೆ.
ಅದಾದ ಮೇಲೆ ವರ್ಷ ಪೂರ್ತಿ ಆರನೇ ಮನೆಯಲ್ಲಿ ಗುರು ಸಂಚರಿಸುವಾಗ ಮೇಲಧಿಕಾರಿಗಳ ಜತೆಗೆ ಮಾತುಕತೆ ವೇಳೆ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಜತೆಗೆ ವ್ಯವಹಾರದಲ್ಲಿ ಕಾಗದ- ಪತ್ರಗಳನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿ. ಹನ್ನೆರಡನೇ ಮನೆ ಕೇತು ಖರ್ಚನ್ನು ಹೆಚ್ಚು ಮಾಡಿದರೂ ದೇವತಾ ಆರಾಧನೆ ಕಡೆಗೆ ಮನಸ್ಸು ನೀಡುತ್ತದೆ. ಆರನೇ ಮನೆ ರಾಹು ಭೂಮಿ, ಷೇರು, ಮ್ಯೂಚುವಲ್ ಫಂಡ್‌ಗಳ ಮೂಲಕ ಆದಾಯ ತರುತ್ತದೆ. ಇನ್ನು ವರ್ಷದ ಕೊನೆ ಎರಡು ತಿಂಗಳು ಈ ಹಿಂದೆ ಮಾಡಿದ್ದ ಹೂಡಿಕೆಯಿಂದ ಹಣ ಬರಬಹುದು. ಅದೇ ವೇಳೆ ಮಕ್ಕಳ ಓದು, ಆರೋಗ್ಯದ ಕಡೆಗೆ ಲಕ್ಷ್ಯ ನೀಡಬೇಕು.
ಧನುಸ್ಸು : ನಿಮ್ಮ ರಾಶ್ಯಾಧಿಪತಿ ಗುರು. ಇಷ್ಟು ವರ್ಷದ ಸಾಡೇಸಾತ್ ಶನಿಯ ಪ್ರಭಾವ ಸಂಪೂರ್ಣವಾಗಿ ದೂರ ಆಗುವ ಕಾಲ ಇದು. ಜನವರಿ ಹದಿನೇಳನೇ ತಾರೀಕಿನಂದು ಮೂರನೇ ಮನೆಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಆ ನಂತರ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೃಢವಾದ ಬದಲಾವಣೆ ಗಮನಿಸಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ಇರುವ ಕೆಲಸದಲ್ಲಿ ಅಥವಾ ಕೆಲಸ ಬದಲಾವಣೆಯೊಂದಿಗೆ ಸಂಬಳದಲ್ಲಿ ಹೆಚ್ಚಳ, ಪ್ರಮೋಷನ್, ಹೊಸ ವ್ಯಾಪಾರದ ಆಲೋಚನೆಗಳು ಬರಲಿವೆ. ಇನ್ನು ಹೊಸ ವ್ಯಾಪಾರವನ್ನು ಶುರು ಮಾಡಬೇಕು ಎಂದುಕೊಂಡವರಿಗೆ ಅನುಕೂಲಕರವಾದ ವೇದಿಕೆ ಸಿಗಲಿದೆ. ಹಣಕಾಸಿನ ನೆರವು ನೀಡುವುದಕ್ಕೆ, ಅದು ಸಾಲದ ರೂಪದಲ್ಲೇ ಆದರೂ ಅದನ್ನು ನೀಡುವುದಕ್ಕೆ ಜನ ದೊರೆಯುತ್ತಾರೆ.
ನಾಲ್ಕನೆ ಮನೆಯಲ್ಲಿ, ಏಪ್ರಿಲ್ ತನಕ ಗುರು ಮೀನದಲ್ಲಿ ಸಂಚಾರ ಮಾಡುವಾಗ ಮನೆ- ಸೈಟು ಖರೀದಿ, ಮನೆ ಕಟ್ಟಿಸುವ ಯೋಗ, ಕಾರು- ಬೈಕ್‌ಗಳು ಖರೀದಿಸಬೇಕು ಎಂದಿರುವವರಿಗೆ ವಾಹನ ಖರೀದಿ ಯೋಗ ಇತ್ಯಾದಿ ಶುಭ ಫಲಗಳು ಇವೆ. ಏಪ್ರಿಲ್‌ನಲ್ಲಿ ಗುರುವು ಐದನೇ ಮನೆಯಲ್ಲಿ ಸಂಚಾರ ಮಾಡುವಾಗ ದೂರದ ಪ್ರದೇಶಗಳಿಗೆ ತೆರಳುವ ಯೋಗ, ಅದರಿಂದ ಲಾಭ ಆಗುವ ಯೋಗಗಳಿವೆ. ಹನ್ನೊಂದನೇ ಮನೆಯಲ್ಲಿ ಕೇತು ಸಂಚರಿಸುವಾಗ ಅದೃಷ್ಟ ಬಲದಿಂದ ವ್ಯಾಜ್ಯ, ತಂಟೆ- ತಕರಾರು ಇದ್ದಲ್ಲಿ ನಿವಾರಣೆ ಆಗುತ್ತವೆ. ನಿಮಗೊಂದು ವರ್ಚಸ್ಸು ಇದ್ದು, ಇತರರು ನಿಮ್ಮ ಮಾತನ್ನು ಪಾಲಿಸುತ್ತಾರೆ. ಐದನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಮಕ್ಕಳ ಆರೋಗ್ಯದ ಕುರಿತು ಜಾಗ್ರತೆಯಿಂದ ಇರಬೇಕು. ವರ್ಷದ ಕೊನೆ ಎರಡು ತಿಂಗಳು ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಿ. ಅವರಿಗೆ ಮರೆವು ಸಮಸ್ಯೆ, ಅನಾರೋಗ್ಯ ಇತ್ಯಾದಿ ಸಮಸ್ಯೆಗಳು ಆಗಬಹುದು.
ಮಕರ : ನಿಮ್ಮ ರಾಶ್ಯಾಧಿಪತಿ ಶನಿ. ನಿಮಗೆ ಸಾಡೇಸಾತ್ ಶನಿಯ ಪ್ರಭಾವ 2025ರ ಮಾರ್ಚ್ ತನಕ ಇದೆ. ಜನವರಿಯಲ್ಲಿ ಕುಂಭಕ್ಕೆ ಶನಿ ಪ್ರವೇಶಿಸುವುದರೊಂದಿಗೆ ಎರಡನೇ ಮನೆಯಲ್ಲಿ ಸಂಚಾರ ಇರುತ್ತದೆ. ಧನ ಸ್ಥಾನದಲ್ಲಿ ಶನಿ ಸಂಚಾರ ಸಮಯದಲ್ಲಿ ಹಣದ ಹರಿವು ಸ್ವಲ್ಪ ಮಟ್ಟಿಗೆ ಸರಾಗ ಆಗುತ್ತದೆ. ಆದರೆ ನೀವು ಮುಖ್ಯವಾದ ಜನವರಿಯ ಮೊದಲ ಇಪ್ಪತ್ತು ದಿನ ಜನ್ಮ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯ ಬಗ್ಗೆ ಜಾಗ್ರತೆ ವಹಿಸಿ. ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಆಲಸ್ಯ ಮಾಡದಿರಿ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಜನವರಿಯಿಂದ ಆಚೆಗೆ ಎರಡನೇ ಮನೆಯಲ್ಲಿ ಶನಿ ಸಂಚರಿಸುವಾಗ ಸ್ವಲ್ಪ ಆತಂಕ ಇರುತ್ತದೆ. ಒತ್ತಡ, ಹಿಂಸೆ ಅಥವಾ ಬೇರೆ ಯಾವುದೇ ಕಾರಣಕ್ಕೂ ಕೆಲಸ ಬಿಡುವ ನಿರ್ಧಾರ ಮಾಡಬೇಡಿ. ಇನ್ನು ಏಪ್ರಿಲ್ ತಿಂಗಳ ತನಕ ಗುರು ಮೂರನೇ ಮನೆಯಲ್ಲಿ ಮತ್ತು ಆ ನಂತರ ಈ ವರ್ಷದ ಕೊನೆಯ ತನಕ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿದೆ. ಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಹಾಗೇ ಮುಂದುವರಿಯಲಿದೆ. ಇದು ಏಪ್ರಿಲ್ ತನಕ ಇಂಥದ್ದೊಂದು ಭಾವನೆ ಮನಸ್ಸಿನಲ್ಲಿ ಇರುತ್ತದೆ.
ಆ ನಂತರ ಗುರು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಭೂಮಿ ಲಾಭ ಆಗುವುದೋ ಅಥವಾ ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ. ಈ ಅವಧಿಯಲ್ಲಿ ದುಡ್ಡಿನ ವಿಚಾರಕ್ಕೆ ಎಚ್ಚರಿಕೆಯಿಂದ ಮುಂದಕ್ಕೆ ಹೆಜ್ಜೆ ಇಡಿ. ಹಿರಿಯರು- ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಈ ವರ್ಷದ ಹತ್ತು ತಿಂಗಳು ನಾಲ್ಕರಲ್ಲಿ ರಾಹು ಇದ್ದು ನಿಮ್ಮದೇ ಸುಖ- ಸವಲತ್ತಿಗೆ ಇರುವಂಥ ಅನುಕೂಲಗಳು ನಿಮಗೇ ಇಲ್ಲದಂತೆ, ದೊರೆಯದಂತಾಗುತ್ತದೆ. ಹತ್ತರಲ್ಲಿ ಕೇತು ಇರುವುದರಿಂದ ಉದ್ಯೋಗ, ವೃತ್ತಿಯಲ್ಲಿ ಸವಾಲುಗಳು ಜಾಸ್ತಿ ಆಗುತ್ತವೆ. ವರ್ಷದ ಕೊನೆ ಎರಡು ತಿಂಗಳು ಭೂಮಿಯಿಂದ ಲಾಭ ಇದೆ. ತಂದೆಯ ಸಲುವಾಗಿ ಅಥವಾ ತಂದೆ ಸಮಾನರಿಗಾಗಿ ಹೆಚ್ಚಿನ ಖರ್ಚಿದೆ.
ಕುಂಭ : ನಿಮ್ಮ ರಾಶ್ಯಾಧಿಪತಿಯೂ ಶನಿಯೇ. ಆದರೆ ನಿಮಗೆ ಈಗ ಏಳರಾಟ ಶನಿಯ ಒಂದು ಹಂತ, ಅಂದರೆ ಎರಡೂವರೆ ವರ್ಷ ಮುಗಿಸಿದ್ದೀರಿ. ಜನವರಿ ತಿಂಗಳಿನಿಂದ ನಿಮ್ಮದೇ ಜನ್ಮ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದಾದರೂ ದೀರ್ಘಾವಧಿ ಔಷಧೋಪಚಾರ ತೆಗೆದುಕೊಳ್ಳಬೇಕಾದ ಕಾಯಿಲೆಯಿಂದ ಬಳಲುವಂತಾಗುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆತ್ಮವಿಶ್ವಾಸ ಕಳೆದುಕೊಳ್ಳುವಂಥ ಸನ್ನಿವೇಶ ಎದುರಾಗುತ್ತದೆ. ವೈದ್ಯರ ಸಲಹೆ- ಸೂಚನೆಯನ್ನು ಪಡೆಯದೆ ಯಾವುದೇ ಡಯೆಟ್, ಪಥ್ಯ, ಹೊಸ ಔಷಧಗಳು ತೆಗೆದುಕೊಳ್ಳದಿರಿ. ಅಂದಹಾಗೆ ಎರಡನೇ ಮನೆಯಲ್ಲಿ ಗುರು ಸಂಚಾರ ಮಾಡುವುದರಿಂದ ಏಪ್ರಿಲ್ ತನಕ ಹಣಕಾಸಿನ ಹರಿವಿಗೆ ಅಂಥ ದೊಡ್ಡ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ. ಎರಡನೇ ಸ್ಥಾನ ಕುಟುಂಬ ಸ್ಥಾನವೂ ಹೌದು. ಆದ್ದರಿಂದ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಇನ್ನು ಸಂಬಂಧ ಸಹ ವೃದ್ದಿ ಆಗುತ್ತದೆ.
ಆ ನಂತರ, ಏಪ್ರಿಲ್‌ನಿಂದ ಮೂರನೇ ಮನೆಯಲ್ಲಿ ಗುರು ಸಂಚರಿಸುವಾಗ ನಿಮ್ಮಲ್ಲಿ ಆತ್ಮವಿಶ್ವಾಸ ಇರುತ್ತದೆ. ಯಾವುದೇ ಕೆಲಸವನ್ನು ಮಾಡಿ ಮುಗಿಸಬಲ್ಲ ಚಾಕಚಕ್ಯತೆ ಬರುತ್ತದೆ. ಸಹೋದರ- ಸಹೋದರಿಯರ ಬೆಂಬಲ ನಿಮ್ಮ ಪಾಲಿಗೆ ಒದಗಿ ಬರಲಿದೆ. ಆ ಮೂಲಕ ಕೆಲವು ಕಠಿಣವಾದ ಕೆಲಸ ಸಹ ಸಲೀಸಾಗಿ ಮಾಡಿ ಮುಗಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುತ್ತದೆ. ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಷೇರು ದಲ್ಲಾಳಿಗಳಿಗೆ ಹಣದ ಹರಿವು ಉತ್ತಮವಾಗಿರುತ್ತದೆ. ಒಂಬತ್ತರಲ್ಲಿ ಕೇತು ಸಂಚಾರ ಇರುವುದರಿಂದ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವರ್ಷದ ಕೊನೆ ಎರಡು ತಿಂಗಳು ಎಷ್ಟೇ ಹಣ ಬಂದರೂ ಅಲ್ಲಿಂದ ಅಲ್ಲಿಗೆ ಖರ್ಚು ಎಂಬಂತಾಗುತ್ತದೆ. ಇನ್ನು ಚರ್ಮ ವ್ಯಾಧಿ- ಕೂದಲು ಹೊಟ್ಟು, ಹಲ್ಲು ಇವುಗಳ ಸಮಸ್ಯೆ ಕಾಣಿಸಿಕೊಳ್ಳಬಹುದು.
ಮೀನ : ನಿಮ್ಮ ರಾಶ್ಯಾಧಿಪತಿ ಗುರು. ಜನವರಿಯ ಮೊದಲ ಹದಿನೇಳು ದಿನಗಳು ಮೀನ ರಾಶಿಗೆ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರ ಇರುತ್ತದೆ. ಆ ನಂತರದಲ್ಲಿ ವ್ಯಯ ಸ್ಥಾನಕ್ಕೆ ಬರಲಿದೆ. ಸಾಡೇಸಾತ್ ಶನಿಯ ಆರಂಭದ ಘಟ್ಟ ಇದು. ಈಗಾಗಲೇ ಕುಂಭ ರಾಶಿಯಲ್ಲಿ ಕೆಲ ಸಮಯ ಶನಿ ಇದ್ದು, ಮತ್ತೆ ಮಕರ ರಾಶಿಗೆ ಹೋಗಿದ್ದು ಹೌದಾದರೂ ಈಗ ಪೂರ್ಣಾವಧಿಯಾಗಿ ಶನಿಯ ಏಳರಾಟದ ಅನುಭವ ನಿಮಗೆ ಆಗಲಿದೆ. ಏಪ್ರಿಲ್ ತನಕ ಜನ್ಮ ರಾಶಿಯಲ್ಲೇ ಇರುವ ಗುರುವಿನಿಂದ ನಾನಾ ಬಗೆಯ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಜನ್ಮ ಗುರು ಮನುಷ್ಯರಿಗೆ ದುಃಖವನ್ನು ನೀಡುತ್ತಾನೆ. ಆರೋಗ್ಯ ಸಮಸ್ಯೆಗಳು, ಇತರರಿಂದ ಅವಮಾನ, ಕೆಲಸ ಮಾಡುವುದಕ್ಕೆ ಮನಸ್ಸಿದ್ದರೂ ಸನ್ನಿವೇಶಗಳು ಅನುಕೂಲಕರವಾಗಿ ಇಲ್ಲದಿರುವುದು ಇವೆಲ್ಲ ಏಪ್ರಿಲ್ ತನಕ ಇರುತ್ತದೆ. ಕೆಲಸ ಮಾಡುವುದಕ್ಕೆ ಹಿಂಸೆ ಆಗುತ್ತಿದೆ ಎಂದು ಉದ್ಯೋಗ ಬಿಡುವುದಕ್ಕೆ ಹೋಗಬೇಡಿ. ಏಕೆಂದರೆ ಆದರೆ ಇದು ಏಪ್ರಿಲ್ ತನಕ ಮಾತ್ರ.
ಆ ನಂತರ ಎರಡನೇ ಮನೆಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಈ ಸಂದರ್ಭದಲ್ಲಿ ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ, ಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು. ನೀವು ಅಂದುಕೊಂಡಂತೆ ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು, ಹೊಸದಾಗಿ ಕೆಲಸ ಬದಲಾವಣೆ ಮಾಡುವುದಕ್ಕೆ ಅವಕಾಶ ಇತ್ಯಾದಿ ಶುಭ ಫಲಗಳನ್ನು ಅನುಭವಿಸುತ್ತೀರಿ. ಆದರೆ ನಿಮಗೆ ಸಾಡೇ ಸಾತ್ ಶನಿಯ ಆರಂಭ ಪೂರ್ಣಾವಧಿಗೆ ಆಗಿರುವುದರಿಂದ ಹೊಸ ಯೋಜನೆಗಳು, ದೊಡ್ಡ ಮೊತ್ತದ ಹಣ ಹಾಕಿ ಮಾಡುವ ವ್ಯಾಪಾರ- ವ್ಯವಹಾರಗಳನ್ನು ಮಾಡದಿರಿ. ಇನ್ನು ಅಕ್ಟೋಬರ್ ತನಕ ರಾಹು ದ್ವಿತೀಯದಲ್ಲಿ ಇದ್ದು ನಿಮ್ಮನ್ನು ಭ್ರಮಾಧೀನರನ್ನಾಗಿ ಮಾಡಲಿದ್ದು, ಹಗಲುಗನಸು ಕಾಣದಿರಿ. ಇನ್ನು ಎಂಟನೇ ಮನೆಯಲ್ಲಿನ ಕೇತು ಗುಪ್ತ ರೋಗಗಳು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟುಮಾಡಬಹುದು. ವರ್ಷದ ಕೊನೆ ಎರಡು ತಿಂಗಳು ನಿಮ್ಮ ಆಪ್ತರು ನಿಮ್ಮಿಂದ ದೂರ ಆಗಬಹುದು. ಸಂಸಾರದಲ್ಲಿ ವಿರಸ ಏರ್ಪಡಬಹುದು.
ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?