Site icon Vistara News

Lunar Eclipse: ಇಂದು ಚಂದ್ರಗ್ರಹಣ; ಯಾವ ರಾಶಿಗೆ ಏನು ಪರಿಣಾಮ?

Lunar Eclipse today and Check details

ಶೋಭಕೃತ್‌ ನಾಮ ಸಂವತ್ಸರದಲ್ಲಿ ಭಾರತದಲ್ಲಿ ಶನಿವಾರ (ಅಕ್ಟೋಬರ್‌ 28) ಮಧ್ಯರಾತ್ರಿ ಚಂದ್ರ ಗ್ರಹಣ (Lunar eclipse) ಸಂಭವಿಸಲಿದೆ. ಈ ತಿಂಗಳು (ಅ. 15) ಅಕ್ಟೋಬರ್ 14ರಂದು ಸೂರ್ಯಗ್ರಹಣ (Solar Eclipse) ಸಂಭವಿಸಿತ್ತಾದರೂ ಅದರ ಪರಿಣಾಮ ಮಾತ್ರ ಭಾರತಕ್ಕೆ ಇರಲಿಲ್ಲ. ಅಲ್ಲದೆ, 2023ರ ಮೇ 5ರಂದು ಚಂದ್ರಗ್ರಹಣ ಸಂಭವಿಸಿತ್ತಾದರೂ ಬಿಂಬಕ್ಕೆ ಸ್ಪರ್ಶವಾಗದೇ ಇದ್ದರಿಂದ ಯಾವುದೇ ಆಚರಣೆ ಇರಲಿಲ್ಲ. ಆದರೆ, ಈಗ ಶೋಭಕೃತ್‌ ನಾಮ ಸಂವತ್ಸರ ಆಶ್ವಯುಜ ಶುಕ್ಲ ಪೌರ್ಣಿಮೆಯು ಶನಿವಾರ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ರಾಹುಗ್ರಸ್ತ ಖಂಡಗ್ರಾಸ ಚಂದ್ರಗ್ರಹಣವಾಗುವುದು ಪಂಚಾಂಗದಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ, ಇದು ಭಾಗಶಃ ಚಂದ್ರಗ್ರಹಣವಾಗಿದೆ.

ಹಿಂದು ಧರ್ಮದ ಅನುಸಾರ ಅ. 28ಕ್ಕೆ ಚಂದ್ರ ಗ್ರಹಣ ಇದೆ ಎಂದು ಪಂಚಾಂಗಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಹಿಂದು ಆಚರಣೆ ಪ್ರಕಾರ ಮುಂಜಾನೆ 6 ಗಂಟೆಯಿಂದ ಮರು ದಿನ ಮುಂಜಾನೆ 6 ಗಂಟೆವರೆಗೆ ಒಂದು ದಿನ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಈ ಬಾರಿ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28ರಂದು ಮಧ್ಯ ರಾತ್ರಿ ಸಂಭವಿಸುತ್ತದೆ. ಚಂದ್ರನು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 1.06 ಮತ್ತು 2.23ರ ನಡುವೆ ಭೂಮಿಯ ನೆರಳಿನ ಮೂಲಕ ಹಾದುಹೋಗಲಿದ್ದು, ಚಂದ್ರಗ್ರಹಣ ಸಂಭವಿಸಲಿದೆ. ಇಲ್ಲಿ ರಾತ್ರಿ 1.06ಕ್ಕೆ ಬರುವುದರಿಂದ ಮುಂದಿನ ದಿನದ ಲೆಕ್ಕವನ್ನು ಪಡೆಯುವುದರಿಂದ ಅಕ್ಟೋಬರ್‌ 29ಕ್ಕೆ ಚಂದ್ರ ಗ್ರಹಣ ಎಂದೂ ಹೇಳಲಾಗುತ್ತದೆ.

ಭಾಗಶಃ ಚಂದ್ರ ಗ್ರಹಣ

ಅ. 28ರ ಮಧ್ಯರಾತ್ರಿ ಬಳಿಕ ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರ ಗ್ರಹಣಗಳು ಹುಣ್ಣಿಮೆಯ ಸಂದರ್ಭದಲ್ಲಿ ಸಂಭವಿಸುತ್ತವೆ. ಭೂಮಿ ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬಿದ್ದು ಅದನ್ನು ಮಂಕಾಗಿಸುತ್ತದೆ. ಇದನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನ ಒಂದು ಭಾಗವು ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ. ಪ್ರತಿ ಚಂದ್ರ ಗ್ರಹಣವು ಭೂಮಿಯ ಅರ್ಧಭಾಗದಲ್ಲಿ ಗೋಚರವಾಗುತ್ತದೆ ಎಂದು ನಾಸಾ ತಿಳಿಸಿದೆ.

ವಿಜ್ಞಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಭಾಗಶಃ ಚಂದ್ರ ಗ್ರಹಣವು ಅಕ್ಟೋಬರ್ 28-29ರಂದು ಸಂಭವಿಸಲಿದೆ (6-7 ಕಾರ್ತಿಕ, 1945 ಶಕ ಯುಗ). ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಏಷ್ಯಾ, ಯುರೋಪ್, ಆಫ್ರಿಕಾ, ಪೂರ್ವ ದಕ್ಷಿಣ ಅಮೆರಿಕ, ಈಶಾನ್ಯ ಉತ್ತರ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರವನ್ನು ಒಳಗೊಂಡಿರುವ ಪ್ರದೇಶದಲ್ಲಿ ಗ್ರಹಣ ಗೋಚರಿಸುತ್ತದೆ.

ಭಾರತದಲ್ಲಿ ಗೋಚರವಾಗುತ್ತದೆ

ಭಾಗಶಃ ಚಂದ್ರಗ್ರಹಣವು ಮಧ್ಯರಾತ್ರಿಯ ಸುಮಾರಿಗೆ ಭಾರತದ ಎಲ್ಲಾ ಸ್ಥಳಗಳಿಂದ ಗೋಚರಿಸಲಿದೆ. ಗ್ರಹಣದ ಅವಧಿ 1 ಗಂಟೆ 18 ನಿಮಿಷ. ಗ್ರಹಣ ಅಕ್ಟೋಬರ್ 29ರಂದು ಭಾರತೀಯ ಕಾಲಮಾನ 1 ಗಂಟೆ 5 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾರತೀಯ ಕಾಲಮಾನ 2 ಗಂಟೆ 23 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ರಾತ್ರಿ 1.45ರ ವೇಳೆಗೆ ಶೇ. 12ರಷ್ಟು ಚಂದ್ರ ಬಿಂಬವು ನೆರಳಿನಂತೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಚಂದ್ರ ಗ್ರಹಣ ಯಾವಾಗ?

ಮುಂದಿನ ಸಂಪೂರ್ಣ ಚಂದ್ರಗ್ರಹಣವು ಭಾರತದಲ್ಲಿ 2025ರ ಸೆಪ್ಟಂಬರ್‌ 7ರಂದು ಗೋಚರಿಸಲಿದೆ. ಭಾರತದಲ್ಲಿ ಕೊನೆಯ ಬಾರಿ 2022ರ ನವೆಂಬರ್‌ 8ರಂದು ಸಂಪೂರ್ಣ ಚಂದ್ರ ಗ್ರಹಣ ಗೋಚರವಾಗಿತ್ತು.

ಯಾವ ರಾಶಿಗಳಿಗೆ ಯಾವ ಫಲ?

ಶುಭ ಫಲ: ಮಿಥುನ, ಕರ್ಕಾಟಕ, ವೃಶ್ಚಿಕ, ಕುಂಭ

ಮಿಶ್ರ ಫಲ: ಸಿಂಹ, ತುಲಾ, ಧನು, ಮೀನ

ಅಶುಭ ಫಲ: ಮೇಷ, ವೃಷಭ, ಕನ್ಯಾ, ಮಕರ

ಆಚರಣೆ ಬಗ್ಗೆ ಶಾಸ್ತ್ರ ಹೇಳುವುದೇನು?

ಧರ್ಮ ಶಾಸ್ತ್ರದ ಪ್ರಕಾರ, ಶನಿವಾರ ಮಧ್ಯಾಹ್ನ 3.20 ಗ್ರಹಣಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ಇದಕ್ಕಿಂತ ಮೊದಲು ಸ್ನಾನ, ಭೋಜನ ಸೇರಿದಂತೆ ಇತ್ಯಾದಿಗಳನ್ನು ಮಾಡಿಕೊಳ್ಳಬೇಕು. ಚಿಕ್ಕ ಮಕ್ಕಳು, ವೃದ್ಧರು ಹಾಗೂ ರೋಗಗ್ರಸ್ತರು ರಾತ್ರಿ 7.30ರ ಮುಂಚಿತವಾಗಿ ಲಘು ಆಹಾರವನ್ನು ಸ್ವೀಕರಿಸಬಹುದು. ಅಶುಭ ಫಲ ಇದ್ದವರು, ಗರ್ಭಿಣಿಯರು ಗ್ರಹಣವನ್ನು ನೋಡಬಾರದು ಎಂದು ಹೇಳಲಾಗಿದೆ.

ಚಂದ್ರ ಗ್ರಹಣ ಕಾಲದಲ್ಲಿ ಪಠಿಸುವ ಶ್ಲೋಕ

ಯೋಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸಹಸ್ರ ನಯನಶ್ಚಂದ್ರೋ ಗ್ರಹಪೀಡಾಂ ವ್ಯಪೋಹತು ||೧|

ಮುಖಂ ಯಸ್ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿಃ |
ಅಗ್ನಿಶ್ಚಂದ್ರೋಪರಾಗೋತ್ಥಾಂ ಪೀಡಾಮತ್ರ ವ್ಯಪೋಹತು|೨||

ಯಃ ಕರ್ಮಸಾಕ್ಷೀ ಲೋಕಾನಾಂ ಧರ್ಮೋಮಹಿಷವಾಹನಃ |
ಯಮಶ್ಚಂದ್ರೋಪರಾಗೋತ್ಥಾಂ ಪೀಡಾಮತ್ರ ವ್ಯಪೋಹತು॥೩॥

ರನ್ನೋ ಗಣಾಧಿಪಸ್ಸಾಕ್ಷಾತ್ ಪ್ರಲಯಾನಲಸುಪ್ರಭಃ |
ಖಡ್ಗವ್ಯಗೋತಿಭೀಷಶ್ಚ ಗ್ರಹಪೀಡಾಂ ವ್ಯಪೋಹತು ||೪||

ನಾಗಪಾಶಧರೋ ದೇವಃ ಸದಾ ಮಕರವಾಹನಃ |
ಸ ಜಲಾಧಿಪತಿಶ್ಚಂದಗ್ರಹಪೀಡಾಂ ವ್ಯಪೋಹತು ||೫||

ಪ್ರಾಣರೂಪೇಣ ಯೋ ಲೋಕಾನ್ ಯಾತಿಕೃಷ್ಣಮೃಗಪ್ರಿಯಃ |
ಚಂದ್ರೋಪರಾಗಸಂಭೂತಾಂ ವಾಯುಃ ಪೀಡಾಂವ್ಯಪೋಹತು ||೬||

ಯೋಸೌ ನಿಧಿಪತಿರ್ದೇವಃ ಖಡ್ಗಶೂಲಗದಾಧರಃ |
ಚಂದ್ರೋಪರಾಗಕಲುಷಂ ಧನದೋ ಮೇ ವ್ಯಪೋಹತು ||೭|

ಯೋ ವಾ ಗಂಗಾಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರೋಪರಾಗಪಾಪಾನಿ ನಿವಾರಯತು ಶಂಕರಃ ||೮|

ತ್ರೈಲೋಕ್ಯ ಯಾನಿ ತೀರ್ಥಾನಿ ಸ್ಥಾವರಾಣಿ ಚರಾಣಿ ಚ |
ಬ್ರಹ್ಮವಿಷ್ಣ್ವರ್ಕಯುಕ್ತಾನಿ ತಾನಿ ಪಾಪಂ ದಹಂತು ಮೇ ॥೯॥

ಗರ್ಭಿಣಿಯರಿದ್ದರೆ ಏನು ಮಾಡಬೇಕು?

ಗ್ರಹಣದ ವೇಳೆ ಗರ್ಭಿಣಿಯರಿಗೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅವರು ಆ ವೇಳೆ ಹರಿತ ವಸ್ತುಗಳಾದ ಚಾಕು, ಚೂರಿ, ಕತ್ತಿ ಮುಂತಾದವುಗಳನ್ನು ಬಳಸಕೂಡದು. ಇದರಿಂದ ಗರ್ಭದಲ್ಲಿರುವ ಶಿಶುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಈ ವೇಳೆ ದೇವರ ಸ್ತೋತ್ರ ಪಠಣ, ಧ್ಯಾನ, ಭಜನೆ ಇತ್ಯಾದಿಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಭಾರತಕ್ಕೆ ಇರಲಿಲ್ಲ ಸೂರ್ಯ ಗ್ರಹಣ

ಅ. 14ರಂದು ಸಂಭವಿಸುವ ವಾರ್ಷಿಕ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರವಾಗಿರಲಿಲ್ಲ. ಆದ್ದರಿಂದ ಯಾವುದೇ ಸೂತಕದ ಅವಧಿ ಇರಲಿಲ್ಲ. ‘ಅಗ್ನಿಯ ವರ್ತುಲ’ ಎಂದು ಕೂಡ ಕರೆಯಲಾಗುವ ಈ ಸೂರ್ಯಗ್ರಹಣವು ಪಶ್ಚಿಮ ಗೋಳದಲ್ಲಿ ಮಾತ್ರ ಕಾಣ ಸಿಗುವುದು ವಿಶೇಷ. ಸೂರ್ಯ ಮತ್ತು ಚಂದ್ರ ಒಂದೇ ಬಿಂದುವಿನಲ್ಲಿ ಬರುವ ಸಂದರ್ಭದಲ್ಲಿ ಸೂರ್ಯನ ಸುತ್ತ ಬೆಂಕಿ ವರ್ತುಲ ಕಾಣಿಸುತ್ತದೆ. ಹೀಗಾಗಿ ‘ಅಗ್ನಿಯ ವರ್ತುಲ’ ಎಂದು ಕರೆಯಲಾಗುತ್ತದೆ. ಅಮೆರಿಕದ ಪಶ್ಚಿಮ ಭಾಗ ಹಾಗೂ ಪೆಸಿಫಿಕ್ ಸಮುದ್ರದವರೆಗೆ ಸೇರಿದಂತೆ ಉತ್ತರ ಅಮೆರಿಕದಲ್ಲಿ ಸೂರ್ಯ ಗ್ರಹಣ ಗೋಚರಿಸಿದೆ. ಅಲ್ಲದೆ ಇದು ಭಾಗಶಃ ಮಾತ್ರ ಕಂಡು ಬಂದಿದೆ.

ಈ ಸುದ್ದಿಯನ್ನೂ ಓದಿ: Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಲಕ್ಷಾಂತರ ಭಕ್ತರು

Exit mobile version